ಪ್ಲ್ಯಾನ್ ತಯಾರಿ ವಿಳಂಬಕ್ಕೆ 280 ಕೋಟಿ ಮಿಸ್ಸಾಯ್ತು

ವಿಧಾನ ಮಂಡಲ: ಘನತ್ಯಾಜ್ಯ ನಿರ್ವಹಣೆ ಮಾಸ್ಟರ್ ಪ್ಲಾನ್ ತಯಾರಿಕೆಯಲ್ಲಿ ಆದ ವಿಳಂಬದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರು. 280.17 ಕೋಟಿ ಸಹಾಯಧನ ಕಳೆದುಕೊಂಡಿರುವ ವಿಚಾರ ಸಿಎಜಿ ವರದಿಯಲ್ಲಿ ಬಹಿರಂಗಗೊಂಡಿದೆ.
2013ನೇ ವರ್ಷಕ್ಕೆ ಕೊನೆಗೊಂಡ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರ ಸ್ಥಳೀಯ ಸಂಸ್ಥೆಗಳ ವರದಿಯಲ್ಲಿ ಈ ವಿಚಾರ ಪ್ರಸ್ತಾಪವಾಗಿದೆ. ಇದರ ಜತೆಗೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮಿ ಯೋಜನೆ ಫಲಾನುಭವ ಪಡೆದಿದ್ದ 7814 ಮಕ್ಕಳು ಎಲ್ಲಿದ್ದಾರೆ ಎಂಬ ವಿಚಾರ ಸಂಬಂಧಪಟ್ಟ ಇಲಾಖೆಗೆ ಗೊತ್ತಿಲ್ಲ ಎಂದು ವರದಿ ಹೇಳಿದೆ.
ಘನತ್ಯಾಜ್ಯ ನಿರ್ವಹಣೆ ವಿಚಾರದಲ್ಲಿ ಪಾಲಿಕೆ ವೈಫಲ್ಯದ ಬಗ್ಗೆ ವರದಿ ವಿಶೇಷ ಒತ್ತು ನೀಡಿದೆ. ತ್ಯಾಜ್ಯಗಳ ಪ್ರಮಾಣದ ಬಗ್ಗೆ ವಿಶ್ವಸನೀಯ ಮತ್ತು ಸಂಪೂರ್ಣ ಮೂಲ ಮಾಹಿತಿ ಕೊರತೆ, ಅನಿರೀಕ್ಷಿತ ಸಂದರ್ಭಗಳನ್ನು ಎದುರಿಸಲು ಪೂರ್ವಭಾವಿ ಯೋಜನೆ ಇಲ್ಲದೇ ಇರುವುದರಿಂದ ತ್ಯಾಜ್ಯ ನಿರ್ವಹಣಾ ಕಾರ್ಯಕ್ರಮಗಳು ಪರಿಣಾಮಕಾರಿಯಾಗದಂತೆ ಮಾಡಿದವು. ಹೀಗಾಗಿ ಪೌರಾಡಳಿತ ಪ್ರದೇಶಗಳಲ್ಲಿ ಘನ ತ್ಯಾಜ್ಯ ನಿರ್ವಹಣೆಗಾಗಿ ಭೂಭರ್ತಿಗಳ ಮೇಲಿನ ಹೊರೆಯನ್ನು ಕನಿಷ್ಠ ಪ್ರಮಾಣಕ್ಕೆ ತರುವ ಹಾಗೂ ಪರಿಸರಕ್ಕೆ ಆಗುವ ಹಾನಿ ತಡೆಗಟ್ಟುವ ಪ್ರಮುಖ ಉದ್ದೇಶಗಳೇ ಈಡೇರಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.
ಘನ ತ್ಯಾಜ್ಯ ಸಾಗಾಣೆಗಾಗಿ ಬೆಂಗಳೂರು ಪಶ್ಚಿಮ ವಲಯದಲ್ಲಿ ಬಳಸಲಾಗಿದ್ದ 17 ವಾಹನಗಳನ್ನು ಸಾಗಾಣೇತರ ವಾಹನಗಳಾಗಿ ಬಳಸಿದ್ದರಿಂದ 2008-2013ರ ಅವಧಿಯಲ್ಲಿ ರು. 88.95 ಲಕ್ಷವನ್ನು ಕೇವಲ ಕಾಲ್ಪನಿಕ ಸಾಗಣೆ ಮಾಡಲಾಗಿದೆ. ನಿರ್ವಹಣೆ ಮತ್ತು ಕಾರ್ಯಾಚರಣೆ ವೆಚ್ಚ ಭರಿಸಲು ರಾಜಸ್ವದ ಮೂಲಕ ಸಂಪನ್ಮೂಲ ಸಂಗ್ರಹಿಸುವ ಪ್ರಯತ್ನ ನಡೆದಿರಲಿಲ್ಲ. ಪ್ಯಾಕೇಜು, ಹೆಚ್ಚುವರಿ ಕಾಮಗಾರಿಗಳಿಗಾಗಿ ಗುತ್ತಿಗೆದಾರರಿಗೆ ರು. 630.28 ಕೋಟಿ ಪಾವತಿ ಮಾಡಿರುವುದು ಒಳಗೊಂಡಂತೆ ಗುತ್ತಿಗೆಯಲ್ಲಿ ಅವ್ಯವಹಾರ ನಡೆದಿರುವುದನ್ನು ಸಿಎಜಿ ವರದಿ ಪ್ರಸ್ತಾಪಿಸಿದೆ.
ತ್ಯಾಜ್ಯ ಸಂಗ್ರಹಣೆ ದಕ್ಷತೆ ಕನಿಷ್ಠ ಮಟ್ಟದಲ್ಲಿತ್ತು. ತ್ಯಾಜ್ಯ ವಿಂಗಡಣೆ ಪ್ರೋತ್ಸಾಹಿಸಲು ಯಾವುದೇ ಪ್ರಯತ್ನ ನಡೆದಿರಲಿಲ್ಲ. ಭೂಭರ್ತಿ ನಿವೇಶನಗಳಲ್ಲಿ ವೈಜ್ಞಾನಿಕ ಸಂಸ್ಕರಣೆ ನಡೆದಿಲ್ಲ. ನಿರ್ದಿಷ್ಟ ಮಾನದಂಡಗಳನ್ನು ನಿರ್ಲಕ್ಷಿಸಲಾಗುತ್ತಿದೆ. ಬಿಬಿಎಂಪಿ ಮತ್ತು ನಗರಾಭಿವೃದ್ಧಿ ಇಲಾಖೆಯಲ್ಲಿನ ಮೇಲ್ವಿಚಾರಣೆ ಕೊರತೆಯಿಂದ ಸಾರ್ವಜನಿಕರ ಆರೋಗ್ಯಕ್ಕೆ ತೊಂದರೆಯಾಗುವ ಸನ್ನಿವೇಶ ನಿರ್ಮಾಣವಾಗಿತ್ತು ಎಂದು ವರದಿಯಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ.
215.38 ಕೋಟಿ ನಿಷ್ಫಲ: ಅದೇ ರೀತಿ ವಸತಿ ಇಲಾಖೆಯ ಇಂದಿರಾ ವಸತಿ ಯೋಜನೆ ಬಗ್ಗೆ ವರದಿಯಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಈ ಯೋಜನೆಯಲ್ಲಿ ಆಯ್ಕೆ ಮಾಡಲಾದಙ 5.74 ಲಕ್ಷ ಫಲಾನುಭವಿಗಳ ಪೈಕಿ 3.5 ಲಕ್ಷ ಮಂದಿ ಪರಿಶಿಷ್ಟ ಜಾತಿ, ಪಂಗಡ ಹಾಗೂ ಪ್ರವರ್ಗಕ್ಕೆ ಸೇರಿದ್ದರು. ಅಲ್ಪ ಸಂಖ್ಯಾತರು 75 ಲಕ್ಷದಷ್ಟಿದ್ದರು. ಆದರೆ ನಿರ್ದಿಷ್ಟ ಗುರಿ ಸಾಧನೆ ಕ್ರಮವಾಗಿ ಶೇ.60 ಮತ್ತು 15ಕ್ಕಿಂತ ಕಡಿಮೆ ಇರುವುದನ್ನು ವರದಿ ಪತ್ತೆ ಹಚ್ಚಿದೆ. ರು. 121.38 ಕೋಟಿ ಭರಿಸಿದ ನಂತರ ರಚಿಸಲಾಗಿದ್ದ ನಿವೇಶನಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡದೇ ಇದ್ದುದರಿಂದ ವಸತಿ ಯೋಜನೆಗೆ ಬಿಡುಗಡೆ ಮಾಡಿದ್ದ ರು. 215.81 ಕೋಟಿ ಅನುದಾನ ನಿಷ್ಪಲವಾಗಿದೆ.
ಅನುತ್ಪಾದಕ ಹೂಡಿಕೆ : ಅದೇ ರೀತಿ ಬಳ್ಳಾರಿ ಜಿಲ್ಲೆ ಕುಡುತಿನಿ ಗ್ರಾಮಕ್ಕೆ ನೀರು ಸರಬರಾಜು ಮಾಡುವ ಯೋಜನೆಯಲ್ಲಿ ರು. 6.14 ಕೋಟಿ ಅನುತ್ಪಾದಕ ವೆಚ್ಚವಾಗಿ ಪರಿಣಮಿಸಿದೆ ಎಂದು ವರದಿ ಹೇಳಿದೆ.
ಬಳಕೆಯಾಗದೆ ಉಳಿದ ಅನುದಾನ
ಹದಿಮೂರನೇ ಹಣಕಾಸು ಆಯೋಗದ ಅನುದಾನ ಬಳಕೆಯಲ್ಲಿ ದಾವಣಗೆರೆ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗಳು ಸೇರಿದಂತೆ ಒಟ್ಟು 14 ಸ್ಥಳೀಯ ಸಂಸ್ಥೆಗಳು ಬಾಕಿ ಉಳಿಸಿಕೊಂಡಿವೆ. ಮಹಾಲೆಕ್ಕ ಪರಿಶೋಧಕರ ವರದಿ ಪ್ರಕಾರ 48.91 ಕೋಟಿ ಅನುದಾನ ಬಾಕಿ ಉಳಿದಿದೆ. ಈ ಬಗ್ಗೆ ಮಹಾಲೆಕ್ಕ ಪರಿಶೋಧಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಣ ಬಳಕೆ ಮಾಡದ ಸ್ಥಳೀಯ ಸಂಸ್ಥೆಗಳು ಜನತೆಗೆ ಸಕಾಲಿಕ ಸೇವೆ ನೀಡುವ ಉದ್ದೇಶವನ್ನು ಸೋಲಿಸಿವೆ ಎಂದು ವರದಿ ಅಭಿಪ್ರಾಯಿಸಿದೆ. ಚನ್ನಗಿರಿ ಹಾಗೂ ಪಾಂಡವಪುರ ಪಟ್ಟಣ ಪಂಚಾಯಿತಿಗಳು, ದೇವನಹಳ್ಳಿ, ದೊಡ್ಡಬಳ್ಳಾಪುರ, ಹರಪನಹಳ್ಳಿ, ನೆಲಮಂಗಲ ಹಾಗೂ ಶ್ರೀರಂಗಪಟ್ಟಣ ಪುರಸಭೆಗಳು ಮತ್ತು ಮಂಡ್ಯ ನಗರಸಭೆ ಅನುದಾನ ಬಳಕೆ ಮಾಡದ ಸ್ಥಳೀಯ ಸಂಸ್ಥೆಗಳ ಪಟ್ಟಿಯಲ್ಲಿವೆ.
ರಾಜಸ್ವ ನಷ್ಟ
ಪರಿಷ್ಕೃತ ನೀರಿನ ದರ ಜಾರಿಗೆ ತರುವುದರಲ್ಲಿ ಒಂದು ವರ್ಷ ವಿಳಂಬ ತೋರಿದ ಹಿನ್ನೆಲೆಯಲ್ಲಿ ಬಿಜಾಪುರ ನಗರಸಭೆಗೆ 3.01 ಕೋಟಿ ನಷ್ಟವಾಗಿದೆ. ಹಾಗೆನೆ, ಪುರಸಭೆಗಳ ಅಧಿನಿಯಮದ ಉಪನಿಂಬಧಗಳನ್ನು ಉಪೇಕ್ಷಿಸಿ, ಸಂಸ್ಥೆಯೊಂದಕ್ಕೆ ಆಸ್ತಿ ತೆರಿಗೆ ವಿನಾಯಿತಿ ನೀಡಿದ ಕಾರಣಕ್ಕೆ ಸಂಕೇಶ್ವರ ಪುರಸಭೆಯು 1.98 ಕೋಟಿ ರಾಜಸ್ವ ನಷ್ಟ ಅನುಭವಿಸಿದೆ.
ತೆರಿಗೆ ಸಂಗ್ರಹ, ಹಿಂದೆ
ಆಸ್ತಿ ತೆರಿಗೆ ಸಂಗ್ರಹದಲ್ಲಿ ರಾಜ್ಯದ
213 ಸ್ಥಳೀಯ ಸಂಸ್ಥೆಗಳು ನಿಗದಿತ ಗುರಿ ತಲುಪಿಲ್ಲ. 2012-13 ಸಾಲಿಗೆ ಸರ್ಕಾರ ನಿಗದಿ ಮಾಡಿದ್ದ ರು. 342 ಕೋಟಿ ಪೈಕಿ ರು. 167 ಕೋಟಿ ಬಾಕಿ ಉಳಿಸಿಕೊಂಡಿವೆ.
ಸಂಗ್ರಹಕ್ಕಾಗಿ ಭೂಮಿ ಮತ್ತು ಕಟ್ಟಡಗಳನ್ನು ಗುರುತಿಸಿ ನೋಟಿಸ್ ಜಾರಿ ಮಾಡುವ ಬಗ್ಗೆಯೂ ಯೋಚಿಸಿಲ್ಲ. ಹಾಗೆಯೆ, ನೀರಿನ ಕರ, ಸ್ಥಳೀಯ ಸಂಸ್ಥೆ ಮಳಿಗೆಗಳ ಬಾಡಿಗೆ ವಸೂಲಿಗೂ ಯಾವುದೇ ಪರಿಣಾಮಕಾರಿಯಾದ ಕ್ರಮ ತೆಗೆದುಕೊಳ್ಳದಿರುವುದನ್ನು ವರದಿ ಗುರುತಿಸಿದೆ.
ದುಂದು ವೆಚ್ಚ
ಬೆಂಗಳೂರು ಸಿ.ವಿ.ರಾಮನ್ ನಗರದಲ್ಲಿ ರಸ್ತೆ ಚಿಹ್ನೆ ಹಾಕುವ ಅವಶ್ಯಕತೆ ಇಲ್ಲದಿದ್ದರೂ ಅಲ್ಲಿನ ಕಾರ್ಯನಿರ್ವಾಹಕ ಎಂಜಿನಿಯರ್ ರು. 22.50 ಲಕ್ಷ ನಷ್ಟಕ್ಕೆ ಕಾರಣವಾಗಿದ್ದು ಮಹಾಲೆಕ್ಕಪಾಲಕರ ವರದಿಯಲ್ಲಿ ಬಯಲಾಗಿದೆ. ಅಗತ್ಯ ಸ್ಥಳಗಳಲ್ಲಿ ಮಾತ್ರ ರಸ್ತೆ ಚಿಹ್ನೆಗಳನ್ನು ಬಳಸುವಂತೆ ಹೇಳಲಾಗಿದೆ. ಆದರೆ, ಎಂಜಿನಿಯರ್ ಸರ್ಕಾರದ ಹಣವನ್ನು ದುಂದು ವೆಚ್ಚ ಮಾಡುವುದಕ್ಕಾಗಿಯೇ ಅಲ್ಲಿನ ಎಲ್.ಐ.ಸಿ ಕಾಲೋನಿ, ಎಚ್.ಎ.ಎಲ್ ಮೂರನೇ ಹಂತ, ತಿಪ್ಪಸಂದ್ರ ಹಾಗೂ ಬೈರಸಂದ್ರಗಳಲ್ಲಿ ರಸ್ತೆ ಚಿಹ್ನೆ ಹಾಕಿಸಿ, ರು. 22 ಲಕ್ಷ ದುಂದು ವೆಚ್ಚ ಮಾಡಿರುವುದನ್ನು ವರದಿಯಲ್ಲಿ ದಾಖಲಿಸಲಾಗಿದೆ.
ಊರ್ಗೆ ನೆಂಟ್ರು ಬರ್ತಿಲ್ಲ, ವರ ಸಿಗ್ತಿಲ್ಲ
ಬೆಂಗಳೂರು: ಕಸ್ದ ವಾಸ್ನೆಗೆ ಆರೋಗ್ಯ ಕೆಡೋದು ಇರಲಿ, ಊರ್ಗೆ ನೆಂಟ್ರು ಬರ್ತಿಲ್ಲ, ಮದುವೆಗೆ ಬಂದ ಹೆಣ್ಣು ಮಕ್ಕಳಿಗೆ ವರ ಸಿಗ್ತಿಲ್ಲ. ಯಾರಿಗೇಳೋಣ ನಮ್ಗೋಳು...!?
ಇದು ದೊಡ್ಡಬಳ್ಳಾಪುರ ತಾಲೂಕು ಗುಂಡ್ಲಹಳ್ಳಿ ಗ್ರಾಮಸ್ಥರ ಅಳಲು. ಬಿಬಿಎಂಪಿ ಲಾರಿಗಳು ನಿತ್ಯ ಗುಂಡ್ಲಹಳ್ಳಿ ಬಳಿ ಸುರಿಯುತ್ತಿರುವ ಕಸದಿಂದ ಈಗ ದುರ್ವಾಸನೆ ಬೀರತೊಡಗಿದೆ. ಇದರಿಂದ ಬೇಸತ್ತಿರುವ ಗುಂಡ್ಲಹಳ್ಳಿ ಗ್ರಾಮಸ್ಥರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಸದ ದುರ್ವಾಸನೆಯಿಂದ ತಾವು ಊರು ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಕಸದ ಕೊಂಪೆ: ಗ್ರಾಮಸ್ಥರ ಪರವಾಗಿ ರೈತ ಸಂಘದ ಕೋಲಾರ ಶಿವಪ್ಪ ಮಾತನಾಡಿ, ಮಂಡೂರು ನಂತರ ಬಿಬಿಎಂಪಿ ಈಗ ದೊಡ್ಡಬಳ್ಳಾಪುರವನ್ನು ಕಸದ ಕೇಂದ್ರವನ್ನಾಗಿ ಮಾಡಲು ಹೊರಟಿದೆ ಎಂದು ದೂರಿದರು.
ಈಗಾಗಲೇ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಗುಂಡ್ಲಹಳ್ಳಿ, ಚಿರೇನಹಳ್ಳಿ ಹಾಗೂ ಹುಸ್ಕೂರು ಗ್ರಾಮಗಳ ಬಳಿ ಬಿಬಿಎಂಪಿ ಲಾರಿಗಳು ನಿತ್ಯ ನೂರಾರು ಲೋಡ್ ಕಸ ತಂದು ಸುರಿಯುತ್ತಿವೆ. ಈ ಕಸದಿಂದ ಬರುತ್ತಿರುವ ದುರ್ವಾಸನೆ ಗ್ರಾಮಸ್ಥರ ನಿದ್ದೆಗೆಡಿಸಿದೆ. ಇಷ್ಟಾಗಿಯೂ ಬಿಬಿಎಂಪಿ ಅಧಿಕಾರಿಗಳು, ಕಸ ತಂದು ಸುರಿಯಲು ಅಂಜನಾಮೂರ್ತಿನಗರ ಮತ್ತು ಕರೀಂಸೊಣ್ಣೇನಹಳ್ಳಿ ಬಳಿ ಜಾಗ ಪರಿಶೀಲನೆ ನಡೆಸಿದ್ದಾರೆಂದು ತಿಳಿಸಿದರು.
ಕಸ ನಿರ್ವಹಣೆಗೆ ಪರ್ಯಾಯ ಮಾರ್ಗಗಳಿದ್ದಾಗ್ಯೂ ಬಿಬಿಎಂಪಿ ಆ ಕಡೆ ಚಿಂತನೆ ನಡೆಸುತ್ತಿಲ್ಲ. ಬದಲಿಗೆ ಬೆಂಗಳೂರು ಸುತ್ತಸುತ್ತಲ ಹಳ್ಳಿಗಳನ್ನು ಕಸದ ಕೊಂಪೆಗಳನ್ನಾಗಿ ಮಾಡಲು ಹೊರಟಿದೆ. ಬಿಬಿಎಂಪಿ ಈ ಕುತಂತ್ರಕ್ಕೆ ದೊಡ್ಡಬಳ್ಳಾಪುರದ ಜನತೆ ಅವಕಾಶ ನೀಡುವುದಿಲ್ಲ. ತಕ್ಷಣವೇ ಪರ್ಯಾಯ ಮಾರ್ಗ ಕಂಡುಕೊಳ್ಳದಿದ್ದರೆ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಬಿಬಿಎಂಪಿಗೆ ಎಚ್ಚರಿಕೆ ನೀಡಿದರು.
ಬಿಬಿಎಂಪಿ ಗುರುತಿಸಿರುವ ಜಾಗ ಜನವಸತಿ ಪ್ರದೇಶವಲ್ಲದೆ, ಆಕಾಶವಾಣಿ ಸೂಪರ್ ಪವರ್ ಕೇಂದ್ರ, ರೈ ಟೆಕ್ನಾಲಜಿ, ಮೀನು ಮರಿ ಉತ್ಪಾದನಾ ಸಂಗ್ರಹ ಕೇಂದ್ರ ಸೇರಿದಂತೆ ವಿವಿಧ ಸಂಸ್ಥೆಗಳಿಗೆ ಹತ್ತಿರವಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ತನ್ನ ಕಸ ವಿಲೇವಾರಿ ಕಾರ್ಯವನ್ನು ನಿಲ್ಲಿಸದಿದ್ದರೆ, ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಸಿದರು.
ಕೇವಲ ಕರೀಂಸೊಣ್ಣೇನಹಳ್ಳಿ ಮಾತ್ರವಲ್ಲದೆ ದೊಡ್ಡಬಳ್ಳಾಪುರ ತಾಲೂಕಿಗೆ ಬಿಬಿಎಂಪಿ ಲಾರಿಗಳು ಮುಖ ಹಾಕದಂತೆ ಹೋರಾಟ ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಗೋಷ್ಠಿಯಲ್ಲಿ ನಾರಾಯಣ ರೆಡ್ಡಿ, ಸುಲೋಚನಮ್ಮ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


