ಬಿಜೆಪಿ ಹಿಂದೆ ಬಿದ್ದ ಅಮೆರಿಕ

ನವದೆಹಲಿ: ಬಿಜೆಪಿ ಚಟುವಟಿಕೆ ಮೇಲೆ ಅಮೆರಿಕದ ಬೇಹುಗಾರಿಕೆ ಸಂಸ್ಥೆ ನಾಲ್ಕು ವರ್ಷಗಳಿಂದ ಕಣ್ಣಿಟ್ಟಿತ್ತು!
ಯುಪಿಎ ಸರ್ಕಾರದ ಮೇಲೂ ಕಣ್ಣಿಡಲಾಗಿತ್ತು. ಖುದ್ದು ಅಮೆರಿಕ ಅಧ್ಯಕ್ಷ ಒಬಾಮ ಈ ಆದೇಶ ನೀಡಿದ್ದರು. ಕಾನೂನು ಪ್ರಕಾರ 2010ರಲ್ಲಿ ವಾಷಿಂಗ್ಟನ್ನ ವಿದೇಶಿ ಬೇಹುಗಾರಿಕೆ ನ್ಯಾಯಾಲಯದ ಅನುಮತಿಯನ್ನೂ ಪಡೆಯಲಾಗಿತ್ತು.
ಅಮೆರಿಕದ ರಾಷ್ಟ್ರೀಯ ಭದ್ರತಾ ದಳ (ಎನ್ಎಸ್ಎ) ಮಾಜಿ ಉದ್ಯೋಗಿ ಎಡ್ವರ್ಡ್ ಸ್ನೋಡೆನ್ ಈ ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ವಿದೇಶಿ ಬೇಹುಗಾರಿಕೆ ಸಂಬಂಧ ಎನ್ಎಸ್ಎ ರಹಸ್ಯ ದಾಖಲೆಗಳನ್ನೂ ಸ್ನೋಡೆನ್ ಬಿಡುಗಡೆ ಮಾಡಿದ್ದಾರೆ ಎಂದು ಪತ್ರಿಕೆ ಹೇಳಿದೆ. ಬಿಜೆಪಿ ಸೇರಿ ಆರು ವಿದೇಶಿ ರಾಜಕೀಯ ಪಕ್ಷಗಳ ಕುರಿತು ಎನ್ ಎಸ್ಎ ಕಣ್ಗಾವಲು ಇಟ್ಟಿತ್ತು. ಭಾರತ ಸೇರಿ 193 ರಾಷ್ಟ್ರಗಳ ಸರ್ಕಾರಗಳ ಕಾರ್ಯವೈಖರಿ ಕುರಿತೂ ಕಣ್ಣಿಟ್ಟಿತ್ತು.
ಪಾಕಿಸ್ತಾನದ ಪಾಕಿಸ್ತಾನ ಪೀಪಲ್ಸ್ ಪಾರ್ಟಿ, ಲೆಬನಾನ್ನ ಅಮಾಲ್, ವೆನಿಜುವೆಲಾದ ಬೊಲಿವೆರಿಯನ್ ಕಾಂಟಿನೆಂಟಲ್ ಕೋಆರ್ಡಿನೇಟರ್, ಈಜಿಪ್ಟ್ನ ಮುಸ್ಲಿಂ ಬ್ರದರ್ಹುಡ್ ಮತ್ತು ಈಜಿಪ್ತಿಯನ್ ನ್ಯಾಷನಲ್ ಸಾಲ್ವೇಶನ್ ಫ್ರಂಟ್ ಇವು ಎನ್ಎಸ್ಎ ಬೇಹುಗಾರಿಕೆಗೆ ಗುರಿಯಾಗಿರುವ ಇತರ ಪಕ್ಷಗಳು. ಬೇಹುಗಾರಿಕೆ ವರದಿಯನ್ನು ಅತ್ಯಂತ ರಹಸ್ಯದ ದಾಖಲೆ ಎಂದು ಪರಿಗಣಿಸಲಾಗುತ್ತದೆ. ಅದರ ಪ್ರತಿಯನ್ನು ಅಧ್ಯಕ್ಷ ಬರಾಕ್ ಒಬಾಮ ಮತ್ತು ಉಪಾಧ್ಯಕ್ಷ ಜೊ ಬಿಡೆನ್ ಅವರಿಗೆ ಸಲ್ಲಿಸಲಾಗುತ್ತದೆ.
ವಿಶ್ವ ಬ್ಯಾಂಕ್, ಅಂತಾರಾಷ್ಟ್ರೀಯ ಹಣಕಾಸು ನಿಧಿ, ಐರೋಪ್ಯ ಒಕ್ಕೂಟ, ಅಂತಾರಾಷ್ಟ್ರೀಯ ಅಣುಶಕ್ತಿ ಏಜೆನ್ಸಿ (ಐಎಇಎ) ಮೇಲೂ ಬೇಹುಗಾರಿಕೆ ನಡೆಸಲಾಗುತ್ತದೆ.
ಬ್ರಿಟನ್, ಕೆನಡಾ, ಆಸ್ಟ್ರೇ ಲಿಯಾ ಮತ್ತು ನ್ಯೂಜಿಲೆಂಡ್ಗಳಲ್ಲಿ ಮಾತ್ರ ಅದು ಬೇಹುಗಾರಿಕೆ ನಡೆಸುವುದಿಲ್ಲ. ಅಮೆರಿಕವೂ ಸೇರಿದಂತೆ ಈ ಐದನ್ನು 'ಫೈವ್ ಐ' ಎಂದು ಪರಿಗಣಿಸಲಾಗಿದೆ.
ಪ್ರತಿಕ್ರಿಯೆ ಇಲ್ಲ: ಭಾರತ ಮತ್ತು ಬಿಜೆಪಿ ಮೇಲೆ ಕಣ್ಗಾವಲು ಇಡುವ ಅಗತ್ಯದ ಬಗ್ಗೆ ಪ್ರತಿಕ್ರಿಯಿಸಲು ಎನ್ಎಸ್ಎ ವಕ್ತಾರರು ನಿರಾಕರಿಸಿದ್ದಾರೆ.
ದೇಶದ ಅಧ್ಯಕ್ಷರು, ರಾಷ್ಟ್ರೀಯ ಬೇಹುಗಾರಿಕೆ ನಿರ್ದೇಶಕರು, ಸಚಿವಾಲಯಗಳು ಮತ್ತು ಏಜೆನ್ಸಿಗಳು ರಾಷ್ಟ್ರೀಯ ಬೇಹುಗಾರಿಕೆ ಆದ್ಯತಾ ಚೌಕಟ್ಟಿನ ಅಡಿ ತಮ್ಮ ಅಗತ್ಯಗಳನ್ನು ತಿಳಿಸುತ್ತವೆ. ಅವುಗಳ ಕುರಿತಾಗಿಯಷ್ಟೇ ಬೇಹುಗಾರಿಕೆ ನಡೆಸಲಾಗುತ್ತದೆ.
- ವನೀ ವೀನಸ್, ಎನ್ಎಸ್ಎ ವಕ್ತಾರೆ
ಮೊದಲು ವರದಿಯ ಸತ್ಯಾಸತ್ಯತೆ ಪರಿಶೀಲಿಸುತ್ತೇವೆ. ನಿಜವೇ ಆಗಿದ್ದರೆ ಇದು ಗಂಭೀರ ವಿಚಾರ. ಸಾರ್ವಭೌಮ ರಾಷ್ಟ್ರವೊಂದರ ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಬೇರೊಬ್ಬರು ಮೂಗು ತೂರಿಸುವುದನ್ನು ಸಹಿಸಲಾಗದು. ಭವಿಷ್ಯದಲ್ಲಿ ಇದು ಮರುಕಳಿಸಕೂಡದು. ಸೂಕ್ತ ಪ್ರಾಧಿಕಾರದ ಎದುರು ಪಕ್ಷ ಈ ವಿಚಾರವನ್ನು ಪ್ರಸ್ತಾಪಿಸಲಿದೆ.
-ಅರವಿಂದ ಗುಪ್ತಾ, ಬಿಜೆಪಿ ಐಟಿ ಘಟಕದ ಮುಖ್ಯಸ್ಥ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


