ಹರಿದ್ವಾರಕ್ಕೆ ಸಿಐಡಿ ತಂಡ

-ಮತ್ತೀಕೆರೆ ಜಯರಾಮ್
ರಾಮನಗರ: ಪುರುಷತ್ವ ಪರೀಕ್ಷೆಗೆ ಬೆನ್ನು ತೋರಿ ಹರಿದ್ವಾರಕ್ಕೆ ಹಾರಿರುವ ನಿತ್ಯಾನಂದನ ಬಂಧನ ಸಾಧ್ಯತೆ ನಿಚ್ಚಳವಾಗಿದೆ. ಸ್ವಘೋಷಿತ ದೇವಮಾನವನಿಗೆ ಬಲೆ ಬೀಸಲು ಸಿಐಡಿ ಪೊಲೀಸರ ಎರಡು ತಂಡಗಳು ಈಗಾಗಲೇ ಹರಿದ್ವಾರಕ್ಕೆ ತೆರಳಿವೆ. ರಾಸಲೀಲೆ ಪ್ರಕರಣದಲ್ಲಿ ರಾಮನಗರದ ಜೆ.ಎಂ.ಎಫ್.ಸಿ. ನ್ಯಾಯಾಲಯವು ನಿತ್ಯಾನಂದ ಪುರುಷತ್ವ ಪರೀಕ್ಷೆಗೆ ಆದೇಶಿಸಿತ್ತು. ಅದಕ್ಕೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿರುವ ಹೈಕೋರ್ಟ್ ಜು.28ರಂದು ನಿತ್ಯಾನಂದನನ್ನು ವಶಕ್ಕೆ ತೆಗೆದುಕೊಂಡು, ಪುರುಷತ್ವ ಪರೀಕ್ಷೆಗೆ ಒಳಪಡಿಸಲು ಆದೇಶಿಸಿತ್ತು.
ಪುನರ್ ಪರಿಶೀಲನಾ ಅರ್ಜಿ ತಿರಸ್ಕೃತದ ಬೆನ್ನಲ್ಲೇ ನಿತ್ಯಾನಂದ ಬಿಡದಿ ಧ್ಯಾನಪೀಠ ತೊರೆದಿದ್ದಾನೆ. ಮಂಗಳವಾರ ಪ್ರಕರಣದ ವಿಚಾರಣೆಗೂ ಗೈರಾದ ನಿತ್ಯಾನಂದ, ಆತನ 5 ಮಂದಿ ಸಹಚರರ ವಿರುದ್ಧ ರಾಮನಗರ ಜೆ.ಎಂ.ಎಫ್.ಸಿ. ನ್ಯಾಯಾಲಯ ಜಾಮೀನು ರಹಿತ ಬಂಧನದ ವಾರೆಂಟ್ ಜಾರಿಗೊಳಿಸಿದೆ.
ಆ.7ರ ಗಡುವು : ಪುರುಷತ್ವ ಪರೀಕ್ಷೆಗೆ ಮಾತ್ರವಲ್ಲದೆ ಪ್ರಕರಣದ ವಿಚಾರಣೆಗಾಗಿ ನ್ಯಾಯಾಲಯಕ್ಕೂ ಗೈರಾಗಿರುವ ನಿತ್ಯಾನಂದನನ್ನು ಆ.7ರೊಳಗೆ ಬಂಧಿಸಬೇಕೆಂದು ರಾಮನಗರದ ಜೆ.ಎಂ.ಎಫ್.ಸಿ. ನ್ಯಾಯಾಲಯವು ಸಿಐಡಿ ಅಧಿಕಾರಿಗಳಿಗೆ ಗಡುವು ವಿಧಿಸಿದೆ. ಜಾಮೀನು ರಹಿತ ಬಂಧನದ ವಾರೆಂಟ್ ಸಮೇತ ಸಿಐಡಿ ಅಧಿಕಾರಿಗಳು ಹರಿದ್ವಾರಕ್ಕೆ ತೆರಳಿರುವುದನ್ನು ಇಲಾಖೆ ಮೂಲಗಳು ಖಚಿತಪಡಿಸಿದ್ದು, ಬಂಧನದಿಂದ ತಪ್ಪಿಸಿಕೊಳ್ಳಲು ನಿತ್ಯಾನಂದ ಹರಿದ್ವಾರದಿಂದ ಪಲಾಯನವಾಗುವ ಸಾಧ್ಯತೆ ಇದೆ.
ಬಂಧನ ಹೊಸದಲ್ಲ: ನಟಿಮಣಿಯೊಂದಿಗೆ ರಾಸಲೀಲೆ ಸಿಡಿ ಬಿಡುಗಡೆಯಾದಾಗ ತಲೆಮರೆಸಿಕೊಂಡಿದ್ದ ನಿತ್ಯಾನಂದನನ್ನು ರಾಮನಗರ ಪೊಲೀಸರು ಹಿಮಾಚಲ ಪ್ರದೇಶದಲ್ಲಿ ಬಂಧಿಸಿದ್ದರು. ನಂತರ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣದಲ್ಲೂ ಬಂಧನವಾಗಿತ್ತು. ಹೀಗಾಗಿ ನಿತ್ಯಾನಂದನಿಗೆ ಬಂಧನ, ಜೈಲುವಾಸ ಮತ್ತು ಜಾಮೀನು ಪಡೆದುಕೊಳ್ಳುವುದು ಹೊಸದೇನಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


