ಸಿಇಟಿ ಕೌನ್ಸೆಲಿಂಗ್ ಅಕ್ರಮ ಸಾಬೀತು

ಜಾತಿ, ವರ್ಗ ಬದಲಾವಣೆಗೆ 8 ದಿನಗಳಲ್ಲಿ ಸಲ್ಲಿಕೆಯಾದ ಅರ್ಜಿ ಕೇವಲ 110 ಟಿ ಕಳೆದ ವರ್ಷ ಬಂದಿದ್ದ ಅರ್ಜಿಗಳು 7693! 26 ಸಾವಿರ ರ್ಯಾಂಕ್ವರೆಗಿನ ದಾಖಲೆ ಪರಿಶೀಲನೆಯಲ್ಲಿ ಹಾಜರಾದವರು 12 ಸಾವಿರ ಮಾತ್ರ
ಬೆಂಗಳೂರು: ರಾಜ್ಯದ ವಿದ್ಯಾರ್ಥಿಗಳು ದಡ್ಡರು, ಅವರಿಗೆ ಜಾತಿ ಗೊತ್ತಿಲ್ಲ, ಅರ್ಜಿ ಸಲ್ಲಿಸುವಾಗ ತಪ್ಪುತ್ತಾರೆ ಎಂಬ ಭಾವನೆಯಿಂದ 'ಕಡ್ಡಾಯ ತಿದ್ದುಪಡಿಗೆ ಅವಕಾಶ ಕೊಡಲೇಬೇಕು' ಎಂಬ ಉನ್ನತ ಶಿಕ್ಷಣ ಇಲಾಖೆಯ ವಾದ ಹುಸಿಯಾಗಿದೆ.
ಶಿಕ್ಷಣ ಇಲಾಖೆ ಅಧಿಕಾರಿಗಳು ತಮ್ಮ ಅಕ್ರಮಗಳಿಗಾಗಿ ವಿದ್ಯಾರ್ಥಿಗಳ ಪೆದ್ದು ಮಾಡುತ್ತಿರುವುದು ಈ ಬಾರಿ ಸಿಇಟಿ ಕೌನ್ಸೆಲಿಂಗ್ನಲ್ಲಿ ಸಾಬೀತಾಗಿದೆ. ಜಾತಿ, ವರ್ಗ ಬದಲಾವಣೆ ಕೋರಿ 8 ದಿನಗಳಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಬಂದ ಅರ್ಜಿಗಳ ಸಂಖ್ಯೆ ಕೇವಲ 110. ಕಳೆದ ವರ್ಷದ ಕೌನ್ಸೆಲಿಂಗ್ನಲ್ಲಿ 7693 ವಿದ್ಯಾರ್ಥಿಗಳು ಮೀಸಲು ಬದಲಿಸಿಕೊಂಡಿದ್ದರು. ಅಕ್ರಮ ಹಾಗೂ ಹಣ ದೋಚಲೆಂದೇ ಇಲಾಖೆ ಇಂಥ ಅಸಂಬದ್ಧ ಆದೇಶ ಹೊರಡಿಸಿತ್ತು.
ಎರಡು ವರ್ಷದಲ್ಲಿ 5 ಆದೇಶ: ಜಾತಿ, ವರ್ಗ ಹಾಗೂ ಗ್ರಾಮೀಣ ಮೀಸಲು ತಿದ್ದುಪಡಿಗೆ ಅವಕಾಶ ನೀಡಲೆಂದೇ 2013ರ ಮೇ 24ರಂದು ಆದೇಶ ಹೊರಡಿಸಲಾಗಿತ್ತು. ಆದರೆ ಪ್ರಾಧಿಕಾರದ ಕೌನ್ಸೆಲಿಂಗ್ನಲ್ಲಿ ದೊಡ್ಡ ಅಕ್ರಮ ಕಂಡು ಜನವರಿಯಲ್ಲಿ ಆದೇಶ ರದ್ದುಗೊಳಿಸಲಾಯಿತು. ಬಳಿಕ ಫೆಬ್ರವರಿಯಲ್ಲಿ ಸಿಇಟಿಗೆ ಅರ್ಜಿ ಆಹ್ವಾನಿಸುವಾಗ ಮತ್ತೊಂದು ಆದೇಶ ಹೊರಡಿಸಿ, 'ಅರ್ಜಿಯಲ್ಲಿ ಸಲ್ಲಿಸಿದ ದಾಖಲೆಗಳೇ ಅಂತಿಮ' ಎಂದು ಸರ್ಕಾರ ಹೇಳಿತು. ಆದರೆ ಇಲಾಖೆಯ ಬೃಹಸ್ಪತಿಗಳು ರಾಜ್ಯದ ವಿದ್ಯಾರ್ಥಿಗಳನ್ನು ತಪ್ಪಾಗಿ ಅರ್ಥೈಸಿ, ಆದೇಶಕ್ಕೆ ತಿದ್ದುಪಡಿ ತಂದು, ದಾಖಲೆ ಪರಿಶೀಲನೆ ಸಂದರ್ಭದಲ್ಲಿ ಮೀಸಲು ಬದಲಾಯಿಸಿಕೊಳ್ಳಬಹುದು ಎಂದರು.
ಇದು ಅಕ್ರಮಗಳಿಗೆ ಎಡೆ ಮಾಡಿಕೊಟ್ಟ ಬಗ್ಗೆ 'ಕನ್ನಡಪ್ರಭ'ದಲ್ಲಿ ವರದಿ ಪ್ರಕಟವಾದ ಬಳಿಕ ಎಚ್ಚೆತ್ತ ಇಲಾಖೆ, ಆದೇಶ ಹಿಂಪಡೆದು ಮೂಲ ಆದೇಶದಂತೆ ಕಾರ್ಯನಿರ್ವಹಿಸಲು ಮುಂದಾಯಿತು. ಆಗ ಮತ್ತೊಂದು ಸುತ್ತೋಲೆ ಹೊರಡಿಸಿ, 'ಅರ್ಜಿಯಲ್ಲಿನ ಅಂಶಗಳೇ ಅಂತಿಮ' ಎಂದಿತು.
ಇದೆಲ್ಲ ಸರ್ಕಸ್ ಬಳಿಕ ರಾಜ್ಯದ 13 ದಾಖಲೆ ಪರಿಶೀಲನಾ ಕೇಂದ್ರಗಳಿಂದ ತಿದ್ದುಪಡಿಗೆ ಬಂದ ಅರ್ಜಿಗಳ ಸಂಖ್ಯೆ ಕೇವಲ 110. ಅಂದಹಾಗೆ ಇಲ್ಲಿವರೆಗೆ 26 ಸಾವಿರ ರ್ಯಾಂಕ್ವರೆಗಿನ 12 ಸಾವಿರ ವಿದ್ಯಾರ್ಥಿಗಳು ದಾಖಲೆ ಪರಿಶೀಲನೆಗೆ ಹಾಜರಾಗಿದ್ದಾರೆ. ಕಳೆದ ವರ್ಷದ ಮಾಹಿತಿ ಅವಲೋಕಿಸಿದಾಗ ಎಲ್ಲ ದಾಖಲೆ ಬದಲಾಗಿದ್ದು 30 ಸಾವಿರ ರ್ಯಾಂಕ್ ಒಳಗಿನ ವಿದ್ಯಾರ್ಥಿಗಳಿಗೆ ಸಂಬಂಧಿಸಿ ಎಂಬುದು ಸ್ಪಷ್ಟ. ಏಕೆಂದರೆ ಉತ್ತಮ ಕಾಲೇಜು ಪಡೆವ ಉದ್ದೇಶದಿಂದ ವಿದ್ಯಾರ್ಥಿಗಳು ಇಂತಹ ಕಿತಾಪತಿ ಮಾಡುತ್ತಾರೆ.
ತಪ್ಪು ತಿದ್ದುವ ಅವಕಾಶವಿಲ್ಲ ಎಂದಾದಲ್ಲಿ ತಪ್ಪು ಮಾಡುವವರ ಸಂಖ್ಯೆಯೂ ಇಳಿಯುತ್ತದೆ. ಎಂಜಿನಿಯರ್, ವೈದ್ಯರಾಗ ಹೊರಟವರ ಅರ್ಜಿಯಲ್ಲೇ ತಪ್ಪು ಮಾಡಬಹುದು ಎಂದು ಹೇಳಿದರೆ ದೊಡ್ಡ ಸಂಖ್ಯೆಯ 'ಪೆದ್ದು'ಗಳು ಸಿಗುತ್ತಾರೆ.
ವಿಶೇಷ ಸಮಿತಿ ನೇಮಕ
ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಪ್ರಾಧಿಕಾರಕ್ಕೆ ಬಂದಿರುವ ಇಂತಹ ಅರ್ಜಿಗಳನ್ನು ಇದು ಪರಿಶೀಲಿಸುತ್ತದೆ. ಇದಕ್ಕೂ ಮುಂಚೆ ಪ್ರಾಧಿಕಾರದ ಕಾನೂನು ತಂಡ ದಾಖಲೆ ಪರಿಶೀಲಿಸುತ್ತದೆ. ಒಂದೊಮ್ಮೆ ಸುಳ್ಳು ಕಂಡುಬಂದರೆ ಕೂಡಲೇ ಸ್ಥಳದಲ್ಲಿಯೇ ವಿದ್ಯಾರ್ಥಿ ಹಾಗೂ ಪಾಲಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಪ್ರಾಧಿಕಾರ ನಿರ್ಧರಿಸಿದೆ.
ಬುದ್ಧಿವಂತರು ದೂರ!
ರಾಜ್ಯದ ಬುದ್ಧಿವಂತ ವಿದ್ಯಾರ್ಥಿಗಳು ಎಂಜಿನಿಯರಿಂಗ್ನಿಂದ ದೂರವಾಗುತ್ತಿದ್ದಾರೆ. ಪ್ರಸಕ್ತ ಸಾಲಿನ ಕೌನ್ಸೆಲಿಂಗ್ ಇದಕ್ಕೆ ಸಾಕ್ಷಿ. ಮೊದಲ 6 ದಿನದಲ್ಲಿ 26 ಸಾವಿರ ರ್ಯಾಂಕ್ವರೆಗೆ ದಾಖಲೆ ಪರಿಶೀಲನೆ ನಡೆದಿದೆ. ಇದರಲ್ಲಿ ಕೇವಲ 12,390 ಮಂದಿ ದಾಖಲೆ ಪರಿಶೀಲಿಸಿಕೊಂಡಿದ್ದಾರೆ. ಇನ್ನು ಸುಮಾರು 4 ಸಾವಿರ ವಿದ್ಯಾರ್ಥಿಗಳು ವೈದ್ಯ, ದಂತವೈದ್ಯ, ವಾಸ್ತುಶಿಲ್ಪ ಕೋರ್ಸ್ಗಳಿಗೆ ಹೋಗುತ್ತಾರೆ. ಅಂದರೆ ಎಂಜಿನಿಯರಿಂಗ್ನಲ್ಲಿ ಈ ಬಾರಿ ಬಹಳಷ್ಟು ಸೀಟು ಉಳಿಯುವುದು ಖಾತ್ರಿ.
-ರಾಜೀವ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


