ಪಾಕ್ಗೆ ಉತ್ತರಿಸಲು ಸೇನೆ ಸಮರ್ಥ

ಶ್ರೀನಗರ: ಗಡಿಯಲ್ಲಿ ಪಾಕ್ ಸೇನೆ ಕದನ ವಿರಾಮ ಉಲ್ಲಂಘಿಸಿದ ಮಾರನೇ ದಿನ ಅಂದರೆ ಶನಿವಾರ ರಕ್ಷಣಾ ಸಚಿವ ಅರುಣ್ ಜೇಟ್ಲಿ ಜಮ್ಮು ಮತ್ತು ಕಾಶ್ಮೀರದ ತಮ್ಮ 2 ದಿನಗಳ ಚೊಚ್ಚಲ ಪ್ರವಾಸ ಆರಂಭಿಸಿದ್ದಾರೆ. ಭೂಸೇನಾ ಮುಖ್ಯಸ್ಥ ಜ.ಬಿಕ್ರಂ ಸಿಂಗ್ ಜತೆ ಜಮ್ಮು-ಕಾಶ್ಮೀರಕ್ಕೆ ಶನಿವಾರ ಭೇಟಿ ನೀಡಿದ ಅವರು ಭದ್ರತಾ ಸ್ಥಿತಿಗತಿಗಳ ಪರಿಶೀಲನೆ ನಡೆಸಿದರು. ಇದೇ ವೇಳೆ ಅವರು ಜಮ್ಮು- ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹಾಗೂ ರಾಜ್ಯಪಾಲ ಎನ್.ಎನ್. ಮೊಹ್ರಾ ಜತೆ ಚರ್ಚಿಸಿದ್ದಾರೆ.
ಶುಕ್ರವಾರದ ಘಟನೆ ಬಗ್ಗೆ ಮಾತನಾಡಿದ ಸಚಿವ ಜೇಟ್ಲಿ, ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದರೆ ಅದಕ್ಕೆ ತಕ್ಕ ಉತ್ತರ ನೀಡಲು ದೇಶದ ಪಡೆಗಳು ಸಮರ್ಥವಾಗಿವೆ ಎಂದಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಇತರೆಡೆಗಳಿಂದ ದೇಶಕ್ಕೆ ನುಗ್ಗುವ ನುಸುಳುಕೋರರನ್ನು ತಡೆಯಲು ಎಲ್ಓಸಿ ವ್ಯಾಪ್ತಿಯಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆ ಬಗ್ಗೆ ಸೇನೆಯ ಹಿರಿಯ ಅಧಿಕಾರಿಗಳು ರಕ್ಷಣಾ ಸಚಿವರಿಗೆ ಮಾಹಿತಿ ನೀಡಿದ್ದಾರೆ.
ಇಂದು ನೆಲೆಗಳಿಗೆ ಭೇಟಿ: ಜೇಟ್ಲಿ ಭಾನುವಾರ ಎಲ್ಒಸಿಯ ಮುಂಚೂಣಿ ನೆಲೆಗಳಿಗೆ ಭೇಟಿ ನೀಡಿ ಸೇನಾಧಿಕಾರಿಗಳ ಜತೆ ಚರ್ಚಿಸಲಿದ್ದಾರೆ. ಶ್ರೀನಗರದಲ್ಲಿ ಯುನೈಟೆಡ್ ಹೆಡ್ ಕ್ವಾರ್ಟಸ್ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅದು ಭದ್ರತಾ ಪಡೆಗಳ ಸರ್ವೋಚ್ಛ ಗ್ರಿಡ್ ಆಗಿದೆ. ಅದರಲ್ಲಿ ರಾಜ್ಯ ಸರ್ಕಾರ ಸೇನೆ, ಅರೆಸೇನಾ ಪಡೆಗಳು, ರಾಜ್ಯ ಮತ್ತು ಕೇಂದ್ರ ಗುಪ್ತಚರ ಸಂಸ್ಥೆಗಳು ಹಾಗೂ ಸ್ಥಳೀಯ ಪೊಲೀಸರೂ ಒಳಗೊಂಡಿರುತ್ತಾರೆ. ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಅದರ ನೇತೃತ್ವ ವಹಿಸುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


