ಪ್ರಧಾನ ಸುದ್ದಿ

ಅಕ್ಷರ ಜಾತ್ರೇಲಿ ಮಹಿಳೆಗಿಲ್ಲ ಆದ್ಯತೆ

Published On :

ಕನ್ನಡಪ್ರಭ ವಾರ್ತೆ   ಮಡಿಕೇರಿ   ಜ.5
ಮಹಿಳೆಯರಿಗೆ ಅತ್ಯಂತ ಗೌರವವಿರುವ, ಗೌರಮ್ಮನಂತಹ ಶ್ರೇಷ್ಠ ಮಹಿಳಾ ಕಥೆಗಾರ್ತಿಯನ್ನು ನೀಡಿದ  ಕೊಡಗಿನ ನೆಲದಲ್ಲಿ 32 ವರ್ಷಗಳ ಬಳಿಕ ನಡೆಯುತ್ತಿರುವ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವಿವಿಧ ಗೋಷ್ಠಿಗಳಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನವಿಲ್ಲ. ಅದು ಹೋಗಲಿ, ಸಮ್ಮೇಳನದ ಪ್ರಯುಕ್ತ ಸನ್ಮಾನ ಸ್ವೀಕರಿಸುವ 82 ಮಂದಿ ಸಾಧಕರ ಪೈಕಿ ಮಹಿಳೆಯರ ಸಂಖ್ಯೆ ಕೇವಲ 5 ಮಾತ್ರ!
ಕಾವೇರಿ ನದಿಯನ್ನೇ ತನ್ನ ನಾಡಲ್ಲಿ ಹೊಂದಿರುವ ಕೊಡಗಿನಲ್ಲಿ ಮಹಿಳೆಯರಿಗೆ ಎಲ್ಲಿಲ್ಲದ ಗೌರವ. ಅಂತೆಯೇ ಕೊಡಗಿನ ಮಹಿಳೆಯರು ಎಲ್ಲಾ ರಂಗದಲ್ಲಿಯೂ ಸಾಧನೆ ತೋರಿದ್ದಾರೆ. ಹೀಗಿರುವಾಗ ಮಹಿಳೆಯರ ಸಾಧನೆ ಪರಿಗಣಿಸುವ ಅಗತ್ಯ ಮಡಿಕೇರಿಯಲ್ಲಿ 3 ದಶಕಗಳ ಬಳಿಕ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನಕ್ಕಿತ್ತು.
ಪುರುಷ ಪ್ರಾಧಾನ್ಯತೆ: ಸಮ್ಮೇಳನದಲ್ಲಿ ಎರಡು ವೇದಿಕೆಗಳಲ್ಲಿ ನಡೆಯಲಿರುವ 16 ಗೋಷ್ಠಿಗಳ ಪೈಕಿ ಯಾವೊಂದು ಗೋಷ್ಠಿಯೂ ಪ್ರತ್ಯೇಕವಾಗಿ ಮಹಿಳೆಯರ ಕುರಿತಾಗಿ ಇಲ್ಲ.        

16 ಗೋಷ್ಠಿಗಳ ಅಧ್ಯಕ್ಷತೆಯಲ್ಲಿ ಒಂದನ್ನೂ ಮಹಿಳೆಯರಿಗೆ ನೀಡಲಾಗಿಲ್ಲ. ಬುಧವಾರ ನಡೆಯಲಿರುವ ಸಮ್ಮೇಳನಾಧ್ಯಕ್ಷರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ 14 ಮಂದಿ ಪಾಲ್ಗೊಳ್ಳುತ್ತಿದ್ದು, ಈ ಪೈಕಿ ಇಂದಿರಾ ಹಾಲಂಬಿ, ಡಾ.ಶ್ರೀಶೈಲ ನಾಗರಾಳ, ಡಾ. ಕೋರನ ಸರಸ್ವತಿ, ಡಾ.ಪಾರ್ವತಿ ಲೆಂಕಣ್ಣನವರ್ ಸೇರಿ 4 ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗಿದೆ. ಎರಡು ಕವಿಗೋಷ್ಠಿಗಳಲ್ಲಿ 62 ಕವಿಗಳು ಭಾಗವಹಿಸುತ್ತಿದ್ದು, ಈ ಪೈಕಿ 12 ಕವಿಯತ್ರಿಯರಿಗೆ ಮಾತ್ರ ಅವಕಾಶ ನೀಡಲಾಗಿದೆ.
ಕೊಡಗಿನ ಓರ್ವ ಮಹಿಳೆಗೆ ಮಾತ್ರ ಸನ್ಮಾನ: 80ನೇ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ವಿವಿಧ ರಂಗಗಳಲ್ಲಿ ಸಾಧನೆ ಮಾಡಿರುವ 82 ಸಾಧಕರಿಗೆ ಸನ್ಮಾನ ನೆರವೇರುತ್ತಿದೆ. ಇಡೀ ರಾಜ್ಯದಲ್ಲಿ ಸನ್ಮಾನಕ್ಕೆ ಸಾಹಿತ್ಯ ಪರಿಷತ್‌ಗೆ ಕಂಡದ್ದು ಕೇವಲ 4 ಮಹಿಳಾ ಸಾಧಕಿಯರು ಮಾತ್ರ. ಶಿಕ್ಷಣ ಕ್ಷೇತ್ರದ ಗಂಗಾ ಚಂಗಪ್ಪ ಮಾತ್ರ ಕೊಡಗಿನಿಂದ ಸನ್ಮಾನಿಸಲ್ಪಡುತ್ತಿರುವ ಏಕೈಕ ಮಹಿಳೆ.
ಇನ್ನು, ಸಮಾನಾಂತರ ವೇದಿಕೆಯಾದ ಕೊಡಗಿನ ಗೌರಮ್ಮ ವೇದಿಕೆಯಲ್ಲಿ ನಡೆಯುವ ಕೊಡಗು ಮತ್ತು ಕನ್ನಡ ಕುರಿತ ಗೋಷ್ಠಿಯಲ್ಲಿ ಮಾತ್ರ ಕೊಡಗಿನ ಸಾಹಿತಿ ಡಾ.ರೇಖಾ ವಸಂತ್‌ಗೆ ಕೊಡಗಿನ ಸ್ಮರಣೀಯ ಸಾಹಿತಿಗಳು ವಿಚಾರ ಕುರಿತು ಮತ್ತು ಕನ್ನಡದ ದಾಸ ಸಾಹಿತ್ಯದ ಗೋಷ್ಠಿಯಲ್ಲಿ ಡಾ.ಮಧುಮತಿ ದೇಶಪಾಂಡೆಗೆ ದಾಸ ಸಾಹಿತ್ಯ ಮತ್ತು ಮಹಿಳೆ ವಿಚಾರದಲ್ಲಿ, ಕರ್ನಾಟಕದ ಭಾಷಿಕ ಪರಿಸರ ಗೋಷ್ಠಿಯಲ್ಲಿ ಕನ್ನಡ, ಕೊಡವ, ಅರೆಭಾಷೆ ಕುರಿತಂತೆ ಡಾ.ಎಂ.ಟಿ. ರತಿ, ಕನ್ನಡ, ಮಲಯಾಳ, ತಮಿಳು ಕುರಿತು ಡಾ.ತಮಿಳು ಸೆಲ್ವಿ ಮಾತನಾಡಲು ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳೆಯರಿಗೆ ಅವಕಾಶ ಗೌಣ ಎಂಬಂತಾಗಿದೆ.
ಗೋಷ್ಠಿಯಲ್ಲಿ ಸ್ಥಾನವಿಲ್ಲ: ಸಾಹಿತ್ಯ ಸಮ್ಮೇಳನದ ಮೆರವಣಿಗೆಯಲ್ಲಿ ಕಲಶ ಹೊರಲು, ಕಲಾತಂಡದಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮಹಿಳೆಯರು ಬೇಕು. ಅಷ್ಟೇ ಏಕೆ, ಸಭಾಮಂಟಪ ಭರ್ತಿಯಾಗಲು ಸಾಹಿತ್ಯ ಪರಿಷತ್ ಕೊಡಗಿನ ವಿವಿಧ ಸ್ತ್ರೀ ಶಕ್ತಿ ಸಂಘಗಳ ಮಹಿಳೆಯರನ್ನೇ ಅವಲಂಬಿಸಿದೆ.
ಇದಕ್ಕೆಲ್ಲಾ ಅಗತ್ಯವಿರುವ ಮಹಿಳೆಯರು, ಗೋಷ್ಠಿಗಳಲ್ಲಿ ವಿಚಾರಮಂಡಿಸಲು, ಗೋಷ್ಠಿಯ ಅಧಕ್ಷತೆ ವಹಿಸಲು ಮಾತ್ರ ಸಾಹಿತ್ಯ ಪರಿಷತ್ ಪಾಲಿಗೆ ಬೇಡವಾಗಿದ್ದಾರೆ.
ಸಮ್ಮೇಳನದ ಉದ್ಘಾಟನಾ ವೇದಿಕೆಯಲ್ಲಿನ 23 ಗಣ್ಯರಲ್ಲಿ ಸಚಿವೆ ಉಮಾಶ್ರೀ ಮಾತ್ರ ಏಕೈಕ ಮಹಿಳೆ. ಸಮ್ಮೇಳನದ ಸಮಾರೋಪದಲ್ಲಿ 21 ಗಣ್ಯರ ಪೈಕಿ ಮಾಜಿ ಸಚಿವೆ ಸುಮಾ ವಸಂತ್, ಜಿಪಂ ಉಪಾಧ್ಯಕ್ಷೆ ಉಷಾದೇವಮ್ಮ, ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲೆ ಡಾ.ಪಾರ್ವತಿ ಅಪ್ಪಯ್ಯ ಹಾಗೂ ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀವಿದ್ಯಾ ಮಾತ್ರ ಇದ್ದಾರೆ.
ಚರ್ಚೆಗೆ ಅವಕಾಶವಿಲ್ಲ
'ಕನ್ನಡಪ್ರಭ'ಕ್ಕೆ ಪ್ರತಿಕ್ರಿಯಿಸಿದ ಕೊಡಗಿನ ಸಾಹಿತಿ ಡಾ.ರೇಖಾ ವಸಂತ್, ಮಹಿಳಾ ಸಾಹಿತ್ಯಕ್ಕೆ ದೀರ್ಘ ಇತಿಹಾಸವಿದೆ. ಈ ಬಗ್ಗೆ ಸಮ್ಮೇಳನದಲ್ಲಿ ಎಲ್ಲಿಯೂ ಚರ್ಚೆಗೆ ಅವಕಾಶ ನೀಡಿಲ್ಲ.  ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಸಾಧಕಿಯರ ಪರಿಗಣನೆ ಶೇ.2ರಷ್ಟು ಮಾತ್ರವಿದೆ. ಮಹಿಳಾ ಪರ ಚಿಂತನೆಗಳು ಗೋಷ್ಠಿಯಲ್ಲಿ ಗೌಣವಾದಂತಿದೆ ಎಂದರು. ಈ ಬಗ್ಗೆ ಪ್ರತಿಕ್ರಿಯಿಸಿದ ಕೊಡಗು ಕಸಾಪ ಪ್ರಧಾನ ಕಾರ್ಯದರ್ಶಿ ಬಿ.ಎ. ಸಂಶುದ್ದೀನ್, ಎಲ್ಲ ಸಾಹಿತ್ಯ ಸಮ್ಮೇಳನಗಳಲ್ಲಿಯೂ ಒಂದೇ ವಿಚಾರದ ಬಗ್ಗೆ ಚರ್ಚಿಸುವುದಕ್ಕಿಂತ ಬೇರೆ ಬೇರೆ ವಿಚಾರಗಳ ಬಗ್ಗೆ ಚರ್ಚಿಸುವುದು ಸೂಕ್ತ. ಕೆಲವೊಮ್ಮೆ ರಾಜಿ ಮಾಡಿಕೊಳ್ಳುವುದು ಅನಿವಾರ್ಯ. ಅರ್ಹರೆಲ್ಲರಿಗೂ ಸನ್ಮಾನ ಕಷ್ಟ. ಸಾಹಿತ್ಯ ಸಮ್ಮೇಳನದಂಥ ಬೃಹತ್ ಕಾರ್ಯಕ್ರಮ ರೂಪಿಸುವಾಗ ಸಂಘಟಕರ ಅಸಹಾಯಕತೆ, ಅನಿವಾರ್ಯತೆಯನ್ನು ಸಾಹಿತ್ಯಾಭಿಮಾನಿಗಳು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಮಹಿಳೆಯರು, ಮಕ್ಕಳನ್ನು ಕಡೆಗಣಿಸುವ ಪ್ರಶ್ನೆಯೇ ನಮ್ಮಲ್ಲಿಲ್ಲ. ಎಲ್ಲರ ಬಗ್ಗೆಯೂ ಗೌರವವಿದೆ ಎಂದು ಸ್ಪಷ್ಟಪಡಿಸಿದರು.

 ಅನಿಲ್ ಎಚ್.ಟಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.