ಕೇಜ್ರಿ ಪ್ರತಿಭಟನೆ ಸುಪ್ರೀಂ ತಪರಾಕಿ

ನವದೆಹಲಿ: ರೇಲ್ವೆ ಭವನದ ಎದುರು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದಲ್ಲಿ ನಡೆದ ಆಮ್ ಆದ್ಮಿ ಪಕ್ಷ(ಆಪ್)ದ ಎರಡು ದಿನಗಳ ಪ್ರತಿಭಟನೆಗೆ ಸುಪ್ರೀಂಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ನಿಷೇಧಾಜ್ಞೆಯ ಹೊರತಾಗಿಯೂ ನಡೆದ ಪ್ರತಿಭಟನೆಯನ್ನು ನಿಯಂತ್ರಿಸದ ದೆಹಲಿ ಪೊಲೀಸರನ್ನು ಶುಕ್ರವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಜತೆಗೆ ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಗಳು ಕಾನೂನು ಉಲ್ಲಂಘಿಸಬಹುದೇ ಎಂದು ಪ್ರಶ್ನಿಸಿ ಕೇಂದ್ರ ಹಾಗೂ ದೆಹಲಿ ಸರ್ಕಾರಗಳಿಗೆ ನೋಟಿಸ್ ಅನ್ನೂ ನೀಡಿದೆ. ವಕೀಲ ಎಂ.ಎಲ್. ಶರ್ಮಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ದೆಹಲಿ ಪೊಲೀಸರ ಕ್ರಮದ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿತು.
ನಿಷೇಧಾಜ್ಞೆಯ ಹೊರತಾಗಿಯೂ ರೇಲ್ವೆ ಭವನದ ಹೊರಗೆ ಜಮಾಯಿಸಲು ಪ್ರತಿಭಟನಾಕಾರರಿಗೆ ಹೇಗೆ ಅನುಮತಿ ನೀಡಲಾಯಿತು ಎಂದು ನ್ಯಾ. ಆರ್.ಎಂ. ಲೋಧಾ ಮತ್ತು ನ್ಯಾ. ಶಿವ ಕೀರ್ತಿ ಸಿಂಗ್ ಅವರಿದ್ದ ಪೀಠ ಪ್ರಶ್ನಿಸಿತು. ಈ ಸಂಬಂಧ ಜ.31ರೊಳಗೆ ವರದಿ ನೀಡುವಂತೆ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿತು.
ಹಾಜರಾಗದ ಭಾರ್ತಿ: ದಿನಕ್ಕೊಂದು ವಿವಾದಕ್ಕೆ ಆಹಾರವಾಗುತ್ತಿರುವ ಕಾನೂನು ಸಚಿವ ಸೋಮನಾಥ್ ಭಾರ್ತಿ ಈಗ ಹೊಸ ಸಮಸ್ಯೆ ಮೈಮೇಲೆ ಎಳೆದುಕೊಂಡಿದ್ದಾರೆ. ಜ.15ರ ಮಧ್ಯರಾತ್ರಿ ದಾಳಿ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಮಹಿಳಾ ಆಯೋಗದ ಎದುರು ಖುದ್ದಾಗಿ ಹಾಜರಾಗುವ ಬದಲು ವಕೀಲರನ್ನು ಕಳುಹಿಸಿಕೊಟ್ಟಿದ್ದಾರೆ. ನಂತರ ತಾವು ಗಾಳಿಪಟ ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಭಾರ್ತಿ ಅವರ ಈ ಕ್ರಮ ಮಹಿಳಾ ಆಯೋಗದ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಮಹಿಳಾ ಆಯೋಗದ ಅಧ್ಯಕ್ಷೆ ಮತ್ತು ಭಾರ್ತಿ ವಕೀಲರ ನಡುವೆ ಕೆಲಕಾಲ ತೀವ್ರ ವಾಗ್ವಾದ ನಡೆದಿದೆ ಎನ್ನಲಾಗಿದೆ. ಆ ಬಳಿಕ ಭಾರ್ತಿ ಖುದ್ದು ಹಾಜರಿಗೆ ವಕೀಲರು ಸೋಮವಾರದವರೆಗಿನ ಕಾಲಾವಕಾಶ ಕೋರಿದ್ದಾರೆ.
ಭಾರ್ತಿ ವಿರುದ್ಧ ಕ್ರಮಕ್ಕೆ ಬಿನ್ನಿ ಆಗ್ರಹ: ಕಾನೂನು ಸಚಿವ ಸೋಮನಾಥ ಭಾರ್ತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಆಪ್ನ ಬಂಡಾಯ ಶಾಸಕ ವಿನೋದ್ ಕುಮಾರ್ ಬಿನ್ನಿ ದೆಹಲಿ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ. ಈ ಸಂಬಂಧ ಆಯುಕ್ತರನ್ನು ಖುದ್ದಾಗಿ ಭೇಟಿಯಾದ ಬಿನ್ನಿ ಅವರು, ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇದೇ ವೇಳೆ ಭಾರ್ತಿ ರಾಜಿನಾಮೆಗೂ ಬಿನ್ನಿ ಆಗ್ರಹಿಸಿದ್ದಾರೆ.
ಚುನಾವಣಾ ಆಯೋಗ ನೋಟಿಸ್: ದೆಹಲಿ ವಿಧಾನಸಭಾ ಚುನಾವಣೆ ವೇಳೆ ಸರ್ಕಾರ ವಿರೋಧಿ ಕರಪತ್ರಗಳನ್ನು ಹಂಚಿದ ಪ್ರಕರಣಕ್ಕೆ ಸಂಬಂಧಿಸಿ ಚುನಾವಣಾ ಆಯೋಗ ಶುಕ್ರವಾರ ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ ಕೇಜ್ರಿವಾಲ್ ಅವರಿಗೆ ಎಚ್ಚರಿಕೆ ನೋಟಿಸ್ ನೀಡಿದೆ. ಭವಿಷ್ಯದಲ್ಲಿ ಈ ರೀತಿಯ ತಪ್ಪು ಮಾಡದಂತೆ ಎಚ್ಚರಿಕೆ ನೀಡಿದೆ.
ವಿಡಿಯೋ ಬಿಡುಗಡೆ ಪೊಲೀಸರ ಅಮಾನತು
ದೆಹಲಿ ಪೊಲೀಸರ ದೌರ್ಜನ್ಯಕ್ಕೆ ಸಾಕ್ಷಿಯಾಗಿ ಆಮ್ ಆದ್ಮಿ ಪಕ್ಷ(ಆಪ್) ಶುಕ್ರವಾರ ಫೇಸ್ಬುಕ್ನಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿದೆ. ಹಣಕ್ಕಾಗಿ ಮೂವರು ಪೊಲೀಸರು ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ ಈ ವಿಡಿಯೋದಲ್ಲಿ ದಾಖಲಾಗಿದೆ. ಈ ವಿಡಿಯೋ ಬಿಡುಗಡೆಯಾಗುತ್ತಿದ್ದಂತೆ ದೆಹಲಿ ಪೊಲೀಸ್ ಇಲಾಖೆ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


