ತುಂಗಭದ್ರಾ ಹೂಳೆತ್ತಲು ಕೇಂದ್ರ ಸರ್ಕಾರ ನೆರವು?

ಕೊಪ್ಪಳ: ತುಂಗಭದ್ರಾ ಜಲಾಶಯದ ಹೂಳೆತ್ತಲು ಕೇಂದ್ರ ಸರ್ಕಾರ ಉತ್ಸುಕತೆ ತೋರಿದೆ. ಈ ಮೂಲಕ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಆಶಾಭಾವ ಮೂಡುವಂತೆ ಮಾಡಿದೆ.
ಈವರೆಗೆ ಜಲಾಶಯದಲ್ಲಿ ಪ್ರತಿವರ್ಷ ಅರ್ಧ ಟಿಎಂಸಿ ಹೂಳು ತುಂಬಿಕೊಳ್ಳುತ್ತದೆ ಎನ್ನುವ ಅಧಿಕೃತ ಲೆಕ್ಕಾಚಾರ ಇತ್ತು. ಆದರೆ, ವಾಸ್ತವದಲ್ಲಿ
0.75 ಟಿಎಂಸಿ ಹೂಳು ತುಂಬಿಕೊಳ್ಳುತ್ತದೆ ಎನ್ನುವ ವರದಿಗಳು ರೈತರಲ್ಲಿ ದೊಡ್ಡ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಜಲಾಶಯದ ಅಸ್ತಿತ್ವಕ್ಕೇ ಸವಾಲಾಗುತ್ತಿದ್ದ ಈ ಹೂಳಿನ ಸಮಸ್ಯೆ ಪರಿಹಾರಕ್ಕೆ ರಾಜ್ಯ ಸರ್ಕಾರ ಅಂತಾರಾಷ್ಟ್ರೀಯ ಟೆಂಡರ್ ಕರೆದರೂ ಪ್ರಯೋಜನವಾಗಿಲ್ಲ. ಹೂಳು ತೆಗೆಯಲು ಯಾವೊಂದು ಕಂಪನಿಯೂ ಮುಂದೆ ಬಂದಿಲ್ಲ. ಇದರಿಂದ ಹೂಳು ತೆಗೆಯುವುದು ಅಸಾಧ್ಯ ಎನ್ನುವ ವರದಿ ಬಂದಿದೆ ಎಂದು ಹೇಳಿ ರಾಜ್ಯ ಸರ್ಕಾರ ಅಸಹಾಯಕತೆ ವ್ಯಕ್ತಪಡಿಸಿತ್ತು.
ಆದರೆ, ಈಗ ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾ ಭಾರತಿ ಹೂಳೆತ್ತುವ ಕಾರ್ಯಕ್ಕೆ ಉತ್ಸುಕತೆ ತೋರಿದ್ದಾರೆ. ಕೇಂದ್ರದಿಂದಲೇ ಹೂಳು ತೆಗೆಯುವ ಅಥವಾ ಪರ್ಯಾಯ ಕ್ರಮ ಕೈಗೊಳ್ಳುವ ಕುರಿತು ಶೀಘ್ರದಲ್ಲೇ ನಿರ್ಧಾರ ಪ್ರಕಟಿಸುವುದಾಗಿ ಭರವಸೆ ನೀಡಿದ್ದಾರೆ.
ವಿಸ್ತಾರ, ಮಹತ್ವ ಗೊತ್ತು: ತುಂಗಭದ್ರಾ ನದಿ ಮತ್ತು ಜಲಾಶಯ ಎರಡೂ ನನಗೆ ಗೊತ್ತು. ಅದು ಹನುಮನುದಿಸಿದ ನಾಡಲ್ಲಿ ಹರಿಯುವ ನದಿ. ಅಲ್ಲಿಗೆ ನಾನು ಹೋಗಿರುವುದರಿಂದ ಜಲಾಶಯದ ಮಹತ್ವ, ವಿಸ್ತಾರ ಹಾಗೂ ಆದರ ಪ್ರಯೋಜನದ ಬಗ್ಗೆ ತಿಳಿದುಕೊಂಡಿದ್ದೇನೆ. ಇದೊಂದು ರಾಷ್ಟ್ರೀಯ ಸಂಪತ್ತು ಆಗಿರುವುದರಿಂದ ಅದನ್ನು ಉಳಿಸಿಕೊಳ್ಳುವ ಇಲ್ಲವೇ ಪರ್ಯಾಯ ಕ್ರಮಕ್ಕೆ ಏನು ಮಾಡಬೇಕು ಎನ್ನುವ ಕುರಿತು ಚಿಂತಿಸಿ, ತಜ್ಞರಿಂದ ಸಲಹೆ ಪಡೆದು ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಉಮಾ ಭಾರತಿ ಹೇಳಿದ್ದಾರೆ.
ಕೊಪ್ಪಳ ಸಂಸದ ಸಂಗಣ್ಣ ಕರಡಿ ಸಲ್ಲಿಸಿದ ಮನವಿ ಸ್ವೀಕರಿಸಿ ಈ ಭರವಸೆ ನೀಡುವ ಮೂಲಕ ತುಂಗಭದ್ರಾ ಜಲಾಶಯದ ಹೂಳಿನ ಗೋಳಿಗೆ ಪರಿಹಾರ ಕಂಡುಕೊಳ್ಳುವ ಮಾತುಗಳನ್ನಾಡಿದ್ದಾರೆ ಉಮಾ ಭಾರತಿ.
ಸವುಳು ಭೂಮಿ: ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ದುರಾಸೆಯಿಂದ ಅವೈಜ್ಞಾನಿಕವಾಗಿ ಅತಿಯಾದ ರಸಗೊಬ್ಬರ ಬಳಕೆ ಮಾಡಿರುವುದರಿಂದ ಕೃಷಿಭೂಮಿ ಸವುಳಾಗಿದೆ. ಇದನ್ನು ಸತ್ವಯುತ ಭೂಮಿಯನ್ನಾಗಿ ಮಾಡುವ ಪ್ರಸ್ತಾಪವೂ ಕೇಂದ್ರದ ಮುಂದಿದೆ.
ವಾರ್ಷಿಕ ಅನುದಾನದಲ್ಲಿ ಹಣ ಬರುತ್ತಿದ್ದರೂ ಅದು ಸಾಲುತ್ತಿಲ್ಲ. ಹೀಗಾಗಿ, ಏಕಕಾಲಕ್ಕೆ ತುಂಗಭದ್ರಾ ಅಚ್ಚಕಟ್ಟು ಪ್ರದೇಶವನ್ನು ಫಲವತ್ತು ಮಾಡುವ ಪ್ರಯತ್ನ ಆಗಬೇಕಾಗಿದೆ. ತುಂಗಭದ್ರಾ ಜಲಾಶಯದ ಹೂಳು ತೆಗೆಯುವ ಪ್ರಸ್ತಾಪ ಕೇಂದ್ರದ ಮುಂದೆ ಹೋಗುವ ಮೂಲಕ ಈ ಸಮಸ್ಯೆಗೂ ಪರಿಹಾರ ಸಿಗುವಂತಾಗಲಿ ಎನ್ನುವ ಆಶಯ ಈ ಭಾಗದ ಜನರದು.
ಸೋಮರಡ್ಡಿ ಅಳವಂಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


