ಅನುಕರಣೆ ಆತ್ಮಹತ್ಯೆ ಇದ್ದಂತೆ, ಇರಲಿ ನಮ್ಮತನ

ಕ.ಪ್ರ.ವಾರ್ತೆ , ಮಡಿಕೇರಿ , ಜ. 8
ಮನುಷ್ಯರನ್ನು, ಅವರ ನಡುವಿನ ಸಂಬಂಧಗಳನ್ನು ಮುಳುಗಿಸುವ ಯೋಜನೆ ಜಾರಿಮಾಡುವ ಮೊದಲು ಸರ್ಕಾರ ಯೋಚಿಸಬೇಕು. ಅನುಕರಣೆ ಎಂಬುದು ಆತ್ಮಹತ್ಯೆ, ನಮ್ಮತನವೇ ಜೀವನ ಎಂದು ಸಾಹಿತ್ಯ ಸಮ್ಮೇಳನಾಧ್ಯಕ್ಷ ನಾ. ಡಿ'ಸೋಜಾ ಹೇಳಿದರು.
ಬುಧವಾರ ಮಧ್ಯಾಹ್ನ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಪಾರ್ವತಿ ವೆಂಕಣ್ಣನವರ್ ಪ್ರಶ್ನೆಗೆ ಈ ಅಭಿಪ್ರಾಯ ವ್ಯಕ್ತಪಡಿಸಿದರು. ಸಂವಾದದಲ್ಲಿ ತೂರಿಬಂದ, ಕೆಲವೊಮ್ಮೆ ಸುತ್ತಿಬಳಸಿ ತೆವಳಿಕೊಂಡು ಬಂದ ಪ್ರಶ್ನೆಗಳಿಗೆ ಸಮ್ಮೇಳನಾಧ್ಯಕ್ಷರು ಅತ್ಯಂತ ಸ್ಪಷ್ಟ ಮತ್ತು ಸಂಕ್ಷಿಪ್ತ ಉತ್ತರಗಳನ್ನು ನೀಡುವ ಮೂಲಕ ಪ್ರಶ್ನೆ ಕೇಳುವವರಿಗೆ ಮಾದರಿಯಾದರು. ಖಾಸಗಿ ಶಾಲೆಗಳು, ನಕ್ಸಲ್ ಸಮಸ್ಯೆ, ಪರಿಸರ ಹಾನಿ, ವಿದೇಶಿ ಸಂಸ್ಕೃತಿ ಪ್ರಭಾವಗಳ ಬಗ್ಗೆ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಭಾವನೆಗಳ ಮುಳುಗಡೆ: ಮುಳುಗಡೆ ಎಂಬುದು ಮನುಷ್ಯ, ಅವರ ನಡುವಿನ ಸಂಬಂಧ, ನೆಂಟರುಗಳನ್ನು ಮುಳುಗಿಸುತ್ತದೆ. ವೈಜ್ಞಾನಿಕವಾಗಿ ನೋಡಿದರೆ ಅದು ಕೇವಲ ಪ್ರದೇಶಗಳ ಮುಳುಗಡೆ. ಆದರೆ ಅಲ್ಲಿರುವ ಪ್ರತಿಯೊಬ್ಬರೂ ಅಲ್ಲಿನ ಮರ, ನದಿ, ಮಣ್ಣಿನೊಂದಿಗೆ ಭಾವನಾತ್ಮಕವಾಗಿ ಬೆರೆತಿರುತ್ತಾರೆ. ಆ ಪ್ರದೇಶ ಮುಳುಗಡೆಯಾದರೆ ಅವರ ಭಾವನೆಗಳೂ ಮುಳುಗುತ್ತವೆ ಎಂಬ ಸತ್ಯ ಸರ್ಕಾರಕ್ಕೆ ಗೊತ್ತಿರಬೇಕು. ಅಂಥ ಯೋಜನೆಗಳನ್ನು ಜಾರಿ ಮಾಡುವಾಗ ಸರ್ಕಾರ ಹೆಚ್ಚು ಚಿಂತಿಸುವ ಅಗತ್ಯವಿದೆ.
ವಿದೇಶಗಳಲ್ಲಿ ಅಣೆಕಟ್ಟುಗಳನ್ನು ರದ್ದುಪಡಿಸಲಾಗುತ್ತಿದೆ. ನಾವಿನ್ನೂ ಅವುಗಳನ್ನು ಕಟ್ಟುವುದರಲ್ಲೇ ನಿರತರಾಗಿದ್ದೇವೆ. ಪರಿಸರ ಎಂಬುದು ಚಿನ್ನದ ಮೊಟ್ಟೆ ಇಡುವ ಕೋಳಿ ಇದ್ದಂತೆ. ಅದರ ಹೊಟ್ಟೆ ಕೊಯ್ಯುವ ಕೆಲಸ ಮಾಡಬಾರದು ಎಂದರು.
ಅನುಕರಣೆ ಆತ್ಮಹತ್ಯೆ: ನಾವು ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಕರಿಸುತ್ತಿದ್ದೇವೆ. ಆದರೆ, ಅಜ್ಜಿ ಮಾಡುತ್ತಿದ್ದ ಹುಣಸೆ ಗೊಜ್ಜಿನ ರುಚಿ ಫಾಸ್ಟ್ ಫುಡ್ಗಳಿಗಿಲ್ಲ. ಕೆಂಟುಕಿ ಚಿಕನ್ನಂಥ ಖಾದ್ಯಗಳು ಆರೋಗ್ಯಕ್ಕೆ ಪೂಕವಾಗಿರುವುದಿಲ್ಲ. ಅವುಗಳನ್ನು ದೂರದಿಂದ ನೋಡಿ, ಸುಮ್ಮನಾಗಿ ನಮ್ಮತನ ಉಳಿಸಿಕೊಳ್ಳಬೇಕಿದೆ. ಆ ಮೂಲಕ ನಮ್ಮ ಸಂಸ್ಕೃತಿ, ನಮ್ಮ ಆರೋಗ್ಯ ಉಳಿಸಿಕೊಳ್ಳಬೇಕಿದೆ. ಆಮದು ಮಾಡಿಕೊಂಡದ್ದು ಯಾವತ್ತೂ ನಮ್ಮದಾಗುವುದು ಸಾಧ್ಯವೇ ಇಲ್ಲ ಎಂದರು.
ಮಕ್ಕಳಿಗೆ ಪುಸ್ತಕ ಕೊಡಿ: ನಾವು ಇಂದು ಮಕ್ಕಳ ಕೈಗೆ ಮೊಬೈಲ್, ಟ್ಯಾಬ್ಲೆಟ್, ಕಂಪ್ಯೂಟರ್ ಕೊಟ್ಟಿದ್ದೇವೆ. ಆದರೆ ಅವರ ಕೈಗೆ ಒಳ್ಳೆಯ ಪುಸ್ತಕ ಕೊಡುತ್ತಿಲ್ಲ. ಪುಸ್ತಕ ಮತ್ತು ಕತೆಗಳು ಮಕ್ಕಳ ಕಲ್ಪನಾ ಶಕ್ತಿ ವಿಸ್ತರಿಸಿ, ಮಕ್ಕಳ ಮುಗ್ಧ ಮನಸ್ಸನ್ನು ಜಾಗೃತಗೊಳಿಸುತ್ತವೆ. ಆದರೆ ಕತೆ ಹೇಳಿ ಮಕ್ಕಳ ಮನಸ್ಸನ್ನು ಮುದಗೊಳಿಸುತ್ತಿದ್ದ ಅಜ್ಜ-ಅಜ್ಜಿಯಂದಿರು ಮಾಯವಾಗಿ ಟಿವಿ ಮುಂದೆ ಕುಳಿತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ನೈತಿಕ ಪೊಲೀಸ್ಗಿರಿ ಹಾನಿಕರ: ನೈತಿಕ ಪೊಲೀಸರು ಎಂಬ ಹೊಸ ವರ್ಗ ನಮ್ಮಲ್ಲಿ ಹುಟ್ಟಿಕೊಂಡಿದ್ದು, ಇದರಿಂದ ಸಮಾಜಕ್ಕೆ ಒಳ್ಳೆಯದಾಗುವುದಿಲ್ಲ. ಸಮಾಜವನ್ನು ತಾವು ಸರಿಮಾಡುತ್ತೇವೆ ಎಂಬುದು ಮೂರ್ಖತನ. ಒಂದು ಗುಂಪು ನೈತಿಕ ಪೊಲೀಸ್ಗಿರಿಗೆ ಇಳಿದರೆ ಅದಕ್ಕೆ ಪ್ರತಿಯಾಗಿ ಇನ್ನೊಂದು ಗುಂಪು ಹುಟ್ಟಿಕೊಳ್ಳುತ್ತದೆ. ಇದರಿಂದ ಸಮಾಜದಲ್ಲಿ ಸಂಘರ್ಷ ಹೆಚ್ಚುತ್ತದೆಯೇ ಹೊರತು ನೈತಿಕತೆ ಜಾರಿಯಾಗುವುದಿಲ್ಲ ಎಂದರು.
ನಕ್ಸಲರೊಂದಿಗೆ ಸಂಧಾನ ಮಾಡಿ
ನಕ್ಸಲರು ಅದರೆ ನಮ್ಮ ವ್ಯವಸ್ಥೆಯನ್ನು ಧಿಕ್ಕರಿಸಿಹೋದ ನಮ್ಮದೇ ಜನರು. ಅವರು ಸಮಾಜದ ಮುಖ್ಯ ವಾಹಿನಿಗೆ ಮರಳಲು ಬಯಸುತ್ತಾರೆ ಅಂದರೆ ಸರ್ಕಾರ ಅದಕ್ಕೆ ಆದ್ಯತೆ ನೀಡಬೇಕು ಎಂದು ಸಾಹಿತ್ಯ ಸಮ್ಮೇಳನಾಧ್ಯಕ್ಷ ನಾ. ಡಿ'ಸೋಜಾ ಅಭಿಪ್ರಾಯಪಟ್ಟಿದ್ದಾರೆ. ಸಂವಾದದ ಸಂದರ್ಭದಲ್ಲಿ ಶಿವಗಂಗಾ ಅವರು ಕೇಳಿದ ಪ್ರಶ್ನೆಗೆ ಅಧ್ಯಕ್ಷರು ಈ ರೀತಿಯಾಗಿ ಉತ್ತರಿಸಿದರು. ನಕ್ಸಲರು ಹುಟ್ಟಿಕೊಳ್ಳಲು ನಾವು ಅಥವಾ ನಾವು ನಿರ್ಮಿಸಿರುವ ಕೆಟ್ಟ ವ್ಯವಸ್ಥೆ, ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ನಡೆಯುತ್ತಿರುವ ಕೆಲಸಗಳೇ ಕಾರಣ. ಇಂಥ ವ್ಯವಸ್ಥೆಗಳನ್ನು ಸರಿಪಡಿಸಿದರೆ ನಕ್ಸಲರು ಮುಖ್ಯವಾಹಿನಿಗೆ ಮರಳಬಹುದು. ಅದರಲ್ಲೂ ಅವರಾಗಿಯೇ ಮುಖ್ಯವಾಹಿನಿಗೆ ಮರಳಲು ಬಯಸುವಾಗ ಸರ್ಕಾರ ಅವರ ಮೇಲೆ ಮೊಕದ್ದಮೆಗಳನ್ನು ದಾಖಲಿಸದೇ, ಅವರನ್ನು ಸ್ವಾಗತಿಸಬೇಕು ಎಂದರು.
-ವಿನಾಯಕ ಭಟ್ಟ ಮೂರೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


