ನಾಳೆ ಓಡಲಿದೆ ಡೀವಿ ಎಕ್ಸ್ಪ್ರೆಸ್

-ಚೊಚ್ಚಲ ಮುಂಗಡ ಪತ್ರಕ್ಕೆ ಸಜ್ಜಾಗಿದೆ ಮೋದಿ ಸರ್ಕಾರ
-ಇಂದಿನಿಂದ ಅಧಿವೇಶನ ಶುರು
ನವದೆಹಲಿ: 'ಅಚ್ಛೇ ದಿನ್ ಆನೇ ವಾಲೆ ಹೆ' ಎಂದು ಹೇಳಿ ಅಧಿಕಾರದ ಚುಕ್ಕಾಣಿ ಹಿಡಿದ ಮೋದಿ ಸರ್ಕಾರ ಚೊಚ್ಚಲ ಬಜೆಟ್ ಅಧಿವೇಶನಕ್ಕೆ ಸಜ್ಜಾಗಿದೆ. ಸೋಮವಾರ ಅಧಿವೇಶನ ಆರಂಭವಾಗಲಿದ್ದು, ಒಂದು ತಿಂಗಳ ಕಾಲ (ಆ.14ರವರೆಗೆ) ನಡೆಯಲಿದೆ. ಇದೇ ವೇಳೆ ಪ್ರತಿಪಕ್ಷಗಳು ಬೆಲೆಯೇರಿಕೆ, ರೇಲ್ವೆ ಪ್ರಯಾಣ ದರ ಹೆಚ್ಚಳ, ಕೇಂದ್ರ ಸಚಿವ ನಿಹಾಲ್ಚಂದ್ ವಿವಾದ, ಗೋಪಾಲ ಸುಬ್ರಮಣಿಯಮ್ ನೇಮಕ ವಿವಾದಗಳನ್ನೇ ಅಸ್ತ್ರವಾಗಿಸಿಕೊಂಡು ಕೇಂದ್ರ ಸರ್ಕಾರದ ವಿರುದ್ಧ ದಾಳಿಗೆ ಸನ್ನದ್ಧವಾಗಿವೆ.
ಜು.8ರಂದು ಸಚಿವ ಸದಾನಂದ ಗೌಡ ರೇಲ್ವೆ ಬಜೆಟ್ ಮಂಡಿಸಲಿದ್ದಾರೆ. 9ರಂದು ಆರ್ಥಿಕ ಸಮೀಕ್ಷೆ, 10ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದೆ. ವಿಶೇಷವೆಂದರೆ, ಅಧಿವೇಶನದ ಮೊದಲ ದಿನದ ಆರಂಭದಲ್ಲೇ ಸಂಸತ್ನ ಎರಡೂ ಸದನಗಳಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಇರಾಕ್ನಲ್ಲಿನ ಭಾರತೀಯರ ಪರಿಸ್ಥಿತಿ ಬಗ್ಗೆ ಹೇಳಿಕೆ ನೀಡಲಿದ್ದಾರೆ.
ಪ್ರತಿಪಕ್ಷ ಸ್ಥಾನ: ಚುನಾವಣೆಯಲ್ಲಿ ಕೇವಲ 44 ಸೀಟುಗಳನ್ನಷ್ಟೇ ಗಳಿಸಿದ ಕಾಂಗ್ರೆಸ್ಗೆ ಲೋಕಸಭೆ ಪ್ರತಿಪಕ್ಷ ಸ್ಥಾನ ದೊರಕದೇ ಹೋದಲ್ಲಿ, ಕಾಂಗ್ರೆಸ್ ಮತ್ತು ಸರ್ಕಾರದ ನಡುವೆ ಭಾರಿ ತಿಕ್ಕಾಟ ಉಂಟಾಗುವ ಸಾಧ್ಯತೆಯಿದೆ.
ಜೇಟ್ಲಿಯಿಂದ ಜನ ನಿರೀಕ್ಷಿಸುವುದೇನು?
ಈ ಬಾರಿಯ ಬಜೆಟ್ ಬಗ್ಗೆ ದೇಶದ ಜನ ಅಗಾಧ ನಿರೀಕ್ಷೆಯನ್ನೇ ಇಟ್ಟುಕೊಂಡಿದ್ದಾರೆ. ಇದಕ್ಕೆ ಕಾರಣ 'ಒಳ್ಳೆಯ ದಿನಗಳು ಬರಲಿವೆ' ಎನ್ನುತ್ತಾ ಅಧಿಕಾರಕ್ಕೆ ಬಂದಿರುವ ಮೋದಿ ಸರ್ಕಾರ ತನ್ನ ಆಶ್ವಾಸನೆಗಳನ್ನು ಈಡೇರಿಸಲಿದೆ ಎಂಬ ವಿಶ್ವಾಸ. ಒಟ್ಟಾರೆ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಚೊಚ್ಚಲ ಬಜೆಟ್ ಬಗ್ಗೆ ಜನತೆಯ ನಿರೀಕ್ಷೆಯೇನು?
ಡಿವಿಎಸ್ ಬಜೆಟ್: ನಿರೀಕ್ಷೆಗಳೇನು?
ಮೊತ್ತಮೊದಲ ಬಾರಿಗೆ ರೇಲ್ವೆ ಸಚಿವರಾಗಿ ನೇಮಕಗೊಂಡಿರುವ ಡಿ.ವಿ. ಸದಾನಂದ ಗೌಡ ಅವರು ಜು.8ರಂದು ಚೊಚ್ಚಲ ಬಜೆಟ್ ಮಂಡಿಸಲಿದ್ದಾರೆ. ರೇಲ್ವೆ ಇಲಾಖೆಯಲ್ಲಿ ಅವರು ಯಾವ್ಯಾವ ಬದಲಾವಣೆ ತರಬಹುದು, ಪ್ರಯಾಣಿಕರ ಅನುಕೂಲಕ್ಕೆ ಏನೇನು ಯೋಜನೆ ರೂಪಿಸಬಹುದು ಎಂಬ ಬಗ್ಗೆ ಒಂದಿಷ್ಟು.
ಪ್ರಚಾರದ ವೇಳೆ ಮೋದಿ ಭರವಸೆ ನೀಡಿದಂತೆ ರೇಲ್ವೆ ಯೋಜನೆಗಳ ಜಾರಿಗೆ ಸಚಿವ ಸದಾನಂದಗೌಡ 300 ಕೋಟಿ ಮೂಲಧನ ಮೀಸಲಿಡುವ ಸಾಧ್ಯತೆ.
ಬುಲೆಟ್ ಟ್ರೈನ್ ಪರಿಕಲ್ಪನೆಗೆ ಒತ್ತು. ಹೈಸ್ಪೀಡ್ ರೈಲ್ ಲೈನ್ ನಿರ್ಮಾಣಕ್ಕೆ ಆದ್ಯತೆ
ಸೌರ ವಿದ್ಯುತ್ ಮೂಲಕ ಸ್ವಚ್ಛ ಶಕ್ತಿ ಯೋಜನೆ. ರೇಲ್ವೆ ಪ್ಲಾಟ್ಫಾರಂಗಳು, ಕಾಲೊನಿ ಹಾಗೂ ಇತರೆ ಭೂಮಿಯಲ್ಲಿ ಸೌರಫಲಕ ಅಳವಡಿಸಿ, ಸೌರ ವಿದ್ಯುತ್ ಉತ್ಪಾದನೆ
ಇಂಧನ ವೆಚ್ಚ ತಗ್ಗಿಸುವ ಉದ್ದೇಶದಿಂದ ಲೋಕೋಮೋಟಿವ್ಗಳಲ್ಲಿ ದ್ರವೀಕೃತ ನೈಸರ್ಗಿಕ ಅನಿಲ ಮತ್ತು ಎಥನಾಲ್ ಮಿಶ್ರಿತ ಡೀಸೆಲ್ ಬಳಕೆ ಬಗ್ಗೆ ಘೋಷಿಸುವ ಸಾಧ್ಯತೆ
ಬೆಂಗಳೂರು ರಾಜಧಾನಿ ಎಕ್ಸ್ಪ್ರೆಸ್ನಲ್ಲಿ ಬಳಸಿ ಬಿಸಾಕುವಂತಹ ಬೆಡ್ರೋಲ್(ಹಾಸಿಗೆ) ವಿತರಣೆ
ಶತಾಬ್ದಿಗಳಲ್ಲಿ ಆಟೋಮ್ಯಾಟಿಕ್ ಬಾಗಿಲುಗಳು, ಪ್ಯಾಸೆಂಜರ್ ಬೋಗಿಗಳಲ್ಲಿ ಅಗ್ನಿ ನಿರೋಧಕ ವ್ಯವಸ್ಥೆ ಅಳವಡಿಕೆ, ಅಧಿಕ ಸಾಮರ್ಥ್ಯದ ಪಾರ್ಸೆಲ್ ವ್ಯಾನ್ಗಳ ಅಭಿವೃದ್ಧಿ
44,600 ಲೀಟರ್ ಹಾಲು ಹೊರುವ ಸಾಮರ್ಥ್ಯವುಳ್ಳ ಹಾಲಿನ ವ್ಯಾನ್ಗಳನ್ನು ಪರಿಚಯಿಸಬಹುದು
ಕಲಾಪ ಹೇಗೆ ನಡೆಸಬೇಕೆಂದು ನಮಗೆ ಗೊತ್ತು. ಪ್ರತಿಪಕ್ಷ ಸ್ಥಾನದ ಬಗ್ಗೆ ಸಾರ್ವಜನಿಕ ಚರ್ಚೆಯ ಅಗತ್ಯವಿಲ್ಲ. ಕಾಂಗ್ರೆಸ್ ಇನ್ನೂ ಸೋಲೊಪ್ಪಿಕೊಂಡಿಲ್ಲ. ಕೋರ್ಟ್ಗೆ ಹೋಗುವುದಾದರೆ ಹೋಗಲಿ.
- ಎಂ. ವೆಂಕಯ್ಯ ನಾಯ್ಡು, ಸಂಸದೀಯ ಸಚಿವ
ಸರ್ಕಾರದ ವಿರುದ್ಧ ಪ್ರತಿಪಕ್ಷಾಸ್ತ್ರ
ನೂತನ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಪ್ರತಿಪಕ್ಷಗಳು ಸಿದ್ಧತೆ ನಡೆಸಿವೆ. ಬೆಲೆಯೇರಿಕೆ, ರೇಲ್ವೆ ದರ ಹೆಚ್ಚಳ ಸೇರಿ ಅನೇಕ ವಿಚಾರಗಳ ಬಗ್ಗೆ ಸದನದಲ್ಲಿ ಚರ್ಚೆಯಾಗಲಿದೆ. ಬೆಲೆಯೇರಿಕೆ ವಿಚಾರವೇ ಚರ್ಚೆಯಾಗಬೇಕು ಎಂದು ಈಗಾಗಲೇ ತೃಣಮೂಲ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಆಗ್ರಹಿಸಿವೆ. ಜತೆಗೆ ಮಹಿಳಾ ಮೀಸಲು ಮಸೂದೆಯನ್ನು ಇದೇ ಅಧಿವೇಶನದಲ್ಲಿ ಮಂಡಿಸಬೇಕು ಎಂದು ಎಡಪಕ್ಷಗಳು ಒತ್ತಾಯಿಸಿವೆ. ಗೋಪಾಲ ಸುಬ್ರಮಣಿಯನ್ ಅವರ ನೇಮಕ ವಿಚಾರವೂ ಚರ್ಚೆಗೆ ಬರುವ ಸಾಧ್ಯತೆಯಿದೆ.
ಎಲ್ಲರನ್ನೂ ಕಾಣಬಹುದು
ಈ ಅಧಿವೇಶನದಲ್ಲಿ ಕಲಾಪದ ವೇಳೆ ಮಾತನಾಡುವ ಎಲ್ಲ ಸದಸ್ಯರನ್ನೂ ನೋಡಬಹುದಾದ ವ್ಯವಸ್ಥೆ ಕಲ್ಪಿಸಲಾಗಿದೆ. ಸದನದಲ್ಲೊಂದು ಪರದೆ ಅಳವಡಿಸಲಾಗಿದ್ದು, ಮಾತನಾಡುವ ಪ್ರತಿಯೊಬ್ಬ ಸದಸ್ಯನೂ ಆ ಪರದೆಯಲ್ಲಿ ಕಾಣಿಸಲಿದ್ದಾನೆ. ಯಾವ ಮೂಲೆಯಲ್ಲಿ ನಿಂತು ಮಾತಾಡಿದರೂ ಪರದೆಯಲ್ಲಿ ಮುಖ ಕಾಣಿಸುತ್ತದೆ.
ಪ್ರತಿಪಕ್ಷ ಸ್ಥಾನ: ಸ್ಪೀಕರ್ಗೆ ಬಿಟ್ಟಿದ್ದು
ಒಂದೆಡೆ ಕಾಂಗ್ರೆಸ್ ಪ್ರತಿಪಕ್ಷ ಸ್ಥಾನಕ್ಕಾಗಿ ಹರಸಾಹಸ ಪಡುತ್ತಿದೆ. ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಶನಿವಾರ ಸಭೆಗಳೂ ನಡೆದಿವೆ. ಪರಿಹಾರಕ್ಕಾಗಿ ಸುಪ್ರೀಂ ಕೋರ್ಟ್ ಮೊರೆಹೋಗಲೂ ಪಕ್ಷ ಚಿಂತನೆ ನಡೆಸುತ್ತಿದೆ. ಅಷ್ಟೇ ಅಲ್ಲ, ಪ್ರತಿಪಕ್ಷ ಸ್ಥಾನ ನೀಡದಿದ್ದರೆ ಕಲಾಪ ನಡೆಯಲು ಬಿಡೆವು ಎಂಬ ಬೆದರಿಕೆಯನ್ನೂ ಹಾಕಿದೆ. ಇವೆಲ್ಲದರ ನಡುವೆ ಭಾನುವಾರ ಮಾತನಾಡಿರುವ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು, 'ಪ್ರತಿಪಕ್ಷ ಸ್ಥಾನ ನೀಡುವುದು, ಬಿಡುವುದು ಸ್ಪೀಕರ್ ನಿರ್ಧಾರಕ್ಕೆ ಬಿಟ್ಟಿದ್ದು' ಎಂದಿದ್ದಾರೆ. ನೆಹರೂ, ಇಂದಿರಾಗಾಂಧಿ, ರಾಜೀವ್ ಗಾಂಧಿ ಆಡಳಿತಾವಧಿಯಲ್ಲಿ ಪ್ರತಿಪಕ್ಷವೇ ಇರಲಿಲ್ಲ. ಆದರೆ ಬಿಜೆಪಿ ಅವಧಿಯಲ್ಲಿ ಮಾತ್ರ ಪ್ರತಿಪಕ್ಷ ಸ್ಥಾನ ನೀಡಲೇಬೇಕು ಎಂದು ಕಾಂಗ್ರೆಸ್ ಪಟ್ಟುಹಿಡಿಯುತ್ತಿದೆ. ಇದು ಜನರ ತೀರ್ಪು. ಜತೆಗೆ ಸಂವಿಧಾನಕ್ಕೆ ಸಂಬಂಧಿಸಿದ ವಿಚಾರ. ಇಲ್ಲಿ ಸ್ಪೀಕರ್ ನಿರ್ಧಾರವೇ ಅಂತಿಮ ಎಂದಿದ್ದಾರೆ ನಾಯ್ಡು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


