ಅನ್ನಭಾಗ್ಯ ಫಲಾನುಭವಿಗಳಿಗೆ ದುಪ್ಪಟ್ಟು ಭಾಗ್ಯ

ಕನ್ನಡಪ್ರಭ ವಾರ್ತೆ , ಬೆಂಗಳೂರು , ಜ.10
ಅನ್ನಭಾಗ್ಯ ಯೋಜನೆ ಪಡಿತರದಾರರಿಗೆ ನೀಡುತ್ತಿರುವ ಅಹಾರಧಾನ್ಯ ಪ್ರಮಾಣ ಪರಿಷ್ಕರಣೆ, ಸರ್ಕಾರಿ ಶಾಲೆಗಳ 1ನೇ ತರಗತಿಯ ಹೆಣ್ಣು ಮಕ್ಕಳಿಗೆ ಪ್ರೋತ್ಸಾಹಧನ ಮತ್ತು ರಾಜ್ಯ ನಾಗರಿಕ ಸೇವಾ ಅಧಿಕಾರಿಗಳ ಗೃಹ ನಿರ್ಮಾಣ ಮುಂಗಡ ಸಾಲದ ಮೊತ್ತ 25 ಲಕ್ಷಕ್ಕೆ ಹೆಚ್ಚಳ ಸೇರಿದಂತೆ ಹಲವಾರು ಮಹತ್ವದ ನಿರ್ಣಯಗಳಿಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಬಗ್ಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಅವರು ಸುದ್ದಿಗಾರರಿಗೆ ವಿವರಿಸಿದರು.
ಅನ್ನಭಾಗ್ಯ ಯೋಜನೆಯಲ್ಲಿ ಯುನಿಟ್ ಆಧಾರದ ಮೇಲೆ ಅಕ್ಕಿ ಕೊಡುವಾಗ ಉತ್ತರ ಕರ್ನಾಟಕ ಭಾಗದಲ್ಲಿ ಗೋದಿ ನೀಡಲಾಗುತ್ತಿತ್ತು. ಆದರೆ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಈಗ ನೀಡುತ್ತಿದ್ದ 2, 3, 5 ಕೆಜಿ ಬದಲಾಗಿ, 4, 6 ಹಾಗೂ 10 ಕೆ.ಜಿ. ಗೋದಿಯನ್ನು ಉತ್ತರ ಕರ್ನಾಟಕ ಭಾಗದಲ್ಲಿ ಹಾಗೂ ದಕ್ಷಿಣ ಕರ್ನಾಟಕದಲ್ಲಿ 2, 4, 6 ಕೆಜಿ ಗೋದಿಯನ್ನು ನೀಡಲಾಗುವುದು.
ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹೆಣ್ಣು ಮಕ್ಕಳ ಹಾಜರಿ ಹಾಗೂ ಪ್ರವೇಶಕ್ಕೆ ಪ್ರೋತ್ಸಾಹ ನೀಡಲು ಪ್ರತಿದಿನ 2 ನೀಡುವ ಬಜೆಟ್ನಲ್ಲಿ ಪ್ರಸ್ತಾಪಿತ ಯೋಜನೆಗೆ ಅಂಗೀಕಾರ ಸಿಕ್ಕಿದೆ.
ರಾಜ್ಯ ನಾಗರಿಕ ಸೇವಾ ಅಧಿಕಾರಿಗಳಿಗೆ ಗೃಹ ನಿರ್ಮಾಣ ಉದ್ದೇಶಕ್ಕೆ ನೀಡುವ ಮುಂಗಡ ಸಾಲ ಪ್ರಮಾಣವನ್ನು 5 ಲಕ್ಷದಿಂದ 25 ಲಕ್ಷಕ್ಕೆ ಹೆಚ್ಚಿಸಲು ನಿರ್ಧರಿಸಿದೆ.
ಅಬಕಾರಿ ಮತ್ತು ಇತರೆ ಶುಲ್ಕಗಳನ್ನು ಆನ್ಲೈನ್ ಮೂಲಕ ಪಾವತಿಸಲು ಅನುವಾಗುವಂತೆ ಕರ್ನಾಟಕ ಅಬಕಾರಿ ಕಾಯಿದೆ ತಿದ್ದುಪಡಿಗೆ ಒಪ್ಪಿಗೆ ಸಿಕ್ಕಿದೆ. ಸಾರ್ವಜನಿಕ ವಿತರಣಾ ಪದ್ಧತಿಯಡಿ ಆಹಾರ ಧಾನ್ಯ ಎತ್ತುವಳಿ ಮತ್ತು ವಿತರಣೆ ಮಾಡುವ ಸಗಟು ನಾಮಿನಿದಾರರ ಲಾಭಾಂಶ ಪರಿಷ್ಕರಣೆಯಾಗಿದ್ದು, ಬಹುದಿನಗಳಿಂದ ಇದ್ದ ಈ ಬೇಡಿಕೆಗೆ ಕೊನೆಗೂ ಸರ್ಕಾರ ಅಸ್ತು ಎಂದಿದೆ. ಲಾಭಾಂಶವನ್ನು ಪ್ರತಿ ಕ್ವಿಂಟಲ್ಗೆ 35 ಹೆಚ್ಚಿಸಲು ಒಪ್ಪಿಗೆ ನೀಡಲಾಗಿದೆ.
ಶಿಕ್ಷೆಗೊಳಗಾದ ಸರ್ಕಾರಿ ನೌಕರರು ವಜಾ: ಭ್ರಷ್ಟಾಚಾರ ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗುವ ಸರ್ಕಾರಿ ನೌಕರರನ್ನು ಇನ್ನು ಮುಂದೆ ಸೇವೆಯಿಂದ ವಜಾಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಲೋಕಾಯುಕ್ತರ ಬಲೆಗೆ ಬಿದ್ದು ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಜ್ಞ ವೈದ್ಯ ಡಾ.ಟಿ. ವೆಂಕಟೇಶ್, ಹಾಗೂ ಡಾ.ಕೆ. ರಾಜಶೇಖರ್ ಅವರನ್ನು ಅಮಾನತುಗೊಳಿಸುವುದಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ತೀರ್ಮಾನಗಳೇನು?
- ಕುಂದಾಪುರ ತಾಲೂಕಿನ ಬೈಂದೂರು ಸಮೀಪದ ಕೊಡೇರಿಯಲ್ಲಿ ಮೀನುಗಾರಿಕೆ ಇಳಿದಾಣ ಕೇಂದ್ರದ ಅಳಿವೆಯಲ್ಲಿರುವ ತಡೆಗೋಡೆಗಳನ್ನು 200 ಮೀಟರ್ನಿಂದ 400 ಮೀಟರ್ಗೆ ಹೆಚ್ಚಿಸುವಂತೆ ತಜ್ಞರ ಸಮಿತಿ ನೀಡಿದ್ದ ವರದಿಗೆ ಅನುಮೋದನೆ. 33 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭ.
- ಬೆಂಗಳೂರಿನ ಹೆಬ್ಬಾಳದಲ್ಲಿ ಪಶು ಇಲಾಖೆ ಒಡೆತನದಲ್ಲಿರುವ 4 ಎಕರೆ ಜಮೀನಿನಲ್ಲಿ ಪಶುಭವನ ನಿರ್ಮಾಣ
- ಮೆಕ್ಕೆ ಜೋಳ ಖರೀದಿ ಮಿತಿಯನ್ನು 75 ಕ್ವಿಂಟಲ್ಗೆ ನಿಗದಿಗೊಳಿಸಲು ನಿರ್ಧಾರ. 1310 ಬೆಂಬಲ ದರದಲ್ಲಿ ಸರ್ಕಾರ ಮೆಕ್ಕೆ ಜೋಳ ಖರೀದಿ ಪ್ರಕ್ರಿಯೆ ಆರಂಭಿಸಿದ ನಂತರ ಮಧ್ಯವರ್ತಿಗಳೂ ರೈತರ ಹೆಸರಿನಲ್ಲಿ ಖಾತಾ ಪಡೆದುಕೊಂಡು ಖರೀದಿ ಕೇಂದ್ರಗಳಲ್ಲಿ ಮೆಕ್ಕೆ ಜೋಳ ಮಾರಾಟ ಮಾಡುತ್ತಿರುವ ರೈತರಿಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೆಕ್ಕೆ ಜೋಳ ಖರೀದಿಗೆ ಮಿತಿ ಹೇರಲಾಗಿದೆ.
- ನಿವೃತ್ತ ಐಎಫ್ಎಸ್ ಅಧಿಕಾರಿ ಆರ್.ಎಂ.ಎನ್. ಸಹಾಯ್ ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರಾಗಿ ನೇಮಕ.
- ಕೃಷ್ಣಾ ಭಾಗ್ಯ ಜಲ ನಿಗಮಕ್ಕೆ 2013- 14ನೇ ಸಾಲಿನಲ್ಲಿ ಹಣಕಾಸು ಮಾರುಕಟ್ಟೆಯಿಂದ ಬಾಂಡ್ಗಳ ಮೂಲಕ 750 ಕೋಟಿ ಸಾಲ ಪಡೆಯುವುದಕ್ಕೆ ಸರ್ಕಾರಿ ಖಾತರಿ ನೀಡಲು ಘಟನೋತ್ತರ ಅನುಮತಿ.
ಸಂಪುಟ ಸಭೆಯ ಇತರೆ ತೀರ್ಮಾನಗಳು
- ಹಾವೇರಿ ಜಿಲ್ಲೆ ಶಿಗ್ಗಾಂವ್ ತಾಲೂಕು ಗಂಜಿಗಟ್ಟಿ ಗ್ರಾಮದ ಸ.ನಂ59ರಲ್ಲಿ ಸಮುದಾಯ ಭವನ ನಿರ್ಮಿಸಲು ಕುರುಬರ ಸಂಘಕ್ಕೆ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡುವುದಕ್ಕೆ ಒಪ್ಪಿಗೆ.
- ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದಲ್ಲಿ 17.54 ಎಕರೆ ಜಮೀನನ್ನು ಶ್ರೀ ಧರ್ಮಸ್ಥಲ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗೆ ನೀಡಲು ಒಪ್ಪಿಗೆ.
- ಗ್ರಾಮಾಂತರ ಪ್ರದೇಶದಲ್ಲಿ ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿಕೊಂಡಿರುವುದನ್ನು ಕಂದಾಯ ಇಲಾಖೆಯ 94 ಸಿ ಅಡಿಯಲ್ಲಿ ಶುಲ್ಕ ವಿಧಿಸಿ ಮಂಜೂರು ಮಾಡುವುದಕ್ಕೆ ಒಪ್ಪಿಗೆ. ಇದರ ಪ್ರಕಾರ 30- 40 ನಿವೇಶನದಲ್ಲಿ ಮನೆ ನಿರ್ಮಿಸಿಕೊಂಡ ಪರಿಶಿಷ್ಟ ಜಾತಿ, ಪಂಗಡ, ವಿಕಲಚೇತನರು ಹಾಗೂ ವಿಧವೆಯರಿಗೆ ಮಾರ್ಗಸೂಚಿ ದರದ ಶೇ. 5, ಸಾಮಾನ್ಯ ವರ್ಗದವರಿಗೆ ಶೇ.10, 60- 40ರ ನಿವೇಶನಕ್ಕೆ ಸಾಮಾನ್ಯ ವರ್ಗದವರಿಗೆ ಶೇ.20 ಹಾಗೂ ಇತರೆ ವರ್ಗದವರಿಗೆ ಶೇ.10ರಷ್ಟು ಮಾರ್ಗಸೂಚಿ ದರ ನಿಗದಿಗೆ ಅನುಮತಿ.
- ಜಲ್ಲಿ ಕಲ್ಲು ಕ್ರಶರ್ಗಳಿಗೆ ಉಪಖನಿಜ ರಿಯಾಯಿತಿ ನಿಯಮ 8 ಬಿ ಅಡಿ ಹರಾಜು ಮೂಲಕ ಗುತ್ತಿಗೆ ನೀಡಬೇಕೆಂದು ರಾಜ್ಯ ಹೈಕೋರ್ಟ್ ಆದೇಶ ನೀಡಿತ್ತು. ಆದರೆ ಇದಕ್ಕೆ ಸುಪ್ರೀಂ ಕೋರ್ಟ್ನಲ್ಲಿ ತಡೆಯಾಜ್ಞೆ ಸಿಕ್ಕಿದೆ. ಹೀಗಾಗಿ ನಿಯಮ 9 ಅಥವಾ 29 ಪ್ರಕಾರ ನೇರ ಪರವಾನಗಿ ನೀಡಲು ನಿರ್ಧಾರ. ಯಾರು ಮೊದಲು ಬರುತ್ತಾರೋ, ಅವರಿಗೆ ಮೊದಲ ಆದ್ಯತೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


