ಪ್ರಧಾನ ಸುದ್ದಿ

ಜನರ ನೋವಿನ ಸೌಧದ ಮೇಲೆ ಸ್ಥಾವರ ಸ್ಥಾಪನೆ

ಜನರ ನೋವಿನ ಸೌಧದ ಮೇಲೆ ಸ್ಥಾವರ ಸ್ಥಾಪನೆ
Published On :

ಜನರ ನೋವಿನ ಸೌಧದ ಮೇಲೆ ಸ್ಥಾವರ ಸ್ಥಾಪನೆ, ನೆಲ ಕಸಿದರು, ಕೆಲಸ ಕೊಡುವುದಾಗಿ ಹೇಳಿ ಆಕಾಶ ತೋರಿದರು, ಜೀವನಕ್ಕೆ ಸಿಗದ ಬೆಳಕು ಮನೆಗೆ ಸಿಕ್ಕರೆ ಯಾರಿಗೆ ಆದೀತು ಲಾಭ? ಹೋಗಲಿ ಕರೆಂಟ್ ಕೊಟ್ಟರೇ, ಆದೂ ಇಲ್ಲ, ಈಗಲೂ ಕತ್ತಲೆಯೇ!

ಜನರ ಭೂಮಿ, ಆಸ್ತಿ, ಪರಿಸರ ಕಾಪಾಡಲೇಬೇಕಾದ ಸರ್ಕಾರವೇ ಪೊಲೀಸ್, ಜಿಲ್ಲಾಡಳಿತ, ಕೊನೆಗೆ ನ್ಯಾಯಾಂಗವನ್ನೂ ಬಳಸಿಕೊಂಡು, ಪ್ರಜೆಗಳ ಮನೆ ಮಠ-ಆಸ್ತಿ ನಾಶ ಮಾಡಿ, ಫಲವತ್ತಾದ ಕೃಷಿ ಭೂಮಿ ಕಿತ್ತುಕೊಂಡು ಖಾಸಗಿ ಕಂಪನಿಗೆ ನೀಡಿದ ಅನ್ಯಾಯದ ಕತೆ ಇವು.

ಜೈತಾಪುರ ಅಣು ವಿದ್ಯುತ್ ಯೋಜನೆ
ನಾಗರಿಕರ ಆಕ್ರೋಶ, ತೀವ್ರ ಪ್ರತಿಭಟನೆಗಳನ್ನು ಕಂಡ ಮತ್ತೊಂದು ಯೋಜನೆಯೆಂದರೆ ಜೈತಾಪುರ ಅಣು ವಿದ್ಯುತ್ ಯೋಜನೆ. ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಮದ್ಬಾನ್ ಗ್ರಾಮದಲ್ಲಿ 9900 ಮೆ.ವ್ಯಾ.ನ ಈ ಸ್ಥಾವರ ಆರಂಭಿಸಲು ಯೋಜಿಸಲಾಗಿತ್ತು. ಇದಕ್ಕಾಗಿ ಅನೇಕರ ಭೂಮಿಯನ್ನು ಒತ್ತಾಯಪೂರ್ವಕವಾಗಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಭೂಮಿಗೆ ಪ್ರತಿಯಾಗಿ ಪರಿಹಾರ ಚೆಕ್ ವಿತರಿಸಲೆಂದು 2009ರ ಡಿಸೆಂಬರ್, 2010ರ ಜನವರಿಯಲ್ಲಿ ಸರ್ಕಾರಿ ಅಧಿಕಾರಿಗಳು ಮದ್ಬಾನ್ಗೆ ಭೇಟಿ ನೀಡಿದ್ದರು. ಅದಾಗಲೇ ಗ್ರಾಮಸ್ಥರ ಸಹನೆಯ ಕಟ್ಟೆ ಒಡೆದಿತ್ತು. ಚೆಕ್ ಸ್ವೀಕರಿಸಲು ಯಾರೂ ಸುತಾರಾಂ ಒಪ್ಪಲಿಲ್ಲ. ಅಧಿಕಾರಿಗಳ ವಿರುದ್ಧ ಕಪ್ಪುಬಾವುಟ ಪ್ರದರ್ಶಿಸಿದರು. ಗಲಾಟೆ ಜೋರಾಯಿತು. 72 ಮಂದಿಯನ್ನು ಬಂಧಿಸಲಾಯಿತು. ಒತ್ತಾಯಪೂರ್ವಕ ಭೂಸ್ವಾಧೀನ, ಯೋಜನೆಯಿಂದ ಪರಿಸರ ಮತ್ತು ಜೀವವೈವಿಧ್ಯದ ಮೇಲಾಗುವ ದುಷ್ಪರಿಣಾಮ ಮತ್ತಿತರ ವಿಚಾರಗಳನ್ನೆತ್ತಿ ಪ್ರತಿಭಟನೆ ತೀವ್ರಗೊಳಿಸಲಾಯಿತು. 2010ರ ಡಿ.3ರಂದು 1500 ಮಂದಿಯನ್ನು ಬಂಧಿಸಲಾಯಿತು. 2011ರ ಏ. 18ರಂದು ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ, ಪೊಲೀಸರು ನಡೆಸಿದ ಗೋಲಿಬಾರ್ಗೆ ಒಬ್ಬ ವ್ಯಕ್ತಿ ಮೃತಪಟ್ಟು, 8 ಮಂದಿ ಗಾಯಗೊಂಡರು.

ಕೂಡಂಕುಳಂ ಅಣುವಿದ್ಯುತ್ ಯೋಜನೆ
ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ವಿವಾದಿತ ಯೋಜನೆಯಿದು. ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಕೂಡಂಕುಳಂನಲ್ಲಿ ನಿರ್ಮಿಸಲಾದ ರಷ್ಯಾ ಬೆಂಬಲಿತ ಅಣು ವಿದ್ಯುತ್ ಸ್ಥಾವರ. ಇದು ವಿಶ್ವದಲ್ಲೇ ಅತ್ಯಂತ ಸುರಕ್ಷಿತ ಸ್ಥಾವರ ಎಂದು ಸರ್ಕಾರ, ತಜ್ಞರು ಎಷ್ಟೇ ಅವಲತ್ತುಕೊಂಡರೂ, 'ಅಣು ದುರಂತ'ದ ಭೀತಿ ಗ್ರಾಮಸ್ಥರ ತೀವ್ರ ಪ್ರತಿಭಟನೆಗೆ ಕಾರಣವಾಯಿತು. ಒಂದು ವೇಳೆ ದುರಂತ ಸಂಭವಿಸಿಬಿಟ್ಟರೆ ಸ್ಥಳೀಯರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳಿಸುವುದೂ ಅಸಾಧ್ಯ ಎನ್ನುವುದು ಪ್ರತಿಭಟನಾಕಾರರ ವಾದವಾಗಿತ್ತು. 2011ರಲ್ಲೇ ಆರಂಭವಾದ ವಿವಾದ ಈಗಲೂ ಆಗೊಮ್ಮೆ ಈಗೊಮ್ಮೆ ಭುಗಿಲೇಳುತ್ತಿದೆ. 2012ರ ಮಾರ್ಚ್ನಲ್ಲಿ ಕೂಡಂಕುಳಂನ ಒಂದು ರಿಯಾಕ್ಟರ್ನಲ್ಲಿ ಕೆಲಸ ಆರಂಭವಾಗುತ್ತಿದ್ದಂತೆ ಅದನ್ನು ವಿರೋಧಿಸಿ ತೀವ್ರ ಪ್ರತಿಭಟನೆ ನಡೆಯಿತು. 200ಕ್ಕೂ ಅಧಿಕ ಮಂದಿ ಬಂಧನಕ್ಕೊಳಗಾದರು. ಆ ನಂತರವೂ ಉಪವಾಸ ಸತ್ಯಾಗ್ರಹ, ರ್ಯಾಲಿಗಳು, ಮೀನುಗಾರಿಕೆ ಬಂದ್, ಸಮುದ್ರಕ್ಕಿಳಿದು ಧರಣಿ ಹೀಗೆ ನಾನಾ ರೀತಿಯಲ್ಲಿ ಪ್ರತಿಭಟನೆ ನಡೆದವು. ಪ್ರತಿಭಟನಾಕಾರರ ವಿರುದ್ಧ ಈವರೆಗೆ ದೇಶದ್ರೋಹದ 20 ಪ್ರಕರಣಗಳು ಸೇರಿದಂತೆ 325ಕ್ಕೂ ಅಧಿಕ ಕೇಸುಗಳು ದಾಖಲಾಗಿವೆ.


ರೈತರ ಕೃಷಿ ಭೂಮಿ ಕಿತ್ತು ಖಾಸಗಿ ಕಂಪನಿಗೆ ನೀಡಿದ ಸರ್ಕಾರ!
ಉಡುಪಿ: ಜನರ ಭೂಮಿ, ಆಸ್ತಿ, ಪರಿಸರ ಕಾಪಾಡಲೇಬೇಕಾದ ಸರ್ಕಾರವೇ ಪೊಲೀಸ್, ಜಿಲ್ಲಾಡಳಿತ, ಕೊನೆಗೆ ನ್ಯಾಯಾಂಗವನ್ನೂ ಬಳಸಿಕೊಂಡು, ಪ್ರಜೆಗಳ ಮನೆ ಮಠ-ಆಸ್ತಿ ನಾಶ ಮಾಡಿ, ಫಲವತ್ತಾದ ಕೃಷಿ ಭೂಮಿ ಕಿತ್ತುಕೊಂಡು ಖಾಸಗಿ ಕಂಪನಿಗೆ ನೀಡಿದ ಅನ್ಯಾಯದ ಕತೆ ಇದು. ಜಗತ್ತಿನ ಸೂಕ್ಷ ಜೀವವೈವಿಧ್ಯ ವಲಯಗಳಲ್ಲೊಂದಾಗಿರುವ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿರುವ ಉಡುಪಿ ಜಿಲ್ಲೆಯಲ್ಲಿ 2008ರಲ್ಲಿ ನಾಗಾರ್ಜುನ ಕಂಪನಿಯ ಕಲ್ಲಿದ್ದಲು ಆಧಾರಿತ ಉಷ್ಣವಿದ್ಯುತ್ ಸ್ಥಾವರ ನೆಲೆಯೂರಿತು. 2012ರಲ್ಲಿ ಲ್ಯಾಂಕೋ ಕಂಪನಿ ಸಹಭಾಗಿತ್ವದಲ್ಲಿ ಉಡುಪಿ ಪವರ್ ಕಾರ್ಪೇರೇಶನ್ ಲಿಮಿಟೆಡ್ (ಯುಪಿಸಿಎಲ್) ಹೆಸರಿನಲ್ಲಿ ಈ ಸ್ಥಾವರ 1200 ಮೆ.ವ್ಯಾ. ವಿದ್ಯುತ್ ಉತ್ಪಾದಿಸಲಾರಂಭಿಸಿತು.
ಖಾಸಗಿ ಒಡೆತನಕ್ಕೆ ಸೇರಿದ ಈ ಸ್ಥಾವರಕ್ಕಾಗಿ ರಾಜ್ಯ ಸರ್ಕಾರ ತನ್ನ ಸ್ವಾಮ್ಯದ ಕೆಐಎಡಿಬಿ ಮೂಲಕ ಎಲ್ಲೂರು, ತೆಂಕ, ಬಡಾ, ಸಾಂತೂರು ಗ್ರಾಮಗಳ ಫಲವತ್ತಾದ ಕೃಷಿ, ಹಸಿರು ಕಾಡು, 2000ಕ್ಕೂ ಅಧಿಕ ಕುಟುಂಬಗಳ 1350 ಎಕ್ರೆ ಭೂಮಿ ಬಲವಂತವಾಗಿ ವಶಪಡಿಸಿಕೊಂಡಿತು. ಆರಂಭದಲ್ಲಿ ನಂದಿಕೂರು ಜನಜಾಗೃತಿ ಸಮಿತಿ ನೇತೃತ್ವದಲ್ಲಿ ಉಗ್ರ ಹೋರಾಟವೇನೋ ನಡೆಯಿತು. ಆಗ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರ ಅವಧಿಯಲ್ಲೇ ಪೊಲೀಸರು ಹೋರಾಟದ ನಾಯಕರ ಮೇಲೆ ಹತ್ತಿಪ್ಪತ್ತಕ್ಕೂ ಹೆಚ್ಚು ಕೇಸು ದಾಖಲಿಸಿದರು. ಪರಿಣಾಮ ಅವರು ಹೋರಾಟದಿಂದ ಹಿಂದೆ ಸರಿದರು. ನಂತರ ಹೋರಾಟಕ್ಕೆ ಅನೇಕ ಮಂದಿ ಅನಭಿಷಿಕ್ತ ನಾಯಕರೇನೋ ಹುಟ್ಟಿದರು. ಖುದ್ದು ಸರ್ಕಾರವೇ ಈ ಸ್ಥಾವರದ ಪರವಾಗಿದ್ದರಿಂದ, ತೀವ್ರಗಾಮಿ ಹೋರಾಟಕ್ಕೆ ಜನರು ಸಿದ್ಧರಿಲ್ಲದ್ದರಿಂದ ಸ್ಥಾವರ ಸ್ಥಾಪನೆಯಾಗಿಯೇ ಬಿಟ್ಟಿತು.


ಸಮಸ್ಯೆ ನೂರಾರು
ಸ್ಥಾವರದಿಂದ ಹೊರಬರುವ ವಿಷ ಬೂದಿಯಿಂದಾಗಿ ಈ 4 ಗ್ರಾಮಗಳು ಮಾತ್ರವಲ್ಲ, ಸುತ್ತಮುತ್ತಲ ಹತ್ತಾರು ಗ್ರಾಮಗಳ ಸಾವಿರಾರು ಮಂದಿ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ, ಇಲ್ಲಿ ಬೆಳೆಯುವ ಮಲ್ಲಿಗೆ, ಬಾಳೆ, ತೆಂಗು, ಕಂಗು ಇತ್ಯಾದಿಗಳಲ್ಲಿ ಫಲವಂತಿಕೆ ನಾಶವಾಗಿ ತೀವ್ರ ನಷ್ಟ ಅನುಭವಿಸುತ್ತಿದ್ದಾರೆ. ಪಶ್ಚಿಮಘಟ್ಟದ ಜೀವವೈವಿಧ್ಯವೇ ಅಸಮತೋಲನಕ್ಕೊಳಗಾಗುತ್ತಿದೆ, ಮುಂದಿನ ದಿನಗಳು ಇನ್ನಷ್ಟು ಘೋರವಾಗಲಿದೆ ಎನ್ನುವುದಕ್ಕೆ ಈಗಾಗಲೇ ಪುರಾವೆಗಳು ಸಿಕ್ಕಿವೆ.



ಉಷ್ಣ ವಿದ್ಯುತ್ ಸ್ಥಾವರಕ್ಕೆ ಫಲವತ್ತಾದ ಭೂಮಿ ಬಲಿಯಾಯ್ತು
ಗುಲ್ಬರ್ಗ: ರಾಯಚೂರಿನಂತೆ ಗುಲ್ಬರ್ಗದಲ್ಲೂ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಗೆ ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿದ್ದಾಗ ರೈತರ ವಿರೋಧದ ನಡುವೆಯೇ 2008- 09ರಲ್ಲಿ ಫಲವತ್ತಾದ ಕೃಷಿ ಭೂಮಿ ವಶಪಡಿಸಿಕೊಳ್ಳಲಾಗಿತ್ತು. ಆದರೆ, ಈವರೆಗೆ ಯಾವುದೇ ಯೋಜನೆ ಕಾರ್ಯಾರಂಭವಾಗಿಲ್ಲ. 1,320 ಮೆ.ವ್ಯಾ. ವಿದ್ಯುತ್ ಉತ್ಪಾದಿಸುವ ಈ ಯೋಜನೆಗೆ ಒಟ್ಟು 1,516 ಎಕರೆಯಷ್ಟು ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಇದಕ್ಕೆ ತೊಗರಿ ಕಣಜದ ರೈತರಿಂದ ಸಾಕಷ್ಟು ವಿರೋಧ ವ್ಯಕ್ತವಾದರೂ ಅಂತಿಮವಾಗಿ ಗೆದ್ದದ್ದು ಸರ್ಕಾರವೆ.
ಯೋಜನೆ ವಿರೋಧಿಸಿ ಹೋರಾಟಕ್ಕಿಳಿದ 40 ಕ್ಕೂ ಹೆಚ್ಚು ರೈತರ ಮೇಲೆ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಕೊಲೆ ಯತ್ನ ಸೇರಿದಂತೆ ಐಪಿಸಿ ಕಲಂ 307, 332, 337, 353, 427, 504, 143, 147, 327 ಕಲಂ ಬಳಸಿ ಪ್ರಕರಣ ದಾಖಲಿಸಿ ಜೈಲಿಗಟ್ಟಲಾಗಿತ್ತು. ಇದರಿಂದ ರೈತರ ಹೋರಾಟಕ್ಕೆ ಹಿನ್ನಡೆಯಾಗಿತ್ತು. ಬಳಿಕ ಪ್ರತಿ ಎಕರೆಗೆ 9 ಲಕ್ಷ ನೀಡಿ ಸರ್ಕಾರ ಬಲವಂತವಾಗಿ ಭೂಮಿ ಕಸಿದುಕೊಳ್ಳುವಲ್ಲಿ ಸರ್ಕಾರ ಯಶಸ್ವಿಯಾಯಿತು. ಇಷ್ಟಾದರೂ ಈವರೆಗೂ ಇಲ್ಲಿ ಇನ್ನೂ ಸ್ಥಾವರ ಯೋಜನೆ ಕೈಗೂಡಿಲ್ಲ. ಕರ್ನಾಟಕ ಪವರ್ ಕಾರ್ಪೋರೇಶಷನ್ಗೆ ಈ ಭೂಮಿ ನೀಡಲಾಗಿದ್ದು ಇಲ್ಲಿ ಬರುವ ದಿನಗಳಲ್ಲಿ ಸ್ಥಾವರ ತಲೆ ಎತ್ತುವುದಂತು ಖಚಿತ.


ಈ ಯೋಜನೆ ವಿರುದ್ಧ ಹೋರಾಟ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದರು. ನಂತರ ರೈತರು ಹೆಚ್ಚಿನ ಬೆಲೆಗೆ ತಮ್ಮ ಜಮೀನು ನೀಡಲು ಮುಂದಾದರು. ಜೈಲಿನಿಂದ ಹೊರಬರುವಷ್ಟರಲ್ಲಿ ಎಲ್ಲವೂ ಮುಗಿದಿತ್ತು. ಹೋರಾಟ ಮಾಡಿದ ಹಲವರು ಇಂದಿಗೂ ಕೋರ್ಟ್ ಅಲೆಯುವಂತಾಗಿದೆ.
ಟಿ ಅರುಣ ಪಾಟೀಲ್, ಜೈಕರವೇ ಅಧ್ಯಕ್ಷ, ಗುಲ್ಬರ್ಗ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.