ಪ್ರಧಾನ ಸುದ್ದಿ

ನಿತ್ಯಾಗೆ ಬಂಧನ ಕಂಟಕ?

ನಿತ್ಯಾಗೆ ಬಂಧನ ಕಂಟಕ?
Published On :

ಕ.ಪ್ರ.ವಾರ್ತೆ, ರಾಮನಗರ, ಜು. 28
-ರಾಮನಗರ ನ್ಯಾಯಾಲಯಕ್ಕೆ ಹಾಜರಾಗದ್ದರಿಂದ ಕ್ರಮ
-ಸಿಐಡಿ ಅಧಿಕಾರಿಗಳೆದುರು ಪುರುಷತ್ವ ಪರೀಕ್ಷೆಗೊಳಪಡಬೇಕಿತ್ತು

ರಾಸಲೀಲೆ ಪ್ರಕರಣದ ಹಿನ್ನೆಲೆಯಲ್ಲಿ ರಾಮನಗರದ ನಿತ್ಯಾನಂದನಿಗೆ ಮತ್ತೊಮ್ಮೆ ಬಂಧನ ಭೀತಿ ಎದುರಾಗಿದೆ. ವಿಚಾರಣೆಗೆ ಹಾಜರಾಗದ್ದರಿಂದ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರಂಟ್ ಜಾರಿ ಮಾಡಿದೆ.
ರಾಸಲೀಲೆ ಸಂಬಂಧ ಸಿಐಡಿ ಅಧಿಕಾರಿಗಳು ದಾಖಲಿಸಿದ್ದ ಪ್ರಕರಣದಡಿ ವಿಚಾರಣೆಗೆ ನಿತ್ಯಾನಂದ ಮತ್ತು ಆತನ 5 ಮಂದಿ ಅನುಯಾಯಿಗಳು ಸೋಮವಾರ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯ (ಹಿರಿಯ ಶ್ರೇಣಿ) ಹಾಜರಾಗದೇ ಇದ್ದರಿಂದ ನ್ಯಾಯಾಲಯ ವಾರಂಟ್ ಜಾರಿಗೊಳಿಸಿದೆ.
ಇದೇ ಪ್ರಕರಣದಡಿ ರಾಮನಗರದ ಜೆಎಂಎಫ್‌ಸಿ ನ್ಯಾಯಾಲಯವು ನಿತ್ಯಾನಂದನ ಪುರುಷತ್ವ ಪರೀಕ್ಷೆಗೂ ಆದೇಶಿಸಿತ್ತು. ಅದಕ್ಕಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ತೆರವುಗೊಳಿಸಿದ ಹಿನ್ನೆಲೆಯಲ್ಲಿ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಗೂ ಪುರುಷತ್ವ ಪರೀಕ್ಷೆಗಾಗಿ ಸಿಐಡಿ ಅಧಿಕಾರಿಗಳೆದುರು ನಿತ್ಯಾನಂದ ಖುದ್ದು ಹಾಜರಾಗಬೇಕಿತ್ತು.  ನಿತ್ಯಾನಂದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹರಿದ್ವಾರಕ್ಕೆ ತೆರಳಿರುವುದರಿಂದ ವಿಚಾರಣೆಯಲ್ಲಿ ಖುದ್ದು ಹಾಜರಿಗೆ ವಿನಾಯಿತಿ ನೀಡುವಂತೆ ಆರೋಪಿಗಳ ಪರ ವಕೀಲರು ಕೋರಿಕೆ ಸಲ್ಲಿಸುತ್ತಿದ್ದಂತೆ, ನ್ಯಾಯಾಧೀಶ ಎಸ್.ಎಚ್. ಹೊಸಗೌಡರ್ ಅಸಮಾಧಾನಗೊಂಡು ಕೋರಿಕೆಯನ್ನು ತಿರಸ್ಕರಿಸಿದ್ದಾರೆ. ನಿತ್ಯಾನಂದ ಸೇರಿದಂತೆ ಐವರು ಆರೋಪಿಗಳಾದ ಧನಶೇಖರನ್, ಗೋಪಾಲರೆಡ್ಡಿಶೀಲಂ, ಶಿವವಲ್ಲಭ ನೇನಿ, ಜಮುನಾರಾಣಿ, ರಾಗಿಣಿ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿದ್ದು, ಆರೋಪಿಗಳನ್ನು ಆ. 7ರೊಳಗೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂದು ಸಿಐಡಿ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಮತ್ತೆ ಉದ್ದಟತನ
ನಿತ್ಯಾನಂದ ಮತ್ತೆ ಉದ್ದಟತನ ಪ್ರದರ್ಶಿಸಿದ್ದಾನೆ. 'ಕನ್ನಡ ಸಂಘಟನೆಗಳ ಕಾರ್ಯಕರ್ತರು ಕೇವಲ ಹಣಕ್ಕಾಗಿ ನನ್ನ ಆಶ್ರಮದ ಮುಂದೆ ಪ್ರತಿಭಟನೆ ನಡೆಸುತ್ತಾರೆ. ಕೇವಲ 300ಕ್ಕೆ ಮೂರು ಗಂಟೆ ಕೂಗಾಡುತ್ತಾರೆ. ಇವರು ಕೂಲಿ ಹೋರಾಟಗಾರರು. ನನ್ನ ಆಶ್ರಮದ ಮುಂದೆ ಎಷ್ಟು ಗೇಟ್‌ಗಳಿವೆ ಎಂಬುದೂ ಇವರಿಗೆ ತಿಳಿದಿಲ್ಲ' ಎಂದು ಹರಿದ್ವಾರದಲ್ಲಿ ಹೇಳಿಕೆ ನೀಡಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.