ಪ್ರಧಾನ ಸುದ್ದಿ

ಕಸ ವಿಲೇಗೆ ಹೆಚ್ಚು ಘಟಕ ಸ್ಥಾಪಿಸಿ

ಕಸ ವಿಲೇಗೆ ಹೆಚ್ಚು ಘಟಕ ಸ್ಥಾಪಿಸಿ
Published On :

ಬೆಂಗಳೂರು: ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ಹಿಂದಿನ ಸರ್ಕಾರವನ್ನು ಟೀಕೆ ಮಾಡುತ್ತಾ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಹೈಕೋರ್ಟ್ ಬುಧವಾರ ತರಾಟೆಗೆ ತೆಗೆದುಕೊಂಡಿದೆ.
ತ್ಯಾಜ್ಯ ವಿಲೇವಾರಿ ಕುರಿತಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ದ್ವಿಸದಸ್ಯ ಪೀಠ, ಸಾಕಷ್ಟು ಧರಣಿ, ಪ್ರತಿಭಟನೆ ನಡೆಸಿದ ನಂತರ ಸರ್ಕಾರ ಎಚ್ಚೆತ್ತುಕೊಂಡಿದೆ. ಈ ರೀತಿ ಕೆಲಸ ಮಾಡುವುದು ಸರಿಯೇ ಎಂದು ಪ್ರಶ್ನಿಸಿದೆ. ತುರ್ತಾಗಿ ಜೈವಿಕ ಘಟಕ ಸ್ಥಾಪಿಸುವ ಕುರಿತು ನಾಳೆಯೇ ಟೆಂಡರ್ ಆಹ್ವಾನಿಸಿ  ವಾರದಲ್ಲಿ ಗುತ್ತಿಗೆದಾರರ ವಿವರ ನೀಡಬೇಕೆಂದು ಬಿಬಿಎಂಪಿಗೆ ಸೂಚಿಸಿದೆ.

ಕೇವಲ ನಾಲ್ಕು ಘಟಕ ಮಾತ್ರ ಪ್ರಾರಂಭಿಸುವುದಾಗಿ ಹೇಳಿದ್ದೀರಿ ಹತ್ತು ಘಟಕ ಆರಂಭಿಸಲು ಬಿಬಿಎಂಪಿಗೆ ಹಣದ ಕೊರತೆ ಇದೆಯೇ ಎಂದು ಆಯುಕ್ತ ಲಕ್ಷ್ಮೀನಾರಾಯಣ್ ಅವರನ್ನು ಹೈಕೋರ್ಟ್ ಪ್ರಶ್ನಿಸಿತು.
ಅದಕ್ಕೆ ಉತ್ತರಿಸಿದ ಆಯುಕ್ತರು 146 ವಾರ್ಡ್ಗಳಲ್ಲಿ ಒಣ ತಾಜ್ಯ ಸಂಗ್ರಹಣೆ ಕೇಂದ್ರ ಸ್ಥಾಪಿಸಿದ್ದು 120 ವಾರ್ಡ್ಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇನ್ನು 2-3 ತಿಂಗಳೊಳಗೆ ಎಲ್ಲಾ 198 ವಾರ್ಡ್ಗಳಲ್ಲಿ ಕೇಂದ್ರ ಸ್ಥಾಪಿಸಲಾಗುವುದು ಎಂದರು.
ವಿಧಾನಸಭಾ ಕ್ಷೇತ್ರ ಶಾಸಕನ ಆಸ್ತಿ ಅಲ್ಲ: ಯಾವ ವಿಧಾನಸಭಾ ಕ್ಷೇತ್ರವೂ ಶಾಸಕನ ಆಸ್ತಿ ಅಲ್ಲ. ಆದರೆ ಅಧಿಕಾರಿಗಳೇ ಶಾಸಕರನ್ನು ಹಾಗೆ ನೋಡುವಂತೆ ಮಾಡಿದ್ದಾರೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಎಚ್ಎಸ್ಆರ್ ಬಡಾವಣೆಯ ಎನ್ಜಿಒ 'ಹಸಿರು ದಳದ' ಸದಸ್ಯರು ವಿಚಾರಣೆಯಲ್ಲಿ ಭಾಗವಹಿಸಿ, ತ್ಯಾಜ್ಯ ವಿಲೇವಾರಿ ಕುರಿತು ಜನರಲ್ಲಿ ಅರಿವು ಮೂಡಿಸಿ ಕಾರ್ಯನಿರ್ವಹಿಸುತ್ತಿದ್ದೇವೆ. ಆದರೆ ಸ್ಥಳೀಯ ನಾಯಕರು ಹಾಗೂ ಮಾಫಿಯಾದವರು ಬೆದರಿಕೆ ಒಡ್ಡುತ್ತಿದ್ದು ಅವರ ವಿರುದ್ಧ ಪೊಲೀಸರು ದೂರು ತೆಗೆದುಕೊಳ್ಳಲು ಹಿಂಜರಿಯುತ್ತಿದ್ದಾರೆಂದು ನ್ಯಾಯಾಲಯದ ಮುಂದೆ ತಮ್ಮ ಅಳಲು ತೋಡಿಕೊಂಡರು.
ಸ್ಥಳೀಯ ಶಾಸಕರು ತೊಂದರೆ ನೀಡುವ ಕುರಿತು ಅಲ್ಲಿನ ಜನರಿಗೆ ಮನವರಿಕೆ ಮಾಡಿಕೊಡಿ. ಕ್ಷೇತ್ರದ ಜನರಿಗೆ ತಾವು ಆರಿಸಿ ಕಳುಹಿಸಿದ ವ್ಯಕ್ತಿಯ ಬಂಡವಾಳ ತಿಳಿಯಲಿ. ಜನರು ರೋಗಕ್ಕೆ ತುತ್ತಾದರೆ ಶಾಸಕರು ತಡೆಯುತ್ತಾರೆಯೇ. ಜನಪ್ರತಿನಿಧಿಗಳು ಸಂವಿಧಾನಕ್ಕೆ ಬದ್ಧವಾಗಿರಬೇಕೇ ಹೊರತು ತಮ್ಮ ಪರ ಮತ ಚಲಾಯಿಸಿದ ಕೆಲವೇ ಕೆಲವು ಮಂದಿಗಲ್ಲ. ಇಂತಹ ಚಟುವಟಿಕೆಯಲ್ಲಿ ಶಾಮೀಲಾಗಿ ಒಳ ಒಪ್ಪಂದ ಮಾಡಿಕೊಂಡಿರುವ ಸ್ಥಳೀಯ ನಾಯಕರು, ಶಾಸಕರು, ಗುತ್ತಿಗೆದಾರರು ಹಾಗೂ ಪೊಲೀಸರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವುದನ್ನು ಸರ್ಕಾರ ಹೇಗೆ ಬಗೆಹರಿಸುತ್ತದೆ ಎಂದು ತಿಳಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಪ್ರತಿ ಬಾರಿ ನ್ಯಾಯಪೀಠ ತ್ಯಾಜ್ಯ ವಿಲೇವಾರಿ ಕುರಿತಂತೆ ನಿರ್ದೇಶನ ನೀಡಿದರೂ ಸರ್ಕಾರ ಹಗುರವಾಗಿ ಪರಿಗಣಿಸಿದೆ. ಈಗ ಎಚ್ಚೆತ್ತ ಸರ್ಕಾರ ಸಮಸ್ಯೆ ಬಗೆಹರಿಸಲು ಮುಂದಾಗಿದ್ದು ಈ ನಿಟ್ಟಿನಲ್ಲಿ ಸಂಪೂರ್ಣ ಬೆಂಬಲ ನೀಡಲಾಗುವುದು. ಬಿಬಿಎಂಪಿ ಆಯುಕ್ತರು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತ್ಯಾಜ್ಯ ಸಂಸ್ಕರಣ ಘಟಕ ಸ್ಥಾಪಿಸಲು ಸೂಕ್ತ ಸ್ಥಳ ಪರಿಶೀಲಿಸಿ ಅಂತಹ ಕಾರ್ಯಕ್ಕೆ ಶಾಸಕರು ಕೈ ಜೋಡಿಸಬೇಕು.
ತ್ಯಾಜ್ಯವನ್ನು ನಗರದಿಂದ ಹೊರಗೆ ಬಿಸಾಡುವುದು ಪರಿಹಾರವಲ್ಲ. ಬದಲಾಗಿ ಹಲವೆಡೆ ಅಳವಡಿಸಿರುವ ತಂತ್ರಜ್ಞಾನ ಮತ್ತು ಅದರಿಂದಾಗುವ ಲಾಭದ ಬಗ್ಗೆ ಗಮನ ಹರಿಸಬೇಕೆಂದು ದ್ವಿಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.
ಈ ಹಿಂದೆ ತ್ಯಾಜ್ಯಕ್ಕೆ ಸಂಬಂಧಿಸಿದಂತೆ ಕಾನೂನು ಪಾಲನೆ ಮಾಡದವರ ಹಾಗೂ ಅಧಿಕಾರಿಗಳ ವಿರುದ್ಧ ಯಾವ ಕ್ರಮ ತೆಗೆದುಕೊಂಡಿದ್ದೀರಿ ಎಂದು ಹೈಕೋರ್ಟ್ ಬಿಬಿಎಂಪಿಗೆ ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಆಯುಕ್ತರು ಮೇ 25ರವರೆಗೆ 2,21,000 ದಂಡದ ರೂಪದಲ್ಲಿ ಸಂಗ್ರಹಿಸಿದ್ದು, ನಿರ್ಲಕ್ಷ್ಯ ತೋರಿಸಿದ ಶಾಂತಿನಗರ ಹಾಗೂ ವಿಧಾನಸೌಧ ವ್ಯಾಪ್ತಿಗೆ ಬರುವ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದರು.
ವಿಚಾರಣೆಯನ್ನು ಜೂ.26ಕ್ಕೆ ಮುಂದೆ ಹಾಕಿದ ಹೈಕೋರ್ಟ್, ಖುದ್ದು ನಗರಾಭಿವೃದ್ಧಿ ಪ್ರಧಾನ ಕಾರ್ಯದರ್ಶಿ, ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ, ಬಿಬಿಎಂಪಿ ಆಯುಕ್ತ ಹಾಗೂ ಕೆಸಿಡಿಸಿಯ ವ್ಯವಸ್ಥಾಪಕ ನಿರ್ದೇಶಕರು ಹಾಜರಿರುವಂತೆ ಸೂಚಿಸಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.