ಹೈವೇ ಅಪಘಾತ: ಉಚಿತ ಚಿಕಿತ್ಸೆ

- 30 ಸಾವಿರವರೆಗಿನ ವೆಚ್ಚ ಭರಿಸಲಿರುವ ಕೇಂದ್ರ
-ವಾರ್ಷಿಕ ರು. 500-600 ಕೋಟಿ ವೆಚ್ಚ
-ಪ್ರಾಯೋಗಿಕ ಯೋಜನೆ ಯಶಸ್ವಿ
-ದೇಶಾದ್ಯಂತ ಶೀಘ್ರ ಅನುಷ್ಠಾನ
ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತ ಸಂಭವಿಸಿದರೆ ಗಾಯಾಳುಗಳಿಗೆ ಸರ್ಕಾರವೇ ಚಿಕಿತ್ಸೆ ಕೊಡಿಸಲಿದೆ, ಅದೂ ಉಚಿತವಾಗಿ! ಗುರಗಾಂವ್-ಜೈಪುರ ನಡುವಿನ ಎನ್ಎಚ್-8ರಲ್ಲಿ ಪ್ರಾಯೋಗಿಕ ಯೋಜನೆ ಯಶ ಕಂಡಿರುವುದರಿಂದ ಅದನ್ನು ದೇಶಾದ್ಯಂತ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಅಪಘಾತ ಸಂಭವಿಸಿರುವ ಮಾಹಿತಿ ಸಿಕ್ಕತಕ್ಷಣ ಸರ್ಕಾರಿ ಸಿಬ್ಬಂದಿಯೇ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸುತ್ತಾರೆ. ಮುಂದಿನ 48 ಗಂಟೆ ಕಾಲ ಚಿಕಿತ್ಸೆಯ ಹೊಣೆಯೂ ಸರ್ಕಾರದ್ದೇ. ರು. 30,000ವರೆಗಿನ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದ್ದು, ಆಕಸ್ಮಾತ್ ಈ ಮೊತ್ತ ಮೀರಿದರೆ ಅದನ್ನು ಗಾಯಾಳು ಅಥವಾ ಅವರ ಕುಟುಂಬದವರು ಭರಿಸಬೇಕು.
ವಿಮಾ ಕಂಪನಿ ಸಹಯೋಗದಲ್ಲಿ ಜಾರಿಗೊಳಿಸಿದ್ದ ಪ್ರಾಯೋಗಿಕ ಯೋಜನೆ ಯಶಸ್ವಿಯಾಗಿದೆ. ಕಳೆದ ಮಾರ್ಚ್ನಲ್ಲಿ ಜಾರಿಗೆ ಬಂದಿದ್ದ ಯೋಜನೆಗೆ ರು. 20 ಕೋಟಿ ಮೀಸಲಿಡಲಾಗಿತ್ತು. ವಾಸ್ತವಿಕವಾಗಿ ವೆಚ್ಚವಾದದ್ದು ರು. 5 ಕೋಟಿ ಮಾತ್ರ. ದೇಶಾದ್ಯಂತ ವಿಸ್ತರಿಸಲು ವಾರ್ಷಿಕ 500-600 ಕೋಟಿ ರುಪಾಯಿ ಅಗತ್ಯವಿದೆಯೆಂದು ಅಂದಾಜಿಸಲಾಗಿದೆ ಎಂದು ಕೇಂದ್ರ ಭೂ ಸಾರಿಗೆ ಕಾರ್ಯದರ್ಶಿ ವಿಜಯ್ ಚೆಬ್ಬೀರ್ ಮಾಹಿತಿ ನೀಡಿದ್ದಾರೆ.
ಯೋಜನೆಯನ್ನು ಈ ವರ್ಷ ಮುಂಬೈ-ಬರೋಡಾ, ರಾಂಚಿ-ಜೆಮ್ಶೆಡ್ಪುರ ರಾಷ್ಟ್ರೀಯ ಹೆದ್ದಾರಿಗೂ ವಿಸ್ತರಿಸಲಾಗಿದೆ. ಹಂತಹಂತವಾಗಿ ದೇಶಾದ್ಯಂತ ಅನುಷ್ಠಾನಗೊಳ್ಳಲಿದೆ ಎಂದಿರುವ ಅವರು, ವಿಮಾ ಕಂಪನಿಗಳು ಕೇಂದ್ರದೊಂದಿಗೆ ಕೈ ಜೋಡಿಸಬೇಕು. ಸೂಕ್ತ ಪ್ಯಾಕೇಜ್ ರೂಪಿಸಬೇಕು ಎಂದು ಮನವಿ ಮಾಡಿದ್ದಾರೆ.
ಭಾರತ ಮೊದಲು
ರಸ್ತೆ ಅಪಘಾತದಿಂದ ಸಂಭವಿಸುವ ಸಾವುಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ದೇಶದಲ್ಲಿ ಪ್ರತಿವರ್ಷ 1.50 ಲಕ್ಷ ಸಾವುಗಳು ಅಪಘಾತದಿಂದ ಸಂಭವಿಸುತ್ತಿವೆ. 3.7 ನಿಮಿಷಕ್ಕೆ ಒಂದು ಸಾವು ಸಂಭವಿಸುತ್ತಿದೆ. ಅಂದರೆ ಪ್ರತಿ ಗಂಟೆಗೆ 16 ಜನ, ನಿತ್ಯ 390 ಜನ ಸಾವನ್ನಪ್ಪುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


