ಪ್ರಧಾನ ಸುದ್ದಿ

ರೌಡಿಸಂ ತಡೆಯದ ಎಸ್ಪಿ ಅಮಾನತು

ರೌಡಿಸಂ ತಡೆಯದ ಎಸ್ಪಿ ಅಮಾನತು
Published On :

ಕನ್ನಡಪ್ರಭ ವಾರ್ತೆ ಬೆಂಗಳೂರು ಜು.30
ರೌಡಿ ಶೀಟರ್ ವಿರುದ್ಧ ಕ್ರಮ ತೆಗೆದುಕೊಳ್ಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ದ.ಕ. ಎಸ್‌ಪಿ ಡಾ.ಶರಣಪ್ಪ, ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಲಿಂಗಪ್ಪ ಪೂಜಾರಿ ಮತ್ತು ಠಾಣಾಧಿಕಾರಿಯನ್ನು ಅಮಾನತುಗೊಳಿಸುವಂತೆ ಹೈಕೋರ್ಟ್ ಆದೇಶ ನೀಡಿದೆ.
ಬೆಳ್ತಂಗಡಿ ತಾಲೂಕಿನ ಉಜಿರೆಯ ರೌಡಿ ಶೀಟರ್ ಮಹೇಶ್ ಶೆಟ್ಟಿ ತಿಮರೋಡಿ, ಖಾಸಗಿ ಜಮೀನಿನಲ್ಲಿ ಅತಿಕ್ರಮ ದೇವಸ್ಥಾನ ನಿರ್ಮಿಸಿದ್ದಾನೆಂದು ಆರೋಪಿಸಿ ಶಶಿಕಲಾ ಶೆಟ್ಟಿ ಹಾಗೂ ಮೀರಾ ಶೆಟ್ಟಿ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾ. ಎಸ್.ಎನ್. ಸತ್ಯನಾರಾಯಣ ಅವರ ಪೀಠ, ಪ್ರಕರಣದಲ್ಲಿ ಪೊಲೀಸರ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿ ಅಮಾನತು ಆದೇಶ ನೀಡಿದೆ.
ಪ್ರಕರಣದ ಹಿನ್ನೆಲೆ: ಶ್ರೀ ನಾಗಬ್ರಹ್ಮ ಸಾನ್ನಿಧ್ಯ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷನೂ ಆಗಿರುವ ಮಹೇಶ್ ಶೆಟ್ಟಿ, ಮೇ 9ರಂದು ರಾತ್ರಿ ಅರ್ಜಿದಾರರಿಗೆ ಸೇರಿದ ಕೃಷಿ ಜಮೀನಿನಲ್ಲಿ ದೇವಸ್ಥಾನ ಕಟ್ಟುವುದಾಗಿ ಹೇಳಿ ಅತಿಕ್ರಮ ಪ್ರವೇಶ ಮಾಡಿದ್ದ. ಮಾತ್ರವಲ್ಲ, 30 ಅಡಕೆ ಮತ್ತು 6 ತೆಂಗಿನ ಮರ ಕಡಿದಿದ್ದ. ಈ ಬಗ್ಗೆ ದೂರು ದಾಖಲಿಸಿಕೊಳ್ಳಲು ಸಿಪಿಐ ನಿರಾಕರಿಸಿದ್ದರು. ಅರ್ಜಿದಾರರು ದಕ್ಷಿಣ ಕನ್ನಡ ಎಸ್‌ಪಿಗೆ ದೂರಿನ ಪ್ರತಿ ನೀಡಿ ಕ್ರಮ ತೆಗೆದುಕೊಳ್ಳುವಂತೆ ಕೋರಿದರು. ಕ್ರಮ ತೆಗೆದುಕೊಳ್ಳುವಂತೆ ಸರ್ಕಲ್ ಇನ್ಸ್‌ಪೆಕ್ಟರ್ ಎಸ್‌ಪಿಯೇ ಸೂಚಿಸಿದ್ದರು. ಪೊಲೀಸರು ಇದಕ್ಕೆ ಬದಲಾಗಿ, ಪ್ರಕರಣ ತಹಶೀಲ್ದಾರರ ವ್ಯಾಪ್ತಿಗೆ ಬರಲಿದ್ದು, ಸಿವಿಲ್ ಕೋರ್ಟ್ ಮೊರೆ ಹೋಗಿ ಎಂದು ಶರಾ ಬರೆದಿದ್ದರು.
ಅಕ್ರಮ ದೇವಸ್ಥಾನ ಕಾಮಗಾರಿ ನಿಲ್ಲಿಸುವಂತೆ ಜಿಲ್ಲಾ ನ್ಯಾಯಾಧೀಶರು, ಮೇ 21ರಂದು ಮಧ್ಯಂತರ ತಡೆ ನೀಡಿದ್ದರು. ಆದರೆ ಅದನ್ನೂ ಉಲ್ಲಂಘಿಸಿದ ಮಹೇಶ್ ಶೆಟ್ಟಿ, 11 ದಿನದಲ್ಲಿ ದೇವಸ್ಥಾನ ನಿರ್ಮಿಸಿ ಶಂಕುಸ್ಥಾಪನೆ ಮಾಡಿದ್ದಾನೆ ಎಂದು ಅರ್ಜಿದಾರರು ಆರೋಪಿಸಿದ್ದರು. ಪೊಲೀಸರ ಶರಾ ರದ್ದುಗೊಳಿಸಿ ಪ್ರಕರಣವನ್ನು ಮಂಗಳೂರು ಸಿಸಿಬಿಗೆ ಒಪ್ಪಿಸಿಬೇಕೆಂದು ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.