ಸಂತೆಯಲ್ಲಿ ಉರುಳಿಬಿದ್ದ ಟ್ರ್ಯಾಕ್ಟರ್, ಒಂಬತ್ತು ಬಲಿ

ಕನ್ನಡಪ್ರಭ ವಾರ್ತೆ , ಜಮಖಂಡಿ , ಜ.13
ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಟ್ರೈಲರ್‌ಗಳು ಸಂತೆಯಲ್ಲಿ ಉರುಳಿ ಬಿದ್ದು 9 ಜನರು ಮೃತಪಟ್ಟರೆ, 14 ಜನರು ತೀವ್ರ ಗಾಯಗೊಂಡ ಘಟನೆ ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ.
ಘಟನೆಯಲ್ಲಿ ನಾಲ್ವರು ಪುರುಷರು, ಐವರು ಮಹಿಳೆಯರು ಸಾವಿಗೀಡಾಗಿದ್ದಾರೆ. ಗಾಯಗೊಂಡವರನ್ನು ಜಮಖಂಡಿಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಉರುಳಿ ಬಿದ್ದ ಟ್ರ್ಯಾಕ್ಟರ್ ಟ್ರೈಲರ್‌ಗಳ ಅಡಿ 20ಕ್ಕೂ ಹೆಚ್ಚು ಜನ ಸಿಲುಕಿಕೊಂಡಿದ್ದರು. ಈ ಟ್ರ್ಯಾಕ್ಟರ್‌ಗೆ ಎರಡು ಟ್ರೈಲರ್‌ಗಳಿದ್ದು, ತಲಾ 15 ಟನ್ ಕಬ್ಬು ಹೇರಲಾಗಿತ್ತು.
ಹೇಗಾಯ್ತು?: ಬಿಜಾಪುರ ಜಿಲ್ಲೆ ಬೋಳ ಚಿಕ್ಕಲಕಿ ಗ್ರಾಮದಿಂದ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕೊಕಟನೂರಿನ ರೇಣುಕಾ ಸಕ್ಕರೆ ಕಾರ್ಖಾನೆಗೆ ಈ ಟ್ರ್ಯಾಕ್ಟರ್ ಕಬ್ಬು ಸಾಗಿಸುತ್ತಿತ್ತು. 30 ಟನ್ ಕಬ್ಬು ತುಂಬಿದ್ದ ಈ ಟ್ರ್ಯಾಕ್ಟರ್ ತೊದಲಬಾಗಿ ಗ್ರಾಮದ ಮುಖ್ಯ ರಸ್ತೆ ಅಂದರೆ, ಸಂತೆ ನಡೆಯುತ್ತಿದ್ದ ರಸ್ತೆ ಮೂಲಕ ಹೋಗುವಾಗ ಎರಡೂ ಟ್ರೈಲರ್‌ಗಳು ಎಡಭಾಗಕ್ಕೆ ಉರುಳಿ ಬಿದ್ದಿವೆ. ಎಡ ಬದಿಯಲ್ಲಿದ್ದ ವ್ಯಾಪಾರಸ್ಥರು ಹಾಗೂ ಸಂತೆಗೆ ಬಂದ ಜನ ಕಬ್ಬಿನಡಿ ಸಿಲುಕಿದ್ದಾರೆ. ತೊದಲಬಾಗಿ ಗ್ರಾಮದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿ ನಡೆಯುತ್ತಿದ್ದು, ಚಾಲಕನ ನಿಯಂತ್ರಣಕ್ಕೆ ಬಾರದೆ ಟ್ರೈಲರ್‌ಗಳು ಉರುಳಿ ಬಿದ್ದಿವೆ. ಏತನ್ಮಧ್ಯೆ, ಟ್ರ್ಯಾಕ್ಟರ್ ಚಾಲಕ ಪರಾರಿಯಾಗಿದ್ದಾನೆ.
ಸಂತೆಯಿಂದಾಗಿ ಹೆಚ್ಚಿನ ಅನಾಹುತ: ಪ್ರತಿ ಸೋಮವಾರ ಇಲ್ಲಿ ಸಂತೆ ನಡೆಯುತ್ತದೆ. ವ್ಯಾಪಾರ ವಹಿವಾಟಿಗಾಗಿ ನೂರಾರು ಜನರು ಸೇರುತ್ತಾರೆ. ಅವರ ಮೇಲೆಯೇ ಟ್ರ್ಯಾಕ್ಟರ್ ಉರುಳಿ ಬಿದ್ದಿದೆ. ಹಾಗಾಗಿ, ಹೆಚ್ಚಿನ ಸಾವು ನೋವು ಸಂಭವಿಸಿದೆ. ಘಟನಾ ಸ್ಥಳಕ್ಕೆ ಸಚಿವ ಎಸ್.ಆರ್.ಪಾಟೀಲ್, ಸಂಸದ ಪಿ.ಸಿ.ಗದ್ದಿಗೌಡರ ಭೇಟಿ ನೀಡಿದ್ದರು.
ಮೃತಪಟ್ಟವರು
ತೊದಲಬಾಗಿಯ ಅನಿಲಕುಮಾರ ಬಕಾಟೆ(39), ಉತ್ತರ ಪ್ರದೇಶದ ಅಜ್ಜಲ್ ಕರೋಶಿ (35), ಬದರಿಯ ಸುಲೋಚನಾ ಯಲ್ಲಪ್ಪ ಬಜಂತ್ರಿ(30), ಗದ್ಯಾಳದ ತಂಗೆವ್ವಾ ಢಪಳಾಪುರ(60), ತೊದಲಬಾಗಿಯ ಮಲ್ಲಪ್ಪ ಸಂಗಾಪುರ(65), ಚೈತ್ರಾ ರಾಜೂ ಚೆಟ್ಟೇರ(35), ಮಹಾದೇವಿ ಬಸಪ್ಪ ಸೊನ್ನದ(35), ಸೂಲಾಬಾಯಿ ಬಜಂತ್ರಿ(40), ಜಮಖಂಡಿಯ ಅಬ್ದುಲ್ ಹನೀಫ್ ಮುಲ್ಲಾ(30) ಮೃತಪಟ್ಟಿದ್ದಾರೆ.
ರಸ್ತೆ ಮಧ್ಯದಲ್ಲಿ ಶವ ಇಟ್ಟು ಪ್ರತಿಭಟನೆ
ಸಂತೆಯಲ್ಲಿ ಸೇರಿದ್ದ ವ್ಯಾಪಾರಸ್ಥರು ತಮ್ಮ ಹಲವಾರು ಬೇಡಿಕೆಗಳು ಈಡೇರಿಸಬೇಕೆಂದು ಆಗ್ರಹಿಸಿ ಶವಗಳನ್ನು ಸಾಗಿಸಲು ಸಜ್ಜಾದ ಟಂಟಂ ಮುಂದೆ ಪ್ರತಿಭಟನೆ, ಧರಣಿ ನಡೆಸಿದರು. ಶವಗಳನ್ನು ರಸ್ತೆ ಮಧ್ಯದಲ್ಲಿ ಇಟ್ಟು ಸತ್ಯಾಗ್ರಹ ನಡೆಸಿದರು. ತೊದಲಬಾಗಿಯಿಂದ ಸಾವಳಗಿ ಕಡೆಗೆ ಹೋಗಲು ಬೈಪಾಸ್ ನಿರ್ಮಿಸಬೇಕು. ಸಂತೆ ದಿನ ಪೊಲೀಸರನ್ನು ನಿಯೋಜಿಸಬೇಕು. ಮೃತರ ಕಟುಂಬಕ್ಕೆ ಸರ್ಕಾರ ಹೆಚ್ಚಿನ ಪರಿಹಾರ ನೀಡಬೇಕು. ಘಟನಾ ಸ್ಥಳಕ್ಕೆ ಸ್ಥಳೀಯ ಶಾಸಕರು ಬಂದು ಬೇಡಿಕೆ ಆಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್. ಪಾಟೀಲ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಲ್ಲದೇ 1 ಲಕ್ಷ ಪರಿಹಾರ ಘೋಷಿಸಿದರು. ಇತರ ಸಂಘ, ಸಂಸ್ಥೆಗಳ ನೆರವಿನಲ್ಲಿ ಇನ್ನೂ 1 ಲಕ್ಷ ನೆರವು ಕೊಡಿಸುವುದಾಗಿಯೂ ಅವರು ಭರವಸೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


