ಪ್ರಧಾನ ಸುದ್ದಿ

ಸಕಾಲಕ್ಕೆ ಅಂಚೆ ಕಚೇರಿ ಬಳಕೆ

ಸಕಾಲಕ್ಕೆ ಅಂಚೆ ಕಚೇರಿ ಬಳಕೆ
Published On :

ಬೆಂಗಳೂರು: ಸಕಾಲ ಯೋಜನೆಯ ಆನ್ಲೈನ್ ಸೇವೆಗಳನ್ನು ವಿಸ್ತರಿಸಲು ಇನ್ನುಮುಂದೆ ಅಂಚೆ ಕಚೇರಿಗಳನ್ನು ಬಳಸಿಕೊಳ್ಳಲಾಗುವುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.
ರಾಜ್ಯದಲ್ಲಿ ಸಕಾಲ ಯೋಜನೆ 2 ವರ್ಷ ಪೂರೈಸಿದ ಪ್ರಯುಕ್ತ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ತಿಳಿಸಿದರು.
ಸರ್ಕಾರ ಯೋಜನೆಯಲ್ಲಿ ಸಿಗುವ ಸೇವೆಗಳನ್ನು ಸಾರ್ವಜನಿಕರು ಆನ್ಲೈನ್ ಮೂಲಕ ಪಡೆಯುತ್ತಿದ್ದಾರೆ. ಸದ್ಯ 135 ಸೇವೆಗಳನ್ನು ಮಾತ್ರ ಆನ್ಲೈನ್ನಲ್ಲಿ ಪಡೆಯುತ್ತಿದ್ದು, ಇದೇ ರೀತಿ ಎಲ್ಲಾ ರೀತಿಯ ಸೇವೆಗಳನ್ನೂ ನೀಡಲು ಕ್ರಮಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ಅಂಚೆ ಇಲಾಖೆ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ.  ಹೀಗಾಗಿ ಆನ್ಲೈನ್ ಸೇವೆ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಿದೆ ಎಂದರು.
ರಾಜ್ಯದಲ್ಲಿ 9000 ಅಂಚೆ ಕಚೇರಿಗಳಿದ್ದು, ಬಹುತೇಕ ಕಚೇರಿಗಳು ಕಂಪ್ಯೂಟರೀಕರಣವಾಗಿವೆ. ಇಂಥ ಕಚೇರಿಗಳನ್ನು ಬಳಸಿಕೊಂಡು ಸಕಾಲ ಜಾರಿಗೊಳಿಸಲಾಗುತ್ತದೆ. ಹೀಗಾಗಿ ಗ್ರಾಮೀಣ ಜನರು ಸಕಾಲ ಯೋಜನೆಯಡಿ ಅರ್ಜಿ ಸಲ್ಲಿಸಲು ಪರದಾಡಬೇಕಿಲ್ಲ. ಸಮೀಪದ ಅಂಚೆ ಕಚೇರಿಗೆ ಹೋದರೆ ಆನ್ಲೈನ್ ಸೌಲಭ್ಯ ಸಿಗುತ್ತದೆ ಎಂದರು.
ಸರ್ಕಾರದ ಯಾವುದೇ ಯೋಜನೆಗಳು ಯಶಸ್ವಿಯಾಗಬೇಕಾದರೆ ರಾಜಕಾರಣಿಗಳು ಮತ್ತು ಅಧಿಕಾರಿಗಳು ಒಂದಾಗಿ ಪ್ರಯತ್ನ ಮಾಡಬೇಕು. ಆದರೆ ಹೊಂದಾಣಿಕೆ ಕೊರತೆಯಿಂದಾಗಿ ಯೋಜನೆಗಳು ನಿರೀಕ್ಷಿತ ಫಲ ಕಾಣುತ್ತಿಲ್ಲ ಎಂದರು. ಆಡಳಿತದಲ್ಲಿ ಪಾರದರ್ಶಕತೆ ಇರಬೇಕಾದರೆ ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳಬೇಕು. ಇದರಿಂದ ಅಭಿವೃದ್ಧಿ ವೇಗ ಹೆಚ್ಚುತ್ತದೆ. ಅಷ್ಟೇ ಅಲ್ಲದೆ, ಕೇವಲ 10 ವರ್ಷಗಳಲ್ಲಿ ಅಮೆರಿಕವನ್ನು ಭಾರತ ಮೀರಿ ನಿಲ್ಲುತ್ತದೆ ಎಂದರು.
ಅಂಚೆ ಇಲಾಖೆ ಮುಖ್ಯ ಮಹಾನಿರ್ದೇಶಕ ರಾಮಾನುಜಮ್ ಮಾತನಾಡಿ, ರಾಜ್ಯದಲ್ಲಿರುವ ಅಂಚೆ ಕಚೇರಿಗಳಲ್ಲಿ 2000 ಕಚೇರಿಗಳು ನಗರ, ಪಟ್ಟಣ ಮತ್ತು ಹೋಬಳಿ ಮಟ್ಟದಲ್ಲಿವೆ. ಇವುಗಳಲ್ಲಿ ಇಂಟರ್ನೆಟ್ ಸೇವೆ ಲಭ್ಯವಿದ್ದು, ಇದನ್ನು ಈಗಲೇ ಸಕಾಲ ಯೋಜನೆಗೆ ಬಳಸಿಕೊಳ್ಳಬಹುದಾಗಿದೆ ಎಂದರು.
ಸಕಾಲ ಯೋಜನೆ ಮುಖ್ಯಸ್ಥೆ ಶಾಲಿನಿ ರಜನೀಶ್, ಸಕಾಲ ಯೋಜನೆಯಡಿ 5ಕೋಟಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದರಲ್ಲಿ ಶೇ.90ರಷ್ಟು ಅರ್ಜಿಗಳು ವಿಲೇವಾರಿಯಾಗಿದೆ. ಅಂದರೆ ರಾಜ್ಯದಲ್ಲಿ ಸಕಾಲ ಸದ್ಬಳಕೆಯಾಗುತ್ತಿದೆ ಎಂದರು. ಇದೇವೇಳೆ, ಸರ್ಕಾರಿ ಅಧಿಕಾರಿಗಳು ಮತ್ತು ನೋಡಲ್ ಅಧಿಕಾರಿಗಳಿಗೆ ಶಾಲಿನಿ ಅವರು ದಿನವೀಡೀ ಕಾರ್ಯಾಗಾರ ನಡೆಸಿ ಮಾಹಿತಿ ನೀಡಿದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬೈರಪ್ಪ, ಸಿಸ್ಕೋ ಸಂಸ್ಥೆ ಮುಖ್ಯಸ್ಥ ಅರವಿಂದ್ ಸೀತಾರಾಮನ್, ಎಫ್ಕೆಸಿಸಿಐ ಅಧ್ಯಕ್ಷ ಶಿವಕುಮಾರ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.