ಪ್ರಧಾನ ಸುದ್ದಿ

ಪಿಎಸ್‌ಐ ಬಂಡೆ ಸ್ಥಿತಿ ಮತ್ತಷ್ಟು ವಿಷಮ

ಪಿಎಸ್‌ಐ ಬಂಡೆ ಸ್ಥಿತಿ ಮತ್ತಷ್ಟು ವಿಷಮ
Published On :

ಗುಲ್ಬರ್ಗ: ಸುಫಾರಿ ಹಂತಕ ಮುನ್ನಾ ಜೊತೆಗಿನ ಗುಂಡಿನ ಕಾಳಗದಲ್ಲಿ ಗುಂಡೇಟಿನಿಂದ ಗಾಯಗೊಂಡು ಹೈದರಾಬಾದ್‌ನ ಯಶೋಧರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗುಲ್ಬರ್ಗ ನಗರದ ಸ್ಟೇಷನ್ ಬಜಾರ್ ಠಾಣೆ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಆರೋಗ್ಯ ಮಂಗಳವಾರ ಮತ್ತಷ್ಟು ವಿಷಮಿಸಿದೆ.
ಸಾವು ಬದುಕಿನ ನಡುವೆ ಹೋರಾಡುತ್ತಿರುವ ಬಂಡೆ ಅವರಿಗೆ ಸೂಕ್ತ ಚಿಕಿತ್ಸೆ ನೀಡಲು ಗುಂಡೇಟು ಬಿದ್ದಾಗ ಸೂಕ್ತ ಚಿಕಿತ್ಸೆ ನೀಡುವ ಮಿಲಿಟರಿ ತಜ್ಞ ವೈದ್ಯರನ್ನು ಕರೆಯಿಸಿ ಇಲ್ಲವೇ ವಿದೇಶಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಎಂದು ಕುಟುಂಬ ಸದಸ್ಯರು ಆಗ್ರಹಿಸಿದ್ದಾರೆ.
ತಲೆ ಹೊಕ್ಕು ಪಾರಾಗಿರುವ ಎರಡು ಗುಂಡುಗಳು ಮೆದುಳಿಗೆ ಭಾರಿ ಪ್ರಮಾಣದ ಹಾನಿ ಉಂಟು ಮಾಡಿವೆ. ಇದರಿಂದಾಗಿ ಮೆದುಳಿನ ರಕ್ತನಾಳಗಳು ನಾಶವಾಗಿವೆ. ಮೆದುಳಿನಲ್ಲಿ ಊತ ಉಂಟಾಗಿದ್ದು, ರಕ್ತಸ್ರಾವವಾಗಿದೆ. ರಕ್ತದೊತ್ತಡದಲ್ಲಿಯೂ ಏರಿಳಿತ ಮುಂದುವರಿದಿದೆ. ಕೃತಕ ಉಸಿರಾಟ ನೀಡಲಾಗಿದೆ. ಮೂತ್ರಪಿಂಡಗಳು ಸಹ ಕೆಲಸ ಮಾಡುತ್ತಿಲ್ಲ. ಡಯಾಲಿಸಿಸ್ ಆರಂಭಿಸಲಾಗಿದೆ ಎಂದು ಬಂಡೆ ಅವರನ್ನು ನೋಡಿಕೊಳ್ಳುತ್ತಿರುವ ನರರೋಗ ತಜ್ಞ ಡಾ.ರಂಗನಾಥಂ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಬಂಡೆ ಅವರ ಆರೋಗ್ಯದಲ್ಲಿ ಸುಧಾರಣೆ ಕಾಣುತ್ತಿಲ್ಲ. ಬದಲಾಗಿ ಹೊಸ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಆದಾಗ್ಯೂ ಅವರನ್ನು ಈಗಿರುವ ಸ್ಥಿತಿಯಿಂದ ಪಾರಾಗುವಂತೆ ಮಾಡಲು ಎಲ್ಲಾ ವಿಧದಲ್ಲಿಯೂ ಯತ್ನಿಸಲಾಗುತ್ತಿದೆ. ತಜ್ಞ ವೈದ್ಯರು ಹಲವರ ಸಲಹೆ- ಸೂಚನೆಯನ್ನು ಪಡೆದು ಚಿಕಿತ್ಸೆ ಮುಂದುವರಿಸಿದ್ದಾರೆ ಎಂದು ಡಾ. ರಂಗನಾಥಂ ತಿಳಿಸಿದ್ದಾರೆ.
ನಿಮ್ಹಾನ್ಸ್‌ನ ಇಬ್ಬರು ವೈದ್ಯರ ಭೇಟಿ: ನಿಮ್ಹಾನ್ಸ್ ನರರೋಗ ಸಂಶೋಧನಾ ಸಂಸ್ಥೆಯ ಇಬ್ಬರು ತಜ್ಞ ವೈದ್ಯರು ಮಂಗಳವಾರ ಹೈದರಾಬಾದ್‌ಗೆ ಆಗಮಿಸಿ ಬಂಡೆ ಅವರ ದೇಹಸ್ಥಿತಿ ಪರಿಶೀಲಿಸಿದ್ದಾರೆ.     
ಬಂಡೆ ಕುಟುಂಬದವರೊಂದಿಗೂ ಚರ್ಚಿಸಿದ್ದಾರೆ. ಮೆದುಳಿನಲ್ಲಿ ಗುಂಡುಗಳು ತೀವ್ರ ಹಾನಿ ಮಾಡಿದ್ದರಿಂದ ದೇಹಸ್ಥಿತಿ ದಿನದಿಂದ ದಿನಕ್ಕೆ ವಿಷಮವಾಗುತ್ತ ಸಾಗಿದೆ.  ಬಂಡೆ ಅವರ ಆರೋಗ್ಯದ ಮೇಲೆ ಸತತ ನಿಗಾ ಇಡಲಾಗುತ್ತಿದೆ. ಇದಕ್ಕಾಗಿ ವೈದ್ಯರ ತಂಡ ರಚಿಸಲಾಗಿದೆ ಎಂದು ರಂಗನಾಥಂ ತಿಳಿಸಿದ್ದಾರೆ.
ವಿದೇಶಕ್ಕೆ ಕರೆದೊಯ್ಯಲು ಆಗ್ರಹ: ಗುಂಡೇಟಿನಿಂದ ಗಾಯಗೊಂಡವರಿಗೆ ಚಿಕಿತ್ಸೆ ನೀಡುವ ಪರಿಣತ ತಜ್ಞರಿರುವ ಲಂಡನ್‌ಗೆ ಬಂಡೆ ಅವರನ್ನು ಸ್ಥಳಾಂತರಿಸಬೇಕು ಎಂಬ ಆಗ್ರಹ ಹೆಚ್ಚುತ್ತಿದೆ. ಗುಲ್ಬರ್ಗದಲ್ಲಿ 6ನೇ ದಿನವಾದ ಮಂಗಳವಾರವೂ ಅನೇಕ ಸಂಘಟನೆಗಳು ಹೋರಾಟ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿವೆ. ಬಂಡೆ ಕುಟುಂಬದ ಸದಸ್ಯರೂ ಹೆಚ್ಚಿನ ಚಿಕಿತ್ಸೆಗೆ ಅವರನ್ನು ವಿದೇಶಕ್ಕೆ ಕರೆದೊಯ್ಯಿರಿ ಅಲ್ಲವೇ ಮಿಲಿಟರಿ ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಿ ಎಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.