ಪ್ರಧಾನ ಸುದ್ದಿ

ಗುಲ್ಬರ್ಗ ಐಜಿಪಿ ವಜೀರ್ ಎತ್ತಂಗಡಿ

Published On :

ಬೆಂಗಳೂರು: ಗುಲ್ಬರ್ಗ ದಕ್ಷ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ಸಾವಿನ ಹಿನ್ನೆಲೆಯಲ್ಲಿ ಗುಲ್ಬರ್ಗ ವಿಭಾಗದ ಐಜಿಪಿ ಮುಕ್ತಾರ್ ವಜೀರ್ ಅಹ್ಮದ್ ಅವರನ್ನು ತಕ್ಷಣವೇ ವರ್ಗಾವಣೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ.
ಐಜಿಪಿ ವಜೀರ್ ಅಹ್ಮದ್ ವರ್ಗಾವಣೆಗೆ ಅಗತ್ಯ ವರದಿಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಬಂಡೆ ಸಾವಿಗೆ ಅವರು ನೀಡಿರುವ ಮೌಖಿಕ ಆದೇಶವೇ ಕಾರಣವಾಯಿತೇ ಎಂಬ ಆರೋಪಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ. ಇದರಿಂದಾಗಿ ಬಂಡೆ ಸಾವಿಗೆ ಸಂಬಂಧಿಸಿದಂತೆ ಐಜಿಪಿಯನ್ನು ವರ್ಗಾವಣೆ ಮಾಡಬೇಕು ಎಂಬ ಒತ್ತಾಯಕ್ಕೆ ಸರ್ಕಾರ ಮಣಿದಿದ್ದು, ಈ ಕುರಿತು ಅಧಿಕೃತ ಆದೇಶ ಹೊರಬೀಳುವುದೊಂದೇ ಬಾಕಿ.     
ಆದರೆ, ಈ ವರ್ಗಾವಣೆಗೆ ತಡೆಯಾಜ್ಞೆ ತರಬಹುದು. ಜತೆಗೆ ಯಾವುದೇ ವಿವಾದ ಸೃಷ್ಟಿಯಾಗಬಾರದು ಎಂಬ ಕಾರಣಕ್ಕೆ ವರ್ಗಾವಣೆಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಜೀವಂತವಾಗಿ ಹಿಡಿಯಲು ಸೂಚನೆ ನೀಡಲಾಗಿತ್ತೇ?: ಹೇಗಾದರೂ ಮಾಡಿ ಮುನ್ನಾ ದರ್ಬಾಜಾನ ಪಾತಕಗಳಿಗೆ ಅಂತ್ಯ ಹಾಡಲೇ ಬೇಕು ಎಂಬ ಉದ್ದೇಶದೊಂದಿಗೆ ಮಲ್ಲಿಕಾರ್ಜುನ ಬಂಡೆ ಶಸ್ತ್ರಸಜ್ಜಿತರಾಗಿಯೇ ಆತನ ಆಡ್ಡೆ ಮೇಲೆ ದಾಳಿ ಮಾಡಲು ಹೊರಟಿದ್ದರು. ಅಲ್ಲದೆ, ಪಿಸ್ತೂಲ್‌ನೊಂದಿಗೆ ಬನ್ನಿ ಎಂದು ತಮ್ಮ ಕೆಳ ಹಂತದ ಅಧಿಕಾರಿಗಳಿಗೂ ಸೂಚಿಸಿದ್ದರು. ಬಂಧನಕ್ಕೆ ಮುಂದಾದಾಗ ಮುನ್ನಾ ದಾಳಿ ನಡೆಸಿದರೆ ಪ್ರತಿದಾಳಿ ನಡೆಸಲು ಪೊಲೀಸರು ಸಜ್ಜಾಗಿದ್ದರು.
ಅದರಂತೆ ಪೊಲೀಸರು ಗುಲ್ಬರ್ಗ ರೋಜಾ ಬಡಾವಣೆಯ ಮುನ್ನಾನ ಅಡಗುತಾಣದ ಮೇಲೆ ದಾಳಿ ಮಾಡಲು ಮುಂದಾದಾಗ ಆತನನ್ನು ಜೀವಂತವಾಗಿ ಸೆರೆ ಹಿಡಿಯಬೇಕು. ಯಾವುದೇ ಕಾರಣಕ್ಕೂ ಹತ್ಯೆ ಮಾಡಬಾರದು ಎಂದು ಐಜಿಪಿ ಮೌಖಿಕ ಆದೇಶ ಹೊರಡಿಸಿದ್ದರು ಎಂಬ ಮಾತುಗಳು ಪೊಲೀಸ್ ವಲಯದಲ್ಲಿ ಕೇಳಿಬರುತ್ತಿದೆ. ಮುನ್ನಾ ಗುಂಡಿನ ದಾಳಿಗೆ ಹತರಾದ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ಅವರ ತೆಲೆಗೆ ಹತ್ತಿರದಿಂದ ಗುಂಡು ಹಾರಿಸಿರುವುದು ಶವ ಪರೀಕ್ಷೆ ಸಂದರ್ಭದಲ್ಲಿ ಗೊತ್ತಾಗಿರುವುದು ಪೊಲೀಸರ ಈ ಆರೋಪಗಳಿಗೆ ಪುಷ್ಠಿ ನೀಡುತ್ತದೆ.
ಮೇಲಧಿಕಾರಿಗಳ ಸೂಚನೆಯಂತೆ ಪಾತಕಿ ಮುನ್ನಾನನ್ನು ಜೀವಂತವಾಗಿ ಸೆರೆಹಿಡಿಯಬೇಕು ಎಂಬ ಉದ್ದೇಶದಿಂದಲೇ ಕಾರ್ಯಾಚರಣೆ ನಡೆಸಲಾಯಿತು.
ಇನ್ನೇನು ಆತನನ್ನು ಬಂಡೆ ಹಿಡಿದುಕೊಂಡರು ಎನ್ನುವ ಹಂತದಲ್ಲಿ ಆತ ಅವರ ಮೇಲೆ ಗುಂಡಿನ ದಾಳಿ ನಡೆಸಿದ. ಈ ಸಂದರ್ಭದಲ್ಲಿ ಬಂಡೆ ಜತೆಗಿದ್ದ ಇತರೆ ಪೊಲೀಸ್ ಅಧಿಕಾರಿಗಳು ಮುನ್ನಾನ ಮೇಲೆ ಗುಂಡಿನ ದಾಳಿ ನಡೆಸಿ ಆತನನ್ನು ಹತ್ಯೆ ಮಾಡಿ ತಾವು ಅಪಾಯದಿಂದ ಪಾರಾದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ತೀರಾ ಸಮೀಪದಿಂದ ಹಾರಿಸಿರುವ ಗುಂಡು ಬಂಡೆ ಅವರ ತಲೆಗೆ ಹೊಕ್ಕಿದ್ದ ಕಾರಣ ಎಷ್ಟೇ ಚಿಕಿತ್ಸೆ ನೀಡಿದರೂ ಅವರು ಸ್ಪಂದಿಸಲಿಲ್ಲ. ಮೇಲಾಗಿ ತಲೆಗೆ ಗಂಭೀರವಾಗಿ ಗಾಯವಾಗಿದ್ದರಿಂದ ಶಸ್ತ್ರಚಿಕಿತ್ಸೆಯೂ ಕಷ್ಟಸಾಧ್ಯವಾಗಿತ್ತು ಎಂದು ಹೇಳಲಾಗುತ್ತಿದೆ.
ಈ ಎಲ್ಲಾ ಕಾರಣಗಳಿಂದಾಗಿ ಮಲ್ಲಿಕಾರ್ಜುನ ಬಂಡೆ ಅವರ ಸಾವಿನ ಕುರಿತು ಸಮಗ್ರ ತನಿಖೆಗೆ ಮುಂದಾಗಿರುವ ಸರ್ಕಾರ, ತನಿಖೆಗೆ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ ಐಜಿಪಿ ವಜೀರ್ ಅಹ್ಮದ್ ಅವರನ್ನು ಬೇರೆ ಕಡೆ ವರ್ಗಾವಣೆ ಮಾಡಲು ತೀರ್ಮಾನಿಸಿದೆ. ಈ ಕುರಿತು ಅಧಿಕೃತ ಆದೇಶ ಹೊರಬೀಳುವುದೊಂದೇ ಬಾಕಿ ಎನ್ನಲಾಗುತ್ತಿದೆ.
ಸೇಡು ತೀರಿಸಿಕೊಳ್ಳುವ ಪ್ರತಿಜ್ಞೆ!
ಈ ಮಧ್ಯೆ ಪಾತಕಿ ಮುನ್ನಾ ದರ್ಬಾಜಾನನ್ನು ಹತ್ಯೆ ಮಾಡಿದ ಗುಲ್ಬರ್ಗ ಪೊಲೀಸರ ಮೇಲೆ ಸೇಡು ತೀರಿಸಿಕೊಳ್ಳಲು ಆತನ ಸಹಚರರು ತೀರ್ಮಾನಿಸಿದ್ದಾರೆ ಎಂಬ ಆಘಾತಕಾರಿ ಅಂಶವೂ ಬೆಳಕಿಗೆ ಬಂದಿದೆ. ಮುನ್ನಾನ ದೇಹವನ್ನು ದಫನ್ ಮಾಡುವ ಸಂದರ್ಭದಲ್ಲಿ ಹಾಜರಿದ್ದ ಆತನ ಸಹಚರರು ಈ ಸಾವಿಗೆ ಸೇಡು ತೀರಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ಇರುವಂತೆ ಗುಲ್ಬರ್ಗ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಮುನ್ನಾನ ಸಹೋದರನೊಬ್ಬ ದಾವೂದ್ ಇಬ್ರಾಹಿಂ ಸಹಚರನಾಗಿದ್ದು, ಮುಂಬೈನಲ್ಲಿ ತನ್ನದೇ ಆದ ತಂಡವನ್ನು ಕಟ್ಟಿಕೊಂಡಿದ್ದಾನೆ. ಆತ ಗುಲ್ಬರ್ಗಕ್ಕೂ ತನ್ನ ಕಾರ್ಯ ವಿಸ್ತರಿಸಬಹುದು ಎಂಬ ಮಾಹಿತಿಯೂ ಲಭ್ಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.