ಗಲ್ಲು ಶಿಕ್ಷೆಗೇ ನೇಣು ಬಿಗಿದ ಸುಪ್ರೀಂ

ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಕರ್ನಾಟಕದ ಏಳು ಮಂದಿ ಸೇರಿದಂತೆ ಮರಣ ದಂಡನೆ ಶಿಕ್ಷೆಗೆ ಒಳಗಾಗಿರುವ ಹದಿನೈದು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಜೀವದಾನ ನೀಡಿದೆ.
ಕ್ಷಮಾದಾನ ಅರ್ಜಿ ವಿಲೇವಾರಿ ಮಾಡುವಲ್ಲಿ ಸರ್ಕಾರ ವಿಳಂಬ ಮಾಡಿರುವುದನ್ನು ಪರಿಗಣಿಸಿ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ತಗ್ಗಿಸಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಮರಣ ದಂಡನೆ ಶಿಕ್ಷೆ ಜಾರಿ ಸಂಬಂಧ ಮಾರ್ಗಸೂಚಿ ನೀಡಿರುವ ಮುಖ್ಯ ನ್ಯಾಯಮೂರ್ತಿ ಪಿ. ಸದಾಶಿವಂ ನೇತೃತ್ವದ ತ್ರಿಸದಸ್ಯ ಪೀಠವು, ಮರಣ ದಂಡನೆ ಶಿಕ್ಷೆಗೆ ಒಳಗಾದ ಅಪರಾಧಿಗೆ ಆತನ ಕ್ಷಮಾದಾನ ಅರ್ಜಿ ತಿರಸ್ಕರಿಸಿರುವ ಬಗ್ಗೆ ತಿಳಿಸಬೇಕು. ನೇಣಿಗೇರಿಸುವ ಮುನ್ನ ಆತನ ಕುಟುಂಬದ ಸದಸ್ಯರನ್ನು ಭೇಟಿ ಮಾಡಲು ಅವಕಾಶ ನೀಡಬೇಕು ಎಂದು ತಿಳಿಸಿದೆ.
14 ದಿನಗಳಲ್ಲಿ ಜಾರಿ ಮಾಡಿ: ಶಿಕ್ಷೆಗೆ ಗುರಿಯಾಗಿರುವ ಅಪರಾಧಿ ಸೇರಿದಂತೆ ಯಾವುದೇ ಕೈದಿಯನ್ನು ಏಕಾಂಗಿಯಾಗಿ ಬಂಧಿಸಿಡುವುದು ಸಂವಿಧಾನ ಬಾಹಿರ ಕ್ರಮ.
ಆದ್ದರಿಂದ ಜೈಲುಗಳಲ್ಲಿ ಏಕಾಂಗಿಯಾಗಿ ಬಂಧಿಸಿಡುವುದಕ್ಕೆ ಅವಕಾಶ ನೀಡಬಾರದು ಎಂದು ನ್ಯಾಯಪೀಠ ಆದೇಶಿಸಿದೆ. ಕ್ಷಮಾದಾನ ಅರ್ಜಿ ತಿರಸ್ಕೃತವಾದ ಹದಿನಾಲ್ಕು ದಿನಗಳಲ್ಲಿ ಮರಣದಂಡನೆ ಶಿಕ್ಷೆ ಜಾರಿ ಮಾಡಬೇಕು ಎಂದು ತಿಳಿಸಿದೆ.
ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ಹದಿನೈದು ಅಪರಾಧಿಗಳು ತಮ್ಮ ಕ್ಷಮಾದಾನ ಅರ್ಜಿ ವಿಲೇವಾರಿ ವಿಳಂಬ ಆಗಿರುವುದರಿಂದ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಬೇಕೆಂದು ಕೋರಿ ಸಲ್ಲಿಸಿದ್ದ ಹದಿಮೂರು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಪೀಠವು ಈ ತೀರ್ಪು ನೀಡಿದೆ. ಜೀವದಾನ ಪಡೆದವರು ತಮ್ಮ ಜೀವಿತದ ಕೊನೆಯವರೆಗೂ ಜೈಲಿನಲ್ಲಿಯೇ ಕಳೆಯಬೇಕು.
ಭಾರತೀಯ ದಂಡ ಸಂಹಿತೆಯಡಿಯಾಗಲಿ ಅಥವಾ ಭಯೋತ್ಪಾದನೆ ನಿಗ್ರಹ ಕಾಯ್ದೆಯಡಿಯಾಗಲಿ ಮರಣ ದಂಡನೆಗೆ ಒಳಪಟ್ಟ ಪ್ರಕರಣಗಳಿಗೆಲ್ಲ ಈ ಮಾರ್ಗಸೂಚಿಗಳನ್ನು ಅನ್ವಯಿಸಬೇಕು ಎಂದು ನ್ಯಾಯಪೀಠವು ಸ್ಪಷ್ಟಪಡಿಸಿದೆ. ಮರಣ ದಂಡನೆ ಶಿಕ್ಷೆಗೆ ಒಳಗಾದ ಅಪರಾಧಿ ಮಾನಸಿಕ ಅಸ್ವಸ್ಥನಾಗಿದ್ದರೆ, ಸ್ಕೀಜೋಫ್ರೀನಿಯಾದಿಂದ ಬಳಲುತ್ತಿದ್ದರೆ ಅಂಥವರನ್ನು ನೇಣಿಗೇರಿಸುವಂತಿಲ್ಲ. ವ್ಯಕ್ತಿ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿದ್ದರೆ ಮರಣ ದಂಡನೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಬಹುದು ಎಂದು ಸೂಚಿಸಿದೆ.
ಭುಲ್ಲಾರ್ ತೀರ್ಪು ಲಾಗು ಆಗಲಿಲ್ಲ: ವಿಶೇಷ ಎಂದರೆ ಸುಪ್ರೀಂ ಕೋರ್ಟ್ 2013, ಏ.12ರಂದು ದೇವಿಂದರ್ ಪಾಲ್ ಸಿಂಗ್ ಭುಲ್ಲಾರ್ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ತಳ್ಳಿ ಹಾಕಿದೆ. ಭುಲ್ಲಾರ್ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಕ್ಷಮಾದಾನ ಅರ್ಜಿ ವಿಲೇವಾರಿ ವಿಳಂಬವಾಗಿದ್ದನ್ನೇ ಕಾರಣವಾಗಿಟ್ಟುಕೊಂಡು ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ತಗ್ಗಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿತ್ತು.
ನ್ಯಾಯಪೀಠವು ಮರಣ ದಂಡನೆಗೆ ಒಳಪಟ್ಟ ಅಪರಾಧಿಗೂ ಕಾನೂನು ಸೇವೆ ಒದಗಿಸಬೇಕು. ಅಪರಾಧಿಯು ಅನಾರೋಗ್ಯ ಮತ್ತು ಕ್ಷಮಾದಾನ ವಿಳಂಬ ಅರ್ಜಿ ವಿಲೇವಾರಿ ವಿಳಂಬ ಪ್ರಕರಣಗಳಲ್ಲಿ ಶಿಕ್ಷೆಯನ್ನು ಜೀವಾವಧಿಗೆ ತಗ್ಗಿಸಲು ಕೋರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ತಿಳಿಸಿದೆ.
ಸಂಸತ್ ಮೇಲೆ ದಾಳಿ ಮಾಡಿದ್ದ ಅಪರಾಧಿ ಮೊಹಮ್ಮದ್ ಅಫ್ಜಲ್ ಗುರು ಕ್ಷಮಾದಾನ ಅರ್ಜಿ ತಿರಸ್ಕೃತಗೊಂಡು ಶಿಕ್ಷೆ ಜಾರಿ ಮಾಡಿದ ನಂತರ ಆತನ ಕುಟುಂಬದವರು ತಮಗೆ ಮಾಹಿತಿ ನೀಡಿರಲಿಲ್ಲ ಆರೋಪಿಸಿದ್ದ ಹಿನ್ನೆಲೆಯಲ್ಲಿ ಕ್ಷಮಾದಾನ ತಿರಸ್ಕೃತವಾಗಿದ್ದನ್ನು ತಿಳಿಸಬೇಕೆಂಬ ವಿಷಯಕ್ಕೆ ಹೆಚ್ಚಿನ ಮಹತ್ವ ಬಂದಿತ್ತು.
ಗಲ್ಲಿನಿಂದ ಬಚಾವ್ ಆದವರು
ಮಂಗಳವಾರ ಮುಖ್ಯನ್ಯಾಯಾಮೂರ್ತಿ ಪಿ.ಸದಾಶಿವಂ ನೇತೃತ್ವದ ತ್ರಿಸದಸ್ಯ ಪೀಠ ನೀಡಿದ ತೀರ್ಪಿನಿಂದ ಜೀವದಾನ ಪಡೆದವರು ವೀರಪ್ಪನ್ ಸಹಚರರಾದ ಮೀಸೆಕಾರ ಮಾದಯ್ಯ, ಸೈಮನ್, ಬಿಲವೇಂದ್ರ, ಜ್ಞಾನಪ್ರಕಾಶ್. ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿದ್ದ ಮಂಗಳೂರಿನ ಪ್ರವೀಣ್ಕುಮಾರ್, ಯುವತಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಚಾಮರಾಜನಗರದ ಶಿವು ಮತ್ತು ಜಡೇಸ್ವಾಮಿ ಇವರೆಲ್ಲರೂ ಕರ್ನಾಟಕದವರು.
ರಾಜೀವ್ ಗಾಂಧಿ ಹತ್ಯೆ ಆರೋಪಿಗಳಾದ ಪೆರಾರಿವಲನ್, ಟಿ.ಸುಧೀಂದ್ರರಾಜ ಆಲಿಯಸ್ ಸಂತನ್, ಶ್ರೀಹರನ್ ಆಲಿಯಾಸ್ ಮುರುಗನ್, ತನ್ನ ಕುಟುಂಬದ ಎಂಟು ಮಂದಿಯನ್ನು ಕೊಲೆ ಮಾಡಿದ್ದ ಹರಿಯಾಣ ಮಾಜಿ ಶಾಸಕ ಲಾಲುರಾಮ್ ಪುತ್ರಿ ಸೋನಿಯಾ ಮತ್ತು ಆಕೆಯ ಪತಿ ಸಂಜೀವ್. 1986ರಲ್ಲಿ ತನ್ನ ಕುಟುಂಬದ 13 ಮಂದಿಯನ್ನು ಕೊಲೆ ಮಾಡಿದ್ದ ಗುರ್ಮಿತ್ ಸಿಂಗ್. ತನ್ನ ಪತ್ನಿ ಹಾಗೂ ಐವರು ಪುತ್ರಿಯರನ್ನು ಕೊಲೆ ಮಾಡಿದ್ದ ಜಾಫರ್ ಅಲಿ. ತಮ್ಮ ಐವರು ಸಂಬಂಧಿಕರನ್ನು ಕೊಲೆ ಮಾಡಿದ್ದ ಸುರೇಶ್ ರಾಮ್ಜಿ.
ಸಾಯಿಬಣ್ಣನಿಗೂ ಜೀವದಾನ?
ಇಬ್ಬರು ಪತ್ನಿ ಹಾಗೂ ಒಂದು ವರ್ಷದ ಮಗಳನ್ನು ಹತ್ಯೆ ಮಾಡಿ ಗಲ್ಲು ಶಿಕ್ಷೆಗೆ ಒಳಗಾಗಿರುವ ಜೇವರ್ಗಿಯ ಸಾಯಿಬಣ್ಣ ನಿಂಗಪ್ಪ ನಾಟೀಕಾರ್ಗೂ ಜೀವದಾನ ಸಿಗುವ ಸಾಧ್ಯತೆ ಇದೆ. ಮಂಗಳವಾರ ನಡೆದ ವಿಚಾರಣೆಯಲ್ಲಿ ಸಾಯಿಬಣ್ಣ ಅರ್ಜಿ ಇರಲಿಲ್ಲ. ಇದೇ ಆದೇಶವನ್ನು ಆಧಾರವಾಗಿಟ್ಟುಕೊಂಡು ತನ್ನ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ತಗ್ಗಿಸಬೇಕೆಂದು ಅರ್ಜಿ ಸಲ್ಲಿಸಿದರೆ ಆತನಿಗೂ ಜೀವದಾನ ಸಿಗುವ ಸಾಧ್ಯತೆ ಇದೆ.
ಯಾರಿಗಿಲ್ಲ ಗಲ್ಲು?
ಸಿ.ಜೆ. ಪಿ.ಸದಾಶಿವಂ ನೇತೃತ್ವದ ತ್ರಿಸದಸ್ಯ ಪೀಠ ನೀಡಿದ ತೀರ್ಪಿನಿಂದ ಜೀವದಾನ ಪಡೆದವರು ವೀರಪ್ಪನ್ ಸಹಚರರಾದ ಮೀಸೆಕಾರ ಮಾದಯ್ಯ, ಸೈಮನ್, ಬಿಲವೇಂದ್ರನ್, ಜ್ಞಾನಪ್ರಕಾಶ್. ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿದ್ದ ಮಂಗಳೂರಿನ ಪ್ರವೀಣ್ಕುಮಾರ್, ಯುವತಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಚಾಮರಾಜನಗರದ ಶಿವು ಮತ್ತು ಜಡೇಸ್ವಾಮಿ ಇವರೆಲ್ಲರೂ ಕರ್ನಾಟಕದವರು. ರಾಜೀವ್ ಗಾಂಧಿ ಹತ್ಯೆ ಆರೋಪಿಗಳಾದ ಪೆರಾರಿವಲನ್, ಟಿ.ಸುಧೀಂದ್ರರಾಜ ಅಲಿಯಸ್ ಸಂತನ್, ಶ್ರೀಹರನ್ ಆಲಿಯಾಸ್ ಮುರುಗನ್, ತನ್ನ ಕುಟುಂಬದ ಎಂಟು ಮಂದಿಯನ್ನು ಕೊಲೆ ಮಾಡಿದ್ದ ಹರಿಯಾಣ ಮಾಜಿ ಶಾಸಕ ಲಾಲುರಾಮ್ ಪುತ್ರಿ ಸೋನಿಯಾ ಮತ್ತು ಆಕೆಯ ಪತಿ ಸಂಜೀವ್. 1986ರಲ್ಲಿ ತನ್ನ ಕುಟುಂಬದ 13 ಮಂದಿಯನ್ನು ಕೊಲೆ ಮಾಡಿದ್ದ ಗುರ್ಮಿತ್ ಸಿಂಗ್. ತನ್ನ ಪತ್ನಿ ಹಾಗೂ ಐವರು ಪುತ್ರಿಯರನ್ನು ಕೊಲೆ ಮಾಡಿದ್ದ ಜಾಫರ್ ಅಲಿ. ತಮ್ಮ ಐವರು ಸಂಬಂಧಿಕರನ್ನು ಕೊಲೆ ಮಾಡಿದ್ದ ಸುರೇಶ್ ರಾಮ್ಜಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


