ವಿಠಲ ಅರಬಾವಿ ಆತ್ಮಹತ್ಯೆ; 17ಕ್ಕೆ ಅಂತಿಮ ವಿಚಾರಣೆ
ಕ.ಪ್ರ.ವಾರ್ತೆ , ಬೆಂಗಳೂರು , ಜ. 14
ಕಬ್ಬು ಬೆಳೆಗಾರ ವಿಠಲ ಅರಬಾವಿ ಆತ್ಮಹತ್ಯೆ ಪ್ರಕರಣದ ತನಿಖೆಗೆ ನೇಮಿಸಿದ್ದ ಏಕಸದಸ್ಯ ಆಯೋಗ ಜ.17ರಂದು ಅಂತಿಮ ವಿಚಾರಣೆ ನಡೆಸಲಿದ್ದು, ಮಾಸಾಂತ್ಯಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.
ವಿಧಾನಮಂಡಲದ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಬೆಳಗಾವಿ ಸುವರ್ಣವಿಧಾನಸೌಧದ ಎದುರು ವಿಠಲ ಅರಬಾವಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತೀವ್ರ ಮುಜುಗರ ಸೃಷ್ಟಿಸಿದ್ದು ಮಾತ್ರವಲ್ಲ, ಪ್ರತಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಹಿನ್ನೆಲೆಯಲ್ಲಿ ಸರ್ಕಾರ ಡಿಸೆಂಬರ್ 6 ರಂದು ಧಾರವಾಡ ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ನೇತೃತ್ವದಲ್ಲಿ ಏಕಸದಸ್ಯ ತನಿಖಾ ಆಯೋಗವನ್ನು ರಚಿಸಿತ್ತು. ಜತೆಗೆ ಫೆ.6ರೊಳಗೆ ತನಿಖೆ ನಡೆಸಿ ವಿಠಲ ಅರಬಾವಿ ಆತ್ಮಹತ್ಯೆ ಪ್ರಕರಣದ ಸತ್ಯಾಂಶ ಪತ್ತೆ ಹಚ್ಚುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿರುವ ಸಮೀರ್ ಶುಕ್ಲಾ, ಬೆಳಗಾವಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜನವರಿ 6, 8 ಹಾಗೂ 10ರಂದು ಪ್ರತ್ಯಕ್ಷದರ್ಶಿಗಳು, ಪೊಲೀಸರು, ರೈತ ಮುಖಂಡರು ಹಾಗೂ ಇತರೆ ಮೂಲಗಳಿಂದ ಹೇಳಿಕೆ ಪಡೆದಿದ್ದಾರೆ. ಮಾತ್ರವಲ್ಲ ಸಾಂದರ್ಭಿಕ ಸಾಕ್ಷ್ಯಗಳು, ವೈದ್ಯ ವರದಿ, ಮರಣೋತ್ತರ ವರದಿ ಪರಿಶೀಲನೆ ಸೇರಿದಂತೆ ತನಿಖೆಗೆ ಚುರುಕು ನೀಡಿದ್ದಾರೆ.
17 ಅಂತಿಮ ವಿಚಾರಣೆ : ಈ ಸಂಬಂಧ 'ಕನ್ನಡಪ್ರಭ'ದ ಜತೆ ಮಾತನಾಡಿದ ಅವರು, ಈ ಪ್ರಕರಣದ ಅಂತಿಮ ವಿಚಾರಣೆ ಜ.17ರಂದು ಬೆಳಗಾವಿಯಲ್ಲಿ ನಡೆಯಲಿದೆ. ಸಾರ್ವಜನಿಕರು ಈ ಬಗ್ಗೆ ಇನ್ನಷ್ಟು ಮಾಹಿತಿ ನೀಡಲು ಸಿದ್ದರಿದ್ದರೆ ಆಯೋಗ ಅದನ್ನು ಸ್ವಾಗತಿಸುತ್ತದೆ ಎಂದು ಹೇಳಿದರು. ಜ. 17 ರಂದು ಸಾರ್ವಜನಿಕರಿಂದ ಮಾಹಿತಿ ಪಡೆಯುವ ಪ್ರಕ್ರಿಯೆ ಅಂತಿಮಗೊಳ್ಳುತ್ತದೆ. ಆ ನಂತರ ನಾನು ಸರ್ಕಾರಕ್ಕೆ ಸಲ್ಲಿಸಬೇಕಾದ ವರದಿಯ ಸಿದ್ಧತೆ ಆರಂಭಿಸುತ್ತೇನೆ. ವಿಠಲ ಅರಬಾವಿ ಆತ್ಮಹತ್ಯೆ ಮಾಡಿಕೊಂಡ ದಿನ ಘಟನಾ ಸ್ಥಳದಲ್ಲಿದ್ದ 40 ಮಂದಿಯ ವಿಚಾರಣೆ ನಡೆಸಲಾಗಿದೆ.
ಅರಬಾವಿ ಅವರನ್ನು ಮೊದಲು ದಾಖಲಿಸಿದ್ದ ಆಸ್ಪತ್ರೆ ವೈದ್ಯಾಧಿಕಾರಿಗಳಿಂದಲೂ ವರದಿ ಸಂಗ್ರಹಿಸಲಾಗಿದೆ. ಜತೆಗೆ ಅವರು ಮೃತಪಟ್ಟ ಆಸ್ಪತ್ರೆಯಿಂದ ಮರಣೋತ್ತರ ವರದಿ ತರಿಸಿಕೊಳ್ಳಲಾಗಿದೆ. ಸರ್ಕಾರಕ್ಕೆ ವರದಿ ಸಲ್ಲಿಸುವುದಕ್ಕೆ ಫೆ.6 ಕೊನೆಯ ದಿನ. ಹೀಗಾಗಿ ಈ ಮಾಸಾಂತ್ಯದ ವೇಳೆಗೆ ವರದಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.
ಮಾಹಿತಿಗೆ ನಕಾರ : ಆದರೆ ತಾವು ಸರ್ಕಾರಕ್ಕೆ ಸಲ್ಲಿಸಲಿರುವ ವರದಿಯಲ್ಲಿ ಏನಿದೆ ? ವಿಠಲ ಅರಬಾವಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಕಾರಣವಾದ ಅಂಶಗಳೇನು ? ಸೇರಿದಂತೆ ಇತರೆ ವಿವರವನ್ನು ಮಾಧ್ಯಮಕ್ಕೆ ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ನಡೆದಿದ್ದೇನು ? : ಬೆಳಗಾವಿಯಲ್ಲಿ ವಿಧಾನಮಂಡಲದ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಕಬ್ಬಿಗೆ ಹೆಚ್ಚಿನ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ಸುವರ್ಣಸೌಧದ ಎದುರು ರೈತರು ಪ್ರತಿಭಟನೆ ನಡೆಸುತ್ತಿದ್ದರು. ಆದರೆ ತಮ್ಮ ಅಹವಾಲಿಗೆ ಸರ್ಕಾರ ಸ್ಪಂದಿಸದೇ ಇದ್ದುದರಿಂದ ಆಕ್ರೋಶಗೊಂಡ ರೈತ ವಿಠಲ ಅರಬಾವಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ.
ಕೇವಲ 30 ಗುಂಟೆ ಜಮೀನು ಮಾತ್ರ ಹೊಂದಿದ್ದ ಅರಬಾವಿ, ಬೇರೊಬ್ಬರಿಗೆ ಸೇರಿದ 5 ಎಕರೆ ಜಾಗದಲ್ಲಿ ಕಬ್ಬು ಬೆಳೆದಿದ್ದ. ಆದರೆ ಕಬ್ಬು ಕಟಾವು ಮಾಡಿ ಖರೀದಿಸುವುದಕ್ಕೆ ಕಾರ್ಖಾನೆ ಮಾಲೀಕರು ಮೀನಮೇಷ ಎಣಿಸುತ್ತಿದ್ದರು. ಜತೆಗೆ ಸರ್ಕಾರ ಹೆಚ್ಚಿನ ಬೆಲೆ ನಿಗದಿಗೆ ವಿಳಂಬ ಮಾಡಿದ್ದರಿಂದ ಆತ ಆತ್ಮಹತ್ಯೆಗೆ ಶರಣಾಗಿದ್ದ. ಆದರೆ ಈ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿದ್ದವು. ಯಾರದೋ ಚಿತಾವಣೆಯಿಂದ ಈ ಕೃತ್ಯ ನಡೆದಿರಬೇಕು ಎಂಬ ಶಂಕೆ ವ್ಯಕ್ತವಾಗಿತ್ತು. ಮಾತ್ರವಲ್ಲ ಪ್ರತಿಪಕ್ಷಗಳು ಈ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಸರ್ಕಾರ ತನಿಖೆಗೆ ಆದೇಶ ನೀಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

