ಪ್ರಧಾನ ಸುದ್ದಿ

ಕಿಮ್ಸ್ ವೈದ್ಯ ಸೀಟು 100ಕ್ಕೆ ಇಳಿಕೆ

ಕಿಮ್ಸ್ ವೈದ್ಯ ಸೀಟು 100ಕ್ಕೆ ಇಳಿಕೆ
Published On :

ಹುಬ್ಬಳ್ಳಿ: ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ(ಕಿಮ್ಸ್) ಆಡಳಿತ ವ್ಯವಸ್ಥೆಯ ಲೋಪದಿಂದಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಎಂಬಿಬಿಎಸ್ ಪದವಿ ಸೀಟುಗಳ ಸಂಖ್ಯೆ 150ರಿಂದ 100ಕ್ಕೆ ಇಳಿಕೆಯಾಗಿದೆ. ಪರಿಣಾಮ ಕಿಮ್ಸ್ನಲ್ಲಿ ವೈದ ಶಿಕ್ಷಣ ಪಡೆಯಬೇಕೆಂಬ ಆಸೆ ಹೊತ್ತಿದ್ದ ವಿದ್ಯಾರ್ಥಿಗಳಿಗೆ ನಿರಾಸೆಯುಂಟಾಗಿದೆ.
ಕಿಮ್ಸ್ ಕಾಲೇಜಿನಲ್ಲಿ ಸೌಲಭ್ಯಗಳ ಕೊರತೆಯಿದೆ ಎಂಬ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ(ಎಂಸಿಐ) ವರದಿ ಮೇರೆಗೆ ಸರ್ಕಾರ 50 ಸೀಟ್ಗಳನ್ನು ಕಡಿತಗೊಳಿಸಿದೆ. ಈಗ ಕಿಮ್ಸ್ನಲ್ಲಿ ಸಾಕಷ್ಟು ಸೌಲಭ್ಯಗಳಿದ್ದರೂ ಅದನ್ನು ಸರಿಯಾಗಿ ಎಂಸಿಐ ಮುಂದೆ ಪ್ರಸ್ತುತಪಡಿಸುವಲ್ಲಿ ಅಧಿಕಾರಿಗಳು ಎಡವಿದ್ದೇ ಸೀಟು ಕಳೆದುಕೊಳ್ಳಲು ಕಾರಣವಾಗಿದೆ.
ಎಂಸಿಐ ಭೇಟಿ: 2014ರ ಜನವರಿ 11 ಹಾಗೂ 12ರಂದು ಎಂಸಿಐ ತಂಡ ಹುಬ್ಬಳ್ಳಿಯ ಕಿಮ್ಸ್ಗೆ ಭೇಟಿ ನೀಡಿತ್ತು. ಇದಕ್ಕೂ ಪೂರ್ವದಲ್ಲಿ ಎಂಸಿಐಗೆ ಪ್ರಾಂಶುಪಾಲ ಡಾ೤ ಯು.ಎಸ್. ಹಂಗರಗಾ, ಕಾಲೇಜಿನಲ್ಲಿರುವ ವ್ಯವಸ್ಥೆಯ ಕುರಿತು ವರದಿ ನೀಡಿದ್ದರು. ಈ ವರದಿಯೊಂದಿಗೆ ಬಂದ ಎಂಸಿಐ ತಂಡ ಇಲ್ಲಿನ ವ್ಯವಸ್ಥೆ ಪರಿಶೀಲಿಸಿ, ಅಸಮಾಧಾನ ವ್ಯಕ್ತಪಡಿಸಿತ್ತು. ಅಲ್ಲದೆ, ಜನವರಿ 31ರಂದು ಭೇಟಿಯ ವರದಿಯನ್ನು ಬಹಿರಂಗಪಡಿಸಿ ಲೋಪವನ್ನು ಎತ್ತಿ ತೋರಿಸಿತ್ತು.
ಏನೆಲ್ಲ ಲೋಪ?
ಎಂಸಿಐ ತಂಡ ಕಿಮ್ಸ್ ಕಾಲೇಜಿನ 10 ಅಂಶಗಳಲ್ಲಿ ಲೋಪಗಳ ಪಟ್ಟಿ ಮಾಡಿತ್ತು. ಕಾಲೇಜಿನ ವೆಬ್ಸೈಟ್ ಕಾಲಕಾಲಕ್ಕೆ ಅಪಡೇಟ್ ಆಗುತ್ತಿಲ್ಲ, ಅದರಲ್ಲಿ ಮೂಲಸೌಕರ್ಯ, ವಿದ್ಯಾರ್ಥಿಗಳ ವಿವರ, ರ್ಯಾಗಿಂಗ್ ತಡೆ ಸಮಿತಿಯ ಕಾರ್ಯ ಇತ್ಯಾದಿ ಸಂಗತಿಗಳು ಸಮರ್ಪಕವಾಗಿಲ್ಲ. ಕಿಮ್ಸ್ ಆಸ್ಪತ್ರೆಗೆ ನಿತ್ಯ 1150 ಹೊರರೋಗಿಗಳು ಬರುತ್ತಾರೆಂದು ತಿಳಿಸಲಾಗಿತ್ತು. ಆದರೆ, ತಂಡ ಭೇಟಿ ನೀಡಿದಾಗ ರಜಾ ದಿನದ ಅವಧಿಯಲ್ಲೇ 1517 ರಿಂದ 1644 ರೋಗಿಗಳಿರುವ ಅಂಶ ಗಮನಿಸಿದೆ.
ಕಿಮ್ಸ್ ಸಭಾಭವನ, ಪರೀಕ್ಷಾ ಹಾಲ್ನಲ್ಲಿ 250 ಜನರಿಗೆ ಕುಳಿತುಕೊಳ್ಳುವ ಅವಕಾಶವಿದೆ ಎಂದು ಕಿಮ್ಸ್ ತಿಳಿಸಿತ್ತು. ಆದರೆ, ಅಸಲಿಗೆ ಸಭಾಭವನದಲ್ಲಿ 1,050 ಆಸನದ ಅವಕಾಶ ಹಾಗೂ 375 ಆಸನಗಳ ಹೊಸ ಪರೀಕ್ಷಾ ಹಾಲ್ ಕಟ್ಟಡ ನಿರ್ಮಾಣವಾಗುತ್ತಿರುವ ಸಂಗತಿಯನ್ನು ಪ್ರಸ್ತಾಪಿಸದಿರುವುದು ತಂಡದ ಗಮನಕ್ಕೆ ಬಂದಿದೆ.
350 ಆಸನಗಳುಳ್ಳ ಉಪನ್ಯಾಸ ಕೊಠಡಿ ಲಭ್ಯವಿಲ್ಲವೆಂದು ಕಿಮ್ಸ್ ತಿಳಿಸಿತ್ತು. ತಲಾ 375 ಆಸನಗಳ ಎರಡು ಹೊಸ ಕೊಠಡಿ ಸಿದ್ಧವಾಗುತ್ತಿರುವ ಬಗ್ಗೆ ಪ್ರಸ್ತಾಪಿಸಿರಲಿಲ್ಲ. ಅಪಘಾತ ತುರ್ತು ಚಿಕಿತ್ಸಾ ವಾರ್ಡ್ನಲ್ಲಿ ಕೇವಲ 21 ಹಾಸಿಗೆ ಇದೆ ಎಂದು ತಿಳಿಸಿತ್ತು.
ಅಸಲಿಗೆ 27 ಹಾಸಿಗೆಗಳಿವೆ. ಆಪರೇಷನ್ ಥಿಯೇಟರ್, ರೇಡಿಯೋಡಯಾಗ್ನೋಸಿಸ್ ಯುನಿಟ್ ಮುಂತಾದವುಗಳಲ್ಲಿನ ಲೋಪಗಳನ್ನೂ ಎಂಸಿಐ ಎತ್ತಿ ತೋರಿಸಿದೆ. ಮೈಕ್ರೋ ಬಯಾಲಜಿ ವಿಭಾಗದವರು ಎಂಸಿಐಗೆ ವರದಿಯನ್ನೇ ನೀಡಿಲ್ಲ ಎಂಬುದು ಇನ್ನೊಂದು ಅಚ್ಚರಿ.
ಕಿಮ್ಸ್ನಲ್ಲಿ ಸಾಕಷ್ಟು ಸೌಕರ್ಯವಿದ್ದಾಗಲೂ ಪ್ರಾಂಶುಪಾಲರು ತಪ್ಪು ವರದಿ ಕೊಟ್ಟಿದ್ದು ಹಾಗೂ ವರದಿಯನ್ನೂ ಪರಿಪೂರ್ಣವಾಗಿ ನೀಡದಿರುವುದು ಎಂಸಿಐ ತಂಡದ ಕೆಂಗಣ್ಣಿಗೆ ಗುರಿಯಾಗಿತ್ತು.
ಕೇಂದ್ರ ಸರ್ಕಾರಕ್ಕೆ ವರದಿ:
ಎಂಸಿಐ ತಂಡದ ಸದಸ್ಯರು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿ, ಅದರಲ್ಲಿ ಹುಬ್ಬಳ್ಳಿ ಕಿಮ್ಸ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಸೀಟುಗಳನ್ನು ಹೆಚ್ಚಿಸುವ ಬದಲು ಇದ್ದ 150 ಸೀಟುಗಳ ಪೈಕಿ 50ನ್ನು ಕಡಿಮೆ ಮಾಡುವಂತೆ ತಿಳಿಸಿತ್ತು. ಈಗ ಬೆಂಗಳೂರಿನ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಕಿಮ್ಸ್ ಸೀಟುಗಳ ಸಂಖ್ಯೆಯನ್ನು 150 ರಿಂದ 100ಕ್ಕೆ ಇಳಿಸಿದೆ.
250 ಕ್ಕೇರಿಸಲು ಹೋಗಿ...
ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಹಾಲಿ ಇರುವ 150 ಸೀಟುಗಳನ್ನು 250ಕ್ಕೆ ಹೆಚ್ಚಿಸಿಕೊಳ್ಳಲು ಹೋಗಿ ಕಿಮ್ಸ್ ಇದ್ದ ಸೀಟನ್ನೂ ಕಳೆದುಕೊಂಡಿದೆ. ಇದೀಗ ಕಳೆದುಕೊಂಡಿರುವ 50 ಸೀಟನ್ನೇ ಪುನಃ ಗಿಟ್ಟಿಸಿಕೊಳ್ಳಲು ಕಿಮ್ಸ್ ಹರಸಾಹಸ ಪಡಬೇಕಿದೆ.

ಪ್ರಕಾಶ ಎಸ್. ಶೇಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.