ಜೀವವೈವಿಧ್ಯ ಶ್ರೀಮಂತ ಭಾರತ

ನವದೆಹಲಿ: ಜಗತ್ತಿನ ಜೀವವೈವಿಧ್ಯ ಹಾಟ್ಸ್ಪಾಟ್ಗಳಲ್ಲಿ ಗುರುತಿಸಿಕೊಂಡಿದ್ದ ಪಶ್ಚಿಮ ಘಟ್ಟ ಮತ್ತು ಹಿಮಾಲಯ ಪರ್ವತ ಶ್ರೇಣಿಗಳಿಗೆ ಇನ್ನಷ್ಟು ಮೆರಗು. ಭಾರತೀಯ ಸಂಶೋಧಕರು, ವಿಜ್ಞಾನಿಗಳು ಈ ಪ್ರದೇಶದಲ್ಲಿ ಮತ್ತಷ್ಟು ಹೊಸ ಸಸ್ಯ ಹಾಗೂ ಪ್ರಾಣಿ ಸಂಕುಲಗಳನ್ನು ಪತ್ತೆ ಮಾಡಿದ್ದಾರೆ. 2013ರಲ್ಲಿ ಭಾರತದಲ್ಲಿ 366 ಸಸ್ಯ ಪ್ರಭೇದ, 248 ಪ್ರಾಣಿ ಪ್ರಭೇದಗಳನ್ನು ಹೊಸದಾಗಿ ಗುರುತಿಸಲಾಗಿದೆ. ಈ ಪೈಕಿ ಶೇ 29ರಷ್ಟು ಸಸ್ಯ ಪ್ರಭೇದಗಳು ಪಶ್ಚಿಮ ಘಟ್ಟದಲ್ಲಿ, ಶೇ 20 ಹಿಮಾಲಯದಲ್ಲಿ, ಶೇ 14 ದಖನ್ ಪ್ರಸ್ಥಭೂಮಿಯಲ್ಲಿ, ಶೇ 9 ಅಂಡಮಾನ್ ಮತ್ತು ನಿಕೋಬಾರ್ನಲ್ಲಿ ಪತ್ತೆಯಾಗಿವೆ. ಪ್ರಾಣಿ ಪ್ರಭೇದಗಳಲ್ಲೂ ಹೆಚ್ಚಿನವು ಪತ್ತೆಯಾಗಿರುವುದು ಪಶ್ಚಿಮ ಘಟ್ಟ, ಹಿಮಾಲಯಗಳಳ್ಲಿಯೇ. ಹೊಸದಾಗಿ ಗುರುತಿಸಲಾಗಿರುವ ಪ್ರಾಣಿ ಪ್ರಭೇದಗಳಲ್ಲಿ ಕೊಡಗಿನ ಪಾತರಗಿತ್ತಿಯೂ ಸೇರಿದೆ. ಅವುಗಳಲ್ಲಿ 54 ಪ್ರಾಣಿ ಪ್ರಭೇದಗಳು ಆಯಾ ಪ್ರದೇಶದ ಭೌಗೋಳಿಕ ಸನ್ನಿವೇಶ ಹೊರತುಪಡಿಸಿ ಬೇರೆಲ್ಲಿಯೂ ಕಾಣಸಿಗುವುದಿಲ್ಲ ಎನ್ನುವುದು ವಿಶೇಷ.
ಏಕೆ ಮುಖ್ಯ?
ಯಾವುದೇ ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ಅಲ್ಲಿನ ಜೀವವೈವಿಧ್ಯವೂ ಪ್ರಮುಖ ಪಾತ್ರ ವಹಿಸುತ್ತದೆ. ವಿಶ್ವಸಂಸ್ಥೆಯೇ ಹೇಳಿರುವಂತೆ, ಜಗತ್ತಿನ ಒಟ್ಟಾರೆ ಶೇ 40ರಷ್ಟು ಮತ್ತು ಬಡವರಲ್ಲಿ ಶೇ 80ರಷ್ಟು ಜನರ ಅಗತ್ಯಗಳನ್ನು ನೀಗಿಸುವುದು ಜೈವಿಕ ಸಂಪನ್ಮೂಲಗಳೇ. ಶ್ರೀಮಂತ ಜೀವವೈವಿಧ್ಯ ಹೊಂದಿರುವ ರಾಷ್ಟ್ರಗಳಲ್ಲಿ ಔಷಧೀಯ ಸಂಶೋಧನೆ, ಆರ್ಥಿಕ ಅಭಿವೃದ್ಧಿಗೂ ವಿಫುಲ ಅವಕಾಶಗಳಿವೆ. ಇಂಥ ದೇಶಗಳಿಗೆ ಹವಾಮಾನ ಬದಲಾವಣೆಯಂಥ ಸವಾಲುಗಳನ್ನು ಮೆಟ್ಟಿ ನಿಲ್ಲಲೂ ಸಾಧ್ಯವಾಗುತ್ತದೆ.
ಹೊಸದಾಗಿ ಗುರುತಿಸಲಾಗಿರುವ ಸಸ್ಯ ಮತ್ತು ಪ್ರಾಣಿ ಪ್ರಭೇದಗಳ ರಕ್ಷಣೆಗೆ ತುರ್ತು ಆದ್ಯತೆ ನೀಡಬೇಕಿದೆ. ಏಕೆಂದರೆ ಇವುಗಳಲ್ಲಿ ಹೆಚ್ಚಿನವನ್ನು ನಮ್ಮ ಆಹಾರ ಮತ್ತು ಪೌಷ್ಟಿಕ ಭದ್ರತೆಗಾಗಿ ಇನ್ನಷ್ಟು ಹೊಸತಳಿಗಳನ್ನು ಸೃಷ್ಟಿಸಲು ಬಳಸಿಕೊಳ್ಳಬಹುದು.
- ಪರಮ್ಜಿತ್ ಸಿಂಗ್, ನಿರ್ದೇಶಕ, ಬೊಟಾನಿಕಲ್ ಸರ್ವೆ ಆಫ್ ಇಂಡಿಯಾ
12 -ಮೆಗಾ ಜೀವವೈವಿಧ್ಯ ಹೊಂದಿರುವ ವಿಶ್ವದ ಇಷ್ಟು ರಾಷ್ಟ್ರಗಳ ಪೈಕಿ ಭಾರತವೂ ಸೇರಿದೆ. 25 ಜೀವವೈವಿಧ್ಯ ಹಾಟ್ಸ್ಪಾಟ್ಗಳಲ್ಲಿ ಪಶ್ಚಿಮ ಘಟ್ಟ, ಹಿಮಾಲಯಗಳಿವೆ.
248- ಹೊಸ ಪ್ರಾಣಿ ಪ್ರಭೇದಗಳು. ಆ ಪೈಕಿ 162 ಕೀಟ, 36 ಮೀನು, 19 ಅಕಶೇರುಕಗಳು. ಅಲ್ಲದೆ ಇವುಗಳಲ್ಲಿ 54 ಸ್ಥಳೀಯ ಮೂಲದವು.
366- ಹೊಸ ಸಸ್ಯ ಪ್ರಭೇದಗಳು. ಅವುಗಳಲ್ಲಿ 199 ವಿಜ್ಞಾನ ಪ್ರಪಂಚಕ್ಕೆ ಹೊಸತು.
92,837- ಗುರುತಿಸಲಾಗಿರುವ ಪ್ರಾಣಿ ಪ್ರಭೇದ. ಜಾಗತಿಕ ಮಟ್ಟದಲ್ಲಿ ನಮ್ಮ ದೇಶದ ಪಾಲು ಶೇ 6.64.
47,513 -ಗುರುತಿಸಲಾಗಿರುವ ಸಸ್ಯ ಪ್ರಭೇದ. ಜಾಗತಿಕವಾಗಿ ನಮ್ಮ ಪಾಲು ಶೇ 11.4.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


