ಸುಪಾರಿ ಹಂತಕ ಸಾವು, ಪಿಎಸ್ಐ ತೀವ್ರ ಗಾಯ
ಗುಲ್ಬರ್ಗ: ಮುತ್ತೂಟ್ ಫೈನಾನ್ಸ್ ದರೋಡೆಯ ಪ್ರಮುಖ ಆರೋಪಿ, ಸುಪಾರಿ ಹಂತಕ ಮುನ್ನಾ ಹಾಗೂ ಗುಲ್ಬರ್ಗ ಪೊಲೀಸರ ಮಧ್ಯೆ ರೋಜಾ ಪ್ರದೇಶದಲ್ಲಿ ಬುಧವಾರ ತೀವ್ರ ಗುಂಡಿನ ಚಕಮಕಿ ನಡೆಯಿತು. ಈ ಘಟನೆಯಲ್ಲಿ ಹಂತಕ ಮುನ್ನಾ ಮೃತಪಟ್ಟರೆ, ಕಾರ್ಯಾಚರಣೆ ನೇತೃತ್ವ ವಹಿಸಿದ್ದ ಪಿಎಸ್ಐ ಮಲ್ಲಿಕಾರ್ಜುನ್ ಬಂಡೆ ತೀವ್ರವಾಗಿ ಗಾಯಗೊಂಡು, ಜೀವನ್ಮರಣ ಸ್ಥಿತಿಯಲ್ಲಿದ್ದಾರೆ. ಇದೇ ವೇಳೆ, ಪೊಲೀಸ್ ಅಧಿಕಾರಿಗಳಾದ ಮುರಳಿ, ಉದ್ದಂಡಪ್ಪ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಮಲ್ಲಿಕಾರ್ಜುನ್ ಬಂಡೆಗೆ ಮೆದುಳಿನಲ್ಲಿ ತೀವ್ರ ರಕ್ತಸ್ರಾವವಾಗುತ್ತಿರುವುದರಿಂದ ಬಸವೇಶ್ವರ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿದೆ.
ಏನಾಯಿತು?: ಕಳೆದ ನವೆಂಬರ್ನಲ್ಲಿ ನಗರದ ಮುತ್ತೂಟ್ ಫೈನಾನ್ಸ್ ದರೋಡೆಯಾಗಿತ್ತು. ಈ ಪ್ರಕರಣದಲ್ಲಿ ಮುನ್ನಾ ಪ್ರಮುಖ ಸೂತ್ರಧಾರಿ ಎಂಬ ಸಂಗತಿ ಪೊಲೀಸರಿಗೆ ಗೊತ್ತಾಗಿತ್ತು. ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ಈ ಹಿನ್ನೆಲೆಯಲ್ಲಿ ಮುನ್ನಾ ರೋಜಾ ಬಡಾವಣೆಯ ತನ್ನ ಮನೆಯಲ್ಲಿದ್ದಾನೆ ಎಂಬ ಖಚಿತ ಮಾಹಿತಿ ಆಧರಿಸಿ, ಸ್ಟೇಷನ್ ಬಜಾರ್ ಪಿಎಸ್ಐ ಮಲ್ಲಿಕಾರ್ಜುನ್ ಬಂಡೆ, ಮುರಳಿ, ರೋಜಾ ಠಾಣೆಯ ಎಎಸ್ಐ ಉದ್ದಂಡಪ್ಪ ಹಾಗೂ 15 ಸಿಬ್ಬಂದಿ ಮುನ್ನಾ ಅವಿತುಕೊಂಡಿದ್ದ ಮನೆ ಸುತ್ತುವರಿದಿದ್ದಾರೆ. ಈ ವಿಷಯ ಗೊತ್ತಾಗುತ್ತಿದ್ದಂತೆ, ಮುನ್ನಾ ಮನೆಯಲ್ಲಿದ್ದವರನ್ನೆಲ್ಲ ಹೊರದೂಡಿ, ಕೇವಲ ತನ್ನ ಸಹಚರರೊಂದಿಗೆ ಕೂಡಿಕೊಂಡು ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದಾನೆ. ಈ ಹಂತದಲ್ಲಿ ತಂಡದ ನೇತೃತ್ವ ವಹಿಸಿಕೊಂಡಿದ್ದ ಪಿಎಸ್ಐ ಮಲ್ಲಿಕಾರ್ಜುನ್ ಬಂಡೆ ಅವರು ಮನೆಯೊಳಗೆ ನುಗ್ಗಲು ಬಾಗಿಲು ಮುರಿದಿದ್ದಾರೆ. ಅನಿರೀಕ್ಷತ ಬೆಳವಣಿಗೆಯಿಂದ ಗಲಿಬಿಲಿಗೊಂಡ ಮುನ್ನಾ, ತಕ್ಷಣ ತನ್ನ ಬಳಿಯಲ್ಲಿದ್ದ ಬಂದೂಕಿನಿಂದ ಎರ್ರಾಬಿರ್ರಿ ಗುಂಡು ಹಾರಿಸಿದ್ದಾನೆ. ಈ ವೇಳೆ, ಪೊಲೀಸರು ಕೂಡಾ ಮರು ಗುಂಡಿನ ದಾಳಿ ನಡೆಸಿದ್ದಾರೆ.
ಹೊಟ್ಟೆ ಸೀಳಿದ ಗುಂಡು: ಪೊಲೀಸರು ಹಾರಿಸಿದ್ದ ಗುಂಡು ಮುನ್ನಾನ ಹೊಟ್ಟೆ, ಎದೆ ಸೀಳಿಕೊಂಡು ಹೋಗಿದೆ. ತೀವ್ರವಾಗಿ ಗಾಯಗೊಂಡಿದ್ದ ಆತ ಕುಸಿದು ಬಿದ್ದಿದ್ದಾನೆ. ಇದೇ ವೇಳೆ, ಮುನ್ನಾನ ಸಹಚರರು ಹಾರಿಸಿದ್ದ ಗುಂಡುಗಳು ಪಿಎಸ್ಐ ಮಲ್ಲಿಕಾರ್ಜುನ ಬಂಡೆ, ಪಿಎಸ್ಐ ಮುರಳಿ ಹಾಗೂ ಎಎಸ್ಐ ಉದ್ಧಂಡಪ್ಪ ಇವರನ್ನು ಗಾಯಗೊಳಿಸಿವೆ. ಬಳಿಕ ಮುನ್ನಾನನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಏತನ್ಮಧ್ಯೆ, ಗುಂಡಿನ ಕಾಳಗ ನಡೆದ ರೋಜಾ ಪ್ರದೇಶದ ಮುನ್ನಾ ಮನೆ ಹಾಗೂ ಬಸವೇಶ್ವರ ಆಸ್ಪತ್ರೆಗೆ ಹಿರಿಯ ಅಧಿಕಾರಿಗಳಾದ ಐಜಿಪಿ ವಜೀರ್ ಅಹ್ಮದ್, ಎಸ್ಪಿ ಅಮಿತ್ ಸಿಂಗ್, ಎಎಸ್ಪಿ ಕಾಶೀನಾಥ ತಳಕೇರಿ, ಪ್ರೊಬೇಷನರಿ ಎಸ್ಪಿ ಸಂತೋಷ ಬಾಬು ಸೇರಿದಂತೆ ಅನೇಕರು ಭೇಟಿ ನೀಡಿ ಪರಿಸೀಲಿಸಿದ್ದಾರೆ. ರೋಜಾ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಪಿಎಸ್ಐ ಬಂಡೆ ತಲೆ ಹೊಕ್ಕು ಪಾರಾದ ಗುಂಡುಗಳು!
ಮುನ್ನಾ ಮತ್ತು ಆತನ ಸಹಚರರು ಹಾರಿಸಿದ ಎರಡು ಗುಂಡುಗಳು ಪಿಎಸ್ ಮಲ್ಲಿಕಾರ್ಜುನ ಬಂಡೆ ಅವರ ತಲೆ ಹೊಕ್ಕು ಪಾರಾಗಿವೆ. ಇದರಿಂದ ಅವರ ತಲೆ ಬುರುಡೆಗೆ, ಮೆದುಳು ತೀವ್ರವಾಗಿ ಘಾಸಿಗೊಂಡಿದೆ. ಮುರಳಿ ಅವರಿಗೆ ಗುಂಡು ತಲೆ ಮಗ್ಗುಲನ್ನು ಸವರಿ ಹಾರಿ ಹೋದರೆ ಉದ್ಧಂಡಪ್ಪ ಅವರಿಗೂ ಗುಂಡು ಬಡಿದು ಗಾಯವಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಮಲ್ಲಿಕಾರ್ಜುನ್ ಅವರನ್ನು ಸ್ಥಳೀಯ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿದೆ. ಹೀಗಿದ್ದಾಗ್ಯೂ ಅವರು ಸಾವು ಬದುಕಿನ ಹೋರಾಟದಲ್ಲಿದ್ದಾರೆ. ಮೆದುಳಿನಿಂದ ತೀವ್ರ ರಕ್ತಸ್ರಾವವಾಗುತ್ತಿದೆ. ರಕ್ತಸ್ರಾವ ನಿಂತರೆ ಅವರು ಅಪಾಯದಿಂದ ಪಾರಾದ ಹಾಗೆ ಎಂದು ಬಸವೇಶ್ವರ ಆಸ್ಪತ್ರೆ ಡೀನ್ ಡಾ.ಎಂ.ಎಸ್.ಹರವಾಳ್ ತಿಳಿಸಿದ್ದಾರೆ. ಗುಂಡೇಟಿನಿಂದ ಗಾಯಗೊಂಡಿರುವ ಮುರಳಿ ಹಾಗೂ ಉದ್ದಂಡಪ್ಪ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗೆ ಹೈದ್ರಾಬಾದ್ಗೆ ಕಳುಹಿಸಿಕೊಡುವ ಬಗ್ಗೆ ನಿರ್ಧರಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

