ನಾನಯ್ಯಾ ಅನ್ನೋರ ನಡುವೆ ಮಂಕಾದ ನಾಣಯ್ಯ!

ಎಂ.ಸಿ. ನಾಣಯ್ಯ ಅವರಂತಹ ಮಾತನಾಡುವ, ವಿಷಯ ಜ್ಞಾನ ಹೊಂದಿದರುವ, ಅನುಭವೀ ವ್ಯಕ್ತಿ ವಿಧಾನಪರಿಷತ್ನಲ್ಲಿರುವುದಕ್ಕಿಂತ 'ನೀಡುವ ತಾಕತ್ತಿರುವ' ವ್ಯಕ್ತಿಯೇ ಮುಖ್ಯ ಎಂಬ 'ರೋಗ'ಕ್ಕೆ ಮೂರು ಪಕ್ಷಗಳು ಜೋತುಬಿದ್ದರೆ ರಾಜ್ಯದ ಜನರ ದುರದೃಷ್ಟ.
ಹಿರಿಯ ಮುತ್ಸದ್ದಿ. ವಿಷಯ ಯಾವುದೇ ಇರಲಿ ಖಡಕ್ ಆಗಿ ಮತ್ತು ಪಕ್ಷಾತೀತವಾಗಿ ಮಾತನಾಡುವ ಛಾತಿ ಉಳ್ಳವರು. ಸುದೀರ್ಘ ರಾಜಕೀಯ ಜೀವನದಲ್ಲಿ ಎಲ್ಲೂ ಹೆಸರುಕೆಡಿಸಿಕೊಂಡವರಲ್ಲ. ಅವರು ಮಾತನಾಡುತ್ತಾರೆಂದರೆ ವಿಧಾನ ಪರಿಷತ್ತಿನಲ್ಲಿದ್ದವರೆಲ್ಲ ಸುಮ್ಮನಿದ್ದು ಕೇಳುತ್ತಾರೆ.
ಅಂತಹ ಹಿರಿಯ ರಾಜಕಾರಣಿ ಎಂ.ಸಿ. ನಾಣಯ್ಯ ಅವರಿಗೆ ಈ ಬಾರಿ ವಿಧಾನಪರಿಷತ್ನಲ್ಲಿ ಅವಕಾಶವಿಲ್ಲ!
ಎಂ.ಸಿ. ನಾಣಯ್ಯ ಅವರಿಗೆ ಜಾತಿ ಬೆಂಬಲವಿಲ್ಲ. ಹಣ ಬಲ ಮೊದಲೇ ಇಲ್ಲ. ಅವರಿಗೆ ಟಿಕೆಟ್ ನೀಡುವುದರಿಂದ ಮತಗಳೇನೂ ಬರುವುದಿಲ್ಲ. ಆದರೆ ಇವಿಷ್ಟೇ ಕಾರಣಕ್ಕೆ ನಾಣಯ್ಯ ವಿಧಾನಪರಿಷತ್ನಿಂದ ಹೊರಗುಳಿಯಬೇಕೆ? ಪಕ್ಷಾತೀತವಾಗಿ, ಖಡಕ್ ಆಗಿ, ಇದ್ದದ್ದನ್ನ ಇದ್ದ ಹಾಗೇ ಹೇಳುವ ಹಿರಿಯರ ಅಗತ್ಯ ವಿಧಾನಪರಿಷತ್ಗಿಲ್ಲವೇ? ಜಾತಿ, ಹಣ ಬೆಂಬಲವಿಲ್ಲ ಎಂಬ ಕಾರಣಕ್ಕೆ ನಾಣಯ್ಯ ಅವರಂತಹ ಹಿರಿಯರನ್ನು ಪರಿಷತ್ನಿಂದ ಹೊರಗಿಡುವುದು ಸರಿಯೇ?
ವಿಧಾನ ಪರಿಷತ್ ಅಥವಾ ಮೇಲ್ಮನೆ ಒಂದರ್ಥದಲ್ಲಿ ಹಿರಿಯರ ಮನೆ. ವಿಧಾನಸಭೆಯಲ್ಲಿ ಹಲವಾರು ಕಾರಣಗಳಿಗೆ ಒಂದು ಮಸೂದೆ ಅಥವಾ ನಿರ್ಧಾರ ಕೈಗೊಳ್ಳಬಹುದು. ಆದರೆ ವಿಧಾನ ಪರಿಷತ್ತಿಗೆ ಅಂತಹ ಕಾರಣಗಳಿಲ್ಲ. ವಿಧಾನಪರಿಷತ್ತು ಎಲ್ಲವನ್ನೂ ಯಾವುದೇ ಒತ್ತಡ, ಅನಿವಾರ್ಯಗಳಿಲ್ಲದೇ ವಿಮರ್ಶೆಗೊಳಪಡಿಸಬೇಕು. ಅದರಲ್ಲಿರುವ ನ್ಯೂನತೆಗಳನ್ನು ಹುಡುಕಬೇಕು. ಆಗ ಮಾತ್ರ ವಿಧಾನಪರಿಷತ್ನ ಸ್ಥಾಪನೆ ಸಾರ್ಥಕ.
ಆರಂಭದಲ್ಲಿ ವಿಧಾನಪರಿಷತ್ ನೇಮಕಗಳು ರಾಜಕೀಯೇತರವಾಗಿರುತ್ತಿದ್ದವು. ಒಬ್ಬ ವ್ಯಕ್ತಿ ಸಮರ್ಥನಾಗಿರಬಹುದು. ಸಾಕಷ್ಟು ಸಾಧನೆಯನ್ನೂ ಮಾಡಿರಬಹುದು. ಆದರೆ ಆತ ಚುನಾವಣೆಗೆ ನಿಲ್ಲುವ ಆಸಕ್ತಿ, ಶಕ್ತಿ ಹೊಂದಿಲ್ಲದೇ ಇರಬಹುದು. ಚುನಾವಣೆಯಲ್ಲಿ ಸ್ಪರ್ಧಿಸಿಯೂ ಗೆಲ್ಲದಿರಬಹುದು. ಎಲ್ಲದಕ್ಕೂ ಚುನಾವಣೆಯ ವಿಜಯವೊಂದೇ ಮಾನದಂಡವಾಗಲಾರದು. ಹಾಗೆ ಆಗಲೂಬಾರದು ಎಂಬ ಕಾರಣಕ್ಕೇ ವಿಧಾನಪರಿಷತ್ ಇರುವುದು.
ಆದರೆ ಬದಲಾದ ಕಾಲ, ಸನ್ನಿವೇಶ, ರಾಜಕೀಯ ಚಿಂತನೆ- ಲೆಕ್ಕಾಚಾರಗಳಲ್ಲಿ ಇವುಗಳಿಗೆಲ್ಲ ಎಲ್ಲಿದೆ ಬೆಲೆ?
ವಿಧಾನಪರಿಷತ್ನಲ್ಲಿ ನಾನಾ ವಿಷಯಗಳ ಬಗ್ಗೆ ನಾಣಯ್ಯ ಮಾತನಾಡಿದ್ದನ್ನು ಕೇಳಿದವರಿಗೆ, ಒಬ್ಬ ರಾಜಕಾರಣಿಯಾಗಿದ್ದುಕೊಂಡೂ ರಾಜಕಾರಣಿಗಳನ್ನೇ, ರಾಜಕಾರಣವನ್ನೇ ಅವರು ವಿಮರ್ಶೆಗೊಳಪಡಿಸುತ್ತಿದ್ದ ಪರಿ ಗಮನಿಸಿದವರಿಗೆ, ಅವರಂತಹ ವ್ಯಕ್ತಿಗಳು ವಿಧಾನಪರಿಷತ್ನಲ್ಲಿ ಇರಲೇಬೇಕು ಎಂದು ಅಭಿಪ್ರಾಯ ಮೂಡಿಯೇ ಮೂಡುತ್ತದೆ. ಆದರೆ ಅಂಥ ಚಿಂತನೆ ನಮ್ಮ ರಾಜಕೀಯ ಪಕ್ಷಗಳಲ್ಲಿ ಕಾಣುತ್ತಿಲ್ಲ.
ಎಂ. ಸಿ. ನಾಣಯ್ಯ ಅವರು ರಾಜ್ಯದ ಅತ್ಯಂತ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರು. ಅವರು 1978ರಿಂದ 1983ರವರೆಗೆ ವಿಧಾನಸಭೆ ಸದಸ್ಯರಾಗಿ, 1986, 1992 ಮತ್ತು 2008ರಲ್ಲಿ ವಿಧಾನಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮೂರು ಬಾರಿ ವಿಧಾನಪರಿಷತ್ ಸದಸ್ಯರಾಗಿದ್ದಾರೆ. ಸಾಕು ಬಿಡಿ ಎಂದು ವಾದ ಮಾಡಬಹುದು. ಆದರೆ ಅತ್ಯಂತ ಹಿರಿಯ ರಾಜಕಾರಣಿಯನ್ನು ವಿಧಾನಪರಿಷತ್ನಲ್ಲಿ ಇರಿಸಿಕೊಳ್ಳುವುದರಿಂದ ರಾಜ್ಯಕ್ಕೆ ಲಾಭವೇ ಹೊರತು ನಷ್ಟವಂತೂ ಖಂಡಿತ ಇಲ್ಲ.
ನಮ್ಮ ರಾಜಕೀಯ ಪಕ್ಷಗಳು ಅಧಿಕಾರಕ್ಕೇರುವ ಅಥವಾ ಲಾಭವಾಗುವ ಸಂಗತಿಗಳು ಬಂದಾಗ ಒಂದಾಗುತ್ತವೆ. ಎಂತಹ ವೈಷಮ್ಯವನ್ನೂ ಯಾವು ಯಾವುದೋ ಕಾರಣ ನೀಡಿ ಬದಿಗೆ ಸರಿಸುತ್ತವೆ. ಹೀಗಿರುವಾಗ ಎಂ.ಸಿ. ನಾಣಯ್ಯ ಅವರಂತಹ ನಾಯಕರ ವಿಷಯದಲ್ಲಿ ಯಾಕೆ ಅಂತಹ ನಿರ್ಧಾರ ಕೈಗೊಳ್ಳಬಾರದು? ಇದನ್ನು ಏಕೆ ಹೇಳಬೇಕಾಗಿದೆಯೆಂದರೆ ನಾಣಯ್ಯ ಅವನ್ನು ವಿಧಾನಪರಿಷತ್ಗೆ ಕಳುಹಿಸುವುದರಿಂದ ಯಾವುದೇ ರಾಜಕೀಯ ಲಾಭ ಇಲ್ಲ ಎಂದು ಜೆಡಿಎಸ್ ಭಾವಿಸಿರಬಹುದು. ರಾಜಕೀಯವಾಗಿ ಅವರ ಲೆಕ್ಕಾಚಾರ ಸರಿಯೇ. ಆದರೆ ಬಿಜೆಪಿ, ಕಾಂಗ್ರೆಸ್ ಮತ್ತು ಬಿಜೆಪಿ ಹೀಗೆ ಮೂರು ಪಕ್ಷಗಳಿಗೂ ತಮ್ಮ ಆಯ್ಕೆಯ ಅಭ್ಯರ್ಥಿಗಳನ್ನು ಆರಿಸಿದ ನಂತರ ಒಂದಷ್ಟು ಮತಗಳು ಹೆಚ್ಚು ಉಳಿಯುತ್ತವೆ. ಎಲ್ಲ ರಾಜಕೀಯ ಪಕ್ಷಗಳು ಒಮ್ಮತದಿಂದ ಎಂ.ಸಿ. ನಾಣಯ್ಯ ಅವರಂತಹ ವ್ಯಕ್ತಿಯನ್ನು ಯಾಕೆ ವಿಧಾನಪರಿಷತ್ಗೆ ಆರಿಸಬಾರದು? ಇದರಿಂದ ಪ್ರತಿ ಪಕ್ಷದ ಹೆಚ್ಚುವರಿ ಮತವೂ ಸದ್ಬಳಕೆಯಾದಂತಾಗುತ್ತದೆ.
ಹೀಗೆ ಮಾಡುವುದರಿಂದ ಪಕ್ಷಗಳು ಹೆಚ್ಚುವರಿ ಮತಗಳನ್ನು ಮಾರಿಕೊಂಡರು, ಮತ ಖರೀದಿ ನಡೆಯಿತು ಎಂಬ ಆರೋಪವೂ ತಪ್ಪುತ್ತದೆ. ಒಳ್ಳೆಯ ಸಂಪ್ರದಾಯವೊಂದನ್ನು ಆರಂಭಿಸಿದಂತಾಗುತ್ತದೆ. ವಿಧಾನಪರಿಷತ್ನಲ್ಲಿ ಉತ್ತಮ ವ್ಯಕ್ತಿ, ವಾಗ್ಮಿ, ಅನುಭವಿಯೊಬ್ಬರು ಇದ್ದಂತಾಗುತ್ತದೆ. ಈಗಾಗಲೇ ಮೂರನೇ ಅಭ್ಯರ್ಥಿಯಾಗಿ ಯಾರು ನಿಲ್ಲಬಹುದು? ಯಾರು, ಯಾವ ಪಕ್ಷದ ಮತಗಳನ್ನು ತರಬಹುದು ಎಂಬ ಲೆಕ್ಕಾಚಾರ ನಡೆಯುತ್ತಿದೆ. ಅದರ ಬದಲು ಎಂ.ಸಿ. ನಾಣಯ್ಯ ಅವರಂತಹ ವ್ಯಕ್ತಿಯನ್ನು ವಿಧಾನಪರಿಷತ್ಗೆ ಕಳುಹಿಸಲು ಪಕ್ಷಗಳು ನಿರ್ಧರಿಸುವ ಮೂಲಕ ಹೊಸತೊಂದು ಸತ್ಸಂಪ್ರದಾಯಕ್ಕೆ ಏಕೆ ನಾಂದಿ ಹಾಡಬಾರದು? ರಾಜಕೀಯದ ಬಗ್ಗೆ ಜನ ಕೆಟ್ಟ ಭಾವನೆಯನ್ನೇ ಬೆಳೆಸಿಕೊಳ್ಳುತ್ತಿರುವಾಗ ಅದನ್ನು ಬದಲಾಯಿಸಲು ಇಂತಹ ನಿರ್ಧಾರಗಳು ಜನರಲ್ಲಿ ರಾಜಕೀಯದ ಬಗ್ಗೆ ಮತ್ತು ರಾಜಕಾರಣಿಗಳ ಬಗ್ಗೆ ಉತ್ತಮ ಅಭಿಪ್ರಾಯ ಮೂಡಲು ಕಾರಣವಾಗಬಹುದು. ಅಂತಹ ಪ್ರಯತ್ನಕ್ಕೆ ಇದು ಸಕಾಲ ಕೂಡ.
ಎಂ.ಸಿ. ನಾಣಯ್ಯ ಅವರಂತಹ ಮಾತನಾಡುವ, ವಿಷಯ ಜ್ಞಾನ ಹೊಂದಿದರುವ, ಅನುಭವೀ ವ್ಯಕ್ತಿ ವಿಧಾನಪರಿಷತ್ನಲ್ಲಿರುವುದಕ್ಕಿಂತ 'ನೀಡುವ ತಾಕತ್ತಿರುವ' ವ್ಯಕ್ತಿಯೇ ಮುಖ್ಯ ಎಂಬ 'ರೋಗ'ಕ್ಕೆ ಮೂರು ಪಕ್ಷಗಳು ಜೋತುಬಿದ್ದರೆ ರಾಜ್ಯದ ಜನರ ದುರದೃಷ್ಟ.
-ವಿನಾಯಕ ಭಟ್ಟ ಮೂರೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


