ಗೂಗಲ್ ಗ್ಲಾಸ್ ಅಪರೇಷನ್ ಸಕ್ಸೆಸ್!

ಜೈಪುರದಲ್ಲಿ ಗೂಗಲ್ ಕನ್ನಡಕ ಧರಿಸಿ ತಜ್ಞವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ
ಜೈಪುರ: 'ಗೂಗಲ್ ಗ್ಲಾಸ್' ಮೂಲಕ ಫೋಟೋ ತೆಗೀಬಹುದು, ವಿಡಿಯೋ ಮಾಡಬಹುದು ಎಂದಷ್ಟೇ ಭಾವಿಸಿದ್ದರೆ ನಿಮ್ಮ ಊಹೆ ತಪ್ಪು. ಏಕೆ ಗೊತ್ತೇ? ಆಪರೇಷನ್ ಕೋಣೆಯಲ್ಲೂ ಈ ಕನ್ನಡಕ ತನ್ನ ಚಾತುರ್ಯ ಮೆರೆದಿದೆ.
ಜೈಪುರದಲ್ಲಿ ಭಾರತೀಯ ಮೂಳೆ ತಜ್ಞ ಸೆಲೆನ್ ಜಿ. ಪಾರೇಖ್ ನೇತೃತ್ವದ ತಂಡ ಗೂಗಲ್ ಗ್ಲಾಸ್ ಧರಿಸಿಕೊಂಡೇ ಪಾದ ಮತ್ತು ಹಿಮ್ಮಡಿಯ ಗಂಟಿನ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದೆ. ಅಷ್ಟೇ ಅಲ್ಲ, ಶಸ್ತ್ರಚಿಕಿತ್ಸೆಯ ಪ್ರತಿಯೊಂದು ಪ್ರಕ್ರಿಯೆಯೂ ಗೂಗಲ್ ವೆಬ್‌ಸೈಟ್‌ನಲ್ಲಿ ನೇರಪ್ರಸಾರಗೊಂಡಿದೆ.
ವೈದ್ಯರಿಗೆ ಮೂರನೇ ಕಣ್ಣು: ಜೈಪುರದಲ್ಲಿ ನಡೆದ 3 ದಿನಗಳ ಭಾರತ-ಅಮೆರಿಕ ವಾರ್ಷಿಕ ಸಮಾವೇಶದ ಸಂದರ್ಭದಲ್ಲಿ ಈ ಶಸ್ತ್ರಚಿಕಿತ್ಸೆ ನಡೆಯಿತು. ಸದ್ಯ ಅಮೆರಿಕದಲ್ಲಿರುವ ಭಾರತೀಯ ತಜ್ಞ ಡಾ. ಪಾರೇಖ್ ಅವರು ಗೂಗಲ್ ಗ್ಲಾಸ್ ಅನ್ನು ಧರಿಸಿಕೊಂಡೇ ಶಸ್ತ್ರಚಿಕಿತ್ಸಾ ಕೊಠಡಿ ಪ್ರವೇಶಿಸಿದರು. ಪಾರೇಖ್ ಅವರಿಗೆ ಗೂಗಲ್ ಗ್ಲಾಸ್ ಮೂರನೇ ಕಣ್ಣಾಗಿ ಶಸ್ತ್ರಚಿಕಿತ್ಸೆಯಲ್ಲಿ ನೆರವು ನೀಡಿತು.
ಅದ್ಭುತ ತಂತ್ರಜ್ಞಾನ: ಶಸ್ತ್ರಚಿಕಿತ್ಸೆ ವೇಳೆ ವೈದ್ಯರ ಕಣ್ಣಿಗೆ ಏನೆಲ್ಲ ಕಾಣಿಸುತ್ತಿತ್ತೋ ಅದು ಇಂಟರ್ನೆಟ್‌ನಲ್ಲಿ ಪ್ರಸಾರವಾಗುತ್ತಿತ್ತು.
ಆಪರೇಷನ್‌ಗೆ ನೆರವು: ಈ ಹಿಂದೆ, ವೈದ್ಯರು ಶಸ್ತ್ರಚಿಕಿತ್ಸೆ ಮಾಡುವಾಗ ಮತ್ತೊಬ್ಬ ಡಾಕ್ಟರ್‌ಗೆ ಏನಾದರೂ ತೋರಿಸಬೇಕೆಂದರೆ ಒಂದೆಡೆಯಿಂದ ಇನ್ನೊಂದೆಡೆಗೆ ಚಲಿಸಬೇಕಿತ್ತು. ವಿಡಿಯೋ ಮಾಡಲು ಕ್ಯಾಮೆರಾಮನ್ ಕೂಡ ಆಗಾಗ ಚಲಿಸುತ್ತಾ ವಿವಿಧ ಕೋನಗಳಲ್ಲಿ ದೃಶ್ಯ ಸೆರೆಹಿಡಿಯಬೇಕಿತ್ತು. ಈ ಪ್ರಕ್ರಿಯೆ ವೇಳೆ ಕೆಲವೊಮ್ಮೆ ಸೋಂಕು ತಗಲುವ ಸಾಧ್ಯತೆಯೂ ಇತ್ತು. ಆದರೆ, ಈಗ ಗೂಗಲ್ ಗ್ಲಾಸ್ ತಂತ್ರಜ್ಞಾನದಿಂದಾಗಿ ವೈದ್ಯರು ನೋಡುವ ಎಲ್ಲ ದೃಶ್ಯಗಳನ್ನೂ ಇಡೀ ವಿಶ್ವವೇ ನೋಡಬಹುದು. ಅಷ್ಟೇ ಅಲ್ಲ, ರೋಗಿಯತ್ತ ಕಣ್ಣು ನೆಟ್ಟಿರುವಂತೆಯೇ ಎಕ್ಸ್-ರೇ ಅಥವಾ ಎಂಆರ್‌ಐಯನ್ನು ಪರಿಶೀಲಿಸಬಹುದು, ಪಕ್ಕದಲ್ಲಿರುವ ವೈದ್ಯರು, ನರ್ಸ್‌ಗಳೊಡನೆ ಸಂಭಾಷಣೆ ನಡೆಸಬಹುದು. ಜತೆಗೆ, ರೋಗಿಯ ಕುಟುಂಬ ಸದಸ್ಯರು ಹಾಗೂ ಗೆಳೆಯರ ಜತೆಯೂ ಮಾತುಕತೆ ನಡೆಸಬಹುದು ಎನ್ನುತ್ತಾರೆ ಡಾ. ಆಶೀಶ್ ಶರ್ಮಾ.
ವೈಶಿಷ್ಟ್ಯ
- 8 ಅಡಿ ದೂರದಿಂದ ನಿಂತು 25 ಇಂಚಿನ ಹೈಡೆಫಿನಿಷನ್ ಪರದೆಯನ್ನು ನೋಡಿದಷ್ಟು ಸ್ಪಷ್ಟವಾಗಿ ಕಾಣುವ ಹೈ ರೆಸೊಲ್ಯೂಷನ್ ಡಿಸ್‌ಪ್ಲೇ
- ವಿಡಿಯೋ: 720 ಪಿಕ್ಸೆಲ್
- ಆಡಿಯೋ: ಬೋನ್ ಕಂಡಕ್ಷನ್ ಟ್ರಾನ್ಸ್‌ಡ್ಯೂಸರ್
- ವೈಫೈ: 802.11ಬಿ/ಜಿ ಹಾಗೂ ಬ್ಲೂಟೂತ್
- 16 ಜಿಬಿ ಫ್ಲ್ಯಾಷ್
ವೈದ್ಯಕ್ಷೇತ್ರದಲ್ಲಿ ಕ್ರಾಂತಿ
ಗೂಗಲ್ ಗ್ಲಾಸ್‌ನಂತಹ ಪುಟ್ಟದೊಂದು ಸಾಧನವು ವೈದ್ಯಲೋಕದಲ್ಲೇ ಕ್ರಾಂತಿ ಮೂಡಿಸಲಿದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ. ಇಂಟರ್ನೆಟ್‌ನಲ್ಲಿ ಸುಲಭವಾಗಿ ದೊರೆಯುವ ಗೂಗಲ್ ಗ್ಲಾಸ್ ವಿಶ್ವಾದ್ಯಂತ ಇರುವ ವೈದ್ಯರಿಗೆ ನೆರವಾಗುವುದಂತೂ ಖಚಿತ. ಲೈವ್ ಸರ್ಜರಿ ವೇಳೆ ಒಬ್ಬ ವೈದ್ಯ ಮತ್ತೊಬ್ಬ ವೈದ್ಯನಿಗೆ ಸಲಹೆ, ಸೂಚನೆಗಳನ್ನೂ ನೀಡಬಹುದು. ಆರೋಗ್ಯಸೇವೆಯ ಕೊರತೆಯಿರುವ ಗ್ರಾಮೀಣ ಪ್ರದೇಶಗಳಲ್ಲಂತೂ ಇದು ಅದ್ಭುತ ಪ್ರಭಾವ ಬೀರಲಿದೆ ಎನ್ನುತ್ತಾರೆ ತಜ್ಞ ವೈದ್ಯರು.
ಚೆನ್ನೈನಲ್ಲೂ ನಡೆದಿತ್ತು
ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಚೆನ್ನೈನಲ್ಲಿ ವೈದ್ಯರೊಬ್ಬರು ಗೂಗಲ್ ಗ್ಲಾಸ್ ಧರಿಸಿ 45 ವರ್ಷದ ವ್ಯಕ್ತಿಗೆ ಶಸ್ತ್ರಚಿಕಿತ್ಸೆ ಮಾಡಿದ್ದರು. ಇದು ಗೂಗಲ್ ಕನ್ನಡಕ ಧರಿಸಿ ಮಾಡಿದ ದೇಶದ ಪ್ರಪ್ರಥಮ ಶಸ್ತ್ರಚಿಕಿತ್ಸೆಯಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


