ಪ್ರಧಾನ ಸುದ್ದಿ

ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕರಿಗೆ 'ತಲೆ' ಬಿಸಿ

Published On :

ಬೆಂಗಳೂರು: ಮನುಷ್ಯನ ಜೀವನದಲ್ಲಿ ಏರು-ಪೇರಾದಾಗ 'ಹಣೆಬರಹ' ಸರಿಯಿಲ್ಲ ಎಂದು ಕೊಳ್ಳುವುದು ಸಾಮಾನ್ಯ.
ಆದರೆ, ಗ್ರಾಮ ಪಂಚಾಯ್ತಿ ಗ್ರಂಥಾಲಯ ಮೇಲ್ವಿಚಾರಕರ 'ತಲೆಬರಹ' (ಶೀರ್ಷಿಕೆ) ಸರಿಯಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಆರು ತಿಂಗಳಿಂದ ಸಂಭಾವನೆ ಇಲ್ಲದೇ ದುಡಿಯುವಂತಾಗಿದೆ.
ಸಾಕಷ್ಟು ವರ್ಷಗಳಿಂದ ಹಣ ಬಿಡುಗಡೆ ಮಾಡುತ್ತಿದ್ದ ಖಜಾನೆ ಇಲಾಖೆ ಇದೀಗ 'ಸಹಾಯಧನ' ಎಂಬ ಶೀರ್ಷಿಕೆಯಲ್ಲಿ ಹಣ ಬಿಡುಗಡೆ ಮಾಡಲು ಸಾಧ್ಯವಿಲ್ಲ. 'ತಲೆಬರಹ' ಬದಲಾಯಿಸಿ 'ಗೌರವಧನ' ಎಂಬ ರೀತಿಯಲ್ಲಿ ನೀಡಿದರೆ ಮಾತ್ರವೇ ಹಣ ಬಿಡುಗಡೆ ಮಾಡುತ್ತೇವೆ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ತಿಳಿಸಿದೆ.
ಈ ಶೀರ್ಷಿಕೆ ಗೊಂದಲದ ಬಿಸಿ ರಾಜ್ಯದಲ್ಲಿರುವ ಒಟ್ಟು 5766 ಗ್ರಾಮ ಪಂಚಾಯ್ತಿಯಲ್ಲಿ ಕಾರ್ಯನಿರ್ವಹಿಸುವ ಗ್ರಂಥಾಲಯ ಮೇಲ್ವಿಚಾರಕರಿಗೆ ತಟ್ಟಿದ್ದು, ಕಳೆದ ಆರು ತಿಂಗಳಿಂದ ಸಂಬಳವಿಲ್ಲದೆ ಜೀವನ ಸಾಗಿಸುವುದು ದುಸ್ತರವಾಗಿದೆ.
ಹಣ ಹಾಗೇ ಉಳಿದಿದೆ: ಸರ್ಕಾರದಿಂದ ಖಜಾನೆಗೆ ಬಿಡುಗಡೆಯಾಗಿರುವ ಹಣ 'ಗೌರವಧನ' ಎಂಬ ಶೀರ್ಷಿಕೆಯಲ್ಲಿದೆ. ಆದರೆ, ಸಾರ್ವಜನಿಕ ಗ್ರಂಥಾಲಯ ಇಲಾಖೆ 'ಸಹಾಯಧನ' ಎಂಬ ಹೆಸರಿನಲ್ಲಿ ಸಂಭಾವನೆ ಬಿಡುಗಡೆ ಮಾಡುವಂತೆ ಕೋರಿದೆ. ಗ್ರಾಮಪಂಚಾಯ್ತಿಗಳಲ್ಲಿ ಗ್ರಂಥಾಲಯ ಮೇಲ್ವಿಚಾರಕರಿಗೆ 'ಗೌರವ ಸಂಭಾವನೆ' ನೀಡಬಹುದೇ ವಿನಹ ಸಹಾಯಧನ ಎಂದು ನೀಡಲು ಸಾಧ್ಯವಿಲ್ಲ. ಶೀರ್ಷಿಕೆ ಬದಲಾಯಿಸಿಕೊಳ್ಳುವಂತೆ ನಾವು ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಹೇಳಿದ್ದೇವೆ. ಅದಾದಾಗ ಮಾತ್ರವೇ ಸಮಸ್ಯೆಗೆ ಪರಿಹಾರ ನೀಡಲು ಸಾಧ್ಯ. ಈ ಶೀರ್ಷಿಕೆಯಿಂದಾಗಿ ಹಣ ಹಾಗೇ ಖಜಾನೆಯಲ್ಲೇ ಉಳಿದಿದೆ ಎನ್ನುತ್ತಾರೆ ಖಜಾನೆ ಇಲಾಖೆಯ ಜಂಟಿ  ನಿರ್ದೇಶಕ ವಿಜಯ ಕೃಷ್ಣ.
ಕಾರ್ಯದರ್ಶಿಗೆ ಪತ್ರ: ಪ್ರತಿ ತಿಂಗಳು ಖಜಾನೆ ಇಲಾಖೆ ಯಾವುದೇ ತಕರಾರು ಇಲ್ಲದೆ ಸಹಾಯಧನ ಎಂಬ ಶೀರ್ಷಿಕೆಯಲ್ಲಿ ಹಣ ಬಿಡುಗಡೆ ಮಾಡುತ್ತಿತ್ತು. ಇದೀಗ ಏಕಾಏಕಿ ಶೀರ್ಷಿಕೆ ಬದಲಾಯಿಸಿ ಎಂದು ಹೇಳಿರುವುದರಿಂದ ಹಣ ಬಿಡುಗಡೆಯಾಗಿಲ್ಲ. ಈ ಬಗ್ಗೆ ನಾನು ತಲೆಬರಹ ಬದಲಾಯಿಸಿ ಹಣ ಬಿಡುಗಡೆಗೊಳಿಸಿ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದೇನೆ. ಶೀಘ್ರದಲ್ಲೇ ಸಂಭಾವನೆ ಬಿಡುಗಡೆ ಆಗಬಹುದು ಎನ್ನುತ್ತಾರೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಮಹತೇಂಶ ಬಡ್ನಿ.

ಸರ್ಕಾರಕ್ಕೆ 15ರ ಗಡುವು; ತಪ್ಪಿದರೆ ಹೋರಾಟದ ಎಚ್ಚರಿಕೆ
ನಾವು ಪ್ರತಿ ತಿಂಗಳು ಸಂಭಾವನೆ ಪಡೆಯಲು ಗ್ರಾಮ ಪಂಚಾಯ್ತಿ ಅಧಿಕಾರಿಗಳಿಂದ ಸೇವಾ ಧೃಢೀಕರಣ ಪತ್ರ ಪಡೆದು ಸಲ್ಲಿಸುತ್ತೇವೆ. ತಿಂಗಳ ಸಂಭಾವನೆ ಕೇವಲ 5,500. ಈ ಸಂಭಾವನೆಯನ್ನು ತಿಂಗಳಿಗೆ ಸರಿಯಾಗಿ ನೀಡುತ್ತಿಲ್ಲ. ಈ ಕೆಲಸವನ್ನೇ ಜೀವನದ ಅಧಾರ ಎಂದುಕೊಂಡು ಸೇವೆ ಸಲ್ಲಿಸುವವರ ಗತಿ ಏನು? ಸರ್ಕಾರ ಸಂಭಾವನೆ ಬಗ್ಗೆ ಶೀಘ್ರ ನಿರ್ಧಾರ ತೆಗೆದುಕೊಳ್ಳದಿದ್ದರೆ, ಜ.15ರಿಂದ ರಾಜ್ಯ ವ್ಯಾಪ್ತಿ ಮುಷ್ಕರ ಕೈಗೊಳ್ಳುತ್ತೇವೆ ಎನ್ನುತ್ತಾರೆ ಕರ್ನಾಟಕ ರಾಜ್ಯ ಸರ್ಕಾರಿ ಗ್ರಾಮ ಪಂಚಾಯ್ತಿ ಗ್ರಂಥಾಲಯಗಳ ಮೇಲ್ವಿಚಾರಕರ ಸಂಘದ ಅಧ್ಯಕ್ಷ ಎಸ್.ನಾಗಭೂಷಣ.

ಮೊದಲು ಶೀರ್ಷಿಕೆ ಬದಲಾಯಿಸಲಿ ಆನಂತರ ಹಣ ಬಿಡುಗಡೆ ಮಾಡುತ್ತೇವೆ. ಹಾಲಿ ಇರುವ ಸಹಾಯಧನ ಶೀರ್ಷಿಕೆಯಲ್ಲಿ ಗೌರವಧನ ಬಿಡುಗಡೆ ಮಾಡಲು ಸಾಧ್ಯವಿಲ್ಲ.
- ವಿಜಯ ಕೃಷ್ಣ, ಜಂಟಿ ನಿರ್ದೇಶಕ, ಖಜಾನೆ ಇಲಾಖೆ

ಶೀರ್ಷಿಕೆ ಬದಲಾಯಿಸಿ ಗ್ರಂಥಾಲಯ ಮೇಲ್ವಿಚಾರಕರಿಗೆ ಸಂಭಾವನೆ ಬಿಡುಗಡೆ ಮಾಡಿಸಿಕೊಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದೇನೆ. ಶೀಘ್ರದಲ್ಲೇ ಸಮಸ್ಯೆ ಬಗೆಹರಿಯಬಹುದು.
-ಮಹತೇಂಶ ಬಡ್ನಿ, ನಿರ್ದೇಶಕ, ಸಾರ್ವಜನಿಕ ಗ್ರಂಥಾಲಯ ಇಲಾಖೆ

ದೇವರಾಜ್ ಎಲ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.