2017ಕ್ಕೆ ವಿದ್ಯುತ್ ಸ್ವಾವಲಂಬನೆ: ಸಿಎಂ
ಕ.ಪ್ರ.ವಾರ್ತೆ , ಬೆಂಗಳೂರು , ಜ. 8
ರಾಜ್ಯದಲ್ಲಿ 18 ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದನೆ ಯೋಜನೆಗಳು ಪ್ರಗತಿಯಲ್ಲಿದ್ದು, 2017ರ ವೇಳೆಗೆ ರಾಜ್ಯ ವಿದ್ಯುತ್ ವಲಯದಲ್ಲಿ ಸ್ವಾವಲಂಬಿಯಾಗುವ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಬರುವ 2030ರ ವೇಳೆಗೆ ವಿದ್ಯುತ್ ಉತ್ಪಾದನೆ ಪ್ರಮಾಣವನ್ನು ನಾಲ್ಕು ಪಟ್ಟು ಹೆಚ್ಚಿಸಬೇಕಿದೆ. ಇದಕ್ಕಾಗಿ ದೂರದೃಷ್ಟಿ ಯೋಜನೆಗಳ ಅಗತ್ಯವಿದೆ. ರಾಜ್ಯವು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದು ಹೊಸ ಯೋಜನೆಗಳು ಪ್ರಗತಿಯಲ್ಲಿವೆ ಎಂದು ಅವರು ನಗರದಲ್ಲಿ ಬುಧವಾರ ಪ್ರಾರಂಭವಾದ 'ಎಲೆಕ್ರಾಮ- 2014'ನ್ನು ಉದ್ಘಾಟಿಸಿ ತಿಳಿಸಿದರು.
ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಹಾಗೂ ಪ್ರಸರಣ ಕ್ಷೇತ್ರದಲ್ಲಿ ನಾನಾ ಸುಧಾರಣೆಗಳನ್ನು ಜಾರಿಗೆ ತರಲಾಗಿದೆ. ಸೋರಿಕೆಯನ್ನು ತಡೆಯಲು ಕ್ರಮ ತೆಗೆದುಕೊಳ್ಳಲಾಗಿದೆ. ಇದಲ್ಲದೇ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಉಪಕರಣಗಳನ್ನು ತಯಾರಿಸಲು ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಇದರಿಂದ ಇಂಧನ ಉತ್ಪಾದನೆಯಲ್ಲಿ ಏರಿಕೆಯಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದರು.
ವಲಯಕ್ಕೆ ಅನುಕೂಲ: ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಎಲೆಕ್ರಾಮ ನಡೆಯುತ್ತಿದೆ. ಇದರಲ್ಲಿ ದೇಶ ವಿದೇಶದಗಳ ನಾನಾ ವಿದ್ಯುತ್ ಕಂಪನಿಗಳು ಭಾಗವಹಿಸಿರುವುದರಿಂದ ರಾಜ್ಯದ ಉತ್ಪಾದನಾ ವಲಯಕ್ಕೆ ನೆರವಾಗಲಿದೆ. ರಾಜ್ಯದ ಆರ್ಥಿಕ ಬೆಳವಣಿಗೆ ಹಾಗೂ ಜೀವನಮಟ್ಟ ಸುಧಾರಣೆಗೆ ವಿದ್ಯುತ್ ಪೂರೈಕೆಯಲ್ಲಿ ಬದಲಾವಣೆಯಾಗುವುದ ಅನಿವಾರ್ಯವಾಗಿದೆ. ಇದಕ್ಕೆ ವಿದ್ಯುತ್ ಉತ್ಪಾದನೆ ಮಾತ್ರ ಪರಿಹಾರವಾಗಬಲ್ಲದು. ಮತ್ತೊಂದೆಡೆ ಉದ್ಯೋಗ ಅವಕಾಶವನ್ನು ಹೆಚ್ಚಿಸಲಿದೆ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಇದು ರಾಜ್ಯಕ್ಕೆ ಮಾತ್ರ ಸೀಮಿತವಾಗಬಾರದು. ದೇಶೀಯ ಮಟ್ಟದಲ್ಲಿಯೂ ಉತ್ಪಾದನೆ ಹೆಚ್ಚಾಗಬೇಕು. ಜಾಗತಿಕ ಸ್ಪರ್ಧೆಗೆ ಒಗ್ಗಿಕೊಳ್ಳಲು ಇಂಧನ ವಲಯದ ಅಭಿವೃದ್ಧಿ ಅನಿವಾರ್ಯ. ದೇಶದ ದೊಡ್ಡ ಮಾನವ ಸಂಪನ್ಮೂಲ ಅಭಿವೃದ್ಧಿಗೂ ಇದು ಪೂರಕವಾಗಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಕೈಗಾರಿಕೆ ಸ್ನೇಹಿ ವಾತಾವರಣವಿದೆ. ವಿದ್ಯುತ್ ವಲಯದಲ್ಲಿಯೂ ಬಂಡವಾಳ ಆಕರ್ಷಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ. ಇದೇ ಕಾರಣದಿಂದ ರಾಜ್ಯದ ಭವಿಷ್ಯದ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ದೂರದೃಷ್ಟಿ ಯೋಜನೆ ರೂಪಿಸಲಾಗುತ್ತಿದೆ. ರಾಜ್ಯದ ಇಂಧನ ವಲಯದ ಸುಧಾರಣೆಗೆ 5 ದಿನದ ಈ ಸಮಾವೇಶವು ಉತ್ತಮ ವೇದಿಕೆಯಾಗಿ ರೂಪಗೊಳ್ಳಲಿ ಎಂದು ಅವರು ಆಶಿಸಿದರು.
1 ಲಕ್ಷ ಎಂಜಿನಿಯರ್: ರಾಜ್ಯದಲ್ಲಿ 200ಕ್ಕೂ ಅಧಿಕ ಎಂಜಿನಿಯರಿಂಗ್ ಕಾಲೇಜುಗಳಿವೆ. ಪ್ರತಿ ವರ್ಷ 1 ಲಕ್ಷದಷ್ಟು ಎಂಜಿನಿಯರ್ಗಳು ಹೊರಬರುತ್ತಿದ್ದಾರೆ. ಈ ಮಾನವ ಸಂಪನ್ಮೂಲವನ್ನು ಇಂಧನ ಕ್ಷೇತ್ರದ ತಂತ್ರಜ್ಞಾನ ಅಭಿವೃದ್ಧಿಗೆ ಬಳಸಿಕೊಳ್ಳಬೇಕು. ಇದರಿಂದ ಇಂಧನ ಸೋರಿಕೆ ಹಾಗೂ ಸಾಮರ್ಥ್ಯ ನಿರ್ವಹಣೆ ಮಾಡಬಹುದಾಗಿದೆ. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಸಮಗ್ರ ಯೋಜನೆ ರೂಪಿಸುವ ತಯಾರಿಯಲ್ಲಿದೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.
ಗ್ರಾಮೀಣ ಭಾರತದಲ್ಲಿ ಇಂದಿಗೂ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಜಾಗತಿಕವಾಗಿ ತಲಾ ವಿದ್ಯುತ್ ಬಳಕೆಯು 3 ಸಾವಿರ ಯುನಿಟ್ಗಳಿದ್ದರೆ ಭಾರತದಲ್ಲಿ ಇದು ಕೇವಲ 800 ಯುನಿಟ್ನಷ್ಟಿದೆ. 13ನೇ ಪಂಚವಾರ್ಷಿಕ ಯೋಜನೆಯಲ್ಲಿ ನೂತನವಾಗಿ 19 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಉದ್ದೇಶಹೊಂದಲಾಗಿದೆ ಎಂದು ಕೇಂದ್ರ ಇಂಧನ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ದೇವೇಂದ್ರ ಚೌಧರಿ ಅಭಿಪ್ರಾಯಪಟ್ಟರು.
ಸಮಾವೇಶದಲ್ಲಿ 200ಕ್ಕೂ ಅಧಿಕ ಎಲೆಕ್ಟ್ರಾನಿಕ್ ಉತ್ಪನ್ನ ಮಳಿಗೆ ಹಾಗೂ 500ಕ್ಕೂ ಅಧಿಕ ವಿದೇಶಿ ಪ್ರತಿನಿಧಿಗಳು ಭಾಗವಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

