ಪಾಕ್ನಲ್ಲಿ 26/11 ಮಾದರಿ ದಾಳಿ

ನವದೆಹಲಿ: ಪಾಕಿಸ್ತಾನದ ಕರಾಚಿಯ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ನಡೆದದ್ದು ಅಕ್ಷರಶಃ ಮುಂಬೈ ಮಾದರಿ ದಾಳಿ!
ಥೇಟ್ ಭದ್ರತಾ ಸಿಬ್ಬಂದಿಯಂತೆಯೇ ವೇಷ ಧರಿಸಿದ್ದ 10 ಮಂದಿ ಉಗ್ರರು ಎಲ್ಲದಕ್ಕೂ ಸಜ್ಜಾಗಿಯೇ ಬಂದಿದ್ದರು. ಅವರ ಗುರಿ ಒಂದೇ ಸಮನೆ ಗುಂಡು ಹಾರಿಸುವುದೇ ಆಗಿತ್ತು. ಹೀಗಾಗಿಯೇ ಅವರು ಭದ್ರತಾ ಸಿಬ್ಬಂದಿ ಸೇರಿ 19 ಮಂದಿಯನ್ನು ಬಲಿತೆಗೆದುಕೊಂಡರು. ಕಡೆಗೆ ತಾವೂ ಸತ್ತರು.
ರಾತ್ರಿ ಪೂರಾ ಕಾರ್ಯಾಚರಣೆ
ಭಾನುವಾರ ರಾತ್ರಿ ಆರಂಭವಾದ ಉಗ್ರರ ಅಟ್ಟಹಾಸ ಸೋಮವಾರ ಬೆಳಗಿನವರೆಗೂ ಅಂದರೆ ಸತತ 13 ಗಂಟೆಗಳ ಕಾಲ ಮುಂದುವರಿಯಿತು. ಭದ್ರತಾ ಪಡೆಗಳು ಹಾಗೂ ಶಸ್ತ್ರಸಜ್ಜಿತ ಭಯೋತ್ಪಾಕರ ನಡುವೆ ನಡೆದ ಕಾಳಗದಲ್ಲಿ ಎಲ್ಲ 10 ಮಂದಿ ಉಗ್ರರು ಸೇರಿದಂತೆ 29 ಮಂದಿ ಸಾವಿಗೀಡಾದರು. ಉಗ್ರರ ಹಿಡಿತದಲ್ಲಿದ್ದ ಏರ್ಪೋರ್ಟ್ ನಿರಂತರ ಗುಂಡಿನ ಚಕಮಕಿ ಬಳಿಕ ಕೊನೆಗೂ ಭದ್ರತಾ ಪಡೆಗಳ ಹಿಡಿತಕ್ಕೆ ಸಿಕ್ಕಿತು.
ದಾಳಿಯ ಯೋಜನೆ
ರಾತ್ರಿಯೇ ಉಗ್ರರು ವಿಮಾನ ನಿಲ್ದಾಣ ಭದ್ರತಾ ಪಡೆಯ ಸಿಬ್ಬಂದಿಯಂತೆ ವೇಷಭೂಷಣ ತೊಟ್ಟು ಹಳೇ ಏರ್ಪೋರ್ಟ್ನ ಟರ್ಮಿನಲ್ ಕಟ್ಟಡಕ್ಕೆ ಲಗ್ಗೆಯಿಟ್ಟಿದ್ದರು. ನಂತರ ಒಂದೇ ಸಮನೆ ಗುಂಡಿನ ದಾಳಿಯಲ್ಲಿ ತೊಡಗಿದರು. ತಕ್ಷಣ ಅಲರ್ಟ್ ಆದ ಮಲೀರ್ ಕಂಟೋನ್ಮೆಂಟ್ನ ಯೋಧರು, ಎಎಸ್ಎಫ್ ಕಮಾಂಡೋಗಳು, ಅರೆಸೇನಾ ರೇಂಜರ್ಗಳು ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದರು. ಎರಡೂ ಕಡೆಗಳಿಂದ ಭಾರಿ ಗುಂಡಿನ ಚಕಮಕಿ ನಡೆಯಿತು. ಭಾರಿ ಸ್ಫೋಟದ ಸದ್ದುಗಳೂ ಕೇಳಿಬಂದವು. ಕೊನೆಗೆ ಎಲ್ಲ 10 ಉಗ್ರರನ್ನು ಸದೆಬಡಿಯುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾದವು. ಮೃತರಲ್ಲಿ ಎಎಸ್ಎಫ್ ಸಿಬ್ಬಂದಿ, ಎಂಜಿನಿಯರ್ಗಳು, ಸಿಎಎ, ಪಿಐಎ ಸಿಬ್ಬಂದಿಯೂ ಸೇರಿದ್ದಾರೆ.
ವಿಮಾನಗಳಿಗೆ ಹಾನಿಯಾಗಿಲ್ಲ
ಸುಮಾರು 6 ಗಂಟೆಗಳ ಕಾಲ ಏರ್ಪೋರ್ಟ್ ಸಂಪೂರ್ಣ ಸ್ಥಗಿತಗೊಂಡಿತ್ತು. ವಿಮಾನಗಳ ಸಂಚಾರ ಮಾರ್ಗಬದಲಿಸಲಾಯಿತು. ಆದರೆ ಯಾವುದೇ ವಿಮಾನಗಳಿಗಾಗಲೀ, ಏರ್ಪೋರ್ಟ್ನ ಕಟ್ಟಡಗಳಿಗಾಗಲೀ ಹಾನಿಯಾಗಿಲ್ಲ ಎಂದು ಪಾಕ್ ಸೇನೆ ತಿಳಿಸಿದೆ. ಉಗ್ರರಿಂದ ಅತ್ಯಾಧುನಿಕ ಮಷಿನ್ ಗನ್ಗಳು, ರಾಕೆಟ್ ಲಾಂಚರ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದೇ ವೇಳೆ, ದಾಳಿಯ ಹೊಣೆಯನ್ನು ತೆಹ್ರಿಕ್-ಎ-ತಾಲಿಬಾನ್ ಹೊತ್ತಿದೆ ಎಂದು ಪಾಕ್ನ ಜಿಯೋ ಟಿವಿ ವರದಿ ಮಾಡಿದೆ.
ಮೋದಿ ಕೈವಾಡವಂತೆ!
ಮುಂಬೈ ದಾಳಿಯ ಸಂಚುಕೋರ, ಜಮಾತ್-ಉದ್-ದಾವಾ ಮುಖ್ಯಸ್ಥ ಹಫೀಜ್ ಸಯೀದ್ ಮಾತು ಕೇಳಿದ್ರೆ ನಗಬೇಕೋ, ಅಳಬೇಕೋ ಗೊತ್ತಾಗುತ್ತಿಲ್ಲ. ಕರಾಚಿ ಏರ್ಪೋರ್ಟ್ನಲ್ಲಿ ನಡೆದ ಉಗ್ರರ ದಾಳಿ ಹಿಂದೆ ಭಾರತದ ಪ್ರಧಾನಿ ನರೇಂದ್ರ ಮೋದಿ ತಂಡದ ಕೈವಾಡವಿದೆ ಎನ್ನುತ್ತಾನೆ ಉಗ್ರ ಸಯೀದ್. ಕರಾಚಿ ದಾಳಿಯ ಹೊಣೆಯನ್ನು ಅದೇ ನೆಲದ ತೆಹ್ರಿಕ್ -ಇ- ತಾಲಿಬಾನ್ ಸಂಘಟನೆ ಹೊತ್ತ ಬಳಿಕವೂ, ಮಾನ ಮರ್ಯಾದೆ ಬಿಟ್ಟು ಸಯೀದ್ ಇಂತಹ ಮಾತುಗಳನ್ನಾಡಿದ್ದಾನೆ.
ಪಾಕ್ನಲ್ಲಿ ನಡೆದ ದಾಳಿಯು ಮೋದಿ ಅವರ ಹೊಸ ಭದ್ರತಾ ಪಡೆಯ ಕೆಲಸ. ಪಾಕಿಸ್ತಾನದ ಸರ್ಕಾರವು ಮೊದಲು ಭಾರತದೊಂದಿಗೆ ಉಡುಗೊರೆ ವಿನಿಮಯ ಮಾಡಿಕೊಳ್ಳುವುದನ್ನು ನಿಲ್ಲಿಸಲಿ ಎಂದು ಸಯೀದ್ ಟ್ವೀಟ್ ಮಾಡಿದ್ದಾನೆ. ಮತ್ತೊಂದು ಟ್ವೀಟ್ನಲ್ಲಿ ಆತ, 'ಕರಾಚಿ ದಾಳಿಯು ಪಾಕ್ ವಿರುದ್ಧದ ಮೋದಿ ಪ್ಲ್ಯಾನ್. ಹೊಸ ಹಿಂದುತ್ವ ಸರ್ಕಾರದ ನೇರ ಪ್ರತಿಕ್ರಿಯೆಯಿದು' ಎಂದಿದ್ದಾನೆ.
ಪ್ರತೀಕಾರಕ್ಕಾಗಿ ದಾಳಿ
ಕಳೆದ ವರ್ಷ ಅಮೆರಿಕ ಪಡೆ ನಡೆಸಿದ ಡ್ರೋಣ್ ದಾಳಿಗೆ ತಾಲಿಬಾನ್ ಉಗ್ರ ಮೆಹ್ಸೂದ್ ಸಾವಿಗೀಡಾಗಿದ್ದ. ಇದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆಸಿದ್ದಾಗಿ ತೆಹ್ರಿಕ್-ಇ-ತಾಲಿಬಾನ್ ಉಗ್ರರು ಹೇಳಿದ್ದಾರೆ. ಆಫ್ಘನ್ ಗಡಿಯಲ್ಲಿರುವ ಗ್ರಾಮಗಳಲ್ಲಿ ದಾಳಿ ನಡೆಸಿ, ಸಾವಿರಾರು ಅಮಾಯಕರನ್ನು ಕೊಂದಿರುವ ಪಾಕ್ ಸರ್ಕಾರಕ್ಕೆ ನಾವಿನ್ನೂ ಬದುಕಿದ್ದೇವೆ ಎಂಬುದನ್ನು ಸ್ಪಷ್ಟಪಡಿಸಲೆಂದೇ ಈ ದಾಳಿ ನಡೆಸಿದ್ದೇವೆ ಎಂದಿದೆ ಉಗ್ರ ಸಂಘಟನೆ.
ಛಿದ್ರವಾಗಿತ್ತೇ ವಿಮಾನ?
ಕರಾಚಿ ದಾಳಿ ವೇಳೆ ಯಾವುದೇ ವಿಮಾನಕ್ಕೂ ಹಾನಿಯಾಗಿಲ್ಲ ಎಂದು ಪಾಕ್ ಸರ್ಕಾರ ಹೇಳಿಕೊಂಡರೂ ಗೂಗಲ್ ಮ್ಯಾಪ್ನ ಉಪಗ್ರಹ ಚಿತ್ರವು ವಿಮಾನವೊಂದು ಛಿದ್ರವಾಗಿರುವುದನ್ನು ತೋರಿಸಿದೆ. ಈ ಚಿತ್ರವು ಜಗತ್ತಿನಾದ್ಯಂತ ಹರಿದಾಡುತ್ತಿದೆ. ಆದರೆ ಇದು ಎಷ್ಟು ನಿಜ ಎಂಬುದು ಸಾಬೀತಾಗಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


