ಪ್ರಧಾನ ಸುದ್ದಿ

ಪೇದೆಗೆ ಮುಳುವಾದ ಕರ್ತವ್ಯ ಪ್ರಜ್ಞೆ

ಪೇದೆಗೆ ಮುಳುವಾದ ಕರ್ತವ್ಯ ಪ್ರಜ್ಞೆ
Published On :

ಬೆಂಗಳೂರು: ಕಳ್ಳನನ್ನು ಅಟ್ಟಿಸಿಕೊಂಡು ಹೋದ  ರಾಜಗೋಪಾಲ ನಗರ ಠಾಣೆ ಪೇದೆ ವಾಲಿಯಪ್ಪ ಮೇಟಿ(28) 30 ಅಡಿ ಎತ್ತರದ ಕಾರ್ಖಾನೆ ಚಾವಣಿಯಿಂದ ಬಿದ್ದು ಗಂಭೀರ ಗಾಯಗೊಂಡಿದ್ದಾರೆ.  ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.  
ಶನಿವಾರ ಬೆಳಗಿನಜಾವ ಪೇದೆಗಳಾದ ವಾಲಿಯಪ್ಪ ಹಾಗೂ ಪ್ರಸನ್ನ ಅಂದ್ರಹಳ್ಳಿ ಮುಖ್ಯರಸ್ತೆ ಕೈಗಾರಿಕಾ ಪ್ರದೇಶದಲ್ಲಿ ಚೀತಾ ಬೈಕ್‌ನಲ್ಲಿ ಗಸ್ತು ನಡೆಸುತ್ತಿದ್ದರು. 3.30ರ ಸುಮಾರಿಗೆ ಭಾರತ್ ಎಂಜಿನಿಯರಿಂಗ್ ಕಾರ್ಖಾನೆಯಲ್ಲಿ ದೀಪ ಉರಿ ಯುತ್ತಿದ್ದು ಒಳಗಿಂದ ಲಘು ಸದ್ದು ಕೇಳಿ ಬರುತ್ತಿತ್ತು. ಆದರೆ, ಕಾರ್ಖಾನೆಗೆ ಬೀಗ ಜಡಿಯಲಾಗಿತ್ತು. ಅನುಮಾನಗೊಂಡು ಪಕ್ಕದ ಕಟ್ಟಡದ ಮೇಲೆ ಹತ್ತಿ ಸದ್ದು ಕೇಳಿಸುತ್ತಿದ್ದ ಕಾರ್ಖಾನೆ ಕಡೆ ವಾಲಿಯಪ್ಪ ಹೋಗುತ್ತಿದ್ದರು. ಈ ವೇಳೆ ಕೆಳಗಿದ್ದ ಪೇದೆ ಪ್ರಸನ್ನ ಹೊಯ್ಸಳ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದರು.
ಹೊರಗೆ ಸಪ್ಪಳ ಕೇಳಿ ಅನುಮಾನಗೊಂಡ ಕಳ್ಳ ಚಾವಣಿಯಿಂದ ಒಳಗೆ ಇಳಿಯಲು ಬಳಸಿದ್ದ ಹಗ್ಗದಿಂದ ಮೇಲೆ ಹತ್ತಿದ. ಅದೇ ಸಮಯಕ್ಕೆ ವಾಲಿಯಪ್ಪ ಕೂಡ ಬಂದಿದ್ದು ಅವರನ್ನು ನೋಡಿದ ಕಳ್ಳ ಓಡಲು ಆರಂಭಿಸಿದ್ದ. ವಾಲಿಯಪ್ಪ ಅಟ್ಟಿಸಿಕೊಂಡು ಹೋಗುತ್ತಿದ್ದ ವೇಳೆ ಸಿಮೆಂಟ್ ಶೀಟ್ ಕುಸಿದು 30 ಅಡಿಗೂ ಹೆಚ್ಚು ಎತ್ತರದಿಂದ ಕಾರ್ಖಾನೆಯೊಳಗೆ ಬಿದ್ದರು.
ಕಾರ್ಖಾನೆ ಬೀಗ ಮುರಿದು ವಾಲಿಯಪ್ಪ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ನಿಮ್ಹಾನ್ಸ್‌ಗೆ ಸ್ಥಳಾಂತರಿಸಲಾಗಿದೆ. ವಾಲಿಯಪ್ಪ ಅವರ ಕಿವಿ ಹಾಗೂ ತಲೆಗೆ ತೀವ್ರ ಪೆಟ್ಟಾಗಿದ್ದು, ವೈದ್ಯರು ಇನ್ನು 48 ಗಂಟೆಗಳ ಕಾಲ ಏನನ್ನೂ ಹೇಳಲಾಗದು ಎಂದು ತಿಳಿಸಿದ್ದಾರೆ.

ಕುಟುಂಬಕ್ಕೊಬ್ಬನೇ ಆಧಾರ
ಕೊಪ್ಪಳ ಜಿಲ್ಲೆ ಯಲಬುರ್ಗ ತಾಲೂಕು ಗಾಣದಾಳು ಗ್ರಾಮದ ವಾಲಿಯಪ್ಪಗೆ 3 ತಿಂಗಳ ಹಿಂದಷ್ಟೇ ಲಕ್ಷ್ಮಮ್ಮ ಜತೆ ವಿವಾಹವಾಗಿತ್ತು. ತಾಯಿ ಹನುಮವ್ವ ಹಾಗೂ ಪತ್ನಿ ಊರಿನಲ್ಲೇ ವಾಸವಿದ್ದು 15 ದಿನಗಳ ಹಿಂದಷ್ಟೇ ಸುಂಕದಕಟ್ಟೆ ಮನೆಗೆ ಬಂದಿದ್ದರು. ಇಬ್ಬರು ಸಹೋದರಿಯರಿಗೆ ಮದುವೆಯಾಗಿದ್ದು ಊರಿನಲ್ಲಿದ್ದಾರೆ. ಒಬ್ಬ ಸಹೋದರ ಊರಿನಲ್ಲಿ ಕೂಲಿ ಮಾಡುತ್ತಿದ್ದು ಮತ್ತೊಬ್ಬ ನಗರದಲ್ಲೇ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದಾರೆ. ವಯಸ್ಸಾಗಿರುವ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ವಾಲಿಯಪ್ಪ ಅವರ ಮೇಲೆ ಇತ್ತು. ಇಡೀ ಕುಟುಂಬದಲ್ಲಿ ಕಷ್ಟಪಟ್ಟು ಓದಿದ್ದ ಅವರು 3 ವರ್ಷಗಳ ಹಿಂದೆ ಪೊಲೀಸ್ ಸೇವೆಗೆ ಸೇರಿದ್ದ. ಆದರೆ ಈ ಘಟನೆಯಿಂದ ಕುಟುಂಬಕ್ಕೆ ಆಕಾಶವೇ ಕಳಚಿ ಬಿದ್ದಂತಾಗಿದೆ ಎಂದು ಮಾವ ಶಿವರಾಜ್ ಹೇಳಿದರು.

ವಾಲಿಯಪ್ಪ ಸಾಹಸ ಮೆಚ್ಚುವಂತದ್ದು. ಚಿಕಿತ್ಸೆಯ ವೆಚ್ಚವನ್ನು ಸಂಪೂರ್ಣವಾಗಿ ಇಲಾಖೆಯೆ ಭರಿಸಲಿದೆ.
-ಸಂದೀಪ್ ಪಾಟೀಲ್, ಡಿಸಿಪಿ ಉತ್ತರ ವಿಭಾಗ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.