ಗೋಲಿಬಾರ್ಗೆ 6 ವರ್ಷ ಪಾಠ ಕಲಿಯದ ಸರ್ಕಾರ

ಕನ್ನಡಪ್ರಭ ವಾರ್ತೆ, ಹಾವೇರಿ, ಜೂ. 9
ರಸಗೊಬ್ಬರ, ಬಿತ್ತನೆ ಬೀಜ ಕೇಳಿದ ರೈತರ ಮೇಲೆ ಗುಂಡು ಹಾರಿಸಿ ಬರೊಬ್ಬರಿ ಆರು ವರ್ಷಗಳಾಗಿವೆ. ರೈತರಿಗೆ ಗುಂಡಿಕ್ಕಿದ್ದನ್ನೇ ಪ್ರಮುಖ ಅಸ್ತ್ರ ಮಾಡಿಕೊಂಡಿದ್ದ ಪಕ್ಷ ಈಗ ಅಧಿಕಾರದಲ್ಲಿದೆ. ಆದರೆ ರಸಗೊಬ್ಬರ ಹಾಗೂ ಬಿತ್ತನೆ ಬೀಜ ದಾಸ್ತಾನು ಈಗಲೂ ಸಾಕಷ್ಟಿಲ್ಲ.
ಹಿಂದಿನ ಸರ್ಕಾರ ಮಾಡಿದ ತಪ್ಪಿಗೆ ಇಬ್ಬರು ರೈತರು ಬಲಿಯಾದರು. ಆದರೂ ಸರ್ಕಾರ ಪಾಠ ಕಲಿತಿಲ್ಲ. ಮುಂಗಾರು ಹಂಗಾಮು ಆರಂಭವಾಗಿದ್ದು, ರೈತರು ಬಿತ್ತನೆ ಬೀಜ ಹಾಗೂ ರಸಗೊಬ್ಬರ ಖರೀದಿಯಲ್ಲಿ ತೊಡಗಿದ್ದಾರೆ. ಆದರೆ ಬೇಡಿಕೆಯಷ್ಟು ಪ್ರಮಾಣದಲ್ಲಿ ಬೀಜ, ಗೊಬ್ಬರ ದಾಸ್ತಾನು ಮಾಡಿಕೊಳ್ಳದೆ ಕೃಷಿ ಇಲಾಖೆ ಮತ್ತೊಂದು ಎಡವಟ್ಟಿಗೆ ಆಹ್ವಾನ ನೀಡುತ್ತಿರುವಂತಿದೆ.
ರೈತರಿಗೆ ಗುಂಡೇಟು: 2008, ಜೂ. 10. ಮುಂಗಾರು ಬಿತ್ತನೆಗೆ ರೈತರು ಬೀಜ, ರಸಗೊಬ್ಬರ ಖರೀದಿಗೆ ಮುಗಿಬಿದ್ದಿದ್ದರು. ಹಾವೇರಿಯಲ್ಲಿ ರೈತರ ಬೇಡಿಕೆಯಷ್ಟು ಗೊಬ್ಬರ ದಾಸ್ತಾನಿರಲಿಲ್ಲ. ದೂರದ ಊರುಗಳಿಂದ ಬಂದಿದ್ದ ರೈತರ ಆಕ್ರೋಶ ನೆತ್ತಿಗೇರಿತ್ತು. ಪ್ರತಿಭಟನೆ ಆರಂಭವಾಯಿತು. ಸಮಾಧಾನಿಸಲು ಪೊಲೀಸರು ಯತ್ನಿಸಿದಷ್ಟೂ ರೈತರ ಆಕ್ರೋಶ ತೀವ್ರಗೊಂಡಿತು. ಉದ್ರಿಕ್ತ ರೈತರ ಮೇಲೆ ಪೊಲೀಸರು ಗೋಲಿಬಾರ್ ನಡೆಸಿ ಬಿಟ್ಟರು. ಇಬ್ಬರು ರೈತರು ಮೃತಪಟ್ಟರೆ, ಅನೇಕರು ಗಾಯಗೊಂಡರು. ಆಗ ತಾನೇ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಸರ್ಕಾರವನ್ನು ಟೀಕಿಸಲು ಪ್ರತಿಪಕ್ಷಕ್ಕೆ ಬ್ರಹ್ಮಾಸ್ತ್ರವೇ ಸಿಕ್ಕಿತು. ಈಗ ಕಾಂಗ್ರೆಸ್ ಅಧಿಕಾರದಲ್ಲಿದೆ. ಆದರೂ ಬೀಜ, ಗೊಬ್ಬರ ಕೊರತೆ ಮುಂದುವರಿದಿದೆ.
ಬಿತ್ತನೆಗೆ ಸಿದ್ಧತೆ: ಈ ಬಾರಿಯೂ ಮುಂಗಾರು ಪೂರ್ವ ಮಳೆ ಚೆನ್ನಾಗಿ ಆಗಿದ್ದು, ರೈತರು ಬಿತ್ತನೆಗೆ ಅಣಿಯಾಗಿದ್ದಾರೆ. ಮುಂಗಾರು ಪ್ರವೇಶವೂ ಆಗಿದ್ದರಿಂದ ನಿರೀಕ್ಷೆ ಗರಿಗೆದರಿದೆ. ವಾರದೊಳಗೆ ಬಿತ್ತನೆ ಕಾರ್ಯ ಆರಂಭವಾಗಲಿದೆ. ಬೇಡಿಕೆಗೆ ಅನುಗುಣವಾಗಿ ಬೀಜ-ಗೊಬ್ಬರ ದಾಸ್ತಾನಿದೆ ಎಂದು ಕೃಷಿ ಇಲಾಖೆ ಹೇಳುತ್ತಿದ್ದರೂ, ಅಂಕಿ-ಅಂಶಗಳು ಮಾತ್ರ ಬೇರೆಯದೇ ಕಥೆ ಹೇಳುತ್ತಿವೆ. ಗೊಬ್ಬರ ದಾಸ್ತಾನು ಸಮರ್ಪಕವಾಗಿಲ್ಲ ಎನ್ನುವುದನ್ನು ತೋರಿಸುತ್ತಿವೆ.
ರಸಗೊಬ್ಬರ ಕೊರತೆ
ಮುಂಗಾರು ಹಂಗಾಮಿಗೆ 80 ಸಾವಿರ ಮೆಟ್ರಿಕ್ ಟನ್ ಯೂರಿಯಾ ಬೇಡಿಕೆಯಿದೆ. ಲಭ್ಯವಿರುವುದು 5680 ಮೆ. ಟನ್ ಮಾತ್ರ. ಡಿಎಪಿ 15,600 ಟನ್ ಬೇಡಿಕೆಯಿದ್ದು, 12,235 ಟನ್ ದಾಸ್ತಾನಿದೆ. ಎಂಓಪಿ 3500 ಟನ್ ಬೇಡಿಕೆಯಿದ್ದು, 2617 ಟನ್ ಇದೆ. ಕಾಂಪ್ಲೆಕ್ಸ್ 20,500 ಟನ್ ಬೇಡಿಕೆಯಿದ್ದು, ಖಾಸಗಿ, ಕೆಎಸ್ಸಿಎಂಎಫ್ನಲ್ಲಿ 12,581 ಟನ್ ಮಾತ್ರ ಇದೆ. ಒಟ್ಟು ಮುಂಗಾರು ಹಂಗಾಮಿಗೆ 80,100 ಟನ್ ಬೇಡಿಕೆಯಿದ್ದರೆ, ದಾಸ್ತಾನನಿರುವುದು ಅರ್ಧಕ್ಕೂ ಕಮ್ಮಿ (33,113 ಟನ್).
ಬೇಡಿಕೆಯಷ್ಟು ದಾಸ್ತಾನಿಲ್ಲ
ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 3.27 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. 44,200 ಕ್ವಿಂಟಲ್ ಗೋವಿನಜೋಳ ಬೀಜ ಬೇಡಿಕೆ ಇದ್ದು, 3070 ಕ್ವಿಂ. ಬೀಜ ದಾಸ್ತಾನಿದೆ. 4,96,400 ಪ್ಯಾಕೆಟ್ ಬಿಟಿ ಹತ್ತಿ ಬೀಜಗಳಿಗೆ ಬೇಡಿಕೆ ಇದ್ದು, 2 ಲಕ್ಷ ಪ್ಯಾಕೆಟ್ ದಾಸ್ತಾನಿದೆ. 51 ಸಾವಿರ ಪ್ಯಾಕೆಟ್ ಮಾರಾಟ ಮಾಡಲಾಗಿದೆ. 2200 ಕ್ವಿಂಟಲ್ ಸೋಯಾಬೀನ್, ಅವರೆ ಬೀಜ ದಾಸ್ತಾನಿದೆ. ಬಿಟಿ ಹತ್ತಿ, ಬತ್ತ, ಜೋಳ, ರಾಗಿ, ತೃಣ ಧಾನ್ಯಗಳು, ಏಕದಳ ಧಾನ್ಯಗಳಾದ ತೊಗರಿ, ಹುರಳಿ, ಉದ್ದು, ಹೆಸರು, ಅಲಸಂದಿ ಬೀಜ ಸೂಕ್ತ ಪ್ರಮಾಣದಲ್ಲಿಲ್ಲ. ಹಾನಗಲ್ನಲ್ಲಿ ಸೋಯಾಬೀನ್ ಬೀಜ ಕೊರತೆಯಾಗಿ ರೈತರಿಗೆ ಸಮಸ್ಯೆಯಾಗಿದೆ.
ಕಳೆದ ಬಾರಿ ಹತ್ತಿ ಬೆಳೆ ನಷ್ಟವಾಯಿತು. ಈ ಸಲ ರೈತರು ಸೋಯಾಬೀನ್ ಬಿತ್ತನೆಗೆ ಮುಂದಾಗಿದ್ದರಿಂದ ಬೇಡಿಕೆ ಹೆಚ್ಚಾಗಿ ಪೂರೈಕೆಯಲ್ಲಿ ಸ್ವಲ್ಪ ತೊಂದರೆಯಾಗಿತ್ತು. ಈಗ ಯಾವುದೇ ಸಮಸ್ಯೆಯಿಲ್ಲ. ರಸಗೊಬ್ಬರ ಹಾಗೂ ಬಿತ್ತನೆ ಬೀಜವನ್ನು ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲಾಗುತ್ತಿದೆ.
ಗಣೇಶ ನಾಯಕ, ಜಂಟಿ ಕೃಷಿ ನಿರ್ದೇಶಕರು
-ನಾರಾಯಣ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


