ಅಂಧರ ಬೆಳಕು ಈ ಅಶ್ವಿನಿ ನಕ್ಷತ್ರ!

ಕನ್ನಡಪ್ರಭ ವಾರ್ತೆ , ಹಾವೇರಿ , ಜ.13
'ಹಳ್ಳಿಗಾಡಿನ ಅಂಧ ಮಕ್ಕಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂವಹನ ನಡೆಸುವಂತಾಗಬೇಕು. ಅವರ ಪ್ರತಿಭೆ ವಿಶ್ವಸಂಸ್ಥೆವರೆಗೂ ಪಸರಿಸಬೇಕು. ಶಿಕ್ಷಣದಿಂದ ಮಾತ್ರ ಅದೆಲ್ಲ ಸಾಧ್ಯ. ಸಮಾಜದ ನಾಲ್ಕು ಜನರಿಗೆ ನನ್ನಿಂದ ಉಪಕಾರವಾಗಬೇಕು'
- ಇದು ಮಲಾಲಾ ದಿನಾಚರಣೆಯಂದು ವಿಶ್ವಸಂಸ್ಥೆಯ 'ಯೂಥ್ ಕರೇಜ್' ಪ್ರಶಸ್ತಿ ಪಡೆದ ಅಂಧೆ ಅಶ್ವಿನಿ ಅಂಗಡಿ ಕನಸು. ತಮ್ಮ ಕನಸನ್ನು ನನಸಾಗಿಸಲು ಅಶ್ವಿನಿ ಹಾವೇರಿಯನ್ನು ಆರಿಸಿಕೊಂಡಿದ್ದು, ಇಲ್ಲಿಯೇ ಅಂಧರಿಗಾಗಿ ಶಾಲೆಯೊಂದು ತೆರೆಯಲು ನಿರ್ಧರಿಸಿದ್ದಾರೆ.
ಅಶ್ವಿನಿ ಪ್ರಾರಂಭಿಸಲಿರುವ ಈ ಶಾಲೆಯಲ್ಲಿ ನರ್ಸರಿಯಿಂದ 5ನೇ ತರಗತಿವರೆಗೆ ಮೂಲ ಶಿಕ್ಷಣ ನೀಡಿ, ಮುಂದೆ ಅದನ್ನು ಸಾಂಪ್ರದಾಯಿಕ ಶಿಕ್ಷಣ ತರಗತಿಗಳಿಗೆ ವಿಸ್ತರಿಸುವ ಉದ್ದೇಶವಿದೆ.
ತಂತ್ರಜ್ಞಾನದ ಮೂಲಕ ಶಿಕ್ಷಣ ನೀಡುವುದು, ಕಂಪ್ಯೂಟರ್ ಮೂಲಕ ಕಲಿಕೆ, ಸಂಗೀತ, ಯೋಗ, ಕರಾಟೆ, ಕ್ರೀಡೆ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಅಂಧ ಮಕ್ಕಳನ್ನು ತರಬೇತುಗೊಳಿಸಲಾಗುತ್ತದೆ.
ಅಂಧರಿಗೆ ಹಿಂದೆ ಕಲಿಸುತ್ತಿದ್ದ ಬ್ರೈಲ್ ಲಿಪಿ ಪದ್ಧತಿ ಬಿಟ್ಟು ಕಂಪ್ಯೂಟರ್ ರೀಡ್ ಸ್ಕ್ರೀನ್ ಮೂಲಕ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸಲಾಗುತ್ತದೆ. ಇಲ್ಲಿ ಕಲಿತ ಅಂಧ ಮಕ್ಕಳ ಪ್ರತಿಭೆಯನ್ನು ವಿಶ್ವಮಟ್ಟದವರೆಗೆ ತಲುಪಿಸುವ ಗುರಿ ಹಾಗೂ ಯೋಜನೆ ಅಶ್ವಿನಿಗಿದೆ.
ಇದು ಕನಸಿನ ಶಾಲೆ: ಇಂದು ಅಂಧ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಸೌಲಭ್ಯಗಳಿಲ್ಲ. ಆಧುನಿಕ ತಂತ್ರಜ್ಞಾನ ಬಂದಿದ್ದು, ಅದರ ಮೂಲಕ ಅಂಧ ಮಕ್ಕಳಿಗೆ ಶಿಕ್ಷಣ ನೀಡಿ ಅವರ ಪ್ರತಿಭೆ ಹೊರತೆಗೆಯುವ ಕಾರ್ಯ ಆಗಬೇಕಿದೆ. ನನಗಾಗಿ ಬದುಕದೇ ಸಮಾಜದ ನಾಲ್ಕು ಜನರಿಗೆ ಉಪಕಾರ ಮಾಡಬೇಕು. ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತ ಅಂಧ ಮಕ್ಕಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂವಹನ ನಡೆಸುವಂತಾಗಬೇಕು. ಹೀಗೆ ಶಿಕ್ಷಣ ಕಲಿತವರು ತಮ್ಮಂತೆ ಇರುವ ಇತರರಿಗೂ ಶಿಕ್ಷಣ ನೀಡಲು ನೆರವಾಗಬೇಕು ಎಂಬುದು ನನ್ನ ಮನದಾಸೆ. ಇಡಿ ಸಮಯ ಹಾಗೂ ಜೀವನವನ್ನು ಸಮಾಜ ಸೇವೆಗಾಗಿ ಮೀಸಲಿಟ್ಟಿದ್ದೇನೆ. ಒಂದು ವೇಳೆ ಅಂಧ ಮಕ್ಕಳ ಶಾಲೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಲ್ಲಿ ಮುಂದೆ ಬಡ ಹಾಗೂ ಎಲ್ಲ ರೀತಿ ಅಂಗವೈಕಲ್ಯ ಇರುವವರಿಗೂ ಶಾಲೆ ತೆರೆಯುವ ಯೋಚನೆಯಿದೆ ಎಂದು ಅಶ್ವಿನಿ ತಮ್ಮ ಸಮಾಜ ಸೇವೆಯ ಕನಸಿನ ಬುತ್ತಿಯನ್ನು 'ಕನ್ನಡಪ್ರಭ'ದೊಂದಿಗೆ ಬಿಚ್ಚಿಟ್ಟರು.
ಬರುವ ಶೈಕ್ಷಣಿಕ ವರ್ಷದಿಂದಲೇ ಶಾಲೆ ಆರಂಭಿಸುತ್ತೇನೆ. ಇದಕ್ಕೆ ಆರ್ಥಿಕ ನೆರವಿನ ಅಗತ್ಯವಿದೆ. ಕಂಪ್ಯೂಟರ್ ಮೂಲಕ ಶಿಕ್ಷಣ ನೀಡುವುದರಿಂದ ಹಣಕಾಸಿನ ನೆರವು ಬೇಕು. ಶಾಲೆಯ ಪ್ರಿನ್ಸಿಪಾಲ್ ಆಗುವ ಯೋಗ್ಯತೆ ನನಗಿಲ್ಲ. ಅದಕ್ಕಾಗಿ ತಜ್ಞ ಶಿಕ್ಷಕರೂ ಬೇಕು. ಇ-ತಂತ್ರಜ್ಞಾನ ಬಳಸಿ ಶಿಕ್ಷಣ ನೀಡಲಾಗುತ್ತದೆ.
- ಅಶ್ವಿನಿ ಅಂಗಡಿ
ವಿಶ್ವಸಂಸ್ಥೆ ಪ್ರಶಸ್ತಿ ಪುರಸ್ಕೃತೆ
ಸಹಕಾರ ಕೋರಿದ ಅಶ್ವಿನಿ
ತಮ್ಮ ಕನಸನ್ನು ನನಸಾಗಿಸಲು ತಂದೆ ಪ್ರಕಾಶ್ ಅಂಗಡಿಯವರೊಂದಿಗೆ ಹಾವೇರಿಗೆ ಆಗಮಿಸಿರುವ ಅಶ್ವಿನಿ, ಬರುವ ಶೈಕ್ಷಣಿಕ ವರ್ಷದಿಂದಲೇ ಶಾಲೆ ಆರಂಭಿಸುವ ನಿಟ್ಟಿನಲ್ಲಿ ಪ್ರಕ್ರಿಯೆ ಆರಂಭಿಸಿದ್ದಾರೆ. ಶಾಲೆ ನಡೆಸಲು ಸೂಕ್ತ ಕಟ್ಟಡಕ್ಕಾಗಿ ಹುಡುಕಾಟ ನಡೆದಿದೆ. ಅಲ್ಲದೇ ಶಾಲೆ ಆರಂಭಕ್ಕೆ ಬೇಕಾದ ಸಹಕಾರ ಕೋರಿ ಮಠಾಧೀಶರು, ಅಧಿಕಾರಿಗಳು ಹಾಗೂ ಪ್ರಮುಖರನ್ನು ಭೇಟಿಯಾಗುತ್ತಿದ್ದಾರೆ. ಹಾವೇರಿ ತಹಸೀಲ್ದಾರ್ ಪಂಪನಗೌಡ ಮೇಲ್ಸೀಮೆ, ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ, ಬಸವರಾಜ ಬಳ್ಳಾರಿ ಸೇರಿದಂತೆ ಪ್ರಮುಖರು ಅಶ್ವಿನಿಯನ್ನು ಭೇಟಿಯಾಗಿ ಅಗತ್ಯ ಸಹಕಾರ ನೀಡುವ ಭರವಸೆ ನೀಡಿದ್ದಾರೆ.
-ನಾರಾಯಣ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


