ಬೈನಾ ಬೀಚಲ್ಲಿ ಕನ್ನಡಿಗರ ಬದುಕು ಮೂರಾಬಟ್ಟೆ

ವಾಸ್ಕೋ: 'ಸೋಮವಾರ ಮಧ್ಯರಾತ್ರಿ ಸುರಿವ ಮಳೆ, ಕೊರೆವ ಚಳಿಯಲ್ಲಿ ನಿರ್ಗತಿಕ ಕನ್ನಡಿಗರು ನಿಂತಿದ್ದಾರೆ. ಅವರಿಗೆ ಯಾವುದೇ ಪುನರ್ವಸತಿ ಕಲ್ಪಿಸಲಾಗಿಲ್ಲ...'
ಇದು ಗೃಹ ಇಲಾಖೆಗೆ ಸಲ್ಲಿಸಲೆಂದು ಇಲ್ಲಿನ ಬೈನಾ ಕನ್ನಡಿಗರ ಪರಿಸ್ಥಿತಿ ಕುರಿತು ಕಾರವಾರದ ಪೊಲೀಸ್ ಅಧಿಕಾರಿಗಳ ತಂಡ ಸಿದ್ಧಪಡಿಸಿದ ವರದಿ.
ಕರ್ನಾಟಕ ಪೊಲೀಸ್ ಮಹಾನಿರ್ದೇಶಕರ ಕಚೇರಿ ಸೂಚನೆ ಮೇರೆಗೆ ಸ್ಥಳ ಪರಿಶೀಲನೆಗೆ ಆಗಮಿಸಿದ್ದ ಕಾರವಾರದ ಡಿಎಸ್ಪಿ ಡಾ. ರಾಮ ಎಲ್. ಅರಸಿದ್ದಿ ನೇತೃತ್ವದ ಅಧಿಕಾರಿಗಳ ತಂಡ ನಿರಾಶ್ರಿತರ ದಯನೀಯ ಸ್ಥಿತಿ ಕಂಡು ಮರುಗಿತು. ಬೈನಾದಲ್ಲಿ ಕನ್ನಡಿಗರ ಮನೆಗಳನ್ನು ತೆರವುಗೊಳಿಸಿದ ಬಗ್ಗೆ ವಿಸ್ತೃತ ವರದಿ ನೀಡುವಂತೆ ಗೃಹ ಇಲಾಖೆ ಉತ್ತರ ಕನ್ನಡ ಪೊಲೀಸರಿಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಡಾ.ರಾಮ ಎಲ್. ಅರಸಿದ್ದಿ, ಸಿಪಿಐ ಮಂಜುನಾಥ ಕವರಿ, ಪಿಎಸ್ಐ ಎಸ್.ಎಂ. ರಾಣೆ ಹಾಗೂ ಐವರು ಸಿಬ್ಬಂದಿ ಇದ್ದ ತಂಡ ಸೋಮವಾರ ರಾತ್ರಿ ಬೈನಾಕ್ಕೆ ತೆರಳಿ ಪರಿಶೀಲನೆ ನಡೆಸಿತು. ಅಲ್ಲದೆ, ಮಂಗಳವಾರ ಬೆಳಗ್ಗೆ ನಿರ್ಗತಿಕರಿಂದ ಹೇಳಿಕೆಗಳನ್ನು ಪಡೆದುಕೊಂಡಿತು.
ಪೊಲೀಸ್ ಅಧಿಕಾರಿಗಳ ತಂಡ ಮಧ್ಯರಾತ್ರಿ 12.30ರ ವೇಳೆಗೆ ಬೈನಾಕ್ಕೆ ಆಗಮಿಸಿದಾಗ ನಿರ್ಗತಿಕರು ಸುರಿಯುವ ಜಡಿ ಮಳೆಯಲ್ಲೇ ನಿಂತಿದ್ದರು. ನಿರ್ಗತಿಕರ ಹೇಳಿಕೆಗಳನ್ನು ಪಡೆದುಕೊಂಡು ವರದಿ ತಯಾರಿಸಿದ್ದಾರೆ.
ನಮಗೇ ಮರುಕ ಹುಟ್ಟಿತು: 'ಕನ್ನಡಪ್ರಭ'ದ ಪ್ರಶ್ನೆಗೆ, ಡಿಎಸ್ಪಿ ಡಾ ರಾಮ ಎಲ್. ಅರಸಿದ್ದಿ, ಮಧ್ಯರಾತ್ರಿ ಆ ಮಳೆಯಲ್ಲೂ ಮಹಿಳೆಯರು, ಚಿಕ್ಕ ಮಕ್ಕಳು, ವಯೋವೃದ್ಧರು ನಿಂತುಕೊಂಡಿದ್ದರು. ಅವರ ದಯನೀಯ ಸ್ಥಿತಿ ನೋಡಿ ಮರುಕಪಟ್ಟೆವು. ಬೈನಾದಲ್ಲಿ 65 ಮನೆಗಳನ್ನು ಸಂಪೂರ್ಣವಾಗಿ ನೆಲಸಮಗೊಳಿಸಲಾಗಿದೆ. ಇನ್ನು 10 ಮನೆಗಳನ್ನು ಭಾಗಶಃ ಕೆಡವಲಾಗಿದೆ. ಯಾವುದೇ ಪುನರ್ವಸತಿ ಒದಗಿಸಿಲ್ಲ. ಸಿಆರ್ಝಡ್ ಹಾಗೂ ಸಮುದ್ರ ಕೊರೆತದ ಕಾರಣ ನೀಡಿ ಈ ಮನೆಗಳನ್ನು ತೆರವುಗೊಳಿಸಿದೆ. ಈ ಬಗ್ಗೆ ವರದಿಯನ್ನು ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ಸಲ್ಲಿಸುತ್ತಿದ್ದೇವೆ ಎಂದು ಉತ್ತರಿಸಿದರು.
ಗೋವಾ ರಸ್ತೆ ಬಂದ್ ಎಚ್ಚರಿಕೆ
ಗೋವಾ ಸರ್ಕಾರ ಕನ್ನಡಿಗರ ಮೇಲಿನ ದೌರ್ಜನ್ಯ ಮುಂದುವರೆಸಿದರೆ ಬೆಳಗಾವಿ ಜಿಲ್ಲೆಯಿಂದ ಗೋವಾಕ್ಕೆ ಹೋಗುವ ಎಲ್ಲ ರಸ್ತೆ ಬಂದ್ ಮಾಡಲಾಗುವುದು ಎಂದು ಮಂಗಳವಾರ ಕನ್ನಡ ಸಂಘಟನೆಗಳ ಮುಖಂಡರು ಗೋವಾ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಶಾಲೆಯಿಂದ ವಂಚಿತ
ನಿರಾಶ್ರಿತರ ಮಕ್ಕಳು ಶಾಲೆಯಿಂದಲೂ ವಂಚಿತರಾಗಿದ್ದಾರೆ. ನಿರಾಶ್ರಿತರ 60- 70 ಮಕ್ಕಳು ಬೈನಾದಲ್ಲೇ ಇರುವ ಕನ್ನಡ ಮಾಧ್ಯಮ ಶಾಲೆಗೆ ಹೋಗುತ್ತಿದ್ದರು. ಮನೆ ನೆಲಸಮ ವೇಳೆ ವಿದ್ಯಾರ್ಥಿಗಳ ಪಠ್ಯಪುಸ್ತಕ, ಸಮವಸ್ತ್ರ ಎಲ್ಲವೂ ಮಣ್ಣುಪಾಲಾಗಿವೆ. ಹಾಗಾಗಿ ಅವರು ಐದು ದಿನಗಳಿಂದ ಶಾಲೆಗೆ ಹೋಗದಂತಾಗಿದೆ. ಬಯಲಲ್ಲೇ ಈ ಮಕ್ಕಳು ಮಳೆ, ಚಳಿಯಲ್ಲಿ ಹಗಲು, ರಾತ್ರಿ ಕಳೆಯುತ್ತಿದ್ದಾರೆ.
ಕನ್ನಡಪರ ಸಂಘಟನೆಯಿಂದ ಪ್ರತಿಭಟನೆ
ಈ ನಡುವೆ ನಿರ್ಗತಿಕರಿಗೆ ಕಾಯಂ ಪುನರ್ವಸತಿಗಾಗಿ ಆಗ್ರಹಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಬೈನಾದಲ್ಲಿ ಪ್ರತಿಭಟನೆ ನಡೆಸಿತು. ಅಧ್ಯಕ್ಷ ಭೀಮಾಶಂಕರ ಪಾಟೀಲ ನೇತೃತ್ವದಲ್ಲಿ ನಡೆದ ಈ ಹೋರಾಟದಲ್ಲಿ 300ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ನಿರಾಶ್ರಿತರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಗೋವಾ ಪೊಲೀಸರು ಪ್ರತಿಭಟನೆ ಸಂದರ್ಭದಲ್ಲಿ ಬಿಗಿ ಬಂದೋಬಸ್ತ್ ಮಾಡಿದ್ದರು. ಬೈನಾ ಕಡಲತೀರದಲ್ಲಿ ಪೊಲೀಸರು ಹಗಲು-ರಾತ್ರಿ ಎನ್ನದೆ ಕಾವಲಿಗೆ ನಿಂತಿದ್ದಾರೆ.
-ವಸಂತಕುಮಾರ್ ಕತಗಾಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


