ಎಂಎಚ್ 17 ಧರೆಗುರುಳಿದ್ದು ಹೇಗೆ?

1) ಮಲೇಷ್ಯಾ ಏರ್ಲೈನ್ಸ್ನ ಎಂಎಚ್17
ವಿಮಾನ ಅಲ್ಲಿನ ಕಾಲಮಾನ ಮಧ್ಯಾಹ್ನ 12.15ಕ್ಕೆ 280 ಪ್ರಯಾಣಿಕರು ಮತ್ತು 15 ಸಿಬ್ಬಂದಿಯನ್ನು ಹೊತ್ತು ಆ್ಯಮ್ಸ್ಟರ್ಡ್ಯಾಂನ ಶಿಫೋಲ್ ಏರ್ಪೋರ್ಟ್ನಿಂದ ಕೌಲಾಲಂಪುರಕ್ಕೆ ಪಯಣ ಆರಂಭಿಸಿತು.
2) ಬೋಯಿಂಗ್ ವಿಮಾನವು ಉಕ್ರೇನ್ನತ್ತ ತಿರುಗುವ ಮುನ್ನ ಜರ್ಮನಿ ಮತ್ತು ಪೋಲೆಂಡ್ ಅನ್ನು ದಾಟಿ ಮುಂದೆ ಸಾಗಿತು.
3) ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯು ಕ್ರಿಮಿಯಾ ಮತ್ತು ಆಗ್ನೇಯ ಉಕ್ರೇನ್ ವ್ಯಾಪ್ತಿಯೊಳಗಿನ ಪ್ರದೇಶವನ್ನು 'ಹಾರಾಟ- ನಿಷೇಧ ವಲಯ' ಎಂದು ಘೋಷಿಸಿತ್ತು. ಈ ವಿಚಾರ ಎಂಎಚ್17ನ ಸಿಬ್ಬಂದಿಗೂ ಗೊತ್ತಿತ್ತು.
4) ಮಧ್ಯಾಹ್ನ 1.25 ನಿಮಿಷದ ವೇಳೆಗೆ 33 ಸಾವಿರ ಅಡಿ ಎತ್ತರದಲ್ಲಿದ್ದ ವಿಮಾನವು ನಿಯಂತ್ರಣ ಕೊಠಡಿಯೊಂದಿಗಿನ ಸಂಪರ್ಕ ಕಡಿದುಕೊಂಡಿತು. ಈ ಸಮಯದಲ್ಲಿ ವಿಮಾನ ಉಗ್ರರ ಹಿಡಿತದಲ್ಲಿರುವ ರಷ್ಯಾ ಗಡಿಯ ಮೇಲೆ ಹಾರುತ್ತಿತ್ತು. ಕ್ಷಣಮಾತ್ರದಲ್ಲಿ ಬಕ್ ಕ್ಷಿಪಣಿ ಉಡಾವಣಾ ವಾಹನದಿಂದ ಚಿಮ್ಮಿದ ಕ್ಷಿಪಣಿಯೊಂದು ವಿಮಾನವನ್ನು ಹೇಳಹೆಸರಿಲ್ಲದಂತೆ ಮಾಡಿತು.
ಬಕ್ 9ಕೆ37 ಕ್ಷಿಪಣಿ ವ್ಯವಸ್ಥೆ
1980ರಲ್ಲಿ ಸೋವಿಯತ್ ಯೂನಿಯನ್ ಪರಿಚಯಿಸಿದ ವ್ಯವಸ್ಥೆಯಿದು
ಕ್ರೂಸ್ ಕ್ಷಿಪಣಿಗಳು, ಡ್ರೋನ್ಗಳು, ವಿಮಾನಗಳನ್ನು ಹೊಡೆದುರುಳಿಸಲೆಂದೇ ನಿರ್ಮಿಸಲಾಗಿದೆ
ಟ್ರ್ಯಾಕ್ ಇರುವ ಚೇಸಿಸ್ ಮೇಲೆ ನಾಲ್ಕು ಕ್ಷಿಪಣಿಗಳನ್ನು ಅಳವಡಿಸಿರಲಾಗುತ್ತದೆ
ಸಾಮಾನ್ಯ ಸಿಡಿತಲೆಗಳಿಗಿಂತ ಬಲಿಷ್ಠ, ಶಕ್ತಿಶಾಲಿಯಾಗಿರುತ್ತವೆ
ಕ್ಷಿಪಣಿಯ ವೇಗ ಗಂಟೆಗೆ 1,900 ಮೈಲು. 20 ಮೈಲು ವ್ಯಾಪ್ತಿ, ಭೂಮಿಯಿಂದ 72,000 ಅಡಿ ಗರಿಷ್ಠ ಎತ್ತರ
ಪ್ರತಿ ಕ್ಷಿಪಣಿಯೂ 18 ಅಡಿ ಉದ್ದವಿದ್ದು, 70 ಕೆಜಿ ಸಿಡಿತಲೆಗಳನ್ನು ಹೊಂದಿರುತ್ತವೆ.
ಕೌಲಾಲಂಪುಕ/ಕೀವ್: ಮಲೇಷ್ಯಾದ ಎಂಎಚ್17 ವಿಮಾನವನ್ನು ಹೊಡೆದುರುಳಿಸಿದ್ದು ಯಾರು? 298 ಮಂದಿ ಅಮಾಯಕರ ಸಾವಿಗೆ ಕಾರಣವಾದವರು ಯಾರು? ಇಡೀ ವಿಶ್ವದ ಪಾಲಿಗೆ ಸದ್ಯಕ್ಕೆ ನಿಗೂಢವಾಗಿ ಉಳಿದಿರುವ ಮತ್ತೊಂದು ದುರಂತವಿದು. ಕೆಲ ತಿಂಗಳ ಹಿಂದಷ್ಟೇ ಮಲೇಷ್ಯಾದ ಎಂಎಚ್377 ವಿಮಾನ ಕಣ್ಮರೆಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಚ್ಚರಿಗೆ ಕಾರಣವಾಗಿತ್ತು. ಆ ಆಘಾತದಿಂದ ಹೊರಬರುವ ಮುನ್ನವೇ ಮತ್ತೊಂದು ಅವಘಡದ ಸುದ್ದಿ ಮಲೇಷ್ಯಾವನ್ನು ಗರಬಡಿಸಿದೆ. ಗುರುವಾರ ಆ್ಯಮ್ಸ್ಟರ್ಡ್ಯಾಂನಿಂದ ಮಲೇಷ್ಯಾದ ರಾಜಧಾನಿ ಕೌಲಾಲಂಪುರಕ್ಕೆ ಹೊರಟಿದ್ದ ವಿಮಾನವು ರಷ್ಯಾ ಗಡಿ ಸಮೀಪದ ಪೂರ್ವ ಉಕ್ರೇನ್ನಲ್ಲಿ ಪತನಗೊಂಡಿದ್ದು, ಈ ದುರಂತಕ್ಕೆ ಕಾರಣ ಯಾರು ಎಂಬುದೇ ಈಗ ಯಕ್ಷಪ್ರಶ್ನೆಯಾಗಿ ಉಳಿದಿದೆ. ಸೋವಿಯತ್ ನಿರ್ಮಿತ ಬಕ್ ಕ್ಷಿಪಣಿ ಉಡಾವಣೆ ವಾಹನದ ಮೂಲಕ ಹಾರಿಸಿದ ಕ್ಷಿಪಣಿಯಿಂದ ವಿಮಾನವನ್ನು ಹೊಡೆದುರುಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ರಷ್ಯಾ ಮತ್ತು ಉಕ್ರೇನ್ ಪರಸ್ಪರರ ಮೇಲೆ ಆರೋಪ ಹೊರಿಸುತ್ತಿವೆ. 33 ಸಾವಿರ ಅಡಿ ಎತ್ತರದಲ್ಲಿ ಸಂಚರಿಸುತ್ತಿದ್ದ ವಿಮಾನವನ್ನು ಹೊಡೆದುರುಳಿಸುವಂತಹ ಸಾಮರ್ಥ್ಯ ಸಾಮಾನ್ಯ ಉಗ್ರ ಸಂಘಟನೆಗಳಿಗಿಲ್ಲ. ಹಾಗಾಗಿ ಇದರ ಹಿಂದೆ ಯಾವುದಾದರೂ ರಾಷ್ಟ್ರದ ಸೇನಾ ಪಡೆಯ ಕೈವಾಡವಿರಬಹುದು ಎನ್ನುವುದು ತಜ್ಞರ ಅಭಿಪ್ರಾಯ. ರಷ್ಯಾ ಮತ್ತು ಉಕ್ರೇನ್ ನಡುವೆ ಕ್ರಿಮಿಯಾ ಪ್ರದೇಶಕ್ಕೆ ಸಂಬಂಧಿಸಿ ಬಿಕ್ಕಟ್ಟಿದ್ದರೂ ಮಲೇಷ್ಯಾ ವಿಮಾನವನ್ನು ಹೊಡೆದುರುಳಿಸಲು ಕಾರಣವೇನು? ಅವರ ಗುರಿ ಬೇರೆ ಯಾವುದಾದರೂ ವಿಮಾನ ಆಗಿತ್ತಾ ಎಂಬ ಪ್ರಶ್ನೆಗಳಿಗೂ ಉತ್ತರ ಸಿಕ್ಕಿಲ್ಲ.
ಚಿಂದಿ ಚಿಂದಿಯಾದ ಮೃತದೇಹಗಳು
ಇಬ್ಬರು ಭಾರತೀಯರೂ ಸೇರಿದಂತೆ ಎಂಎಚ್17 ವಿಮಾನದಲ್ಲಿ 298 ಮಂದಿ ಪ್ರಯಾಣಿಸುತ್ತಿದ್ದರು. ವಿಮಾನವು 33 ಸಾವಿರ ಅಡಿ ಎತ್ತರದಲ್ಲಿ ಪತನಕ್ಕೀಡಾದ ಕಾರಣ ಪ್ರಯಾಣಿಕರು ಹಾಗೂ ವಿಮಾನದ ಅವಶೇಷಗಳು ಕಿ.ಮೀ.ಗಟ್ಟಲೆ ದೂರಕ್ಕೆ ವ್ಯಾಪಿಸಿ, ಚಿಂದಿಚಿಂದಿಯಾಗಿ ಬಿದ್ದಿವೆ. ಶುಕ್ರವಾರ ಒಟ್ಟು 181 ದೇಹಗಳು ಪತ್ತೆಯಾಗಿವೆ. ಭಾರತೀಯ ಮೂಲದವರಾದ ಸಂಜೀಬ್ ಸಿಂಗ್ ಸಂಧು(41) ಮತ್ತು ಏಂಜೆಲೀನಾ ಪ್ರಮೀಳಾ ರಾಜೇಂದ್ರನ್(30) ಕೂಡ ನತದೃಷ್ಟ ವಿಮಾನದಲ್ಲಿದ್ದರು.
ವಿಮಾನ ಪತನದ ಹಿಂದೆ ಉಗ್ರರ ಕೈವಾಡವಿದೆ, ವಿಮಾನವನ್ನು ಹೊಡೆದುರುಳಿಸಲಾಗಿದೆ ಎಂಬುದನ್ನು ನಾವು ಒಪ್ಪುತ್ತೇವೆ. ಆದರೆ ಉಕ್ರೇನ್ ಸಶಸ್ತ್ರ ಪಡೆಯು ಗಗನದಲ್ಲಿದ್ದ ಯಾವುದನ್ನೂ ಗುರಿಯಾಗಿಸಿಲ್ಲ.
- ಪೆಟ್ರೋ ಪೊರೊಶೆಂಕೋ ಉಕ್ರೇನ್ ಅಧ್ಯಕ್ಷ
ವಿಮಾನ ದುರಂತಕ್ಕೆ ಉಕ್ರೇನ್ ಕಾರಣ. ಯಾವ ರಾಷ್ಟ್ರದ ಗಡಿಯ ವ್ಯಾಪ್ತಿಯಲ್ಲಿ ದುರಂತ ಸಂಭವಿಸಿದೆಯೋ ಅವರೇ ಇದರ ಹೊಣೆ ಹೊರಬೇಕು. ದೇಶದಲ್ಲಿ ಶಾಂತಿಯಿದ್ದರೆ ಇಂತಹ ದುರಂತ ನಡೆಯುತ್ತಿರಲಿಲ್ಲ.
- ವ್ಲಾದಿಮಿರ್ ಪುಟಿನ್ ರಷ್ಯಾ ಅಧ್ಯಕ್ಷ
ಸುಮಾರು 33 ಸಾವಿರ ಅಡಿ ಎತ್ತರದಲ್ಲಿರುವ ವಿಮಾನವನ್ನು ಹೊಡೆದುರುಳಿಸಿರುವುದು ಸಾಮಾನ್ಯ ವಿಷಯ ಅಲ್ಲವೇ ಅಲ್ಲ. ಇಲ್ಲಿ ನಡೆದ ಘಟನೆಯು ನಿಜಕ್ಕೂ ಭಯ ಹುಟ್ಟಿಸುವಂಥದ್ದು.
- ರಿಚರ್ಡ್ ಕ್ವೆಸ್ಟ್ವಿಮಾನಯಾನ ತಜ್ಞ
ಮೃತರು ಯಾವ್ಯಾವ ದೇಶದವರು?
ನೆದರ್ಲೆಂಡ್- 154, ಮಲೇಷ್ಯಾ - 43, ಆಸ್ಟ್ರೇಲಿಯಾ- 27, ಇಂಡೋನೇಷ್ಯಾ- 12, ಬ್ರಿಟನ್- 9, ಜರ್ಮನಿ- 4, ಬೆಲ್ಜಿಯಂ- 4, ಫಿಲಿಪ್ಪೀನ್- 3, ಕೆನಡಾ- 1, ಗೊತ್ತಿಲ್ಲ- 41
ರಷ್ಯಾ ಪ್ರತ್ಯೇಕತಾವಾದಿಗಳ ಕೈಯಲ್ಲಿ ಬ್ಲ್ಯಾಕ್ಬಾಕ್ಸ್
ಎಂಎಚ್77 ವಿಮಾನದ ಬ್ಲ್ಯಾಕ್ಬಾಕ್ಸ್ ತಮ್ಮ ಕೈಯಲ್ಲಿರುವುದಾಗಿ ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳು ತಿಳಿಸಿದ್ದಾರೆ. ಜತೆಗೆ ಅದನ್ನು ಮಾಸ್ಕೋಗೆ ಕಳುಹಿಸಿ ಪರೀಕ್ಷಿಸಲಾಗುವುದು ಎಂದೂ ಅವರು ಹೇಳಿದ್ದಾರೆ. ಇದೇ ವೇಳೆ, ಅವಶೇಷ ಬಿದ್ದಿರುವ ಸ್ಥಳವು ಪ್ರತ್ಯೇಕತಾವಾದಿಗಳ ಹಿಡಿತದಲ್ಲಿದ್ದು, ಅಂತಾರಾಷ್ಟ್ರೀಯ ತನಿಖೆಗೆ ಅವಕಾಶ ಮಾಡಿಕೊಡುವುದಾಗಿ ಅವರು ತಿಳಿಸಿದ್ದಾರೆ. ಏತನ್ಮಧ್ಯೆ, ಅಮೆರಿಕ ಅಧ್ಯಕ್ಷ ಒಬಾಮ ಅವರು ಮಲೇಷ್ಯಾ ಹಾಗೂ ಉಕ್ರೇನ್ ಪ್ರಧಾನಿ ಜತೆ ಸಭೆ ನಡೆಸಿದ್ದಾರೆ.
ಏಡ್ಸ್ ಸಂಶೋಧನೆಗೆ ಹಿನ್ನೆಡೆ
ದುರಂತದಲ್ಲಿ ಏಡ್ಸ್ ಸಂಶೋಧನೆಯಲ್ಲಿ ನಿರತರಾಗಿದ್ದವರೂ ಅಸುನೀಗಿದ್ದಾರೆ. ಅಂತಾರಾಷ್ಟ್ರೀಯ ಏಡ್ಸ್ ಸೊಸೈಟಿಯ ಒಬ್ಬ ವಿಜ್ಞಾನಿ ಮತ್ತು 100 ಮಂದಿ ಮೆಲ್ಬೊರ್ನ್ನಲ್ಲಿ ಭಾನುವಾರ ನಡೆಯಲಿದ್ದ ಸಮಾವೇದಲ್ಲಿ ಭಾಗವಹಿಸಲು ತೆರಳುತ್ತಿದ್ದರು. ಅವರ ದುರಂತ ಸಾವಿನಿಂದ ಏಡ್ಸ್ ಸಂಶೋಧನೆಗೆ ಭಾರಿ ಹಿನ್ನಡೆಯಾಗಿದೆ ಎಂದು ಅಂತಾರಾಷ್ಟ್ರೀಯ ಸಮುದಾಯ ಶೋಕಿಸಿದೆ.
ಸಂಧುವಿನ ಕೊನೆಯ ಪಯಣ
ಪಂಜಾಬ್ ಮೂಲದ ಸಂಜಿದ್ ಸಿಂಗ್ ಸಂಧು (41) ಬಾಣಸಿಗನಾಗಿ ಕಾರ್ಯನಿರ್ವಹಿಸುತ್ತಿದ್ದರು. ಗುರುವಾರದ ಪಾಳಿ ಪ್ರಕಾರ ಸಂಧು ಸಂಚರಿಸಬೇಕಾಗಿರಲಿಲ್ಲ. ಆದರೆ ಸಹೋದ್ಯೋಗಿಯ ಕೋರಿಕೆಗೆ ಮಣಿದು ಪಾಳಿ ಬದಲಿಸಿದ್ದೇ ಸಂಧುವಿನ ಪ್ರಾಣಕ್ಕೆ ಎರವಾಯ್ತು.
ಕ್ಷಿಪಣಿ ವ್ಯವಸ್ಥೆ ಹೇಗಿದೆ?
- ವ್ಯಾಪ್ತಿ: 1.8ರಿಂದ 12.4 ಮೈಲು
- ಸಿಡಿತಲೆಗಳು: 70 ಕೆಜಿ ತೂಕ
- ತೂಕ: ಕ್ಷಿಪಣಿಗಳೇ 685ರಿಂದ 715 ಕೆಜಿ ತೂಕವಿರುತ್ತವೆ
- ರೇಡಾರ್ ವ್ಯವಸ್ಥೆ: ರೇಡಾರ್ ಮೂಲಕ ಗುರಿಯತ್ತ ಮುಖ ಮಾಡಿಡಲಾಗುತ್ತದೆ. ಕ್ಷಿಪಣಿಯಲ್ಲಿನ 13.8 ಇಂಚಿನ 'ಸೀಕರ್' ಗುರಿಯ ಪಥದ ಬಗ್ಗೆ ಮಾಹಿತಿ ಪಡೆಯುತ್ತಿರುತ್ತದೆ.
- ಪರಿಮಾಣ: 18.2 ಅಡಿ ಉದ್ದ ಟ ಸಮರ ಸನ್ನದ್ಧತೆ: 5 ನಿಮಿಷ
- ಕೊಲ್ಲುವ ಸಾಮರ್ಥ್ಯ: ಶೇ.90-95
ಮುಂದೇನು?
ಗುರುವಾರದ ದುರಂತದ ಬಗ್ಗೆ ತರಾತುರಿ ವರದಿ ಬೇಡ ಎಂದು ವಿಮಾನಯಾನ ತಜ್ಞರು ಎಚ್ಚರಿಸಿದ್ದಾರೆ. ಉಕ್ರೇನ್ ಮತ್ತು ರಷ್ಯಾ ಬಿಕ್ಕಟ್ಟಲ್ಲಿ ಭಾಗಿಯಾಗಿರದ ವ್ಯಕ್ತಿಗಳನ್ನು ಮಾತ್ರವೇ ತನಿಖಾ ಸಮಿತಿಯಲ್ಲಿ ಸೇರಿಸಬೇಕು ಎಂದೂ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಘಟನೆ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನಿಖೆ ನಡೆಸಬೇಕು ಎನ್ನುವುದು ಮೃತರ ಕುಟುಂಬ ಸದಸ್ಯರ ಒತ್ತಾಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


