ತುರ್ತು ನಿರ್ಗಮನದ ಆದೇಶ 'ಬೆಂಕಿ'ಗೆ
ಬೆಂಗಳೂರು: ವೋಲ್ವೋ ಬಸ್ ಬೆಂಕಿ ದುರಂತದ ನಂತರ ಎಲ್ಲಾ ಬಸ್‌ಗಳಿಗೂ ತುರ್ತು ನಿರ್ಗಮನದ ಬಾಗಿಲು ಅಳವಡಿಸುವಂತೆ ಗೃಹಸಚಿವ ಕೆ.ಜೆ. ಜಾರ್ಜ್ ನೀಡಿದ್ದ ಆದೇಶದಂತೆ ಕೆಎಸ್‌ಆರ್‌ಟಿಸಿ 150 ಬಸ್‌ಗಳಿಗೆ ಬಾಗಿಲು ಅಳವಡಿಸಿದ್ದರೆ, ಖಾಸಗಿ ಬಸ್ ಮಾಲಿಕರು ಆದೇಶಕ್ಕೆ ಕ್ಯಾರೇ ಅಂದಿಲ್ಲ.
ಮೂರು ತಿಂಗಳಲ್ಲಿ ಎಲ್ಲ ಬಸ್‌ಗಳಿಗೆ 2 ಬಾಗಿಲು ಅಳವಡಿಸುವಂತೆ ಆದೇಶಿಸಲಾಗಿತ್ತು. ಈಗಾಗಲೇ ಎರಡು ತಿಂಗಳು ಮುಗಿದಿದೆ. ಇನ್ನೊಂದು ತಿಂಗಳಲ್ಲಿ ಎಲ್ಲ ಬಸ್‌ಗಳಿಗೂ ಅಳವಡಿಸಲು ಸಾಧ್ಯವೇ ಇಲ್ಲ. ಸುರಕ್ಷೆಗಾಗಿ 2 ಸೀಟುಗಳನ್ನು ಬಿಟ್ಟುಕೊಡಲು ಖಾಸಗಿ ಬಸ್ ಮಾಲೀಕರು ಸಿದ್ಧರಿಲ್ಲದಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.
ಆದರೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಇದಕ್ಕೆ ಹೊರತಾಗಿದೆ. ಪ್ರಯಾಣಿಕರ ಸುರಕ್ಷೆಗೆ ದೃಷ್ಟಿಯಿಂದ ಸದ್ಯ ಚಾಲ್ತಿಯಲ್ಲಿರುವ 500 ವೋಲ್ವೋ ಬಸ್‌ಗಳಿಗೆ ನಿರ್ಗಮನದ ಬಾಗಿಲುಗಳನ್ನು ಅಳವಡಿಸಲು ಮುಂದಾಗಿದೆ. ಅವುಗಳಲ್ಲಿ ಈಗಾಗಲೇ 150 ಬಸ್‌ಗಳಿಗೆ ಬಾಗಿಲು ಅಳವಡಿಸಲಾಗಿದ್ದು, ಉಳಿದ ಬಸ್‌ಗಳಿಗೆ ಒಂದು ತಿಂಗಳಲ್ಲಿ ಇನ್ನೊಂದು ಬಾಗಿಲು ಅಳವಡಿಸಲು ನಿರ್ಧರಿಸಿದೆ. ಆದರೆ, ಸ್ಲೀಪರ್ ಬಸ್‌ಗಳಿಗೆ ಇದು ಅನ್ವಯವಾಗುವುದಿಲ್ಲ. ಅಗತ್ಯಬಿದ್ದಲ್ಲಿ ಈ ಬಗ್ಗೆ ಚಿಂತಿಸಲಾಗುವುದು. ವೋಲ್ವೋ ಬಸ್‌ಗಳಲ್ಲಿ ಇಂತಹ ದುರಂತ ಮರುಕಳಿಸುತ್ತಿರುವುದರಿಂದ ಮೊದಲು ವೋಲ್ವೋ ಬಸ್‌ಗಳಿಗೆ 2ನೇ ಬಾಗಿಲು ಅಳವಡಿಸಲು ನಿರ್ಧರಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿಗಳು 'ಕನ್ನಡ ಪ್ರಭ'ಕ್ಕೆ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿರುವ ಎಲ್ಲಾ ವೋಲ್ವೋ ಬಸ್‌ಗಳಿಗೂ 2ನೇ ಬಾಗಿಲು ಅಳವಡಿಸಲು ಸಾರಿಗೆ ಇಲಾಖೆ ಮುಂದಾಗಿದೆ. ಈಗಾಗಲೇ ಕೆಲವು ಬಸ್‌ಗಳಿಗೆ ಅಳವಡಿಸಲಾಗಿದ್ದು, ಒಂದು ತಿಂಗಳಲ್ಲಿ ಎಲ್ಲಾ ಬಸ್‌ಗಳಿಗೂ ಅಳವಡಿಸಲಾಗುವುದು.
- ಎನ್. ಮಂಜುನಾಥ್ ಪ್ರಸಾದ್, ವ್ಯವಸ್ಥಾಪಕ ನಿರ್ದೇಶಕ, ಕೆಎಸ್‌ಆರ್‌ಟಿಸಿ
ಬಸ್‌ಗಳಲ್ಲಿ 2ನೇ ಬಾಗಿಲು ಅಳವಡಿಸುವ ಬಗ್ಗೆ ಖಾಸಗಿ ಬಸ್ ಮಾಲೀಕರು ಚಿಂತಿಸಿಲ್ಲ. ಬದಲಾಗಿ, ಅವಘಡ ಸಂಭವಿಸಿದರೆ ಪಾರಾಗುವ ಬಗ್ಗೆ ಟಿವಿಯಲ್ಲಿ ದೃಶ್ಯ ತೋರಿಸುವ ಮೂಲಕ ಪ್ರಯಾಣಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ.
- ಭದ್ರೇಶ್, ಖಾಸಗಿ ಬಸ್ ಮಾಲೀಕರು, ಬೆಂಗಳೂರು
ವೋಲ್ವೋ ಕಂಪನಿಯಿಂದ ಸಿಡಿ ಮೂಲಕ ಮಾಹಿತಿ
ಈ ನಡುವೆ ವೋಲ್ವೋ ಕಂಪನಿಯ ಬಸ್ ದುರಂತಕ್ಕೀಡಾಗಿದ್ದರಿಂದ ಕಂಪನಿಗೆ ಕೆಟ್ಟ ಹೆಸರು ಬರುತ್ತದೆ, ಪ್ರಯಾಣಿಕರು ಬಸ್ ಏರಲು ಹಿಂಜರಿಯುತ್ತಾರೆ ಎಂಬ ಕಾರಣಕ್ಕೆ ವೋಲ್ವೋ ಕಂಪನಿಯಿಂದ ಸುರಕ್ಷೆ ಬಗ್ಗೆ ಮಾಹಿತಿಯುಳ್ಳ ಸಿ.ಡಿ. ಸಿದ್ಧಪಡಿಸಿ ಎಲ್ಲಾ ಬಸ್ ಮಾಲೀಕರಿಗೂ ನೀಡಲಾಗಿದೆ. ಪ್ರಯಾಣಿಕರು ಬಸ್ ಹತ್ತಿದ ನಂತರ ತಮ್ಮ ಸುರಕ್ಷತೆ ಬಗ್ಗೆ ಯಾವ ರೀತಿ ಎಚ್ಚರವಹಿಸಬೇಕು ಎಂಬ ಕಿರುಮಾಹಿತಿ ಅದರಲ್ಲಿದೆ. ಬಸ್ ಹೊರಟ ನಂತರ ಚಾಲಕ ಹಾಗೂ ನಿರ್ವಾಹಕರು ಅದನ್ನು ಪ್ರಯಾಣಿಕರಿಗೆ ಟಿ.ವಿ.ಯಲ್ಲಿ ತೋರಿಸಬೇಕು. ಅನಾಹುತ ಸಂಭವಿಸಿದರೆ ತುರ್ತು ನಿರ್ಗಮನದ ಗಾಜನ್ನು ಒಡೆದು ಅಲ್ಲಿಂದ ಪಾರಾಗುವುದು, ಎಲ್ಲಿ ಸುತ್ತಿಗೆ ಇಟ್ಟಿರುತ್ತಾರೆ, ಎಷ್ಟು ಗಾಜು ಒಡೆಯಬಹುದು ಅಥವಾ ಎಲ್ಲಾ ಗಾಜು ಒಡೆಯಬೇಕೇ ಎಂಬ ಬಗ್ಗೆ ಅದರಲ್ಲಿ ಮಾಹಿತಿ ಇರುತ್ತದೆ. ಆದರೆ, ಸಾಕಷ್ಟು ಖಾಸಗಿ ಬಸ್‌ಗಳ ಚಾಲಕರು ಪ್ರಯಾಣಿಕರಿಗೆ ಸಿ.ಡಿ.ಯನ್ನೂ ತೋರಿಸುವ ಗೋಜಿಗೆ ಹೋಗಿಲ್ಲ ಎಂಬ ಮಾತು ಪ್ರಯಾಣಿಕರಿಂದ ಕೇಳಿಬಂದಿದೆ. ಇನ್ನು ಕೆಎಸ್‌ಆರ್‌ಟಿಸಿಯಿಂದಲೂ ಈ ಕೆಲಸವಾಗುತ್ತಿದ್ದು, ಪ್ರಯಾಣಿಕರಿಗೆ ಸಿ.ಡಿ.ಯಲ್ಲಿನ ದೃಶ್ಯ ತೋರಿಸಿ ಅರಿವು ಮೂಡಿಸಲಾಗುತ್ತಿದೆ.
ರು. 2 ಲಕ್ಷ ವೆಚ್ಚ
ಬೆಂಗಳೂರು, ಮಂಗಳೂರು ಹಾಗೂ ಮೈಸೂರು ವಿಭಾಗಗಳಲ್ಲಿ ಈ ವೋಲ್ವೋ ಬಸ್‌ಗಳಿದ್ದು, ಒಂದು ವೋಲ್ವೋ ಬಸ್‌ಗೆ 2ನೇ ಬಾಗಿಲು ಅಳವಡಿಸಲು 2 ಲಕ್ಷ ಖರ್ಚಾಗುತ್ತದೆ. ಕೆಎಸ್‌ಆರ್‌ಟಿಸಿ ಆ ವೆಚ್ಚ ಭರಿಸಿ ಎಲ್ಲಾ ಬಸ್‌ಗಳಿಗೂ ಬಾಗಿಲು ಹಾಕಿಸುತ್ತಿದೆ ಎಂದು ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
-ಶಾಂತ ತಮ್ಮಯ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

