ಮೆಮೋಗೆ ಬೇಸತ್ತು ನಿರ್ವಾಹಕ ಆತ್ಮಹತ್ಯೆ
ಮೈಸೂರು/ಎಚ್.ಡಿ. ಕೋಟೆ: ಮೆಮೋಗೆ ಹೆದರಿ ಕೆಎಸ್ಆರ್ಟಿಸಿ ಬಸ್ ನಿರ್ವಾಹಕರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ಪಟ್ಟಣದಲ್ಲಿ ಶನಿವಾರ ನಡೆದಿದೆ.
ಹರಿಹರ ತಾಲೂಕು ಉಕ್ಕಡಗಾತ್ರಿ ನಿವಾಸಿ ಜಿ.ಎಂ. ಮಂಜಪ್ಪ (27) ಆತ್ಮಹತ್ಯೆ ಮಾಡಿಕೊಂಡವರು. ಕೆಎಸ್ಆರ್ಟಿಸಿ ಎಚ್.ಡಿ. ಕೋಟೆ ಡಿಪೋದಲ್ಲಿ 8 ತಿಂಗಳಿನಿಂದ ನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಎಚ್.ಡಿ. ಕೋಟೆಯಿಂದ ಗೌಡಿಮಾಚನಾಯಕನಹಳ್ಳಿ (ಜಿ.ಎಂ.ಹಳ್ಳಿ) ನಡುವೆ ಸಂಚರಿಸುವ ಮಾರ್ಗ ಸಂಖ್ಯೆ 75ರ ಬಸ್ನಲ್ಲಿ ನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಜಿಎಂ ಹಳ್ಳಿಯಿಂದ ಎಚ್.ಡಿ. ಕೋಟೆ ಕಡೆಗೆ ಬರುತ್ತಿದ್ದಾಗ ಬಸ್ನ್ನು ವಿಚಕ್ಷಣ ದಳದ ಇನ್ಸ್ಪೆಕ್ಟರ್ ಮಾಯೀಗೌಡ ಮತ್ತು ಸಿಬ್ಬಂದಿ ತಡೆದು ಪರಿಶೀಲಿಸಿದರು. ಈ ವೇಳೆ ಬಸ್ನಲ್ಲಿ ನಾಲ್ವರು ಪ್ರಯಾಣಿಕರು ಟಿಕೆಟ್ ತೆಗೆದುಕೊಳ್ಳದೆ ಪ್ರಯಾಣಿಸುತ್ತಿರುವುದು ಪತ್ತೆಯಾಗಿದೆ. ಕೂಡಲೇ ನಾಲ್ವರು ಪ್ರಯಾಣಿಕರಿಂದ ಅಧಿಕಾರಿಗಳು ದಂಡ ವಸೂಲಿ ಮಾಡಿದರು. ಅಲ್ಲದೆ, ಟಿಕೆಟ್ ಸರಿಯಾಗಿ ನೀಡದ ನಿರ್ವಾಹಕ ಮಂಜಪ್ಪಗೆ ಸ್ಥಳದಲ್ಲೇ ನೋಟಿಸ್ ಜಾರಿ ಮಾಡಿದರು.
ಎಚ್.ಡಿ. ಕೋಟೆ ಬಸ್ ನಿಲ್ದಾಣಕ್ಕೆ ಬಸ್ ತಲುಪಿದ ಬಳಿಕ ಮಂಜಪ್ಪ ಡಿಪೋಗೆ ತೆರಳಿ ತನಗೆ ಮೆಮೋ ನೀಡಿರುವ ವಿಚಾರವನ್ನು ಡಿಪೋ ವ್ಯವಸ್ಥಾಪಕ ಬ್ರಹ್ಮದೇವ ಅವರಿಗೆ ತಿಳಿಸಿದರು. ಇದರಿಂದ ಏನೂ ಆಗುವುದಿಲ್ಲ. ಕರ್ತವ್ಯ ನಿರ್ವಹಣೆಗೆ ತೆರಳುವಂತೆ ಬ್ರಹ್ಮದೇವ ಹೇಳಿ ಕಳುಹಿಸಿದರು. ಆದರೆ, ಬಸ್ ನಿಲ್ದಾಣಕ್ಕೆ ಬಂದ ಮಂಜಪ್ಪ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆ ಸ್ಥಳಾಂತರಿಸಿದಾಗ ಮೃತಪಟ್ಟಿದ್ದಾರೆ.
ಕಿರುಕುಳ ಆರೋಪ: ಚೆಕ್ಕಿಂಗ್ ಇನ್ಸ್ಪೆಕ್ಟರ್ ಮಾಯೀಗೌಡ ಅವರು ತಪಾಸಣೆ ಮಾಡುವ ನೆಪದಲ್ಲಿ ಪದೇ ಪದೇ ನಿರ್ವಾಹಕ ಮಂಜಪ್ಪಗೆ ಕಿರುಕುಳ ನೀಡುತ್ತಿದ್ದರು. ಇದರಿಂದ ಮನನೊಂದು ಮಂಜಪ್ಪ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆರೋಪ ಕೇಳಿ ಬಂದಿದೆ. ಆದರೆ, ಈ ಆರೋಪವನ್ನು ಕೆಎಸ್ಆರ್ಟಿಸಿ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ.
ಮಾಯೀಗೌಡ ಅವರು ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ. ಪ್ರಯಾಣಿಕರ ಟಿಕೆಟ್ ಪರಿಶೀಲನೆ, ಟಿಕೆಟ್ ಇಲ್ಲದೆ ಪ್ರಯಾಣಿಸುವವರಿಗೆ ದಂಡ ವಿಧಿಸಿರುವುದು, ಟಿಕೆಟ್ ನೀಡದ ನಿರ್ವಾಹಕರಿಗೆ ಮೆಮೋ ನೀಡುವ ಕೆಲಸವನ್ನು ಮಾಯೀಗೌಡ ಸರಿಯಾಗಿಯೇ ಮಾಡಿದ್ದಾರೆ. ಮೆಮೋ ನೀಡಿದ ಮೇಲೆ ತನಿಖೆಯಾಗುತ್ತದೆ, ತಪ್ಪು ಕಂಡು ಬಂದಲ್ಲಿ ಸಣ್ಣ ಪ್ರಮಾಣದಲ್ಲಿ ಶಿಸ್ತು ಕ್ರಮ ಜರುಗಿಸಲಾಗುತ್ತದೆ. ಆದರೆ, ಇದಕ್ಕೆ ಹೆದರಿ ಮಂಜಪ್ಪ ಆತ್ಮಹತ್ಯೆ ಮಾಡಿಕೊಂಡಿರುವುದು ದುರದೃಷ್ಟಕರ ಎಂದು ಮೈಸೂರು ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ವಿ. ಶ್ರೀನಿವಾಸ್ 'ಕನ್ನಡಪ್ರಭ'ಕ್ಕೆ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

