ಪ್ರಧಾನ ಸುದ್ದಿ

ಜಯಂತ್ ತಿನೇಕರ್ ವಿರುದ್ಧ ವಂಚನೆ ಆರೋಪ

Published On :

ಕ.ಪ್ರ.ವಾರ್ತೆ , ಬೆಂಗಳೂರು , ಜ. 16
ಸಚಿವ ಆರ್.ವಿ. ದೇಶಪಾಂಡೆ ಅವರ ವಿರುದ್ಧ ಇತ್ತೀಚೆಗೆ ತಾನೇ ಅಕ್ರಮ ಆಸ್ತಿ ಗಳಿಕೆ ಆರೋಪ ಮಾಡಿರುವ ಸಾಮಾಜಿಕ ಕಾರ್ಯತರ್ಕ ಜಯಂತ ತಿನೇಕರ್ ಅವರೇ ಈಗ ವಂಚನೆ ಪ್ರಕರಣದಲ್ಲಿ ಸಿಲುಕಿದ್ದಾರೆ. ಜಮೀನು ವಿಚಾರದಲ್ಲಿ ನೆರವು ನೀಡುವುದಾಗಿ ಸಾಮಾಜಿಕ ಕಾರ್ಯಕರ್ತನ ಹೆಸರಿನಲ್ಲಿ ಬಂದ ಜಯಂತ ತಿನೇಕರ್ ಅವರು ವಕೀಲರೊಬ್ಬರ ಜತೆ ಸೇರಿ ಲಕ್ಷಾಂತರ ರುಪಾಯಿ ವಂಚನೆ ಮಾಡಿದ್ದಾರೆ ಎಂದು ಫ್ರಾಂಕ್ಲಿನ್ ಬೊರ್ಜಿಸ್ ಎಂಬುವರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ಪುಢಾರಿ ಮರಾಠಿ ದಿನಪತ್ರಿಕೆಯಲ್ಲೂ ವಿಶೇಷ ವರದಿ ಪ್ರಕಟವಾಗಿದೆ.
ಏನಿದು ಪ್ರಕರಣ?: ತಿನೇಕರ್ ಅವರೊಂದಿಗೆ ವಕೀಲ ಸಾಧಿಕ್ ನಂದಗಡಿ ಮತ್ತು ನಾಗರಾಜ ಶೀಲವಂತ ಎಂಬುವರು ಸೇರಿಕೊಂಡು ಜಮೀನು ಖರೀದಿ ಮತ್ತು ಮಾರಾಟ ವಿಚಾರದಲ್ಲಿ ಲಕ್ಷಾಂತರ ರುಪಾಯಿ ಮೋಸ ಮಾಡಿದ್ದಾರೆ ಎಂದು ಖಾನಾಪುರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಪೊಲೀಸರ ವಿರುದ್ಧವೂ ಗಂಭೀರ ಆರೋಪ ಮಾಡಿದ್ದಾರೆ.
ಹಲಕರ್ಣಿ ಗ್ರಾಮದ ಸರಹದ್ದಿನ ಸರ್ವೇ ನಂ. 38 ಮತ್ತು 39 ಜಾಗ ಫ್ರಾಂಕ್ಲಿನ್ ಬೊರ್ಜಿಸ್ ಅವರ ತಂದೆ ಫ್ರಾನ್ಸಿಸ್ ಬೊರ್ಜಿಸ್ ಅವರ ಹೆಸರಿನಲ್ಲಿದ್ದು, ಇದರಲ್ಲಿ ಕುಟುಂಬದ ಎಲ್ಲರಿಗೂ ಭಾಗವಿದೆ. ಆದರೆ, ಪ್ರತಿನಿತ್ಯ ಮದ್ಯದ ನಶೆಯಲ್ಲಿದ್ದ ಫ್ರಾನ್ಸಿಸ್ ಬೊರ್ಜಿಸ್ ಅವರು ಜಮೀನನ್ನು ನಾಗರಾಜ ಶೀಲವಂತ ಅವರಿಗೆ ಮಾರಾಟ ಮಾಡಿದ್ದರು. ಆದರೆ, ಶೀಲವಂತ ಅವರು ನಿಗದಿಪಡಿಸಿದ ಮೊತ್ತವನ್ನು ಪಾವತಿಸದೆ ವಂಚನೆ ಮಾಡಿದ್ದರು ಎಂಬುದು ಫ್ರಾಂಕ್ಲಿನ್ ಬೊರ್ಜಿಸ್ ಅವರ ಆರೋಪ.
ವಂಚನೆ ಮಾಡಿದರು: ಈ ಹಿನ್ನೆಲೆಯಲ್ಲಿ ತಾವು ಜಯಂತ್ ತಿನೇಕರ್ ಅವರ ಬಳಿ ಹೋದಾಗ ನ್ಯಾಯ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು. ಅವರ ಸಲಹೆಯಂತೆ ಖಾನಾಪುರ ನ್ಯಾಯಾಲಯದಲ್ಲಿ ಶೀಲವಂತ ಅವರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿತ್ತು. ಆದರೆ, ನಂತರದಲ್ಲಿ ತಿನೇಕರ್ ವಕೀಲ ಸಾಧಿಕ್ ನಂದಗಡಿ ಮತ್ತು ನಾಗರಾಜ ಶೀಲವಂತೆ ಅವರೊಂದಿಗೆ ಕೈಜೋಡಿಸಿ ನ್ಯಾಯಾಲಯದ ಹೊರಗೆ ನಿಮಗೆ ನ್ಯಾಯ ಒದಗಿಸಿಕೊಡುತ್ತೇನೆ.
ಆದ್ದರಿಂದ ನ್ಯಾಯಾಲಯದಲ್ಲಿ ದಾಖಲಿಸಿರುವ ಮೊಕದ್ದಮೆ ವಾಪಸ್ ಪಡೆಯುವಂತೆ ಒತ್ತಡ ಹೇರಿದರು. ತಿನೇಕರ್ ಹಾಗೂ ವಕೀಲ ಸಾಧಿಕ್ ನಂದಗಡಿ ಅವರ ಸೂಚನೆಯಂತೆ ನ್ಯಾಯಾಲಯದಲ್ಲಿ ದಾಖಲಿಸಿದ ಮೊಕದ್ದಮೆ ವಾಪಸ್ ಪಡೆಯಲಾಯಿತು. ಆದರೆ, ನಂತರದಲ್ಲಿ ಹಣ ಪಾವತಿಸದೆ ವಂಚನೆ ಮಾಡಿದರು ಎಂದು ದೂರಿದ್ದಾರೆ.
ಮೊಕದ್ದಮೆ ವಾಪಸ್ ಪಡೆದ ಬಳಿಕ ಹಣ ಕೇಳಲು ಹೋದಾಗ ಮತ್ತೆ ಹಣದ ಕುರಿತಾಗಿ ಬಂದರೆ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದು, ಅದರಂತೆ ಅವರು ತನಿಖೆಗೆ ಆದೇಶಿಸಿದ್ದರು. ಆದರೆ, ತನಿಖೆ ನಡೆಸುತ್ತಿರುವ ಪೊಲೀಸರು ಕೇವಲ ನಾಗರಾಜ ಶೀಲವಂತ ವಿರುದ್ಧ ಮಾತ್ರ ಪ್ರಕರಣ ದಾಖಲಿಸಿ ಜಯಂತ ತಿನೇಕರ್ ಅವರನ್ನು ಪಾರು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ವಿಚಾರಣೆಗೆ ಅಂಗೀಕಾರ: ಆದರೆ, ಪ್ರಕರಣದಲ್ಲಿ ತಮಗೆ ಅತಿ ಹೆಚ್ಚು ವಂಚನೆ ಮಾಡಿದ್ದು ಜಯಂತ ತಿನೇಕರ್ ಮತ್ತು ವಕೀಲ ಸಾಧಿಕ್ ನಂದಗಡಿ. ಆದ್ದರಿಂದ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋರಿ ಫ್ರಾಂಕ್ಲಿನ್ ಬೊರ್ಜಿಸ್ ಅವರು ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ. ನ್ಯಾಯಾಲಯ ದೂರನ್ನು ವಿಚಾರಣೆಗೆ ಅಂಗೀಕರಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.