ಪ್ರಧಾನ ಸುದ್ದಿ

ಭ್ರಷ್ಟ ಅಧಿಕಾರಿಗಳ ಪರ ಸಚಿವರ ವಕಾಲತ್ತು!

ಭ್ರಷ್ಟ ಅಧಿಕಾರಿಗಳ ಪರ ಸಚಿವರ ವಕಾಲತ್ತು!
Published On :

ಬೆಂಗಳೂರು: ಶಿಕ್ಷಕರ ಅರ್ಹತಾ ಪರೀಕ್ಷೆ ಅಕ್ರಮ ಮುಚ್ಚಿಕೊಳ್ಳುವ ಭರಾಟೆಯಲ್ಲಿ ಸಿಸಿಬಿ ಪೊಲೀಸರನ್ನೇ ದಿಕ್ಕು ತಪ್ಪಿಸುವ ಕೆಲಸವನ್ನು ಶಿಕ್ಷಣ ಇಲಾಖೆ ಮಾಡಿದೆ.
ಪ್ರಶ್ನೆ ಪತ್ರಿಕೆ ಸೋರಿಕೆಯೇ ಆಗಿಲ್ಲ, ಇಲಾಖಾ ಅಧಿಕಾರಿಗಳು ಭಾಗಿಯಾಗಿಲ್ಲ ಎಂಬ ದಾಟಿಯಲ್ಲಿ ವಿಧಾನ ಪರಿಷತ್‌ಗೆ ಉತ್ತರ ನೀಡಿರುವ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ, ಪರೀಕ್ಷಾ ಅಕ್ರಮವನ್ನು ಪರೋಕ್ಷವಾಗಿ ಸಮರ್ಥಿಸಿಕೊಂದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಶಿಕ್ಷಣ ಇಲಾಖೆ ನಿರ್ದೇಶಕರು, ಖಜಾನೆ ಇಲಾಖೆ ಅಧಿಕಾರಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಭಾಗಿಯಾಗಿದ್ದಾರೆ. ಅವರಿಗೆ ಆರೋಪಿ ಶಿವಕುಮಾರ್ ಹಣದ ಆಮಿಷ ನೀಡಿ ಪತ್ರಿಕೆ ಪಡೆದುಕೊಂಡಿದ್ದಾನೆ ಎಂದು ಬೆಂಗಳೂರಿನ ಸಿಸಿಬಿ ಪೊಲೀಸರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಆದರೆ ಇಂಥದ್ದೊಂದು ವರದಿಯೇ ಬಂದಿಲ್ಲ ಎಂದು ಸಚಿವರು ಹೇಳುತ್ತಾರೆ. ಅಧಿಕಾರಿಗಳು ಬೇಜವಾಬ್ದಾರಿ ಮುಚ್ಚಿಕೊಳ್ಳಲು ಸಚಿವರಿಂದ ಸುಳ್ಳು ಮಾಹಿತಿ ಒದಗಿಸಿದರೇ ಎಂಬ ಅನುಮಾನ ವ್ಯಕ್ತವಾಗಿದೆ.
ಜೂ.23ರ ಸಿಸಿಬಿ ಪೊಲೀಸ ಪತ್ರಿಕಾ ಪ್ರಕಟಣೆ ಪ್ರಕಾರ, ಶಿವಕುಮಾರ್ ಎಂಬ ಆರೋಪಿ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಹಣದ ಆಮಿಷವೊಡ್ಡಿ ಪ್ರಶ್ನೆಪತ್ರಿಕೆ ಪಡೆದುಕೊಂಡಿದ್ದಾನೆ. ಈ ಅಂಶ ಕುರಿತ ಪತ್ರಿಕಾ ಪ್ರಕಟಣೆ ಇವತ್ತಿಗೂ ಸಿಸಿಬಿ ಪೊಲೀಸರ ವೆಬ್‌ಪುಟದಲ್ಲಿದೆ. ಇನ್ನು ಪ್ರಶ್ನೆ ಪತ್ರಿಕೆ ಬೆಂಗಳೂರು ಸೇರಿದಂತೆ ತುಮಕೂರು, ಮೈಸೂರು, ದಾವಣಗೆರೆ, ಬಳ್ಳಾರಿ, ಗುಲ್ಬರ್ಗ ಹಾಗೂ ಕೊಪ್ಪಳದಲ್ಲಿ ಬಹಿರಂಗವಾಗಿದೆ ಎನ್ನುವುದನ್ನು ಆರೋಪಿಯೇ ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 'ಪ್ರಶ್ನೆ ಪತ್ರಿಕೆ ಪಡೆದಿದ್ದ 10 ಅಭ್ಯರ್ಥಿಗಳನ್ನು ಕೂಡಲೇ ಬಂಧಿಸಿರುವುದರಿಂದ ಪ್ರಶ್ನೆ ಪತ್ರಿಕೆ ಹೊರಹೋಗಲು ಸಾಧ್ಯವಾಗಿಲ್ಲ. ಇನ್ನು ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಇಲಾಖಾ ಅಧಿಕಾರಿಗಳು ಭಾಗಿಯಾಗಿರುವ ಬಗ್ಗೆ ಸಿಸಿಬಿ ವರದಿ ಮಾಡಿಲ್ಲ' ಎಂದು ಸಚಿವರು ಉತ್ತರ ನೀಡಿದ್ದಾರೆ.
ಒಂದೊಮ್ಮೆ ಸಚಿವರು ಹೇಳುವುದು ನಿಜವಾದರೆ ವಿಚಾರಣೆ ನಡೆಸದೇ ಇಂಥದ್ದೊಂದು ಪ್ರಕಟಣೆ ಸಿಸಿಬಿ ಹೊರಡಿಸಲು ಸಾಧ್ಯವಿದೆಯೇ? ಒಂದೊಮ್ಮೆ ಇಲಾಖೆಗೆ ವರದಿ ಮುಟ್ಟಿಲ್ಲ ಎಂದಾದರೆ ವಿಚಾರಣೆಯಲ್ಲಿ ಆರೋಪಿಗಳು ಬಾಯ್ಬಿಟ್ಟ ಸತ್ಯವನ್ನು ಯಾವ ಹಂತದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಮುಚ್ಚಿಹಾಕಿದ್ದಾರೆ.
ಬೆಂಗಳೂರಿನ ಅಧಿಕಾರಿಗಳು ಶಾಮೀಲು?: ಸಿಸಿಬಿ ವಿಚಾರಣೆಯಿಂದ ತಿಳಿದಿರುವ ಅಂಶವೆಂದರೆ ಕೊಪ್ಪಳಕ್ಕೆ ಪ್ರಶ್ನೆ ಪತ್ರಿಕೆ ಬಂಡಲ್ ಬರುವಾಗಲೇ ಒಂದು ಬಂಡಲ್ ಕಡಿಮೆಯಿತ್ತು. ಈ ವಿಚಾರವನ್ನು ಬೆಂಗಳೂರಿನ ಸಿಎಸಿ ಅಧಿಕಾರಿಗಳಿಗೆ ಮುಂಚಿತವಾಗಿ ತಿಳಿಸಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಜತೆಗೆ ಬೆಂಗಳೂರಿಂದ ಪ್ರಶ್ನೆ ಪತ್ರಿಕೆ ಕಳುಹಿಸುವಾಗ ಉದ್ದೇಶಪೂರ್ವಕವಾಗಿ ಯಾವುದೇ ಮೇಲ್ವಿಚಾರಕ ಅಥವಾ ಎಸ್ಕಾರ್ಟ್ ಇಲ್ಲದೇ ಖಜಾನೆಗೆ ಸಿಎಸಿ ಅಧಿಕಾರಿಗಳು ಬಂಡಲ್ ಕಳುಹಿಸಿಕೊಟ್ದಿದ್ದಾರೆ. ಇದಕ್ಕೆ ಸಿಬ್ಬಂದಿ ಕೊರತೆ ಕಾರಣ ನೀಡಿದ್ದಾರೆ!
'ಕನ್ನಡಪ್ರಭ'ಕ್ಕೆ ಈ ಸಂಬಂಧ ಅನಾಮಧೇಯ ವ್ಯಕ್ತಿಯೊಬ್ಬ ಪತ್ರ ಬರೆದಿದ್ದು, 'ಸಿಎಸಿ ಬೆಂಗಳೂರಿನ ಒಬ್ಬ ಹಾಲಿ ಹಾಗೂ ನಿವೃತ್ತ ಅಧಿಕಾರಿಗಳು ಕೊಪ್ಪಳಕ್ಕೆ ಖಾಸಗಿ ವಾಹನದಲ್ಲಿ ಬಂದು ತಮಗೆ ಬೇಕಾದ ರೀತಿಯಲ್ಲಿ ಇಲಾಖಾ ನೋಟಿಸ್‌ಗೆ ಉತ್ತರ ಪಡೆದು ಹೋಗಿದ್ದಾರೆ. ಘಟನೆ ನಡೆದ ಬನ್ನಿಕಟ್ಟೆ ಶಾಲೆಗೆ ಹೋಗುವ ಬದಲು ಗಿಣಿಗೇರಿ ಶಾಲೆಗೆ ಅಧಿಕಾರಿಗಳನ್ನು ಕರೆಸಿ ಉತ್ತರ ಪಡೆದು ಹಿಂತಿರುಗಿದ್ದಾರೆ. ಈ ಮೂಲಕ ಉದ್ದೇಶಪೂರ್ವಕವಾಗಿ ಕೊಪ್ಪಳದಲ್ಲಿ ಘಟನೆ ನಡೆದಿದೆ ಎಂದು ಬಿಂಬಿಸಲಾಗುತ್ತಿದೆ. ಆದರೆ ಕೊಪ್ಪಳ ಡಿಡಿಪಿಐ ಹಾಗೂ ಸಿಎಸಿಯ ಹಿರಿಯ ಅಧಿಕಾರಿಗಳು ಎಲ್ಲ ಸತ್ಯ ತಿಳಿದು ಮುಚ್ಚಿಡುತ್ತಿದ್ದಾರೆ' ಎಂದು ತಿಳಿಸಿದ್ದಾರೆ.


-ರಾಜೀವ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.