ಆಕ್ರಮಣದ ಜತೆಗೆ ಮಾತುಕತೆ ಅಸಾಧ್ಯ

ಶ್ರೀನಗರ: ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಉಲ್ಲಂಘನೆ ಕೊನೆಯಾಗಲೇಬೇಕು. ಉಭಯ ರಾಷ್ಟ್ರಗಳಲ್ಲಿ ನಂಬಿಕೆ ಮೂಡುವಲ್ಲಿ ಇಡಬೇಕಾದ ಮೊದಲ ಹೆಜ್ಜೆ ಇದು.
ರಕ್ಷಣಾ ಸಚಿವ ಅರುಣ್ ಜೇಟ್ಲಿ ಪಾಕಿಸ್ತಾನಕ್ಕೆ ನೀಡಿರುವ ಎಚ್ಚರಿಕೆಯ ಮಾತಿದು. ಜಮ್ಮು-ಕಾಶ್ಮೀರ ಭೇಟಿಯ 2ನೇ ದಿನವಾದ ಭಾನುವಾರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಸೇನಾ ಅಧಿಕಾರಿಗಳು ಹಾಗೂ ಪೊಲೀಸರೊಂದಿಗೆ ಜೇಟ್ಲಿ ಮಾತುಕತೆ ನಡೆಸಿದರು.
ಬಳಿಕ ಮಾತನಾಡಿದ ಜೇಟ್ಲಿ, ಕೆಲವೊಂದು ಶಕ್ತಿಗಳು ಭಾರತದ ವಿರುದ್ಧ ಕತ್ತಿ ಮಸೆಯುತ್ತಿವೆ. ಅವುಗಳಿಗೆ ಶಾಂತಿ ಮುಂದುವರಿಕೆ ಬೇಕಿಲ್ಲ ಎಂದು ಹರಿಹಾಯ್ದರು. ಮಾತುಕತೆ ಮತ್ತು ಆಕ್ರಮಣ ಒಟ್ಟಿಗೆ ಸಾಗಲು ಸಾಧ್ಯವಿಲ್ಲ. ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಬೇಕೆಂದರೆ, ಮೊದಲು ಕದನ ವಿರಾಮ ಉಲ್ಲಂಘನೆ ಕೊನೆಯಾಗಬೇಕು ಎಂದರು ಜೇಟ್ಲಿ.
ಮಾತುಕತೆಗೆ ಸಿದ್ಧ: ಪ್ರತ್ಯೇಕತಾವಾದಿಗಳ ಜತೆ ಮಾತುಕತೆ ಬಗೆಗಿನ ಪ್ರಶ್ನೆಗೆ, ಭಾರತದ ಸಂವಿಧಾನ-ಸಮಗ್ರತೆ ಗೌರವಿಸುವ ಯಾರೊಂದಿಗೆ ಬೇಕಾದರೂ ಮಾತುರತೆಗೆ ಸಿದ್ಧ ಎಂದರು. ಇದೇ ವೇಳೆ, ಕಣಿವೆ ರಾಜ್ಯದಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ಸಶಸ್ತ್ರಪಡೆಗಳ ವಿಶೇಷಾಧಿಕಾರವನ್ನು ಸಡಿಲಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಈ ಸಂದರ್ಭದಲ್ಲಿ ಅದರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದರು.
ವಾಪಸ್ಗೆ ಕ್ರಮ: ಕಾಶ್ಮೀರ ಪಂಡಿತರನ್ನು ಮತ್ತೆ ಕಣಿವೆ ರಾಜ್ಯಕ್ಕೆ ಕರೆತರುವ ನಿಟ್ಟಿನಲ್ಲಿ ಕೆಲ ನಿಯಮಗಳನ್ನು ಕೆಲವೇ ದಿನಗಳಲ್ಲಿ ಘೋಷಿಸಲಾಗುವುದು ಎಂದು ಜೇಟ್ಲಿ ಭರವಸೆ ನೀಡಿದ್ದಾರೆ. ಎಲ್ಲ ರಾಜಕೀಯ ಪಕ್ಷಗಳೂ ಕಾಶ್ಮೀರ ಪಂಡಿತರ ಪುನರ್ ವಸತಿ ಬಯಸುತ್ತಿವೆ. ಹಾಗಾಗಿ ಕೆಲ ದಿನ ಕಾದರೆ ಮುಂದಿನ ಕ್ರಮ ತಿಳಿಯಲಿದೆ ಎಂದಿದ್ದಾರೆ.
ರಾಜಕೀಯ ಅಜೆಂಡಾ ಇಲ್ಲ: ಭೇಟಿಯಲ್ಲಿ ಯಾವುದೇ ರಾಜಕೀಯ ಅಜೆಂಡಾ ಇಲ್ಲ. ಭದ್ರತೆ ಪರಿಶೀಲನೆ ಉದ್ದೇಶದಿಂದ ಬಂದಿರುವುದಾಗಿ ಜೇಟ್ಲಿ ತಿಳಿಸಿದರು. ಮುಖ್ಯಮಂತ್ರಿ, ಸೇನಾಧಿಕಾರಿಗಳ ಜತೆ ಚರ್ಚಿಸಿದ ಬಳಿಕ ಆಶಾವಾದ ಮೂಡಿದೆ. ಚುನಾವಣೆಯೂ ಶಾಂತಿಯುತವಾಗಿ ನಡೆದಿತ್ತು. ತಿಂಗಳಾಂತ್ಯ ಅಮರನಾಥ ಯಾತ್ರೆಯೂ ಆರಂಭವಾಗಲಿದ್ದು, ಶಾಂತಿಯುತವಾಗಿ ನಡೆಯುವ ವಿಶ್ವಾಸವಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


