ಪ್ರಧಾನ ಸುದ್ದಿ

ಮಲೇರಿಯಾ, ಡೆಂಘೀ ಜಾಗೃತಿ ಮಾಸಾಚರಣೆ

Published On :

ಶ್ರೀರಾಂಪುರ: ಮಲೇರಿಯಾ ರೋಗ ನಿಯಂತ್ರಣ ಮಾಡುವುದು ಸಮುದಾಯದ ಜವಾಬ್ದಾರಿ ಎಂದು ನೇರಲಕೆರೆ ಕಟ್ಟೆರಂಗನಾಥ ಸ್ವಾಮಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಪ್ರಕಾಶ್ ಹೇಳಿದರು.
ಅವರು ಸೋಮವಾರ ಪ್ರೌಢ ಶಾಲೆಯಲ್ಲಿ ಆರೋಗ್ಯ ಇಲಾಖೆಯಿಂದ ಆಯೋಜಿಸಲಾಗಿದ್ದ ಮಲೇರಿಯಾ ಮತ್ತು ಡೆಂಘೀ ಜಾಗೃತಿ ಮಾಸಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಲೇರಿಯಾ ಮತ್ತು ಡೆಂಘೀ ಬರುವುದು ಸೊಳ್ಳೆಗಳಿಂದ. ಆದ ಕಾರಣ ಸಾರ್ವಜನಿಕರು ತಮ್ಮ ಮನೆ ಸುತ್ತಾಮುತ್ತ ಹಾಗೂ ಚರಂಡಿಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವ ಮೂಲಕ ಸ್ವಚ್ಚತೆ ಕಾಪಾಡಬೇಕು ಎಂದರು.
ಚಿತ್ರದುರ್ಗ ಜಿಲ್ಲಾ ಮಲೇರಿಯಾ ವಿಭಾಗದ ನಾಗರಾಜ್ ಮಾತನಾಡಿ, ಸೊಳ್ಳೆ ನಿಯಂತ್ರಣಕ್ಕೆ ಅಗತ್ಯವಾಗಿ ಸೊಳ್ಳೆ ಪರದೆ, ಕೀಟನಾಶಕ ಸಿಂಪರಣೆ ಮೂಲಕ ನಿಯಂತ್ರಣ ಮಾಡಬಹುದು. ಸಾರ್ವಜನಿಕರಲ್ಲಿ ಈ ಬಗ್ಗೆ ಅರಿವು ಮೂಡಬೇಕಿದೆ ಎಂದರು. ವಿಜ್ಞಾನ ಶಿಕ್ಷಕ ಶಿವಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಖ್ಯ ಅಥಿತಿಗಳಾಗಿ ಆರೋಗ್ಯ ಇಲಾಖೆಯ ಪರಮೇಶ್, ಸ.ಶಿ ಶಿವಣ್ಣ, ಮಾತನಾಡಿದರು. ಆರೋಗ್ಯ ಇಲಾಖೆಯ ದೀಪಕ್, ನಾಗರತ್ನಮ್ಮ, ಲತಾ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಮಕ್ಕಳು ಹಾಜರಿದ್ದರು. ಶಾಲಾ ಮಕ್ಕಳು ಗ್ರಾಮದ ಪ್ರಮುಖ ಬೀದಿಯಲ್ಲಿ ಜಾಗೃತಿ ಜಾಥಾ ನಡೆಸಿದರು.
ದಲಿತರ ಮೇಲೆ ಹಲ್ಲೆ: ಬಂಧನಕ್ಕೆ ಆಗ್ರಹ
ಹೊಸದುರ್ಗ: ದೊಡಘಟ್ಟ ಗ್ರಾಮದಲ್ಲಿ ದಲಿತರು ದೌರ್ಜನ್ಯಕ್ಕೊಳಗಾಗಿ ಭಯದಿಂದ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದಲ್ಲಿ ಪದೇ ಪದೇ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ರಕ್ಷಣೆ ದೊರೆಯುತ್ತಿಲ್ಲ ಎಂದು ತಾಲೂಕು ಮಾದಿಗ ಮಹಾಸಭಾದ ನೇತೃತ್ವದಲ್ಲಿ ಸೋಮವಾರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನೆಡೆಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮಾತನಾಡಿ, ದಲಿತರ ಮೇಲೆ ಮಾರಣಾಂತಿಕ ಹಲ್ಲೆಯಾಗಿದ್ದರೂ ಘಟನೆಗೆ ಕಾರಣರಾದವರನ್ನು ಇಲ್ಲಿವರೆಗೆ ಬಂಧಿಸಿಲ್ಲ.
 ದೊಡ್ಡಘಟ್ಟ ಗ್ರಾಮದಲ್ಲಿ ವಾಸಿಸುತ್ತಿರುವ ಮಾದಿಗ ಜನಾಂಗಕ್ಕೆ ಪ್ರಾಣ ಭಯವಿದ್ದು, ಯಾವುದೇ ಸಂದರ್ಭದಲ್ಲಿ ಘರ್ಷಣೆ ನಡೆಯುವ ಸಂಭವವಿದೆ. ಘಟನೆಯಲ್ಲಿ ಗಾಯಗೊಂಡ ಜನರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಕಾರಣರಾದವರು ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಾಧಾರ ನಾಶಪಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ದೂರಿದರು.
ಘಟನೆಗೆ ಕಾರಣರಾದವರನ್ನು ಕೂಡಲೆ ಬಂಧಿಸಿ ಕಾನೂನು ಕ್ರಮ ಜರುಗಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದರು. ಶಿರಸ್ತೆದಾರ್ ಜಯಣ್ಣ ಅವರ ಮೂಲಕ ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಜಿಪಂ ಸದಸ್ಯ ಎಂ.ಲಕ್ಷ್ಮಣ್, ತಾ. ಅದಿಜಾಂಬವ ಸಮಾಜದ ಅಧ್ಯಕ್ಷ ಆರ್. ತಿಪ್ಪಯ್ಯ, ಕುಮಾರ್, ದೊಡ್ಡಘಟ್ಟ ಏಕಾಂತ್, ಸುರೇಶ್, ಮಹಾಲಿಂಗಪ್ಪ, ಜಯಪ್ಪ, ಕಬ್ಬಳ ನಾಗರಾಜ, ಕೆಂಚಪ್ಪ ಮತ್ತಿತರರು ಭಾಗವಹಿಸಿದ್ದರು.
ಉತ್ತಮ ಮಳೆಗಾಗಿ 5 ವಾರದ ವಿಶೇಷ ಪೂಜೆ ಮಂಗಲೋತ್ಸವ
ಭರಮಸಾಗರ: ಪಟ್ಟಣದ ಶ್ರೀ ಆಂಜನೇಯ ಸ್ವಾಮಿ ದೇವಾಲಯ ಆವರಣದಲ್ಲಿರುವ ಶ್ರೀ ಗಂಗಾಧರೇಶ್ವರ ದೇವಾಲಯದಲ್ಲಿ 5 ಸೋಮವಾರ ಹಮ್ಮಿಕೊಂಡಿದ್ದ ವಿಶೇಷ ಪೂಜಾ ಮಹೋತ್ಸವ ಸೋಮವಾರ ಮಂಗಳವಾಯಿತು.
ಗ್ರಾಮಸ್ಥರು ಹಾಗೂ ಕಸ್ತೂರಿ ಯುವಕ ಸಂಘದ ನೇತೃತ್ವದಲ್ಲಿ 5 ಸೋಮವಾರ ಈಶ್ವರ ದೇವರಿಗೆ ಪಂಚಾಮೃತ ಅಭಿಷೇಕ, ವಿಶೇಷ ಪೂಜಾ ಕೈಂಕರ್ಯವನ್ನು ಎಸ್.ಜಿ.ರಾಮಸ್ವಾಮಿ, ಅರ್ಚಕ ಮುರಳೀಧರ್, ಶಶಿಧರ್ ಇತರರು ನೆರವೇರಿಸಿದರು.  ಮತ್ತಮ ಮಳೆ ಬೆಳೆಯಾಗಿ ನಾಡಿನ ಸಂಮೃದ್ಧಿಗಾಗಿ ಕಳೆದ ಎರಡು ವರ್ಷದಿಂದ ಈ ವಿಶೇಷ ಪೂಜೆ ಮತ್ತು ಅನ್ನಸಂತರ್ಪಣೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ದೇವರ ಅನುಗ್ರಹವಿದ್ದರೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆ ಸಲ್ಲಿಸುವುದಾಗಿ ಈ ಸಂದರ್ಭದಲ್ಲಿ ಹುಣಸೇಕಟ್ಟೆ ಸುರೇಶ್ ಹೇಳಿದರು.  ಕಾಲಕ್ಕೆ ಸರಿಯಾಗಿ ಉತ್ತಮ ಮಳೆ ಬೆಳೆಗಾಗಿ 5 ಸೋಮವಾರ ಈ ಪೂಜೆ ಆಯೋಜಿಸಲಾಗಿತ್ತು. ಇದಕ್ಕೆ ಭಕ್ತರು ಹೆಚ್ಚಿನ ರೀತಿಯಲ್ಲಿ ಸಹಕರಿಸಿದ್ದಾರೆ. ಇಡೀ ದಿನ ಅನ್ನ ದಾಸೋಹ ಏರ್ಪಡಿಸಲಾಗಿದೆ. ಶಿವನು ಸಂತೃಷ್ಟಗೊಂಡು ಚೆನ್ನಾಗಿ ವರ್ಷಧಾರೆ ಹರಿಸಿ ರೈತವರ್ಗದವರ ಸಂಕಷ್ಟ ದೂರಮಾಡುತ್ತಾನೆಂದು ನಂಬಿದ್ದೇವೆ ಎಂದು ತುರುವನೂರು ಚನ್ನೇಶ್ ತಿಳಿಸಿದರು.   ಪೂಜಾನಂತರ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.  ಬಣಜಿಗ ಮಹಾ ಸಭಾ ಸ್ಥಳೀಯ ಘಟಕ ಅಧ್ಯಕ್ಷ ಬಸವರಾಜ್, ಶಂಭುಲಿಂಗಪ್ಪ, ಪಂಚಾಕ್ಷರಿ, ತಾಪಂ ಸದಸ್ಯೆ ನಿರ್ಮಲಾ ಮಲ್ಲೇಶ್, ಟಿ.ಎಸ್.ಶಿವಯೋಗಿ, ಜಂಬೇಶ್, ಜಗದೀಶ್, ಸುರೇಶ್, ವೀರಣ್ಣ, ಸಣ್ಣಪ್ಪ, ವಕೀಲ ಪ್ರಕಾಶ್ ಇತರರು ಪಾಲ್ಗೊಂಡಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.