ಪ್ರಧಾನ ಸುದ್ದಿ

ಮಾತು ಮುರಿದ ಸರಕಾರ, ರೈತರ ಮೇಲೆ ಲಾಠಿ, ಗುಂಡು ಪ್ರಹಾರ

ಮಾತು ಮುರಿದ ಸರಕಾರ, ರೈತರ ಮೇಲೆ ಲಾಠಿ, ಗುಂಡು ಪ್ರಹಾರ
Published On :

ಕೂಡಗಿ ಉಷ್ಣ ಸ್ಥಾವರ ವಿರುದ್ಧದ ಪ್ರತಿಭಟನೆಯಲ್ಲಿ ಹಿಂಸಾಚಾರ ಹದಿನೈದಕ್ಕೂ ಹೆಚ್ಚು ಮಂದಿಗೆ ತೀವ್ರ ಗಾಯ, ಇಬ್ಬರ ಸ್ಥಿತಿ ಗಂಭೀರ
ಬಸವನಬಾಗೇವಾಡಿ(ಬಿಜಾಪುರ ಜಿಲ್ಲೆ): ಕೂಡಗಿ ಬಳಿ ಸ್ಥಾಪಿಸುತ್ತಿರುವ ಉಷ್ಣ ವಿದ್ಯುತ್ ಸ್ಥಾವರ ಯೋಜನೆ ಕೈಬಿಡುವಂತೆ ಆಗ್ರಹಿಸಿ ರೈತರು, ಗ್ರಾಮಸ್ಥರು ನಡೆಸುತ್ತಿದ್ದ ಪ್ರತಿಭಟನೆ ಶನಿವಾರ ಹಿಂಸಾರೂಪಕ್ಕೆ ತಿರುಗಿದೆ. ಉದ್ರಿಕ್ತರನ್ನು ಚದುರಿಸಲು ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಇದಕ್ಕೂ ಮೊದಲು ನಡೆದ ಕಲ್ಲುತೂರಾಟ, ಲಾಠಿಪ್ರಹಾರದಲ್ಲಿ ಪೊಲೀಸ್ ಅಧಿಕಾರಿಗಳು ಸೇರಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಗೋಲಿಬಾರ್‌ನಲ್ಲಿ ಗಾಯಗೊಂಡ ನಾಲ್ವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಾಹನ ಧ್ವಂಸ: ಪ್ರತಿಭಟನಾಕಾರರು ಎರಡು ಪೊಲೀಸ್ ವಾಹನ ಧ್ವಂಸಗೊಳಿಸಿದ್ದು, ಉಷ್ಣ ವಿದ್ಯುತ್ ಸ್ಥಾವರಕ್ಕೆ ಸೇರಿದ ನಾಲ್ಕು ಟಿಪ್ಪರ್‌ಗೆ ಬೆಂಕಿ ಹಚ್ಚಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಇದ್ದು, ಹಿರಿಯ ಪೊಲೀಸ್ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಕೂಡಗಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಭಾನುವಾರದವರೆಗೆ 144ನೇ ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಘಟನೆ ಹಿನ್ನೆಲೆ: ಕೂಡಗಿ ಉಷ್ಣ ವಿದ್ಯುತ್ ಸ್ಥಾವರಕ್ಕೆ ಮೊದಲಿನಿಂದಲೂ ಸ್ಥಳೀಯರಿಂದ ವಿರೋಧವಿತ್ತು. ಕಳೆದೊಂದು ತಿಂಗಳಿಂದ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ಅಲ್ಲಲ್ಲಿ ಸಭೆ, ಪ್ರತಿಭಟನೆ, ಗುಂಪು ಚರ್ಚೆ ನಡೆಯುತ್ತಿತ್ತು. ಈ ಮಧ್ಯೆ ಆಲಮಟ್ಟಿ ಅಣೆಕಟ್ಟೆಯಿಂದ ಸ್ಥಾವರಕ್ಕೆ ನೀರು ಪೂರೈಕೆ, ಹಾರು ಬೂದಿಯಿಂದ ಪರಿಸರ, ಆರೋಗ್ಯದ ಮೇಲಾಗುವ ಪರಿಣಾಮದಿಂದ ಕಂಗೆಟ್ಟ ರೈತರು, ಸುತ್ತಮುತ್ತಲ ಗ್ರಾಮಸ್ಥರು ಯೋಜನೆ ಬೇಡವೇ ಬೇಡ ಎಂದು ತೀರ್ಮಾನಕ್ಕೆ ಬಂದಿದ್ದರು.
ಇದಕ್ಕೆ ಜನಾಭಿಪ್ರಾಯ ರೂಪಿಸಲು ಸಭೆ, ಪ್ರತಿಭಟನೆ ನಡೆಯುತ್ತಿತ್ತು. ಅದರ ಅಂಗವಾಗಿ ಶನಿವಾರ ಸ್ಥಾವರದ ಬಳಿಯೇ ಕೂಡಗಿ, ಮಸೂತಿ, ಮಲಘಾಣ, ಮುತ್ತಗಿ, ತೆಲಗಿ ಸೇರಿ ಸುತ್ತಮುತ್ತಲ ಗ್ರಾಮಸ್ಥರು ಪ್ರತಿಭಟನಾ ಸಭೆ ನಡೆಸುತ್ತಿದ್ದರು. ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದು, ಕೆಲ ಪ್ರತಿಭಟನಾಕಾರರು ಸ್ಥಾವರದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಹೊರ ಹಾಕಲು, ಸ್ಥಾವರಕ್ಕೆ ನುಗ್ಗಲು ಯತ್ನಿಸಿದಾಗ ಪೊಲೀಸರು ಅಡ್ಡಿಪಡಿಸಿದರು. ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದರು. ಪೊಲೀಸರು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ತಹಬಂದಿಗೆ ತರಲು ಯತ್ನಿಸಿದರಾದರೂ ಸಾಧ್ಯವಾಗಲಿಲ್ಲ. ಬಳಿಕ ಅಶ್ರುವಾಯು ಪ್ರಯೋಗವೂ ನಡೆಯಿತು. ಇದರಿಂದ ಮತ್ತಷ್ಟು ರೊಚ್ಚಿಗೆದ್ದ ಪ್ರತಿಭಟನಾಕಾರರು ಸ್ಥಾವರದ ನಾಲ್ಕು ಟಿಪ್ಪರ್‌ಗೆ ಬೆಂಕಿ ಹಚ್ಚಿದರು. ಪೊಲೀಸ್ ವಾಹನಗಳನ್ನೂ ಧ್ವಂಸಗೊಳಿಸಿದರು. ಒಂದು ಹಂತದಲ್ಲಿ ಪರಿಸ್ಥಿತಿ ಕೈಮೀರುತ್ತಿದ್ದಾಗ ಅನಿವಾರ್ಯವಾಗಿ ಪೊಲೀಸರು ಗುಂಡು ಹಾರಿಸಿದರು. ಇದರಿಂದ ಮುತ್ತಗಿಯ ಚೆನ್ನಪ್ಪ ಸಿಡಿ, ಬಾಬು ಬಡಿಗೇರ, ಮಸೂತಿಯ ಸದಾಶಿವ ಗಣಾಚಾರಿ, ಮಲ್ಲಯ್ಯ ಗಣಾಚಾರಿ ಗಾಯಗೊಂಡರು.

ದಿಕ್ಕಾಪಾಲಾಗಿ ಓಡಿದರು!
ಕಲ್ಲು ತೂರಾಟ, ಉದ್ರಿಕ್ತರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಹಾಗೂ ಗಾಳಿಯಲ್ಲಿ ಗುಂಡು ಹಾರಿಸಿದ್ದರಿಂದ ಸ್ಥಾವರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅನ್ಯ ರಾಜ್ಯದ ಕಾರ್ಮಿಕರು ಆತಂಕಗೊಂಡಿದ್ದಾರೆ. ತಮ್ಮ ಸಾಮಾನು ಸರಂಜಾಮುಗಳೊಂದಿಗೆ ಅಲ್ಲಿಂದ ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ.

ಗೋಲಿಬಾರ್ ಅಲ್ಲ: ಸ್ಪಷ್ಟನೆ
ಪ್ರತಿಭಟನಾ ನಿರತರನ್ನು ಚದುರಿಸಲು ಗೋಲಿಬಾರ್ ಮಾಡಲಾಗಿದೆ ಎನ್ನುವ ವಾದವನ್ನು ಪೊಲೀಸರು ನಿರಾಕರಿಸಿದ್ದಾರೆ. ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ ಅಷ್ಟೆ. ಅದು ಹಿಂತಿರುಗಿ (ರಿಫ್ಲೆಕ್ಟ್) ಬಂದು ನಾಲ್ವರು ರೈತರು ಗಾಯಗೊಂಡಿದ್ದಾರೆ ಎಂದು ಉತ್ತರ ವಲಯ ಐಜಿಪಿ ಭಾಸ್ಕರ್ ರಾವ್ ಸ್ಪಷ್ಟಪಡಿಸಿದ್ದಾರೆ.

ಗೋಲಿಬಾರೇ: ರೈತರ ಆರೋಪ
ಗೋಲಿಬಾರ್ ನಡೆಸಿಲ್ಲ ಎಂಬುದನ್ನು ರೈತರು ವಿರೋಧಿಸಿದ್ದಾರೆ. ನೇರವಾಗಿ ಪ್ರತಿಭಟನಾಕಾರರ ಮೇಲೆಯೇ ಗುಂಡು ಹಾರಿಸಿದ್ದಾರೆ ಎಂಬುದು ಗ್ರಾಮಸ್ಥರ ಆರೋಪ. ಗಾಳಿಯಲ್ಲಿ ಗುಂಡು ಹಾರಿಸಿದ್ದರೆ ಯಾರೂ ಗಂಭೀರ ಗಾಯಗೊಳ್ಳುತ್ತಿರಲಿಲ್ಲ. ಗಾಯಗೊಂಡ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.

  ಜಾಗ ಖಾಲಿ ಮಾಡಿ
ಉತ್ತರ ಕರ್ನಾಟಕ ಜನ ಹಾಗೂ ಪರಿಸರ ರಕ್ಷಣಾ ಸಮಿತಿ ನೇತೃತ್ವದಲ್ಲಿ ಶುಕ್ರವಾರ ಸಭೆ ಸೇರಿ ಕೂಡಗಿ, ತೆಲಗಿ ಸುತ್ತಮುತ್ತಲಿನ ಗ್ರಾಮಸ್ಥರು ಶನಿವಾರ ಸ್ಥಾವರದ ಎದುರು ಪ್ರತಿಭಟನೆ ನಡೆಸುವ ಂತೆ ನಿರ್ಧರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಾವರ ಕಾಮಗಾರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರಿಗೆ ಅಲ್ಲಿಂದ ತೆರಳುವಂತೆ ಸೂಚಿಸಲಾಗಿತ್ತೆನ್ನಲಾಗಿದೆ. ಪರಿಸ್ಥಿತಿ ಅರಿತ ಪೊಲೀಸ್‌ರೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಏರ್ಪಡಿಸಲಾಗಿತ್ತು.

ಆಸ್ಪತ್ರೆಗೆ ದಾಖಲು
ಗಾಯಗೊಂಡವರನ್ನು ಚಿಕಿತ್ಸೆಗಾಗಿ ಬಿಜಾಪುರ, ತೆಲಗಿ ಆಸ್ಪತ್ರೆಗೆ  ಸೇರಿಸಲಾಗಿದೆ. ಗಾಯಗೊಂಡಿದ್ದ ಸಿಪಿಐ ನಂದರೆಡ್ಡಿ, ನಾಲ್ವರು ಪೊಲೀಸರನ್ನು ಬಸವನಬಾಗೇವಾಡಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಸರ್ಕಾರದಿಂದ ವಚನಭಂಗ
ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ರೈತರ ಮೇಲೆ ಲಾಠಿ ಪ್ರಹಾರ ನಡೆಸಿದೆ.
ಕಬ್ಬಿಗೆ ಹೆಚ್ಚಿನ ಬೆಲೆ ಆಗ್ರಹಿಸಿ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ರೈತ ವಿಠಲ ಅರಬಾವಿ ಆತ್ಮಹತ್ಯೆ ಮಾಡಿಕೊಂಡಾಗ, 'ನಮ್ಮ ಸರ್ಕಾರ ರೈತರ ಮೇಲೆ ಗುಂಡು ಹಾರಿಸಲ್ಲ. ರೈತರ ಮೇಲೆ ಲಾಠಿ ಪ್ರಹಾರ ನಡೆಸದೇ ಇರುವಂತೆ ಪೊಲೀಸರಿಗೆ ಆದೇಶ ನೀಡಿದ್ದೇವೆ' ಎಂದು ಸಿಎಂ ಸದನದಲ್ಲಿ ಘೋಷಿಸಿದ್ದರು. ಆದರೆ ಇದಾಗಿ ಏಳು ತಿಂಗಳು ಕಳೆಯುವಷ್ಟರಲ್ಲೇ ಪೊಲೀಸರು ಬಿಜಾಪುರದಲ್ಲಿ ಲಾಠಿ ಬೀಸಿದ್ದಾರೆ. ಒಬ್ಬ ರೈತನನ್ನು ನಾಲ್ಕಾರು ಪೊಲೀಸರು ಹಿಡಿದು ಲಾಠಿಯಿಂದ ಬಾರಿಸಿದ್ದಾರೆ.
ಈ ಮೂಲಕ ಸಿಎಂ ನೀಡಿದ್ದ ಭರವಸೆಯನ್ನು ಪೊಲೀಸರು ಮುರಿದಿದ್ದಾರೆ. ಬೆಳಗಾವಿ ಅಧಿವೇಶನದ ನಂತರವೂ ಕಬ್ಬು ಸಮಸ್ಯೆ ಇನ್ನೂ ಜೀವಂತವಾಗಿದೆ. ಪ್ರತಿಭಟನೆಯೂ ನಡೆಯುತ್ತಿದೆ. ಈ ಮಧ್ಯೆ ಬಿಜಾಪುರದಲ್ಲಿ ರೈತರು ಹಾಗೂ ನಾಗರಿಕರ ಮೇಲೆ ಲಾಠಿ ಬೀಸಿ ಅಶ್ರುವಾಯು ಪ್ರಯೋಗಿಸಿರುವುದರಿಂದ ಸರ್ಕಾರದ ಮಾತು ಮುರಿದುಬಿದ್ದಂತಾಗಿದೆ. ಮಾತ್ರವಲ್ಲ ಅಧಿವೇಶನ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಆರೋಪ ಮಾಡುವುದಕ್ಕೆ ಪ್ರತಿಪಕ್ಷಗಳಿಗೆ ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ.

ಕೂಡಗಿ ಸ್ಥಾವರ ವಿರುದ್ಧ ಪ್ರತಿಭಟನೆ ನಡೆಸಿದ ಕೆಲ ಹೊತ್ತಿನಲ್ಲೇ ಜನಪ್ರತಿನಿಧಿಗಳನ್ನು ಸಂಪರ್ಕಿಸಿದ್ದೇನೆ. ಹಿಂದೆಯೇ ಆರಂಭವಾದ ಸ್ಥಾವರ ಈಗ ಕಾರ್ಯಾರಂಭದ ಹಂತಕ್ಕೆ ಬಂದಿದೆ. ಸ್ಥಾವರದಿಂದ ಸ್ಥಳೀಯರಿಗೇ ಅನುಕೂಲ. ವಿದ್ಯುತ್‌ನಲ್ಲಿ ಹೆಚ್ಚಿನ ಪಾಲು ರೈತರಿಗೆ ದೊರೆಯಲಿದೆ. ಪ್ರತಿಭಟನೆ ಕೈಬಿಡಿ. ಶಾಂತಿ ಕಾಪಾಡಿ.
-ಡಿ.ಕೆ.ಶಿವಕುಮಾರ್, ಇಂಧನ ಸಚಿವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.