ಹುತಾತ್ಮ ಬಂಡೆ ಅಂತ್ಯಕ್ರಿಯೆ

ಕನ್ನಡಪ್ರಭ ವಾರ್ತೆ , ಖಜೂರಿ , ಜ.16
ಹಂತಕ ಮುನ್ನಾ ಜತೆಗಿನ ಗುಂಡಿನ ಕಾಳಗದಲ್ಲಿ ಹುತಾತ್ಮರಾದ ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಅಂತಿಮ ಸಂಸ್ಕಾರ ಹುಟ್ಟೂರಾದ ಖಜೂರಿಯಲ್ಲಿ ಗುರುವಾರ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು.
ಹೈದ್ರಾಬಾದ್ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳಿಂದ ಪ್ರಮುಖರು, ಸಂಘಟನೆಗಳ ಮುಖಂಡರು, ಸಾಮಾನ್ಯ ಜನರು ಸಾಗರೋಪಾದಿಯಲ್ಲಿ ಬಂದು ಬಂಡೆ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಇದೇ ವೇಳೆ, ಅಂತಿಮ ದರ್ಶನ ಪಡೆದು ವಾಪಸ್ಸಾಗುತ್ತಿದ್ದ ಗೃಹ ಸಚಿವ ಕೆ.ಜೆ.ಜಾರ್ಜ್ ಅವರ ಕಾರು ಮೇಲೆ ಕಲ್ಲು ತೂರಿದ ಘಟನೆ ನಡೆದಿದೆ.
ಮತ್ತೆ ಹುಟ್ಟಿ ಬಾ ಮಲ್ಲಿಕಾರ್ಜುನ... ಬಂಡೆ ಅಮರ್ ರಹೇ... ಕರ್ನಾಟಕದ ಸಿಂಗಂ, ಗುಲ್ಬರ್ಗದ ಗಂಡುಗಲಿ, ರಿಯಲ್ ದರ್ಶನ್.... ಎಂದು ಸೇರಿದ್ದ ಜನಸ್ತೋಮ ಬಂಡೆ ಗುಣಗಾನ ಮಾಡಿತು. ಅಲ್ಲದೆ, ಪೊಲೀಸ್ ಇಲಾಖೆಯ ಅವ್ಯವಸ್ಥೆ, ಹಿರಿಯ ಅಧಿಕಾರಿಗಳ ಉಪಟಳಕ್ಕೆ ಬಂಡೆ ಬಲಿಪಶುವಾದರು ಎಂದು ಧಿಕ್ಕಾರ ಕೂಗಿದ್ದು ನಡೆಯಿತು.
ಗುಲ್ಬರ್ಗದಿಂದ ಖಜೂರಿಗೆ: ಗುಲ್ಬರ್ಗದಿಂದ ಬೆಳಗ್ಗೆ 8 ಗಂಟೆಗೆ ಬಂಡೆ ಅವರ ಪಾರ್ಥಿವ ಶರೀರವನ್ನು ಆಳಂದಕ್ಕೆ ತೆಗೆದುಕೊಂಡು ಹೋಗಲಾಯ್ತು. ಮಾರ್ಗದುದ್ದಕ್ಕೂ ಹಳ್ಳಿಗಾಡಿನ ಜನ ಗುಂಪಾಗಿ ನಿಂತು ಬಂಡೆ ಪಾರ್ಥಿವ ಶರೀರವನ್ನು ಬರಮಾಡಿಕೊಂಡು ಅಂತಿಮ ನಮನ ಸಲ್ಲಿಸಿದರು. ಆಳಂದ ಪಟ್ಟಣದಲ್ಲಿ ಬಂಡೆ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಅಲ್ಲಿಂದ ನೇರವಾಗಿ ಖಜೂರಿ ಗ್ರಾಮಕ್ಕೆ ಪಾರ್ಥಿವ ಶರೀರ ಹೊತ್ತ ವಾಹನ ಬಂದಾಗ 11 ಗಂಟೆಯಾಗಿತ್ತು. ಪುರಾತನ ದೇಶಮುಖ ವಾಡೆಯ ಪಕ್ಕದಲ್ಲೇ ಇರುವ ಬಂಡೆ ನಿವಾಸದ ಅಂಗಳದಲ್ಲಿ ಪಾರ್ಥಿವ ಶರೀರ ಇಡಲಾಗಿತ್ತು. ಬಳಿಕ ಪಾರ್ಥಿವ ಶರೀರವನ್ನು ಅವರ ತೋಟಕ್ಕೆ ತೆಗೆದುಕೊಂಡು ಹೋಗಲಾಯಿತು.
ತೋಟದಲ್ಲಿ ಅಂತ್ಯಸಂಸ್ಕಾರ
ಗುಲ್ಬರ್ಗದಿಂದ ಆಗಮಿಸಿದ್ದ ಸುಲಫಲ ಮಠಾಧೀಶ ಮಹಾಂತ ಸ್ವಾಮೀಜಿಗಳು, ಚೌದಾಪುರಿ ಹಿರೇಮಠದ ರಾಜಶೇಖರ ದೇವರು, ಕೂಡಲಸಂಗಮದ ಪಂಚಮಸಾಲಿ ಜಗದ್ಗುರು ಪೀಠದ ಪಂಚಮಸಾಲಿ ಜಗದ್ಗುರುಗಳು ಸೇರಿದಂತೆ ಆಳಂದ ಸುತ್ತಲಿನ ಹಲವು ಮಠಾಧೀಶರುಗಳ ಸಮ್ಮುಖದಲ್ಲಿ ಪಾರ್ಥಿವ ಶರೀರಕ್ಕೆ ಅಂತಿಮ ವಿಧಿಗಳನ್ನು ನಡೆಸಲಾಯ್ತು. ಬಂಡೆ ಅವರ ತೋಟದಲ್ಲೇ ಅಂತ್ಯಸಂಸ್ಕಾರ ಮಾಡಲಾಯ್ತು. ಪೊಲೀಸರು ಕುಶಾಲ ತೋಪುಗಳನ್ನು ಹಾರಿಸಿ ಅಗಲಿದ ಅಧಿಕಾರಿಗೆ ನಮಿಸಿದರು. ಪೊಲೀಸ್ ಬ್ಯಾಂಡ್ ತಂಡದವರು ರಾಷ್ಟ್ರಗೀತೆ ನುಡಿಸಿದರು. ಸೇರಿದ್ದ ಜನಸ್ತೋಮ ಸರ್ಕಾರಿ ಗೌರವ, ಗನ್ ಸಲಾಮಿಗೆ ಸಾಕ್ಷಿಯಾಯ್ತು.
ಬಂಡೆ ಪುತ್ರ ಸಾಯಿ ದರ್ಶನ್, ಪುತ್ರಿ ಶಿವಾನಿ, ತಂದೆ ಕರಿಬಸಪ್ಪ ಹಾಗೂ ಸಹೋದರ- ಸಹೋದರಿಯರು ಬಂಧುಗಳಿಂದಲೂ ಧಾರ್ಮಿಕ ವಿಧಿಗಳನ್ನು ನಡೆಸಲಾಯ್ತು. ಬರೋಬ್ಬರಿ ಸಂಜೆ 5 ಗಂಟೆಗೆ ಬಂಡೆ ಪಾರ್ಥಿವ ಶರೀರದ ಅಂತಿಮ ಸಂಸ್ಕಾರ ನಡೆದು ಬಂಡೆ ಪಾರ್ಥಿವ ಶರೀರ ಪಂಚಭೂತಗಳಲ್ಲಿ ಲೀನವಾಯ್ತು.
ಅಂತಿಮ ದರ್ಶನ ಪಡೆದವರು
ಗೃಹ ಸಚಿವ ಕೆ.ಜೆ.ಜಾರ್ಜ್, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಪೊಲೀಸ್ ಮಹಾ ನಿರ್ದೇಶಕ ಎಲ್.ಆರ್.ಪಚಾವೋ, ಎಡಿಜಿಪಿ ಎಂ.ಎನ್.ರೆಡ್ಡಿ, ಜಿಲ್ಲಾ ಎಸ್ಪಿ ಅಮೀತ್ ಸಿಂಗ್, ಜಿಲ್ಲಾಧಿಕಾರಿ ಡಾ. ಪ್ರಸಾದ್, ಸಿಇಓ ಕುಮಾರ್, ಅಪರ ಜಿಲ್ಲಾಧಿಕಾರಿ ವೆಂಕಟರೆಡ್ಡಿ. ಆಳಂದ ಶಾಸಕ ಬಿ.ಆರ್.ಪಾಟೀಲ್, ಮಾಜಿ ಸಚಿವ ರೇವುನಾಯಕ ಬೆಳಮಗಿ, ಗುಲ್ಬರ್ಗ ಶಾಸಕ ದತ್ತಾತ್ರೇಯ ಪಾಟೀಲ್, ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್, ಮಾಜಿ ಮಂತ್ರಿ ಶೋಭಾ ಕರಂದ್ಲಾಜೆ.
50 ಲಕ್ಷ ಪರಿಹಾರ: ಸಿಎಂ
- ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಹುತಾತ್ಮ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಹುತಾತ್ಮ ಬಂಡೆ ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ಖರ್ಚನ್ನೂ ರಾಜ್ಯ ಸರ್ಕಾರವೇ ವಹಿಸಿಕೊಳ್ಳಲಿದೆ ಎಂದೂ ತಿಳಿಸಿದ್ದಾರೆ. ಆರಂಭದಲ್ಲಿ 15 ಲಕ್ಷ ಪರಿಹಾರ ಘೋಷಿಸಿದ್ದರಿಂದ ಸಾರ್ವಜನಿಕರ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ನವದೆಹಲಿಗೆ ಆಗಮಿಸಿರುವ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳು, ದೆಹಲಿ ಸರ್ಕಾರ ಕರ್ತವ್ಯ ನಿರತ ಪೇದೆ ಮೃತಪಟ್ಟಾಗ 1 ಕೋಟಿ ಪರಿಹಾರ ನೀಡಿರುವ ಅಂಶವನ್ನು ಗಮನಕ್ಕೆ ತಂದಾಗ, ಪರಿಹಾರ ಮೊತ್ತ 50 ಲಕ್ಷ ನೀಡಲಾಗುತ್ತದೆ ಎಂದು ಪ್ರಕಟಿಸಿದರು.
ಜಾರ್ಜ್ ಕಾರ್ ಮೇಲೆ ಕಲ್ಲು
ಬಂಡೆ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಖಜೂರಿಗೆ ಬಂದಿದ್ದ ಗೃಹ ಸಚಿವ ಕೆ.ಜೆ. ಜಾರ್ಜ್, ಪೊಲೀಸ್ ಮಹಾ ನಿರ್ದೇಶಕ ಲಾಲ್ ರುಕುಂ ಪಚಾವೋ ಸೇರಿದಂತೆ ಸಚಿವರು, ಹಿರಿಯ ಅಧಿಕಾರಿಗಳ ಕಾರಿನ ಮೇಲೆ ಕಲ್ಲು ತೂರಿದ ಘಟನೆ ಗುರುವಾರ ನಡೆಯಿತು. ಸಚಿವ ಜಾರ್ಜ್ ಹಾಗೂ ಇತರೆ ಸಚಿವರು, ಅಧಿಕಾರಿಗಳು ಬಂದಿರುವ ಬಗ್ಗೆ ಇಲ್ಲಿನ ಜನರಿಗೆ ಮಾಹಿತಿ ಇತ್ತಾದರೂ ಅವರು ಹೇಗೆ ಬರುತ್ತಾರೆಂಬುದರ ಬಗ್ಗೆ ಗೊತ್ತಿರಲಿಲ್ಲ. ಖಜೂರಿ ಜನರ ಕೋಪವನ್ನು ತಿಳಿದಿದ್ದ ಸ್ಥಳೀಯ ಪೊಲೀಸ್ ಅಧಿಕಾರಿಗಳು, ಸಚಿವರು ಬಂದು ಹೋಗಲು ಪರ್ಯಾಯ ರಸ್ತೆಯನ್ನೇ ಹುಡುಕಿದ್ದರು.
ಇಷ್ಟಕ್ಕೂ ಜನ ಸಚಿವರು ಬಂದು ಹಾರ ಹಾಕಿ ಹೋದರು ಎಂಬ ಸುದ್ದಿ ಅರಿತು, ಅವರು ಬಳಸಿದ್ದ ಬೈಪಾಸ್ ರಸ್ತೆಯ ಭವಾನಿ ಮಂದಿರದ ಮುಳ್ಳು ಪೊದೆಗಳಲ್ಲಿ ಅವರ ವಾಹನಗಳು ಬರುವುದಕ್ಕಿಂತ ಮುಂಚೆಯೇ ಅವಿತು ಕುಳಿತಿದ್ದರು. ಸಚಿವರ ಕಾರು, ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳ ಕಾರು, ಬೆಂಗಾವಲು ಪೊಲೀಸ್ ವಾಹನಗಳು ಸಾಲಾಗಿ ಬರುತ್ತಿರುವಂತೆಯೇ ಕಲ್ಲು ತೂರಿದರು. ಕಲ್ಲು ತೂರಾಟದಲ್ಲಿ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳಿದ್ದ ವಾಹನದ ಗಾಜು ಜಖಂ ಆಗಿದೆ, ಸಚಿವರ ವಾಹನದ ಮೇಲು ಕಲ್ಲು ಬಿದ್ದಿತಾದರೂ ವಾಹನಕ್ಕೆ ಯಾವುದೇ ತೊಂದರೆ ಆಗಿಲ್ಲ ಎಂದು ಬಂದೋಬಸ್ತ್ನಲ್ಲಿದ್ದ ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲದೆ, ಈ ಘಟನೆಯಲ್ಲಿ ಪೇದೆಯೊಬ್ಬರು ಗಾಯಗೊಂಡಿದ್ದಾರೆ.
ಗುಲ್ಬರ್ಗ, ಆಳಂದ ಬಂದ್
ಆಳಂದ ತಾಲೂಕು ಸತತ 2ನೇ ದಿನವಾದ ಗುರುವಾರವೂ ಪೂರ್ಣ ಬಂದ್ ಆಗಿತ್ತು. ಇದೇ ವೇಳೆ, ಗುಲ್ಬರ್ಗ, ಬೀದರ್, ಹುಮನಾಬಾದ್ಗಳಲ್ಲೂ ಜನರು ಪ್ರತಿಭಟನೆ ನಡೆಸಿದರು. ಗುಲ್ಬರ್ಗ ಬಂದ್ಗೆ ಬಿಜೆಪಿ ಕರೆ ಕೊಟ್ಟಿತ್ತು. ಬಸ್ ಸಂಚಾರ ಇರಲಿಲ್ಲ, ಆಟೋಗಳ ಸಂಚಾರ ವಿರಳವಾಗಿತ್ತು. ಅಂಗಡಿ- ಮುಂಗಟ್ಟುಗಳೆಲ್ಲವೂ ಬಂದ್ ಆಗಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


