ಪ್ರಧಾನ ಸುದ್ದಿ

ಅಧಿಕಾರಿ ಸ್ನಾನಕ್ಕೆ ಬಸ್‌ನೀರು!

ಅಧಿಕಾರಿ ಸ್ನಾನಕ್ಕೆ ಬಸ್‌ನೀರು!
Published On :

-ಸಾರಿಗೆ ನಿಗಮ ರಾಯಚೂರು ವಿಭಾಗದ ಡಿ.ಸಿ. ದೌಲತ್ತು

ಮಂಗಳೂರು:
ಕೆಲಸ ನಿರ್ವಹಿಸುವುದು ರಾಯಚೂರು ಕೆಎಸ್‌ಆರ್‌ಟಿಸಿ ವಿಭಾಗದಲ್ಲಿ, ಸ್ನಾನಕ್ಕೆ ಬಳಸುವುದು ಮಂಗಳೂರು ಕೆಎಸ್‌ಆರ್‌ಟಿಸಿ ಡಿಪೋದ ನೀರು!
ಹಿಂದೆ ಮಂಗಳೂರು, ಪುತ್ತೂರಿನಲ್ಲಿ ಕಾರ್ಯ ನಿರ್ವಹಿಸಿ, ಅಮಾನತುಗೊಂಡು ಈಗ ರಾಯಚೂರಿನಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿರುವ ಅಧಿಕಾರಿ ತಮ್ಮ ಅಧಿಕಾರ ದುರ್ಬಳಕೆಗೆ ಸಿಬ್ಬಂದಿಯನ್ನು ಬಳಸಿಕೊಳ್ಳುತ್ತಿರುವ ರೀತಿ ಇದು.
2 ದಿನಕ್ಕೊಮ್ಮೆ ತಲಾ 20.7 ಲೀಟರ್‌ನ 2 ಡ್ರಮ್‌ಗಳಲ್ಲಿ ನೀರು ಸಾಗಣೆಯಾಗುತ್ತಿದೆ.  ಮಂಗಳೂರು ಡಿಪೋದಲ್ಲಿ ಬೇಸಗೆಯಲ್ಲಿ ಬಸ್ ಶುಚಿತ್ವಕ್ಕೆ ನೀರಿನ ಕೊರತೆ ಇದ್ದರೂ ಅಧಿಕಾರಿ ಸ್ನಾನಕ್ಕೆ ಮಾತ್ರ ನೀರು ತಪ್ಪಿಸಿರಲಿಲ್ಲ. ಹೈದರಾಬಾದ್‌ಗೆ ಸಂಚರಿಸುವ ಐರಾವತ ಕ್ಲಬ್ ಕ್ಲಾಸ್ ಬಸ್‌ನಲ್ಲಿ 3 ತಿಂಗಳಿಂದ ನೀರು ಸಾಗಿಸಲಾಗುತ್ತಿದೆ. ಮಂಗಳವಾರ 'ಕನ್ನಡಪ್ರಭ' ಕುಟುಕು ಕಾರ್ಯಾಚರಣೆ ಮೂಲಕ ಪತ್ತೆ ಮಾಡಿದೆ.
ಹೇಗೆ ಸಾಗಿಸ್ತಾರೆ?: ಮಂಗಳೂರಿನ 2ನೇ ಡಿಪೋದಲ್ಲಿ ಐರಾವತ, ವೋಲ್ವೊ ಬಸ್‌ಗಳು ತಂಗುತ್ತವೆ. ಮಧ್ಯಾಹ್ನ 2ನೇ ಡಿಪೋಗೆ ಆಗಮಿಸಿದ ಬಸ್ ಸಿಬ್ಬಂದಿ 2.30ರ ಸುಮಾರಿಗೆ ಡಿಪೋದ ಭದ್ರತಾ ಕೊಠಡಿಯಲ್ಲಿ ಇರಿಸಿದ್ದ ಖಾಲಿ ಡ್ರಮ್‌ಗಳನ್ನು ಬಸ್ ವಾಷಿಂಗ್ ಮಾಡುವಲ್ಲಿ ಕೊಂಡೊಯ್ದಿದ್ದಾರೆ. ಅದೇ ವೇಳೆ ಲಗೇಜ್ ಬಾಕ್ಸ್‌ನಲ್ಲಿ ಇರಿಸಿದ ಡ್ರಮ್‌ಗಳಿಗೆ ಪೈಪ್‌ನಲ್ಲಿ ನೀರು ತುಂಬಿಸಲಾಗಿದೆ. ಬಸ್(ಕೆಎ 57 ಎಫ್ 797)ಸಂಜೆ 4ಕ್ಕೆ ಹೈದರಾಬಾದ್‌ಗೆ ಹೊರಟಿದೆ. ಬುಧವಾರ ಬೆಳಗ್ಗೆ  4ಕ್ಕೆ ೆ ರಾಯಚೂರಿನಲ್ಲಿ ಡ್ರಮ್ ಇಳಿಸುತ್ತಾರೆ. ಡಿಪೋದಿಂದ ಸಿಬ್ಬಂದಿ ಅಧಿಕಾರಿ ಮನೆಗೆ ಸಾಗಿಸುತ್ತಾರೆ. ಅಧಿಕಾರಿ ಬೆಳಗ್ಗೆ ಏಳುವ ಹೊತ್ತಿಗೆ ಊರಿನ ನೀರು ತಲುಪಿರುತ್ತದೆ. ಅದೇ ಬಸ್ ಹೈದರಾಬಾದ್‌ನಿಂದ ಮರಳಿ ಬರುವಾಗ ರಾಯಚೂರಿನಲ್ಲಿ ಖಾಲಿ ಡ್ರಮ್‌ಅನ್ನು ಬಸ್‌ಗೆ ಹಾಕುತ್ತಾರೆ. ಇದೇ ರೀತಿ 'ದಿನಚರಿ' ನಡೆಯುತ್ತಿದೆ.

ಎಂಟ್ರಿ ಮಾಡಲ್ಲ
ಬಸ್‌ನಲ್ಲಿ ಲಗೇಜು ಸಾಗಣೆ ಮಾಡಬೇಕಾದರೆ ಅದನ್ನು ಎಂಟ್ರಿ ಮಾಡಬೇಕು. ಅದರ ಹೊಣೆಯನ್ನು ಖಾಸಗಿ ಏಜೆನ್ಸಿ ವಹಿಸಿಕೊಂಡಿದೆ. ಅಧಿಕಾರಿಯೊಬ್ಬರು ಸಿಬ್ಬಂದಿ ಮೂಲಕ ಸ್ಥಾನ ದುರ್ಬಳಕೆ ಮಾಡುತ್ತಿರುವುದು ಸ್ಪಷ್ಟಗೊಂಡಿದೆ. ಏಕೆಂದರೆ ಅಧಿಕಾರಿಗೆ ಸಾಗಿಸುವ ನೀರಿನ ಡ್ರಮ್ ವಿವರ ಎಲ್ಲಿಯೂ ಎಂಟ್ರಿಯಾಗುವುದಿಲ್ಲ. ವಿಶ್ವಾಸಾರ್ಹ ಚಾಲಕರ ಮೂಲಕ ಈ ಕೆಲಸ ಮಾಡಿಸುತ್ತಿದ್ದಾರೆ ರಾಯಚೂರು ವಿಭಾಗದ ಅಧಿಕಾರಿ.  ಅದು ಡಿಪೋ ವ್ಯವಸ್ಥಾಪಕರಿಗೆ, ಸಿಬ್ಬಂದಿಗೆ ಗೊತ್ತಿದ್ದರೂ, ಮುಂದೆ ಆ ಅಧಿಕಾರಿ ಮಂಗಳೂರಿಗೆ ವರ್ಗಾವಣೆಗೊಂಡು ಬಂದರೆ ತಮಗೆ ತೊಂದರೆಯಾಗುತ್ತದೆ ಎಂದು ಸುಮ್ಮನಿದ್ದಾರೆ.

- ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.