ಪ್ರಧಾನ ಸುದ್ದಿ

ಕವಿವಿಯಲ್ಲೇ ಕನ್ನಡಕ್ಕೆ ದ್ರೋಹ

Published On :

ಕ.ಪ್ರ.ವಾರ್ತೆ, ಧಾರವಾಡ, ಜು.27
ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲ ಕಾಲೇಜುಗಳಲ್ಲಿ ಬಿಕಾಂ ಎರಡನೇ ವರ್ಷಕ್ಕೆ ಕನ್ನಡ ವಿಷಯ ಅಳವಡಿಸದಿರುವ ಕ್ರಮದ ವಿರುದ್ಧ ಇದೀಗ ಕನ್ನಡ ಪ್ರಾಧ್ಯಾಪಕರೇ ಹೋರಾಟಕ್ಕೆ ಮುಂದಾಗಿದ್ದಾರೆ.
ಕುಲಪತಿ ಡಾ. ಎಚ್.ಬಿ. ವಾಲೀಕಾರ ಅವರು ಬಿಕಾಂ 2ನೇ ವರ್ಷಕ್ಕೆ ಕನ್ನಡ ಅಳವಡಿಸದಿದ್ದರೆ ಅವರ ಕಚೇರಿ ಎದುರು ನಾಡಿನ ಹಿರಿಯ ಸಾಂಸ್ಕೃತಿಕ ನಾಯಕರ ನಾಯಕತ್ವದಲ್ಲಿ ಧರಣಿ ನಡೆಸುವುದಾಗಿ, ಅದಕ್ಕೂ ಮಣಇಯದಿದ್ದರೆ ಗೋಕಾಕ ಮಾದರಿ ಹೋರಾಟ ಕೈಗೆತ್ತಿಕೊಳ್ಳುವುದಾಗಿ ಕವಿವಿ ಕನ್ನಡ ಅಧ್ಯಾಪಕರ ಪರಿಷತ್ತು ಭಾನುವಾರ ಎಚ್ಚರಿಕೆ ನೀಡಿದೆ.
ಪ್ರಾಧ್ಯಾಪಕ ಡಾ. ಎಂ.ಡಿ. ವಕ್ಕುಂದ ಮಾತನಾಡಿ, ರಾಜ್ಯದ ಎಲ್ಲ ವಿವಿಗಳಲ್ಲೂ ಪದವಿ ಹಂತದಲ್ಲಿ ನಾಲ್ಕು ಸೆಮಿಸ್ಟರ್‌ಗಳಿಗೆ ಭಾಷಾ ವಿಷಯ ಕಲಿಕೆ ಕಡ್ಡಾಯಗೊಳಿಸಿ ಬಿಎ, ಬಿಕಾಂ ಹಾಗೂ ಬಿಎಸ್ಸಿ ತರಗತಿಗಳಿಗೆ ಕನ್ನಡ ಆವಶ್ಯಕವೆಂದು ಅಳವಡಿಸಿವೆ. ಆದರೆ, ಕವಿವಿ ಬಿಕಾಂ 2ನೇ ವರ್ಷಕ್ಕೆ ಕನ್ನಡ ಅಳವಡಿಸದೇ ಕನ್ನಡ ವಿರೋಧ ನಿಲುವು ತೋರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಮಸ್ಯೆಯಲ್ಲಿ ಕವಿವಿ ವಾಣಿಜ್ಯ ನಿಕಾಯದ ಪಾತ್ರವಿದೆ. ಭಾಷಾ ಕಲಿಕೆಯ ಬೋಧನಾ ಅವಧಿಗಳನ್ನು ಕಡಿತಗೊಳಿಸಿ ವಾಣಿಜ್ಯಶಾಸ್ತ್ರ ಬೋಧನಾ ಅವಧಿ ಹೆಚ್ಚಿಸಿ ವಾಣಿಜ್ಯಶಾಸ್ತ್ರ ಸ್ನಾತಕೋತ್ತರ ಪದವೀಧರರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವ ಹುನ್ನಾರವೂ ಇಲ್ಲಿದೆ. ಬಿಎಸ್ಸಿ 2ನೇ ವರ್ಷದಲ್ಲಿ ಕನ್ನಡ ಕಲಿಯುತ್ತಿದ್ದರೆ, ಬಿಕಾಂನಲ್ಲಿ ಏಕಿಲ್ಲ ಎಂದು ಎಂದು ವಕ್ಕುಂದ ಪ್ರಶ್ನಿಸಿದರು.
ಪ್ರಾಧ್ಯಾಪಕ ಡಾ. ಜಿ.ಎಂ. ಹೆಗಡೆ ಮಾತನಾಡಿ, ಪ್ರಸಕ್ತ ವರ್ಷದಿಂದ ಕುಲಪತಿಗಳು ಕನ್ನಡ ಪಠ್ಯ ಅಳವಡಿಸದಿದ್ದರೆ ಗೋಕಾಕ ಚಳವಳಿ ಮಾದರಿ ಹೋರಾಟ ಮಾಡಬೇಕಾಗುತ್ತದೆ. ಡಾ. ಪಾಟೀಲ ಪುಟ್ಟಪ್ಪ ನೇತೃತ್ವದಲ್ಲಿ ಹಿರಿಯ ಸಾಹಿತಿಗಳ ನಿಯೋಗ ಮುಖ್ಯಮಂತ್ರಿ, ರಾಜ್ಯಪಾಲಕರು ಹಾಗೂ ಶಿಕ್ಷಣ ಮಂತ್ರಿಗಳೊಂದಿಗೆ ಚರ್ಚಿಸುವ ಚಿಂತನೆಯೂ ಇದೆ. ಕುಲಪತಿಗಳ ಕಚೇರಿ ಎದುರು ಧರಣಿ ನಿಶ್ಚಿತ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಶಂಕರ ಹಲಗತ್ತಿ, ವಿನಯಾ ವಕ್ಕುಂದ, ರೇಖಾ ಜೋಗೂಳ, ಡಾ. ಎಸ್.ಎಂ. ಪಾನಗುಡೆ, ಎಸ್.ಎಂ. ಮನಗುಂಡಿ, ಬಸವರಾಜ ಬಿರಾದಾರ, ಶ್ರೀಶೈಲ ಹುದ್ದಾರ, ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ. ಡಿ.ಎಂ. ಹಿರೇಮಠ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.