ಹಕ್ಕು ಪತ್ರ ವಿತರಣೆ; ಚುನಾವಣಾ ಗಿಮಿಕ್?

-ತರಾತುರಿಯಲ್ಲಿ ನೀಡಿದ ಪತ್ರಗಳ ಪರಿಶೀಲನೆಗೆ ಹೊರಟ ಸರ್ಕಾರ
ಕಾರವಾರ: ಅರಣ್ಯ ಹಕ್ಕು ಕಾಯ್ದೆಯಲ್ಲಿ ಅತಿಕ್ರಮಣಕಾರರಿಗೆ ಹಕ್ಕುಪತ್ರ ವಿತರಣೆ ಮತ್ತೆ ಗೊಂದಲಕ್ಕೆ ಕಾರಣವಾಗಿದ್ದು, ರಾಜ್ಯದ 14 ಲಕ್ಷಕ್ಕೂ ಹೆಚ್ಚು ಕುಟುಂಬಗಳ ಭವಿಷ್ಯ ಡೋಲಾಯಮಾನವಾಗಿದೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇವಲ ವೋಟ್ ಬ್ಯಾಂಕನ್ನೇ ಮಾನದಂಡವಾಗಿ ಇಟ್ಟುಕೊಂಡು ರಾಜ್ಯದ ಕಾಂಗ್ರೆಸ್ ಸರ್ಕಾರ ತರಾತುರಿಯಲ್ಲಿ ನೀಡಿದ ಹಕ್ಕುಪತ್ರಗಳೀಗ ಪುನರ್ ಪರಿಶೀಲನೆಗೆ ಒಳಗಾಗಲಿವೆ.
ಚುನಾವಣೆಗೂ ಮುನ್ನ ಹಕ್ಕುಪತ್ರಗಳನ್ನು ನೀಡಿದ್ದು, ತರುವಾಯ ಜಿಲ್ಲಾಡಳಿತ 19 ನಿಯಮಾವಳಿಗಳನ್ನು ರೂಪಿಸಿದೆ. ಅಲ್ಲದೆ, ರಾಜ್ಯದ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ.ಎನ್. ಮೂರ್ತಿ ಅರಣ್ಯ ಹಕ್ಕು ಕಾಯ್ದೆಯಲ್ಲಿ ಹಕ್ಕು ಪತ್ರಗಳನ್ನು ಮಂಜೂರು ಮಾಡಬೇಕಾದಾಗ ಏನೆಲ್ಲ ನಿಯಮಗಳನ್ನು ಅನುಸರಿಸಬೇಕೆಂದು ಸುತ್ತೋಲೆ ಹೊರಡಿಸಿದ್ದಾರೆ. ಆದ್ದರಿಂದ ಹಕ್ಕುಪತ್ರಗಳ ವಿತರಣೆಗೆ ಅನುಸರಿಸಲಾದ ಮಾನದಂಡದ ಬಗ್ಗೆಯೇ ಈಗ ಗೊಂದಲ ಉಂಟಾಗಿದೆ.
ಗ್ರಾಮಸಭೆ ಜವಾಬ್ದಾರಿ: ಅರ್ಜಿಗಳ ಸ್ವೀಕಾರ ಹಾಗೂ ಕೂಲಂಕಷ ಪರಿಶೀಲನೆ ಗ್ರಾಮ ಸಭೆಯ ಜವಾಬ್ದಾರಿ. ಈ ಬಗ್ಗೆ ಸಮಾಜ ಕಲ್ಯಾಣ, ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಮುತುವರ್ಜಿ ವಹಿಸಬೇಕು. ಇವರಿಗೆ ಅಗತ್ಯ ಸಹಕಾರ ಹಾಗೂ ವಾಸ್ತವ ಬಗ್ಗೆ ವಿವರ ನೀಡುವುದು ಮಾತ್ರ ಅರಣ್ಯ ಇಲಾಖೆ ಕರ್ತವ್ಯ. ಅಗತ್ಯ ಕಂಡುಬಂದಲ್ಲಿ ಅರಣ್ಯ ಹಕ್ಕು ಕಾಯ್ದೆಯಲ್ಲಿ ಅಂಗೀಕರಿಸಿ ಮಂಜೂರು ಮಾಡಲಾದ ಪ್ರಕರಣಗಳನ್ನು ಪ್ರತ್ಯೇಕವಾಗಿ ಮೌಲ್ಯಮಾಪನಕ್ಕೊಳಪಡಿಸಲಾಗುವುದು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.
ತರಾತುರಿಯಲ್ಲಿ ವಿತರಣೆ
ಲೋಕಸಭೆ ಚುನಾವಣೆ ಘೋಷಣೆಗೆ ಕೆಲವೇ ದಿನಗಳಿರುವಾಗ ತರಾತುರಿಯಲ್ಲಿ ಅರಣ್ಯ ಭೂಮಿ ಹಕ್ಕುಪತ್ರಗಳನ್ನು ವಿತರಿಸಲಾಯಿತು. ಕಾರವಾರದಲ್ಲೂ 252 ಜನರಿಗೆ ಹಕ್ಕುಪತ್ರಗಳನ್ನು ವಿತರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಉತ್ತರ ಕನ್ನಡ ಕ್ಷೇತ್ರದ ಪಕ್ಷದ ಅಭ್ಯರ್ಥಿ ತಮ್ಮ ಮಗ ಪ್ರಶಾಂತ ದೇಶಪಾಂಡೆ ಪರ ಪ್ರಚಾರಕ್ಕೆ ಇದೇ ಪ್ರಮುಖ ಅಸ್ತ್ರವಾಗಿಸಿಕೊಂಡಿದ್ದರು. ಆದರೆ, ಚುನಾವಣೆ ಮುಗಿದು ಎರಡು ತಿಂಗಳಾದರೂ ಮತ್ತೆ ಒಬ್ಬ ಫಲಾನುಭವಿಯೂ ಹಕ್ಕುಪತ್ರ ಕಂಡಿಲ್ಲ.
2010ರಲ್ಲಿ ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬಂತು. ಆಗ ರಾಜ್ಯಾದ್ಯಂತ ಹಕ್ಕು ನೀಡುವಂತೆ ಕೋರಿ 1.55 ಲಕ್ಷ ಅರ್ಜಿ ಬಂದಿದ್ದು, 45 ಸಾವಿರ ಅರ್ಜಿಗಳು ತಿರಸ್ಕೃತವಾಗಿದ್ದವು. ಆದರೆ ಉತ್ತರ ಕನ್ನಡದ 660 ಸೇರಿ 6600 ಜನರಿಗೆ ಮಾತ್ರ ಹಕ್ಕುಪತ್ರ ನೀಡಲಾಗಿತ್ತು. ರವೀಂದ್ರನಾಥ ನಾಯ್ಕ ನೇತೃತ್ವದ ಹೋರಾಟ ಸಮಿತಿ 25 ಸಾವಿರ ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಅವರು ಭಟ್ಕಳದಿಂದ ಕಾರವಾರ ತನಕ ನಡೆಸಿದ ಪಾದಯಾತ್ರೆ ಇಡಿ ರಾಜ್ಯದ ಗಮನ ಸೆಳೆದಿತ್ತು. ಮೇಲ್ಮನವಿಯನ್ನು ಪುನರ್ ಪರಿಶೀಲಿಸಬೇಕೆಂದು ಆದೇಶವಾಗಿದ್ದರೂ ಆ ಪ್ರಕ್ರಿಯೆ ಅಲ್ಲಿಗೇ ನಿಂತಿತ್ತು.
ಕಾಂಗ್ರೆಸ್ ಸರ್ಕಾರ ಬಂದಾಗ ಚುನಾವಣೆಯನ್ನೇ ಮಾನದಂಡವನ್ನಾಗಿಟ್ಟುಕೊಂಡು ಹಕ್ಕುಪತ್ರ ನೀಡಿತ್ತು. ಚುನಾವಣೆ ಮುಗಿದ ಮೇಲೆ ಹಕ್ಕುಪತ್ರವನ್ನು ಒಬ್ಬರಿಗೂ ನೀಡಿಲ್ಲ. ಹೀಗಾಗಿ, ಹಕ್ಕುಪತ್ರ ನೀಡಿಕೆ ಚುನಾವಣೆಗೆ ಮಾತ್ರ ಸೀಮಿತ ಎಂಬ ಅಭಿಪ್ರಾಯ ಅತಿಕ್ರಮಣದಾರರಲ್ಲಿ ಕೇಳಿಬರುತ್ತಿದೆ.
- ವಸಂತಕುಮಾರ್ ಕತಗಾಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


