ದೂಧ್ಸಾಗರ ಸೌಂದರ್ಯ ಸವಿಯೋದು ಸುಲಭವಲ್ಲ!

ಹುಬ್ಬಳ್ಳಿ: ಮಳೆಗಾಲದಲ್ಲಿ ಮೈದುಂಬಿ ಧುಮ್ಮಿಕ್ಕುವ ದೂಧ್ಸಾಗರ ಜಲಧಾರೆಯ ಸೌಂದರ್ಯ ಸವಿಯಲು ಕಣ್ಣೆರಡು ಸಾಲದು. ಆದರೆ, ಪ್ರವಾಸೋದ್ಯಮ ಸಚಿವರ ತವರು ಜಿಲ್ಲೆಯಂಚಿನಲ್ಲೇ ಇರುವ ಈ ತಾಣಕ್ಕೆ ತೆರಳುವ ಹಾದಿ ಮಾತ್ರ ದುರ್ಗಮ.
ಹೌದು. ರಾಜ್ಯದ ಗಡಿಯಂಚಿನಲ್ಲಿರುವ ಆದರೆ ಗೋವಾ ವ್ಯಾಪ್ತಿಗೆ ಸೇರಿರುವ ದೂಧ್ಸಾಗರ ಜಲಪಾತ ವೀಕ್ಷಿಸಲು ಪ್ರವಾಸಿಗರು ಹರಸಾಹಸ ಪಡಬೇಕು. ಪ್ರಕೃತಿ ಸೌಂದರ್ಯವನ್ನೇ ಮೈತುಂಬಿಕೊಂಡಿರುವ ಈ ಪ್ರವಾಸಿ ತಾಣವಿರುವುದು ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆಯವರ ತವರು ಜಿಲ್ಲೆ ಉತ್ತರಕನ್ನಡದ ಅಂಚಿನಲ್ಲಿ. ಆದರೆ, ಅವರು ಈ ಅದ್ಭುತ ಪ್ರದೇಶದ ಅಭಿವೃದ್ಧಿಗೆ ಸಂಬಂಧಿಸಿ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಎಲ್ಲಿದೆ?: ಕರ್ನಾಟಕದ ವ್ಯಾಪ್ತಿಗೆ ಒಳಪಡುವ ಗೋವಾ ಗಡಿಯಂಚಿನಲ್ಲಿರುವ ಕ್ಯಾಸಲ್ರಾಕ್ ಎಂಬ ಊರಿನಿಂದ ಬರೊಬ್ಬರಿ 14 ಕಿ.ಮೀ. ದೂರದಲ್ಲಿದೆ ಈ ದೂಧ್ಸಾಗರ. ಸಾವಿರಾರು ಅಡಿ ಎತ್ತರದಿಂದ ಕಲ್ಲುಬಂಡೆಗಳ ಮಧ್ಯದಿಂದ ಪ್ರಪಾತಕ್ಕೆ ಭೋರ್ಗರೆಯುವ ಜಲಧಾರೆಯ ರುದ್ರರಮಣೀಯ ದೃಶ್ಯ ಪ್ರವಾಸಿಗರ ಮನತುಂಬುತ್ತದೆ. ಗೋವಾ, ಮಹಾರಾಷ್ಟ್ರದ ಪ್ರವಾಸಿಗರು ಸುಲಭವಾಗಿ ತಲುಪಬಹುದಾದ ಈ ಸ್ಥಳಕ್ಕೆ ರಾಜ್ಯದವರು ತಲುಪಲು ಪ್ರಯಾಸ ಪಡಬೇಕು.
ಊಟ- ಉಪಾಹಾರವಿಲ್ಲ: ಕಷ್ಟಪಟ್ಟು ತೆರಳಿದರೂ ದೂಧ್ಸಾಗರದಲ್ಲಿ ಕುಡಿಯಲು ನೀರು ಸೇರಿದಂತೆ ಊಟ, ಉಪಾಹಾರದ ವ್ಯವಸ್ಥೆ ಇಲ್ಲ. ಆರೋಗ್ಯದಲ್ಲಿ ಏರುಪೇರಾದರಂತೂ ಕೇಳುವವರೇ ಇಲ್ಲ. ಇನ್ನು ವಸತಿ ಸೌಲಭ್ಯ ಕೇಳಲೇಬೇಡಿ. ತುಸು ಗಮನ ಹರಿಸಿದರೂ ಉತ್ತಮ ಆದಾಯ ತರಬಹುದಾದ ಈ ಪ್ರದೇಶವನ್ನು ಕರ್ನಾಟಕ ಸರ್ಕಾರ ಏಕೆ ನಿರ್ಲಕ್ಷಿಸುತ್ತಿದೆಯೋ ಗೊತ್ತಿಲ್ಲ.
ಚಿತ್ರರಂಗದ ಕಣ್ಣು
ದೂಧ್ಸಾಗರ ಪ್ರವಾಸಿಗರ ಮನವಷ್ಟೇ ಅಲ್ಲ, ಚಿತ್ರರಂಗದ ಮನಸ್ಸೂ ಗೆದ್ದಿದೆ. ಇಲ್ಲಿ 'ಚೆನ್ನೈ ಎಕ್ಸ್ಪ್ರೆಸ್', 'ಮೈನಾ' ಚಿತ್ರಗಳ ಚಿತ್ರೀಕರವೂ ನಡೆದಿದೆ. ಈ ಚಿತ್ರ ತಂಡಗಳು ಇಲ್ಲಿ ಸೆಟ್ ಹಾಕಲೂ ಸಾಕಷ್ಟು ಕಷ್ಟ ಅನುಭವಿಸಿದ್ದವು.
ರೈಲು ಮಾರ್ಗವೇ ದಾರಿ
ದೂಧ್ಸಾಗರಕ್ಕೆ ಹೋಗಬೇಕೆಂದರೆ ರೈಲು ಮಾರ್ಗವೊಂದೇ ದಾರಿ. ಹೆಚ್ಚಾಗಿ ಭೇಟಿ ನೀಡುವ ರಾಜ್ಯದ ಪ್ರವಾಸಿಗರು ಕ್ಯಾಸಲ್ರಾಕ್ನಿಂದ ಇಲ್ಲಿಗೆ ಹೋಗಲು ರೈಲಿನಲ್ಲಿ ಪ್ರಯಾಣಿಸಬೇಕು. ದೂಧ್ಸಾಗರಕ್ಕೆ ಹೋಗಲು ಬೆಳಗ್ಗೆ 9.45, ಮಧ್ಯಾಹ್ನ 12.30ಕ್ಕೆ ಎರಡು ರೈಲುಗಳಿವೆ ಅಷ್ಟೆ. ಮರಳಲು ಸಂಜೆ 5.30ರವರೆಗೂ ಕಾಯುವುದು ಅನಿವಾರ್ಯ. ರೈಲಿನಲ್ಲಿ ಪ್ರಯಾಣಿಸಿದರೂ ಜಲಪಾತವಿರುವ ಸ್ಥಳ ತಲುಪಲು 4 ಕಿ.ಮೀ. ನಡೆಯುವುದು ಅನಿವಾರ್ಯ. ಈ ತಾಣ ನೈಋತ್ಯ ರೇಲ್ವೆ ವಲಯ ವ್ಯಾಪ್ತಿಗೆ ಒಳಪಡುತ್ತದೆ. ಕ್ಯಾಸಲ್ರಾಕ್ ಹಾಗೂ ಗೋವಾದ ಕೊಲೆಮ್ ರೈಲ್ವೆ ಜಂಕ್ಷನ್ ಮಧ್ಯೆ 28 ಕಿ.ಮೀ. ಅಂತರವಿದೆ. ಈ ಮಾರ್ಗವಾಗಿ ಮೂರ್ನಾಲ್ಕು ಪ್ರಯಾಣಿಕರ ರೈಲು ಮಾತ್ರ ಓಡಾಡುತ್ತವೆ. ಇನ್ನುಳಿದಂತೆ ಗೂಡ್ಸ್ ರೈಲು ಸಂಚರಿಸುತ್ತವೆ. ಹೀಗಿದ್ದಾಗ ಧೂದ್ಸಾಗರದವರೆಗೆ ಪ್ರವಾಸಿಗರಿಗಾಗಿಯೇ ಪ್ರತ್ಯೇಕ ಚಿಕ್ಕ ರೈಲು ಆರಂಭಿಸಿದರೆ ರೇಲ್ವೆ ಇಲಾಖೆಗೂ ಆದಾಯ, ಪ್ರವಾಸಿಗರಿಗೂ ಅನುಕೂಲ.
-ಪ್ರಕಾಶ ಎಸ್. ಶೇಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


