ಅಡಕೆ ರೈತರ ನೆರವಿಗೆ ಕ್ಯಾಂಪ್ಕೋ ಅಧ್ಯಯನ
ಕ.ಪ್ರ.ವಾರ್ತೆ , ಮಂಗಳೂರು , ಜ. 12
ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಆಶ್ರಯದಲ್ಲಿ ಅಡಕೆ ಸಂಶೋಧನಾ ಮತ್ತು ಅಭಿವೃದ್ಧಿ ಪ್ರತಿಷ್ಠಾನ (ಎಆರ್‌ಡಿಎಫ್) ಅಡಕೆ ಉತ್ಪಾದನಾ ವೆಚ್ಚವನ್ನು ಎರಡನೇ ಬಾರಿ ಪರಿಷ್ಕರಿಸಿದೆ.
ಎರಡು ವರ್ಷಗಳ ಹಿಂದೆ ಉತ್ಪಾದನಾ ವೆಚ್ಚವನ್ನು ವೈಜ್ಞಾನಿಕವಾಗಿ ನಿಗದಿಪಡಿಸಿದಾಗ ಅದನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಪರಿಗಣಿಸುವ ನಂಬಿಕೆ ಹೊಂದಿತ್ತು. ಆದರೆ ಎರಡೂ ಸರ್ಕಾರಗಳು ಈ ವರದಿಗೆ ಬೆಲೆ ನೀಡಿರಲಿಲ್ಲ. ಅಡಕೆ ಧಾರಣೆ ಕುಸಿತ ಸಂದರ್ಭದಲ್ಲಿ ಬೆಂಬಲ ಬೆಲೆ ನಿರ್ಧರಿಸುವ 'ಬೆಲೆ ನಿರ್ಧಾರಣಾ ಸಮಿತಿ' ಕೃಷಿ ವಿಶ್ವವಿದ್ಯಾಲಯದ ವರದಿಯನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುತ್ತಿತ್ತು. ಇನ್ನು ಕ್ಯಾಂಪ್ಕೋ ವರದಿಯನ್ನು ಪರಿಗಣಿಸುವಂತೆ ಮತ್ತೊಮ್ಮೆ ಸರ್ಕಾರವನ್ನು ಆಗ್ರಹಿಸಲಿದೆ.
3 ವರ್ಷಗಳ ಬಳಿಕ ವರದಿ: ಕ್ಯಾಂಪ್ಕೋ ಈ ಬಾರಿ ಸರ್ಕಾರಕ್ಕೆ ಸಲ್ಲಿಸುತ್ತಿರುವುದು 2012-13ನೇ ಸಾಲಿನ ಅಡಕೆ ಉತ್ಪಾದನಾ ವೆಚ್ಚದ ವೈಜ್ಞಾನಿಕ ವರದಿ. ಈ ಅಧ್ಯಯನ ವರದಿಯಲ್ಲಿ ಬಿಳಿ ಅಡಕೆ ಕಿಲೋಗೆ 168 ಹಾಗೂ ಕೆಂಪಡಕೆ ಕಿಲೋಗೆ ಉತ್ಪಾದನಾ ವೆಚ್ಚ 197 ನಿಗದಿಪಡಿಸಿದೆ. ಈ ಸಾಲಿನಲ್ಲಿ ಅತಿವೃಷ್ಟಿ, ಕೊಳೆರೋಗದಿಂದ ಸಾಕಷ್ಟು ಅಡಕೆ ಫಸಲು ಹಾನಿಯಾಗಿದ್ದು, ಫೆಬ್ರವರಿ ಬಳಿಕ ಮತ್ತೆ ಪರಿಣತ ಸಮಿತಿ ವೈಜ್ಞಾನಿಕ ಅಧ್ಯಯನ ನಡೆಸಲಿದೆ.
ರಾಜ್ಯ ಯೋಜನಾ ಆಯೋಗ ಮಾಜಿ ಸದಸ್ಯ, ಆರ್ಥಿಕ ತಜ್ಞ ಪ್ರೊ.ಜಿ.ವಿ.ಜೋಶಿ ನೇತೃತ್ವದ ಪರಿಣತರ 6 ಮಂದಿಯ ತಂಡ ಕೃಷಿಕರ ಬಳಿ ತೆರಳಿ ಈ ವರದಿ ತಯಾರಿಸಿದೆ. ಬಿಳಿ ಅಡಕೆ ಬೆಳೆಯುವ 450 ಹಾಗೂ ಕೆಂಪಡಕೆ ಬೆಳೆಯುವ 400 ರೈತರನ್ನು ಭೇಟಿ ಮಾಡಿ ಅಡಕೆ ತೋಟ ವೀಕ್ಷಿಸಿ ವರದಿ ಸಿದ್ಧಪಡಿಸಿದೆ. ಈ ತಂಡ ಶಿರಸಿ, ಸಿದ್ದಾಪುರ, ಹೊನ್ನಾವರ, ದ.ಕ, ಉಡುಪಿ, ಕಾಸರಗೋಡು ಜಿಲ್ಲೆಗಳ ಅಡಕೆ ತೋಟಗಳಿಗೆ ಭೇಟಿ ನೀಡಿತ್ತು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಪ್ರಕಾಶ್ ಕಮ್ಮರಡಿ ಈ ಸಮಿತಿಗೆ ಆಹ್ವಾನಿತರು. ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಎಆರ್‌ಡಿಎಫ್ ಗೌರವಾಧ್ಯಕ್ಷರು.
2010 ಸೆಪ್ಟೆಂಬರ್‌ನಲ್ಲಿ ಮೊದಲ ಬಾರಿಗೆ ಎಆರ್‌ಡಿಎಫ್ ಅಡಕೆ ಉತ್ಪಾದನಾ ವೆಚ್ಚದ ವೈಜ್ಞಾನಿಕ ಅಧ್ಯಯನ ನಡೆಸಿ ಕ್ಯಾಂಪ್ಕೋಗೆ ವರದಿ ನೀಡಿತ್ತು. ಅದರಲ್ಲಿ ಬಿಳಿ ಅಡಕೆ ಕಿಲೋಗೆ 114 ಹಾಗೂ ಕೆಂಪಡಕೆಗೆ 148 ನಿಗದಿಪಡಿಸಿತ್ತು. ರಾಜ್ಯ ಸರ್ಕಾರದ ಕೋರಿಕೆ ಮೇರೆಗೆ ಅಡಕೆ ಉತ್ಪಾದನಾ ವೆಚ್ಚದ ವರದಿ ಸಿದ್ಧಪಡಿಸಿತ್ತು. ಬಳಿಕ ಕ್ಯಾಂಪ್ಕೋ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಅಷ್ಟರಲ್ಲಿ ಅಡಕೆ ಧಾರಣೆ ಉತ್ಪಾದನಾ ವೆಚ್ಚಕ್ಕಿಂತ ಏರಿಕೆಯಾದ್ದರಿಂದ ಬೆಂಬಲ ಬೆಲೆ ಪ್ರಕಟಿಸುವ ಅನಿವಾರ್ಯತೆಯೂ ದೂರವಾಗಿತ್ತು. ಆದರೂ ಸರ್ಕಾರ ಈ ವರದಿ ಪರಿಗಣಿಸಿರಲಿಲ್ಲ.
ಬೆಲೆ ನಿರ್ಧಾರ ಪರಿಗಣಿಸಿ: ಈಗ ಅಡಕೆ ಉತ್ಪಾದನಾ ವೆಚ್ಚ ನಿರ್ಧರಿಸುವುದು ತೋಟಗಾರಿಕೆ ಇಲಾಖೆಯ ಅಧ್ಯಯನ ವರದಿ. ಈ ಇಲಾಖೆ ಸರ್ಕಾರಕ್ಕೆ ಸಲ್ಲಿಸುವ ವರದಿಯಲ್ಲಿ ರೈತರ ಹಿತಾಸಕ್ತಿ ಇರುವುದಿಲ್ಲ. ಆದ್ದರಿಂದ ಕ್ಯಾಂಪ್ಕೋ ಸಿದ್ಧಪಡಿಸಿದ ವೈಜ್ಞಾನಿಕ ಅಧ್ಯಯನ ವರದಿಯನ್ನು ಪರಿಗಣಿಸಬೇಕೆಂಬ ಬೇಡಿಕೆ ವ್ಯಕ್ತವಾಗಿದೆ. ಕೃಷಿ ಉತ್ಪನ್ನ ಧಾರಣೆ ಕುಸಿತ ಸಂದರ್ಭದಲ್ಲಿ ಬೆಂಬಲ ಬೆಲೆ ನಿರ್ಧರಿಸಲು ಕೇಂದ್ರ ಹಾಗೂ ರಾಜ್ಯದಲ್ಲಿ ಬೆಲೆ ನಿರ್ಧರಿಸುವ ಸಮಿತಿ ಇದೆ. ಈ ಸಮಿತಿ ನಿರ್ಧರಿಸುವ ಬೆಲೆಯೇ ಸರ್ಕಾರಕ್ಕೆ ಅಂತಿಮ. 2009ರಲ್ಲಿ ಬಿಳಿ ಅಡಕೆಗೆ 69, ಕೆಂಪಡಕೆಗೆ 95 ಬೆಂಬಲ ಬೆಲೆ ನಿಗದಿಯಾಗಿತ್ತು. ಇದಕ್ಕೆ ರಾಜ್ಯ ಸರ್ಕಾರ 6 ಮೊತ್ತ ಸೇರಿಸಿ ನೀಡಿತ್ತು.
'ಈಗ ಅಡಕೆ ಧಾರಣೆ ಏರಿಕೆಯಾಗುತ್ತಿದೆ. ಆದರೆ ಹಠಾತ್ ಮಾರುಕಟ್ಟೆ ಕುಸಿತಗೊಂಡಾಗ ಬೆಂಬಲ ಬೆಲೆ ನೀಡಲು ಈ ವರದಿಯ ಶಿಫಾರಸು ಪರಿಗಣಿಸಬೇಕು. ಅಲ್ಲದೆ ಪ್ರಾಕೃತಿಕ ಹಾನಿ ಸಂಭವಿಸಿದಾಗ, ಹಾನಿಗೊಂಡ ಅಡಕೆ ತೋಟಕ್ಕೆ ಪರಿಹಾರ ನೀಡಲು ಇದೇ ವರದಿಯನ್ನು ಆಧಾರವಾಗಿರಿಸಬೇಕು' ಎನ್ನುತ್ತಾರೆ ಪ್ರೊ.ಜಿ.ವಿ.ಜೋಶಿ.
ಅಡಕೆ ಉತ್ಪಾದನಾ ವೆಚ್ಚದ ಎರಡನೇ ವರದಿ ಸಿದ್ಧಗೊಂಡಿದ್ದು, ಶೀಘ್ರವೇ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸಲ್ಲಿಸುತ್ತೇವೆ. ಅಡಕೆ ಉತ್ಪಾದನಾ ವೆಚ್ಚ ಆಧಾರದಲ್ಲಿ ನೆರವಿಗೆ ಧಾವಿಸುವಾಗ ಇದೇ ವರದಿ ಮಾನದಂಡದಲ್ಲಿ ಉತ್ಪಾದನಾ ವೆಚ್ಚ ಪರಿಗಣಿಸುವಂತೆ ಸರ್ಕಾರವನ್ನು ಕೋರಲಾಗುವುದು.
- ಕೊಂಕೋಡಿ ಪದ್ಮನಾಭ, ಕ್ಯಾಂಪ್ಕೋ ಅಧ್ಯಕ್ಷ
-ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

