ಅತ್ಯಾಚಾರಿಗಳ ವಿರುದ್ಧ ಗೂಂಡಾ ಕಾಯ್ದೆ

ಬೆಂಗಳೂರು: ಅತ್ಯಾಚಾರ ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆ ಹಾಕಲಾಗುವುದು ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತ್ಯಾಚಾರ ಆರೋಪಿಗಳಿಗೆ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ರಕ್ಷಣೆ ನೀಡುವುದಿಲ್ಲ. ಅವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಅದೇ ರೀತಿ ಅತ್ಯಾಚಾರ ಪ್ರಕರಣಗಳು ವರದಿಯಾದಾಗ, ಆರೋಪಿಗಳ ರಕ್ಷಣೆಗೆ ಸಹಾಯ ಮಾಡುವ ಹಾಗೂ ಐಪಿಸಿಯ ಸೂಕ್ತ ಕಲಂಗಳ ಜತೆಗೆ ಪ್ರಕರಣ ದಾಖಲಿಸಿಕೊಳ್ಳದ ಅಧಿಕಾರಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 166 (ಎ) ಅನ್ವಯ ಪ್ರಕರಣ ದಾಖಲಿಸಿಕೊಂಡು ಕ್ರಮ ತೆಗೆದುಕೊಳ್ಳುತ್ತೇವೆ. ಪೊಲೀಸ್ ವೈಫಲ್ಯಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಅತ್ಯಾಚಾರ ಪ್ರಕರಣ ನಡೆದ ತಕ್ಷಣ ಸಂಬಂಧಪಟ್ಟ ಠಾಣಾಧಿಕಾರಿಗಳು ಎಸಿಪಿ ಹಾಗೂ ಡಿಸಿಪಿಗಳಿಗೆ ವರದಿ ನೀಡಬೇಕು. ಅವರೂ ವಿಳಂಬ ಎಸಗದೇ ಪ್ರಕರಣದ ಪರಿಶೀಲನೆ ನಡೆಸಿ ಆರೋಪಿಗಳ ಬಂಧನಕ್ಕೆ ಕ್ರಮ ತೆಗೆದುಕೊಳ್ಳಬೇಕು. ಗ್ರಾಮಾಂತರ ಪ್ರದೇಶಗಳಲ್ಲಿ ಸಹಾಯಕ ಎಸ್ಪಿ ಹಾಗೂ ಎಸ್ಪಿ ಗಮನಕ್ಕೆ ಈ ವಿಚಾರ ತರಬೇಕು ಎಂದು ಹೇಳಿದರು.
ಗಸ್ತು: ಬೆಂಗಳೂರು ನಗರದಲ್ಲಿ ಪೊಲೀಸ್ ಗಸ್ತು ಹೆಚ್ಚಿಸಲಾಗುವುದು. ಎರಡು ವಾರ್ಡ್ಗೆ ಒಂದರಂತೆ ಹೊಯ್ಸಳ ಹಾಗೂ ಚೀತಾ ವಾಹನ ನೀಡುತ್ತೇವೆ. ಅದೇ ರೀತಿ ಗ್ರಾಮಾಂತರ ಠಾಣೆಗಳಿಗೂ ಆಧುನಿಕ ವಾಹನಗಳನ್ನು ಸದ್ಯದಲ್ಲೇ ನೀಡುತ್ತೇವೆ. ಮಹಿಳಾ ಸಹಾಯವಾಣಿ ಕೇಂದ್ರ ಬಲಪಡಿಸುವ ಜತೆಗೆ ಹೊಯ್ಸಳ ಮತ್ತು ಚೀತಾ ನಿರ್ವಹಣೆಗೆ ಪ್ರತ್ಯೇಕ ಕಂಟ್ರೋಲ್ ರೂಂ ತೆರೆಯುತ್ತೇವೆ. ಅತ್ಯಾಚಾರ ಪ್ರಕರಣಗಳ ವಿಚಾರಣೆಗೆ ಈಗಾಗಲೇ 10 ತ್ವರಿತ ನ್ಯಾಯಾಲಯ ಆರಂಭಿಸಲಾಗಿದ್ದು, ಇವುಗಳಿಗೆ ಪ್ರತ್ಯೇಕ ನ್ಯಾಯಾಧೀಶರನ್ನು ನೇಮಕ ಮಾಡುವಂತೆ ಹೈಕೋರ್ಟ್ಗೆ ಮನವಿ ಮಾಡುತ್ತೇವೆ ಎಂದರು.
ರೇಪ್ನಲ್ಲೂ ಬೆಂಗಳೂರು ದಾಖಲೆ!
ಬೆಂಗಳೂರಲ್ಲಿ ಕಳೆದ ವರ್ಷ 80 ಅತ್ಯಾಚಾರ ಪ್ರಕರಣಗಳು ನಡೆದಿದ್ದು, ಆ ಪೈಕಿ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ. ಈ ವರ್ಷದ ಜೂನ್ ಅಂತ್ಯದ ವೇಳೆಗೆ 60 ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದು, 44 ಪ್ರಕರಣಗಳು ಮದುವೆಯಾಗುವುದಾಗಿ ಹಾಗೂ ಇನ್ನಿತರ ಕಾರಣಗಳಿಂದ ನಂಬಿಸಿದ್ದಾಗಿದೆ. 8 ಪ್ರಕರಣಗಳಲ್ಲಿ ಸಂಬಂಧಿಕರಿಂದಲೇ ಅತ್ಯಾಚಾರ ನಡೆದಿದೆ ಎಂದು ಸಚಿವ ಜಾರ್ಜ್ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


