ಟ್ರಾನ್ಸ್‌ಫಾರ್ಮರ್ ಗಲಭೆ ಕೊಲೆಯಲ್ಲಿ ಅಂತ್ಯ

ಗೋಕಾಕ: ವಿದ್ಯುತ್ ಪರಿವರ್ತಕ ವಿಚಾರವಾಗಿ ಗೋಕಾಕ ತಾಲೂಕಿನ ಮಹಾನವಮಿ ಗ್ರಾಮದ ಎರಡು ಗುಂಪುಗಳ ನಡುವೆ ಭಾನುವಾರ ರಾತ್ರಿ ನಡೆದ ಘರ್ಷಣೆ ವ್ಯಕ್ತಿಯೊಬ್ಬನನ್ನು ಬಲಿ ಪಡೆದಿದ್ದು, 9 ಮಂದಿ ಗಾಯಗೊಂಡಿದ್ದಾರೆ.
ಗ್ರಾಮದ ದುಂಡಪ್ಪ ಮಲ್ಲಪ್ಪ ಜಿರತೆ (40) ಹತ್ಯೆಗೀಡಾದಾತ. ಈತನನ್ನು ಕಲ್ಲು ಹೊಡೆದು ಕೊಲೆ ಮಾಡಲಾಗಿದೆ. ಗಾಯಗೊಂಡ 9 ಮಂದಿಯಲ್ಲಿ ಮೂವರ ತಲೆಗೆ ಗಂಭೀರವಾಗಿ ಗಾಯವಾಗಿದೆ. ಇನ್ನಿತರರ ಕೈಕಾಲು ಮುರಿದಿವೆ. ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
ಘಟನೆ ವಿವರ: ಗ್ರಾಮದ ನಾಯಕತ್ವಕ್ಕಾಗಿ ಜಿರತೆ ಮತ್ತು ಮುತಾಳೆ ಕುಟುಂಬಗಳ ನಡುವೆ ಮೊದಲಿನಿಂದಲೂ ರಾಜಕೀಯ ಮೇಲಾಟ ಇತ್ತು. ಈ ಎರಡು ಕುಟುಂಬಗಳಿಗೆ ಒತ್ತಾಸೆಯಾಗಿ ಗ್ರಾಮಸ್ಥರೂ ನಿಂತಿದ್ದರು. ಇದರಿಂದ ಪದೇ ಪದೆ ಸಣ್ಣ ಪುಟ್ಟ ಜಗಳಗಳು ಗ್ರಾಮದಲ್ಲಿ ನಡೆಯುತ್ತಲೇ ಇದ್ದವು.
ಹತ್ಯೆಗೀಡಾದ ದುಂಡಪ್ಪನ ಸಹೋದರ ಬಸಪ್ಪ ತನ್ನ ಹೊಲದಲ್ಲಿರುವ ವಿದ್ಯುತ್ ಪರಿವರ್ತಕ ಸುಟ್ಟಿದ್ದರಿಂದ ವಿದ್ಯುತ್ ತಂತಿಯಿಂದ ನೇರವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡಿದ್ದ. ಅದರಿಂದಲೇ ಹೊಲದಲ್ಲಿನ ಬೆಳೆಗಳಿಗೆ ನೀರು ಹಾಯಿಸುತ್ತಿದ್ದ. ಭಾನುವಾರ ರಾತ್ರಿ ಹೊಲಕ್ಕೆ ಬಂದು ನೋಡಿದರೆ ತಂತಿ ಕಿತ್ತು ಹಾಕಲಾಗಿತ್ತು. ಬಸಪ್ಪ ಮುತಾಳೆ ಕುಟುಂಬದ ಸದಸ್ಯರೇ ಈ ಕೃತ್ಯ ನಡೆಸಿದ್ದಾರೆ ಎಂಬ ಸಂದೇಹದಿಂದ ಬಸಪ್ಪ ಜಿರತೆ, ಮುತಾಳೆ ಕುಟುಂಬದ ಸದಸ್ಯರೊಂದಿಗೆ ವಾಗ್ವಾದ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ.
ಇದರಿಂದ ಕೆರಳಿದ ಬಸಪ್ಪ ಮುತಾಳೆ ಕುಟುಂಬ ಹಾಗೂ ಗ್ರಾಮದ ಇತರ 15 ಮಂದಿ ಮಧ್ಯ ರಾತ್ರಿ ಬಳಿಕ ಜಿರತೆ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಎರಡೂ ಗುಂಪುಗಳ ನಡುವೆ ಪರಸ್ಪರ ಕಲ್ಲು ತೂರಾಟ ನಡೆದಿದೆ. ಕಲ್ಲು ತೂರಾಟದಲ್ಲಿ ಗಂಭೀರ ಗಾಯಗೊಂಡಿದ್ದ ದುಂಡಪ್ಪನನ್ನು ತಕ್ಷಣ ಮುಧೋಳ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಬದುಕಲಿಲ್ಲ. ಈ ಕುರಿತು ಕುಲಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


